ಪ್ರವಾಹ ಪರಿಹಾರಕ್ಕೆ ಶಾಸಕರ ನಿಧಿಯಿಂದ 50 ಲಕ್ಷ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಶಾಸಕ ನಿಧಿಯಿಂದ 50 ಲಕ್ಷವನ್ನು ನೀಡಲು ನಾನು ನಿರ್ಧರಿಸಿದ್ದೇನೆ. ಇನ್ನು ವೈಯಕ್ತಿಕವಾಗಿ ಕೂಡ ನಾನು ದೇಣಿಗೆ ನೀಡುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.

ಸೋಮವಾರ ಹುಬ್ಬಳ್ಳಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದ ನಂತರ ಮೋದಗೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ಕೇವಲ ನಾನು ಮಾತ್ರವಲ್ಲ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನ 100 ಶಾಸಕರು ಕೂಡ ಶಾಸಕರ ನಿಧಿಯಿಂದ ಹಣ ನೀಡುವಂತೆ ಮಾತುಕತೆ ನಡೆಸುತ್ತೇನೆ. ನಾನು ಬೆಂಗಳೂರಿಗೆ ಹೋದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಬಳಿ ಚರ್ಚೆ ಮಾಡುತ್ತೇನೆ. ನನ್ನ ಆಡಿಟರ್ ಬಳಿ ಚರ್ಚೆ ಮಾಡಿ ವೈಯಕ್ತಿಕವಾಗಿ ಎಷ್ಟು ಹಣ ನೀಡಬೇಕು ಎಂಬುದರ ಕುರಿತು ಚರ್ಚೆ ಮಾಡಿ ಹೇಳುತ್ತೇನೆ’ ಎಂದು ತಿಳಿಸಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು…

‘ರಾಜ್ಯದ ಇತಿಹಾಸದಲ್ಲಿ ಇಂದೆಂದೂ ಕಾಣದ ಪ್ರವಾಹ ಎದುರಾಗಿದೆ. ನಾವು ರಾಜಕೀಯ ಪಕ್ಷಗಳು ಒಟ್ಟಾಗಿ ಜನರ ಪರವಾಗಿ ನಿಲ್ಲುವ ಕರ್ತವ್ಯ ನಮ್ಮ ಮೇಲಿದೆ. ಮುಖ್ಯಮಂತ್ರಿಗಳು ಈಗಾಗಲೇ 40 ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗಿದೆ ಅಂತಾ ಹೇಳಿದ್ದಾರೆ. ಕೂಡಲೇ ಎಲ್ಲ ಪಕ್ಷದವರು ಒಂದಾಗಿ ಸರ್ಕಾರದ ಪರವಾಗಿ ನಿಲ್ಲಬೇಕಿದೆ. ಈ ಹಿನ್ನೆಲೆಯಲ್ಲಿ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ.

ಜನರನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ನಾವು ಬಂದು ಆ ಕಾರ್ಯಕ್ಕೆ ಅಡಚಣೆ ಆಗೋದು ಬೇಡ ಎಂಬ ಉದ್ದೇಶದಿಂದ ನಾವು ಇಷ್ಟು ದಿನ ಪ್ರವಾಹದ ಜಾಗಕ್ಕೆ ಭೇಟಿ ಕೊಟ್ಟಿರಲಿಲ್ಲ.

ಎಲ್ಲೆಲ್ಲಿ ಮನೆ ಬಿದ್ದಿದೆ, ಕೃಷಿ ಜಮೀನು ಕೊಚ್ಚಿ ಹೋಗಿರುವುದನ್ನು ನೋಡಿದ್ದೇವೆ. ನೂರಾರು ಜನ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ನಮ್ಮ ಜನರಿಗೆ ಆಗಿರುವ ನಷ್ಟ ತುಂಬಿಕೊಡಬೇಕು. ಕೂಡಲೇ ಮನೆ ಹಾಗೂ ಬೆಳೆ ಹಾನಿ ಕಟ್ಟಿಕೊಡುವ ವಿಶೇಷ ಪ್ಯಾಕೇಜ್ ಅನ್ನು ಸಿಎಂ ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡುತ್ತೇನೆ.

Leave a Reply