2022 ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಹಿಳಾ ಟಿ20 ಕ್ರಿಕೆಟ್ ಸೇರ್ಪಡೆ! ಮುಂದಿನ ಟಾರ್ಗೆಟ್ ಒಲಿಂಪಿಕ್ಸ್!

ಡಿಜಿಟಲ್ ಕನ್ನಡ ಟೀಮ್:

2022ಕ್ಕೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಟಿ20 ಕ್ರಿಕೆಟ್ ಅನ್ನು ಸೇರಿಸಲಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಕ್ರೀಡೆ ಸೇರ್ಪಡೆಯಾದಂತಾಗಿದೆ. ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಒಲಿಂಪಿಕ್ಸ್ ನಲ್ಲೂ ಕ್ರಿಕೆಟ್ ಸೇರ್ಪಡೆ ಮಾಡುವ ಹಾದಿ ಸುಲಭವಾಗಿದೆ.

1998ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಏಕದಿನ ಕ್ರಿಕೆಟ್ ಅನ್ನು ಸೇರಿಸಲಾಗಿತ್ತು. ಆಗ ದಕ್ಷಿಣ ಆಫ್ರಿಕ ಪ್ರಶಸ್ತಿ ಗೆದ್ದಿತ್ತು. ಆದರೆ ಈಗ ಚುಟುಕು ಮಾದರಿ ಕ್ರಿಕೆಟ್ ಕ್ರೀಡಾಕೂಟಗಳಲ್ಲಿ ಸೇರ್ಪಡೆಯಾಗುತ್ತಿದ್ದು, ಯಶಸ್ವಿಯಾಗುವ ಗುರಿ ಹೊಂದಿದೆ.

2022ರ ಕ್ರೀಡಾಕೂಟದಲ್ಲಿ ಒಟ್ಟು 71 ಕ್ರೀಡೆಗಳಿಗೆ ಅನುಮತಿ ನೀಡಲಾಗಿದ್ದು, ಆ ಪೈಕಿ ಮಹಿಳಾ ಟಿ20 ಕ್ರಿಕೆಟ್ ಗೂ ವಕಾಶ ನೀಡಲಾಗಿದೆ. ಕ್ರೀಡಾಕೂಟದ ಆತಿಥ್ಯವನ್ನು ವಹಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜಂಟಿಯಾಗಿ ಬಿಡ್ ಮಾಡಿದ್ದರಿಂದ ಈ ಕ್ರೀಡಾಕೂಟದಲ್ಲಿ ಮಹಿಳಾ ಟಿ20 ಕ್ರಿಕೆಟ್ ಗೆ ವಕಾಶ ಸಿಕ್ಕಿದೆ. ಈ ಕ್ರೀಡಾಕೂಟದಲ್ಲಿ ಒಟ್ಟು 8 ತಂಡಗಳು ಎಡ್ಜ್ ಬಾಸ್ಟನ್ ನಲ್ಲಿ ಪಂದ್ಯಗಳನ್ನು ಆಡಲಿವೆ.

2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆ ಮಾಡುವ ಗುರಿ ಹೊಂದಿರುವ ಐಸಿಸಿಗೆ ಕಾಮನ್ವೆಲ್ತ್ ಕ್ರೀಡಾಕೂಟ ಮೊದಲ ಹೆಜ್ಜೆಯಾಗಿದ್ದು, ಇನ್ನು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಒಂದು ವೇಳೆ ಕ್ರಿಕೆಟ್ 2028 ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆದಿದ್ದೇ ಆದರೆ 1900ರ ಪ್ಯಾರಿಸ್ ಒಲಿಂಪಿಕ್ಸ್ ನಂತರ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಕ್ರಿಕೆಟ್ ಸೇರ್ಪಡೆಯಾದಂತಾಗಲಿದೆ.

Leave a Reply