ಪ್ರವಾಹದಲ್ಲಿ 2.5 ಕಿ.ಮೀ ಈಜಿ ಬೆಂಗಳೂರಿಗೆ ಬಂದು ಬೆಳ್ಳಿ ಪದಕ ಗೆದ್ದ ಬೆಳಗಾವಿ ಯುವ ಬಾಕ್ಸರ್ ರೋಚಕ ಕಥೆ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ನೆರೆ ಹಾವಳಿಗೆ ತತ್ತರಿಸಿರುವ ಪ್ರದೇಶಗಳಲ್ಲಿ ಅನೇಕ ಕರುಣಾಜನಕ ಕಥೆಗಳು ಹಾಗೂ ಮತ್ತೆ ಕೆಲವು ನಮ್ಮ ಮೈನವಿರೇಳಿಸುವ ಸ್ಫೂರ್ತಿದಾಯಕ ಕಥೆಗಳು ಸಿಗುತ್ತವೆ. ಅಂತಹ ಸ್ಫೂರ್ತಿದಾಯಕ ಕಥೆಗಳಲ್ಲಿ ಬೆಳಗಾವಿಯ ಯುವ ಬಾಕ್ಸರ್ ನಿಶಾನ್ ಮನೋಹರ್ ಕದಮ್ ಅವರದೂ ಒಂದು!

19 ವರ್ಷದ ಯುವ ಬಾಕ್ಸರ್ ನಿಶಾನ್ ಅವರು ಬೆಂಗಳೂರಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಬೆಳಗಾವಿಯ ಪ್ರವಾಹದಲ್ಲಿ 2.5 ಕಿ.ಮೀ ದೂರ ಈಜಿಕೊಂಡು ನಂತರ ರೈಲು ಹಿಡಿದು ಬೆಂಗಳೂರಿಗೆ ಆಗಮಿಸಿದ್ದರು. ಈ ಟೂರ್ನಿಯಲ್ಲಿ ನಿಶಾನ್ ಬೆಳ್ಳಿ ಪದಕ ಪಡೆದಿರುವ ನಿಶಾನ್, ಗುರಿ ಸಾಧನೆ ತಲುಪಲು ಛಲವಿದ್ದರೆ ಯಾವುದೇ ಸವಾಲನ್ನು ಕೂಡ ಮೆಟ್ಟಿ ನಿಲ್ಲಬಹುದು ಎಂಬುದನ್ನು ಸಾಬೀತುಪಡಿಸಿದ್ದಾನೆ.

ಹೌದು, 19 ವರ್ಷದ ಈ ಯುವ ಬಾಕ್ಸರ್ ಭವಿಷ್ಯದಲ್ಲಿ ಬಾಕ್ಸಿಂಗ್ ನಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುವ ಕನಸು ಕಂಡಿದ್ದಾನೆ. ಹೀಗಾಗಿ ತನಗೆ ಸಿಗುವ ಯಾವುದೇ ಅವಕಾಶವನ್ನು ಸುಲಭವಾಗಿ ಬಿಟ್ಟುಕೊಡಲು ಆತ ತಯಾರಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ನಿಶಾನ್ ನಿರ್ಧರಿಸಿದ್ದ. ಆದರೆ ಧಿಡೀರನೆ ಸುರಿದ ಧಾರಾಕಾರ ಮಳೆ ಹಾಗೂ ಕೃಷ್ಣೆಯ ಅಬ್ಬರ ಬೆಳಗಾವಿಯನ್ನು ಮುಳುಗಿಸಿತ್ತು.

ಪ್ರಾಕೃತಿಕ ವಿಕೋಪ ಎದುರಾದರೂ ನಿಶಾನ್ ಗುರಿ ಮಾತ್ರ ಬದಲಾಗಲಿಲ್ಲ. ಪ್ರವಾಹ ಬಂದಿದೆ ಸರಿಯಾಗಿ ಅಭ್ಯಾಸ ಮಾಡಿಲ್ಲ, ಈ ವರ್ಷ ಬೇಡ ಮುಂದಿನ ವರ್ಷ ಭಾಗವಹಿಸೋಣ ಎಂಬ ಭಾವನೆ ಆತನಲ್ಲಿ ಸುಳಿಯಲಿಲ್ಲ. ಏನಾದರೂ ಸರಿ ಈ ಟೂರ್ನಿಯಲ್ಲಿ ಭಾಗವಹಿಸಲೇಬೇಕು ಎಂಬ ಛಲ ಆತನಲ್ಲಿ ಬೇರೂರಿತ್ತು.

ನಿಶಾನ್ ಟೂರ್ನಿಯಲ್ಲಿ ಭಾಗವಹಿಸಬೇಕಾದರೆ ಆಗಸ್ಟ್ 7ರಂದು ಬೆಂಗಳೂರಿಗೆ ರೈಲಿನ ಮೂಲಕ ತೆರಳಲೇಬೇಕಾಗಿತ್ತು. ಆದರೆ ತಮ್ಮ ಗ್ರಾಮವನ್ನು ಮಣ್ಣೂರು ಪ್ರವಾಹದಲ್ಲಿ ಮುಳುಗಿದ್ದ ಪರಿಣಾಮ ಪ್ರಮುಖ ಸಂಪರ್ಕ ರಸ್ತೆಗಳು ಮುಳುಗಿ ಹಾಳಾಗಿತ್ತು. ಹೇಗೆ ರೈಲು ಹಿಡಿಯಬೇಕು ಎಂದು ಯೋಚಿಸುತ್ತಿರುವಾಗ ನಿಶಾನ್ ಹಾಗೂ ಅವರ ತಂದೆ ಮನೋಹರ್ ಒಂದು ಗಟ್ಟಿ ನಿರ್ಧಾರ ಮಾಡಿದರು. ನಿಶಾನ್ ತನ್ನ ಬಾಕ್ಸಿಂಗ್ ಕಿಟ್ ಅನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿಕೊಂಡು ತನ್ನ ಬೆನ್ನಿಗೆ ಕಟ್ಟಿಕೊಂಡು ಈಜಿಕೊಂಡೆ ಮುಂದೆ ಸಾಗಲು ನಿರ್ಧರಿಸಿದರು. ನಿಶಾನ್ ಅವರ ಈ ಸವಾಲಿನ ಹಾದಿಯಲ್ಲಿ ಆತನ ತಂದೆ ಮೂಲತಃ ರೈತರಾಗಿರುವ ಮನೋಹರ್ ಕೂಡ ಸಾಥ್ ನೀಡಿದರು.

ಸುಮಾರು 2.5 ಕಿ.ಮೀ ದೂರದ ಪ್ರವಾಹ ಪ್ರದೇಶವನ್ನು 45 ನಿಮಿಷಗಳ ಕಾಲ ಈಜಿಕೊಂಡು ಸಾಗಿದ ಅಪ್ಪ ಮಗ, ಕೊನೆಗೂ ಅಂದು ಬೆಂಗಳೂರಿನ ರೈಲು ಹಿಡಿದರು. ಭಾನುವಾರ ನಡೆದ ಚಾಂಪಿಯನ್ ಶಿಪ್ ನ ಲೈಟ್ ಫ್ಲೈವೇಟ್ ವಿಭಾಗದ ಫೈನಲ್ ನಲ್ಲಿ ನಿಶಾನ್ ಬೆಳ್ಳಿ ಪದಕ ಗೆದ್ದು ಬೀಗಿದ್ದಾನೆ. ಗೆಲುವಿನ ನಂತರ ತನ್ನ ಅನುಭವ ಹಂಚಿಕೊಂಡಿರುವ ನಿಶಾನ್, ‘ನನಗೆ ಸಿಕ್ಕ ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಕೈಚೆಲ್ಲಲು ಸಿದ್ಧವಾಗಿರಲಿಲ್ಲ. ಹೀಗಾಗಿ ಬೆಂಗಳೂರಿನ ರೈಲು ಹಿಯಬೇಕಾದರೆ ಈಜುವುದನ್ನು ಬಿಟ್ಟರೆ ಬೇರೆ ದಾರಿ ನಮ್ಮ ಮುಂದೆ ಇರಲಿಲ್ಲ. ಈ ಟೂನಿಯಲ್ಲಿ ನನ್ನ ಪ್ರದರ್ಶನ ತೃಪ್ತಿ ತಂದಿದೆ. ಆದರೆ ಮುಂದಿನ ವರ್ಷ ಚಿನ್ನ ಗೆದ್ದೆ ಗೆಲ್ಲುತ್ತೇನೆ’ ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದೆ.

Leave a Reply