ಕಪಾಳಕ್ಕೆ ಹೊಡೆದ ನಟ ಕೋಮಲ್ ಗೆ ಯದ್ವಾತದ್ವಾ ತದುಕಿದ ದಾರಿಹೋಕ

ಡಿಜಿಟಲ್ ಕನ್ನಡ ಟೀಮ್:

ಹೊಡೆದ ಕೋಮಲ್ ಗೆ ದಾರಿಹೋಕ ಯದ್ವಾತದ್ವಾ ಬಾರಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಓವರ್ ಟೇಕ್ ಮಾಡಲು ದಾರಿ ಬಿಡದ ವಿಚಾರವಾಗಿ ವಾಗ್ವಾದದಿಂದ ಆರಂಭವಾಗಿ ನಂತರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಸಾರ್ವಜನಿಕರು ಮಾಡಿರುವ ವೀಡಿಯೊ ಪ್ರಕಾರ ಕೋಮಲ್ ಮೊದಲು ಹಲ್ಲೆ ಮಾಡಿದ್ದು, ನಂತರ ಮತ್ತೊಬ್ಬ ವ್ಯಕ್ತಿ ದಾಳಿ ಮಾಡಿರುವುದು ಸ್ಪಷ್ಟವಾಗಿದೆ.

 

 

ಆಗಿದ್ದೇನು?

ನಟ ಕೋಮಲ್ ತನ್ನ ಮಗಳನ್ನು ಟ್ಯೂಷನ್ ಗೆ ಬಿಡಲು ಬೆಂಗಳೂರಿನ ಮಂತ್ರಿಮಾಲ್ ಪಕ್ಕದ ಸಂಪಿಗೆ ಥಿಯೇಟರ್ ಮೂಲಕ ರೈಲ್ವೆ ಪ್ಯಾರಲಲ್ ರಸ್ತೆಗೆ ಹೋಗುವ ಮಾರ್ಗದಲ್ಲಿ ಹೋಗುತ್ತಿದ್ದರು. ಈ ವೇಳೆ ವಿಜಯ್ ಎಂಬ ವ್ಯಕ್ತಿ ಗಾಡಿಯಲ್ಲಿ ಬಂದಿದ್ದು, ಓವರ್ ಟೇಕ್ ಮಾಡಲು ದಾರಿ ಬಿಡುವಂತೆ ಹಾರನ್ ಮಾಡಿದ್ದಾನೆ. ದಾರಿ ಬಿಡದ ಕಾರಣ ವಿಜಯ್, ಕೋಮಲ್ ರನ್ನು ಗುರಾಯಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಶುರುವಾಗಿ ಹೊಡೆದಾಟ ನಡೆದಿದೆ. ಈ ರಂಪಾಟದಲ್ಲಿ ವಿಜಯ್ ಸ್ಥಳೀಯನಾಗಿದ್ದು, ನಂತರ ಮೂವರು ಸ್ನೇಹಿತರನ್ನು ಕರೆಸಿ ಕೋಮಲ್ ಮೇಲೆ ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ.

ಈ ಘಟನೆ ಬಗ್ಗೆ ಮಾತನಾಡಿರುವ ಕೋಮಲ್ ಅಣ್ಣಾ ನಟ ಜಗ್ಗೇಶ್, ‘ವಿಜಯ್ ಎಂಬಾತ ಚೆನ್ನಾಗಿ ಕುಡಿದು ಹುಡುಗಿಯನ್ನು ಗಾಡಿ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ. ಅವನು ಕಂಠಪೂರ್ತಿ ಕುಡಿದಿದ್ದು, ಕೋಮಲ್ ಮೇಲೆ ಹಲ್ಲೆ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ ಕುಡಿದು, ಗಾಂಜಾ ಮತ್ತಲ್ಲಿ ಈ ರೀತಿ ದಾಳಿ ಮಾಡಿದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.

ಪ್ರಕರಣ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಜಯ್ ನನ್ನು ವಶಕ್ಕೆ ಪಡೆದು ಎಫ್ ಐಆರ್ ದಾಖಲಿಸಿದ್ದಾರೆ.

‘ನಟ ಕೋಮಲ್ ದೂರಿನ ಅನ್ವಯ ವಿಜಯ್ ಎಂಬಾತನ ವಿರುದ್ಧ ಕೊಲೆಯತ್ನ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದೇವೆ. ಜೊತೆಗೆ ಕಾರು ಅಡ್ಡಗಟ್ಟಿ ಬೆದರಿಕೆಗೆ ಐಪಿಸಿ 341 , ಅವಾಚ್ಯ ಶಬ್ದಗಳಿಂದ ನಿಂದನೆಗೆ ಐಪಿಸಿ 504, ಪ್ರಾಣ ಬೆದರಿಕೆ ಐಪಿಸಿ 506ರ ಅಡಿಯಲ್ಲೂ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

Leave a Reply