ಯಡಿಯೂರಪ್ಪನವರ ಏಕಪಾತ್ರಾಭಿನಯ ನೋಡೋಕೆ ಆಗ್ತಿಲ್ಲ; ಸಿದ್ದರಾಮಯ್ಯ ಟಾಂಗ್

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಏಕಪಾತ್ರಭಿನಯ ನಿಲ್ಲಿಸಿ, ಕೂಡಲೇ ಸಂಪುಟ ರಚನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಭಾನುವಾರ ಪ್ರವಾಹ ಪರಿಸ್ಥಿತಿ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ, ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು…

‘ರಾಜ್ಯದಲ್ಲಿ ಉಂಟಾಗಿರುವ ಭಾರಿ ಪ್ರವಾಹದಿಂದ ಒಂದು ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. 20ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ರೈತರು ತಮ್ಮ ಜಾನುವಾರುಗಳನ್ನೂ ಕಳೆದುಕೊಂಡಿದ್ದಾರೆ. ರಾಜ್ಯದ ಶೇ. 50ರಷ್ಟು ಭಾಗ ಜಲಾವೃತ ಆಗಿದ್ದು, ಇಂತಹ ಭೀಕರ ಪ್ರವಾಹವನ್ನು ರಾಜ್ಯ ಹಿಂದೆಂದೂ ಕಂಡಿರಲಿಲ್ಲ.

ಪ್ರವಾಹದಿಂದಾಗಿ ರಾಜ್ಯ ಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಯಾವುದೇ ವಿಷಯದಲ್ಲಿಯೂ ರಾಜಕೀಯ ಬೆರೆಯಿಸಿ ಮಾತನಾಡುವುದು ಸರಿಯಲ್ಲ. ಯಡಿಯೂರಪ್ಪ ಅವರು ಏಕ ಪಾತ್ರಾಭಿನಯದ ಮೂಲಕ ಪರಿಸ್ಥಿತಿ ಎದುರಿಸುವುದು ಸುಲಭವಲ್ಲ. ಅದು ಅವರಿಂದ ಸಾಧ್ಯವೂ ಆಗುತ್ತಿಲ್ಲ. ಕೂಡಲೇ ಸಂಪುಟ ರಚನೆ ಮಾಡಿ, 20 ಮಂದಿಗೆ ಸಚಿವ ಸ್ಥಾನವನ್ನು ಕೊಟ್ಟು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಅವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಬೇಕು. ಇದರಿಂದ ಪರಿಹಾರ ಕಾರ್ಯಕ್ರಮಗಳು ಚುರುಕಾಗುತ್ತವೆ. ಸಚಿವರಿಲ್ಲದ ಕಾರಣ ಈಗ ಪರಿಹಾರ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ.

ಪ್ರವಾಹಪೀಡಿತ ಪ್ರದೇಶಗಳಲ್ಲಿ ಮರು ವಸತಿ ಕೇಂದ್ರಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ರಕ್ಷಣೆ ಮಾಡಿ ಮೇವು ಒದಗಿಸುವ ಕೆಲಸವೂ ತ್ವರಿತಗತಿಯಲ್ಲಿ ಆಗಬೇಕು. ಸಂತ್ರಸ್ತತರಿಗೆ ಮರು ವಸತಿ ಸೌಕರ್ಯದ ಜೊತೆಗೆ ಆಹಾರ, ಔಷಧ ಸಾಮಗ್ರಿಗಳನ್ನು ವಿತರಿಸಬೇಕು. ಪರಿಹಾರ ಕಾರ್ಯಕ್ಕೆ ಸೇನೆಯನ್ನೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿಯೋಜನೆ ಮಾಡುವುದು ಸೂಕ್ತ. ಕೇಂದ್ರ ಸರ್ಕಾರ ಈಗಲಾದರೂ ಮಲತಾಯಿ ಧೋರಣೆ ಬಿಟ್ಟು ರಾಜ್ಯ ಸರ್ಕಾರದ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸುವುದು ಒಳ್ಳೆಯದು.

ಇನ್ನು ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ನಮ್ಮ ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದೇನೆ. ಪಕ್ಷದ ವತಿಯಿಂದಲೂ ಸಂತ್ರಸ್ತರಿಗೆ ನೆರವಾಗುವ ಕೆಲಸ ನಡೆದಿದೆ.

ಪ್ರವಾಹದಿಂದ ರಸ್ತೆ, ಸೇತುವೆ, ರೈಲ್ವೆ ಹಳಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಆಗಿರುವ ಹಾನಿಯನ್ನು ಸರಿಪರಿಸಲು ಹಲವಾರು ವರ್ಷಗಳೇ ಬೇಕಾಗುತ್ತದೆ. ಪ್ರವಾಹದ ಭೀಕರತೆಯನ್ನು ಕಂಡೂ ಕೇಂದ್ರ ಸರ್ಕಾರ ಇನ್ನೂ ಕಣ್ಣುಮುಚ್ಚಿ ಕುಳಿತಿದೆ. ಕೂಡಲೇ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ತಕ್ಷಣ ಘೋಷಿಸಬೇಕು. ಪ್ರಧಾನಿ ಮೋದಿ ಅವರು ಕೂಡಲೇ ರಾಜ್ಯಕ್ಕೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಬೇಕು. ಪರಿಹಾರ ಕಾರ್ಯಕ್ರಮಗಳಿಗೆ ತಕ್ಷಣವೇ ಐದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು.

ಪರಿಹಾರ ಕಾರ್ಯಕ್ರಮಗಳಿಗೆ ಈಗ ಬಿಡುಗಡೆ ಮಾಡಿರುವ ಮೊತ್ತ ಏನೇನೂ ಸಾಲದು. ಪರಿಹಾರ ಕೊಡಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಿಕೊಳ್ಳಲು ನಾವೇನೂ ಭಿಕ್ಷುಕರಲ್ಲ. ಅಥವಾ ಕೇಂದ್ರ ಸರ್ಕಾರ ನಮಗೆ ದಾನವನ್ನೇನೂ ಕೊಡುತ್ತಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಏನೇನೂ ಅಲ್ಲ. ಜೊತೆಗೆ ರಾಜ್ಯದ ವಿಚಾರದಲ್ಲಿ ಅದರಲ್ಲಿಯೂ ಇಂಥಹ ಕೆಟ್ಟ ಪರಿಸ್ಥಿತಿಯಲ್ಲಿ ಮಲತಾಯಿ ಧೋರಣೆ ಸಲ್ಲದು. ಇದನ್ನು ಯಾರೂ ಮೆಚ್ಚುವುದಿಲ್ಲ. ರಾಜ್ಯದ ಜನತೆ ಮಾಡಿರುವ ಅನ್ಯಾಯವಾದರೂ ಏನು? 26 ಸಂಸದರನ್ನು ಬಿಜೆಪಿಯಿಂದ ಆಯ್ಕೆ ಮಾಡಿ ಕಳುಹಿಸಿದ್ದು ತಪ್ಪೇ?

ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿಯವರು ರಾಜ್ಯಕ್ಕೆ ಭೇಟಿ ಕೊಟ್ಟು, ವೈಮಾನಿಕ ಸಮೀಕ್ಷೆ ನಡೆಸಿ 1600 ಕೋಟಿ ರೂ.ಗಳ ಪರಿಹಾರ ಘೋಷಣೆ ಮಾಡಿದ್ದರು.’

ಬಿಎಸ್ ವೈ ಕ್ಷಮೆ ಕೇಳಲಿ

ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಮೊದಲೇ ದಿನವೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಲಾಗಿತ್ತು. ಅದೂ ಗೊಬ್ಬರಕ್ಕಾಗಿ ರೈತರು ಒತ್ತಾಯ ಮಾಡಿದರು ಎಂಬ ಕಾರಣಕ್ಕೆ. ಮೊನ್ನೆ ಗದಗದಲ್ಲಿ ಪ್ರವಾಹ ಸಂತ್ರಸ್ತರು ಮುಖ್ಯಮಂತ್ರಿಯವರ ಮುಂದೆ ತಮ್ಮ ಕಷ್ಟ ಹೇಳಿಕೊಳ್ಳಲು ಹೋದಾಗ ಲಾಠಿ ಪ್ರಹಾರ ಮಾಡಿಸಲಾಗಿದೆ. ಇದಕ್ಕಾಗಿ ಯಡಿಯೂರಪ್ಪ ಅವರು ಕ್ಷಮೆ ಯಾಚನೆ ಮಾಡಬೇಕು.

Leave a Reply