ಕೋಮಲ್ ಹೊಡೆದಾಟ; ಗಾಂಧಿನಗರದ ಜಿದ್ದು ಶ್ರೀರಾಂಪುರ ಗಲ್ಲಿಯಲ್ಲಿ ಸ್ಫೋಟ!?

ಡಿಜಿಟಲ್ ಕನ್ನಡ ಟೀಮ್:

ಕೆಂಪೇಗೌಡ 2 ಚಿತ್ರದ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಎಂಟ್ರಿ ಕೊಟ್ಟಿರುವ ಕೋಮಲ್ ನಿನ್ನೆ ರಸ್ತೆ ರಂಪಾಟದಿಂದ ಸುದ್ದಿಯಾಗಿದ್ದಾರೆ. ಅವರ ಚಿತ್ರ ಬಿಡುಗಡೆಯಾಗಿ ಒಂದು ವಾರವೂ ಆಗಿಲ್ಲ. ಈ ಸಂದರ್ಭದಲ್ಲಿ ಇಂತಹದೊಂದು ಘಟನೆ ನಡೆದಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ಈ ರಂಪಾಟದ ಹಿಂದೆ ಚಿಂತ್ರರಂಗದವರ ಕೈವಾಡ ಇದೆಯೇ ಎಂಬ ಗುಮಾನಿ ಹೆಚ್ಚಾಗಿದೆ.

ಈ ಅನುಮಾನಗಳಿಗೆ ಪುಷ್ಟಿ ನೀಡಲು ಹಲವು ಕಾರಣಗಳಿವೆ. ನಟ ಕೋಮಲ್ ಅವರು ತಮ್ಮ ಚಿತ್ರ ಬಿಡುಗಡೆ ದಿನವೇ ಬೇರೋಂದು ಬಿಗ್ ಬಜೆಟ್ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನನ್ನ ಸಿನಿಮಾ ಬಿಡುಗಡೆ ದಿನವೇ ದೊಡ್ಡ ಸಿನಿಮಾವೊಂದನ್ನು ಬಿಡುಗಡೆ ಮಾಡ್ತಿರೊ ಉದ್ದೇಶವಾದರು ಏನು ಎಂದು ಪರೋಕ್ಷವಾಗಿ ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ವಿರುದ್ಧ ಗರಂ ಆಗಿದ್ದರು.

ನಾನಾಗಿಯೇ ಬೇರೆಯವರ ಗಾಡಿ ಮುಂದೆ ಹೋಗಿ ಬಿದ್ದರೆ ದು ನನ್ನ ತಪ್ಪು, ಆದರೆ ನನ್ನ ಪಾಡಿಗೆ ನಾನು ಹೋಗುವಾಗ ಬೇರೆಯವರು ಬಂದು ನನ್ನನ್ನು ಗುದಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉದಾಹರಣೆ ನೀಡುವ ಮೂಲಕ ಕೋಮಲ್ ತಮ್ಮ ಚಿತ್ರ ಬಿಡುಗಡೆ ದಿನವೇ ಕುರುಕ್ಷೇತ್ರ ಸಿನಿಮಾ ಬಿಡುಗಡೆ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಯಾವ ಉದಾಹರಣೆಯನ್ನು ಕೊಟ್ಟಿದ್ದರೋ ಅದೇ ರೀತಿ ರಸ್ತೆ ರಂಪಾಟವಾಗಿರೋದು ಅಚ್ಚರಿ ಮೂಡಿಸಿದೆ.

ಇನ್ನು ಈ ಪ್ರಕರಣದಲ್ಲಿ ಬೇರೆ ವಾಸನೆ ಇದೆ ಎಂದು ಸ್ವತಃ ಜಗ್ಗೇಶ್ ಅವರ ಹೇಳಿಕೆಯೂ ರಂಪಾಟದಲ್ಲಿ ಚಿತ್ರರಂಗದವರ ಕೈವಾಡದ ಗುಮಾನಿಗೆ ಪುಷ್ಠಿ ನೀಡುತ್ತಿದೆ. ‘ಯಾರು ಏನ್ ಮಾಡಿದ್ದಾರೆ ಅಂತಾ ನನಗೆ ಗೊತ್ತಾಗುತ್ತೆ. ಸಿನಿಮಾ ಇಂಡಸ್ಟ್ರಿಯವರು ಮಾಡಿದ್ದಾರಾ..? ಅಥವಾ ಬೇರೆಯವರು ಮಾಡಿದ್ದಾರಾ ಅನ್ನೋದು ಗೊತ್ತಿಲ್ಲ. ನಮ್ಮ ಇಂಡಸ್ಟ್ರಿಯವರು ಹಲ್ಲೆ ಮಾಡಿದ್ರೆ ಖಂಡಿತಾ ನಾನು ಬಿಡಲ್ಲ. ನಾನು ಮುವತ್ತು ವರ್ಷದಿಂದ ಇಂಡಸ್ಟ್ರಿಯಲ್ಲೇ ಇರೋದು. ನಾನಗಾದ್ರೆ ಬ್ಯಾಡ್ ವರ್ಡ್ಸ್‌ನಲ್ಲಿ ಬೈಯೋದು ಗೊತ್ತು. ಕೋಮಲ್ ಅಮಾಯಕ ಅವನಿಗೆ ಇವೆಲ್ಲಾ ಗೊತ್ತಾಗಲ್ಲ’ ಎನ್ನುವ ಮೂಲಕ ಸ್ಯಾಂಡಲ್‌ವುಡ್‌ನತ್ತಲೇ ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನು ಜಗ್ಗೇಶ್ ಅವರ ಕುಟುಂಬದ ಮೇಲೆ 2 ವರ್ಷಗಳ ಹಿಂದೆ ಇಂತಹುದೇ ದಾಳಿ ನಡೆದಿತ್ತು. ಜಗ್ಗೇಶ್ ಹಿರಿಯ ಮಗ ಗುರುರಾಜ್ ಮೇಲೆ ಕಿಡಿಗೇಡಿಯೊಬ್ಬ ರಸ್ತೆಯಲ್ಲೇ ಚಾಕು ಇರಿಯಲು ಮುಂದಾಗಿದ್ದು ಈ ಸಮಯದಲ್ಲಿ ನೆನಪಾಗುತ್ತಿದೆ. ಆಗಸ್ಟ್ 14, 2017ರಲ್ಲಿ ಓವರ್ ಟೇಕ್ ಮಾಡಲು ಗುರುರಾಜ್ ದಾರಿ ಬಿಡಲಿಲ್ಲ ಅನ್ನೋ ಕಾರಣಕ್ಕೆ ಆಗಲೂ ಗಲಾಟೆಯಾಗಿತ್ತು. ಈಗ ಅದೇ ರೀತಿ  ಕೋಮಲ್ ಮೇಲೆ ಹಲ್ಲೆಯಾಗಿದೆ.

Leave a Reply