ಒಂದೇ ವರ್ಷದಲ್ಲಿ ಅತಿವೃಷ್ಟಿ, ಅನಾವೃಷ್ಟಿ; ಗಾಯದ ಮೇಲೆ ಬರೆ ಬಿದ್ದ ಸ್ಥಿತಿಯಲ್ಲಿ ರೈತರು

ಡಿಜಿಟಲ್ ಕನ್ನಡ ಟೀಮ್:

ಮುಂಗಾರು ಕೈ ಕೊಟ್ಟಿತು ರಾಜ್ಯವ್ಯಾಪಿ ಬರ ತಾಂಡವವಾಡುತ್ತಿದೆ ಎಂದು ಕಂಗೆಟ್ಟಿದ್ದ ರೈತರು ಕಳೆದ 10 ದಿನಗಳಲ್ಲಿ ಪ್ರವಾಹಕ್ಕೆ ಸಿಕ್ಕಿ ನಲುಗಿದ್ದಾರೆ. ಒಂದೇ ವರ್ಷದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡೂ ಪ್ರಾಕೃತಿಕ ವಿಕೋಪಗಳು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳನ್ನು ಕಾಡಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ವರ್ಷ ಬೇಸಿಗೆಯಲ್ಲಿ ಅತಿಯಾದ ಉಷ್ಣತೆ ಪರಿಣಾಮ ಉಷ್ಣಗಾಳಿ ಪ್ರಮಾಣ ಹೆಚ್ಚಿತು. 2016ರ ನಂತರ 2019 ಅತಿ ಹೆಚ್ಚು ಉಷ್ಣಾಂಶದ ವರ್ಷವಾಗಿ ದಾಖಲಾಯಿತು. ಇನ್ನು ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲಿ ಮಳೆ ಅಭಾವ ಎದುರಿಸಿತ್ತು. ಆದರೆ ಆಗಸ್ಟ್ ತಿಂಗಳ ಆರಂಭಿಕ 10 ದಿನಗಳಲ್ಲಿ ಸುರಿದ ಮಳೆ ಅತಿವೃಷ್ಟಿಯ ಪರಿಸ್ಥಿತಿಯನ್ನು ಅನಾವೃಷ್ಟಿಯನ್ನಾಗಿ ಪರಿವರ್ತನೆ ಮಾಡಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ಹಿನ್ನೆಲೆಯಲ್ಲಿ ನೀರಿನ ಕೊರತೆಯಿಂದ ಬೇಸಿಗೆಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದೆ ಪರದಾಡಿದರು. ಇನ್ನು ಮುಂಗಾರು ತಡವಾದ ಪರಿಣಾಮ ಎಲ್ಲೊ ಒಮ್ಮೊಮ್ಮೆ ಬಿದ್ದ ತುಂತುರು ಮಳೆಯನ್ನು ನಂಬಿ ಬಿತ್ತನೆ ಮಾಡಿದರು. ಜೂನ್ ತಿಂಗಳಾಂತ್ಯವಾದರೂ ಕೆಆರ್ ಎಸ್ ಸೇರಿದಂತೆ ರಾಜ್ಯದ ಹಲವು ಆಣೆಕಟ್ಟುಗಳು ಬರಿದಾಗಿದ್ದವು. ಪರಿಣಾಮ ರಾಜ್ಯ ಭೀಕರ ಬರವನ್ನು ಎದುರಿಸುವ ಆತಂಕ ಸೃಷ್ಟಿಯಾಗಿತ್ತು.

ಬಿದ್ದ ಅಲ್ಪಸ್ವಲ್ಪ ಮಳೆಯಲ್ಲೇ ಬಂಡಧೈರ್ಯ ಮಾಡಿ ಬಿತ್ತನೆ ಮಾಡಿದ್ದ ರೈತರು ಸ್ವಲ್ಪವಾದರೂ ಫಸಲು ಸಿಗಬಹುದು ಎಂದು ಕಾಯುತ್ತಿದ್ದರು. ಆದರೆ ನಿರೀಕ್ಷೆಗೂ ಮೀರಿ ಸುರಿದ ಮಳೆ ರಾಜ್ಯದ 17 ಜಿಲ್ಲೆಗಳನ್ನು ಮುಳುಗಿಸಿದೆ. ಈ ಜಿಲ್ಲೆಗಳಲ್ಲಿ ರಾತರು ಮಾಡಿದ್ದ ಬಿತ್ತನೆ ಕೊಚ್ಚಿ ಹೋಗಿದೆ. ಅದರೊಂದಿಗೆ ಈ ವರ್ಷ ರೈತನಿಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡು ಒಟ್ಟೊಟ್ಟಿಗೆ ಬಂದಿರೋದು ರೈತನ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ.

ಒಂದೇ ವಾರದಲ್ಲಿ ಬರದ ಪರಿಸ್ಥಿತಿ ನೆರೆಯ ಪರಿಸ್ಥಿತಿಯಾಗಿ ಮಾರ್ಪಟ್ಟಿರುವುದು ನಿಜಕ್ಕೂ ದೌರ್ಭಾಗ್ಯ. ಜುಲೈ ತಿಂಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಕೊರತೆ ಎದುರಾಗಿದ್ದರೆ, ಆಗಸ್ಟ್ ನಲ್ಲಿ ಪ್ರತಿ ದಿನ ಮಳೆ ವಾಡಿಕೆಗಿಂತ 15 ರಿಂದ 20 ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಮುಂಗಾರು ಆರಂಭವಾಗುವ ಮುನ್ನ ಅತಿಯಾದ ಮಳೆ ಬಿದ್ದು ಪ್ರವಾಹ ಉಂಟಾದರೆ, ಈ ವರ್ಷ ಮುಂಗಾರು ಮಳೆ ವಿಳಂಬವಾಗಿ ಪ್ರವಾಹ ಪರಿಸ್ಥಿತಿ ಎದುರಿಸುವಂತಾಗಿದೆ. ಇದು ಮುಂಗಾರು ಚಕ್ರದಲ್ಲಿ ಭಾರಿ ಬದಲಾವಣೆಗೆ ಸಾಕ್ಷಿಯಾಗಿದ್ದು, ಮುಂದಿನ ವರ್ಷಗಳಲ್ಲಿ ಹವಾಮಾನ ವೈಪರಿತ್ಯದ ಭೀಕರತೆ ಹೆಚ್ಚಾಗುವ ಆತಂಕ ಮೂಡಿಸಿದೆ.

Leave a Reply