ಏನ್ರೀ ಮುಖ್ಯಮಂತ್ರಿಗಳೇ.. ಪರಿಹಾರ ಕೇಳಿದರೆ, ನೋಟು ಪ್ರಿಂಟ್ ಮಾಡಲ್ಲ ಅನ್ನೋದೇ..!?

ಡಿಜಿಟಲ್ ಕನ್ನಡ ಟೀಮ್:

ಶಹಬ್ಬಾಶ್ ಯಡಿಯೂರಪ್ಪನವರೇ..! ಅಧಿಕಾರ ಸಿಗೋ ಮುಂಚೆ ಹೆಗಲ ಮೇಲೆ ಹಸಿರು ಟವಲ್ ಹಾಕೊಂಡು ರೈತರ ಸಮಸ್ಯೆ, ರೈತರ ಕಲ್ಯಾಣ ಅಂತಿದ್ದೋರು ಈಗ ಅಧಿಕಾರಕ್ಕೆ ಬಂದ ಮೇಲೆ ಟವೆಲ್ ಒದರಿ, ವರಸೆ ಬದಲಿಸಿ ಬಿಟ್ರಲ್ಲಾ..!

ಹಿಂದೆಂದೂ ಕಂಡು ಕೇಳರಿಯದ ಪ್ರವಾಹದ ಪ್ರಹಾರದಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಪರಿಹಾರ ಕೊಡಿ ಅಂದ್ರೆ, ‘ನಾವು ನೋಟು ಪ್ರಿಂಟ್ ಮಾಡೋಲ್ಲ’ ಅಂತೀರಲ್ಲಾ ಸರಿನಾ..? ಇದು ನ್ಯಾಯನಾ..?!

ಹೌದು, ನಮ್ಮ ರೈತ ನಾಯಕ ಸಿಎಂ ಯಡಿಯೂರಪ್ಪನವರು ಇವತ್ತು ಕೃಷಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ‘ಬೆಳೆ ಹಾನಿ ಅಂದಾಜು ಸಿದ್ಧಪಡಿಸಲು ಅವಸರ ಬೇಡ. ಕೇಳಿದಷ್ಟು ಹಣ ನೀಡಲು ಸರ್ಕಾರ ನೋಟ್ ಪ್ರಿಂಟ್ ಮಾಡಲ್ಲ. ಸಮಯ ತಗೊಂಡು ನಿಧಾನವಾಗಿ ವರದಿ ನೀಡಿ’ ಅಂತಾ ಸೂಚನೆ ನೀಡಿದ್ದಾರೆ.

ಸರ್ಕಾರವನ್ನು ಬೀಳಿಸುವಾಗ ಇದ್ದ ಅವಸರ ಈಗೇಕಿಲ್ಲವೋ? ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಇದ್ದ ಅವಸರ ಈಗೆಲ್ಲಿಗೇ ಹೋಯ್ತೋ? ನಿಮಗೆ ಸಿಗಬೇಕಾದ್ದು, ಸಿಕ್ಕಿದೆಯಲ್ಲಾ. ಈಗ ನರಳುತ್ತಿರೋರು ಜನ ಸಾಮಾನ್ಯರನ್ನು ಕಟ್ಟಿಕೊಂಡು ನಿಮಗೇನಾಗಬೇಕು ಅಲ್ಲವೇ? ಹಿಂಗಾಗಿ ನಿಮಗೆ ಯಾವ ಅವಸರವೂ ಬೇಡ!

ಸರ್ಕಾರ ಬೀಳಿಸೋದಿಕ್ಕೆ, ಅತೃಪ್ತ ಶಾಸಕರಿಗೆ ಸ್ಪೆಷಲ್ ಫ್ಲೈಟ್ ವ್ಯವಸ್ಥೆ ಮಾಡೋದಿಕ್ಕೆ, ಐಷಾರಾಮಿ ಹೊಟೇಲ್ ವಾಸ್ತವ್ಯ ಮಾಡಿಸೋದಿಕ್ಕೆ, ಅವರ ಭದ್ರತೆಗೆ ಬೌನ್ಸರ್ ಗಳನ್ನು ಇಡೋದಿಕ್ಕೆ ನಿಮ್ಮ ಬಳಿ ನೋಟು ಪ್ರಿಂಟ್ ಮಾಡೋ ಯಂತ್ರ ಇತ್ತೇ, ಯಡಿಯೂರಪ್ಪನವರೇ..?

ಬೇಸಿಗೆಯಲ್ಲಿ ನೀರಿಲ್ಲದೆ ಒಣಗಿ ಹೋದವು. ತಡವಾಗಿ ಬಂದ ಮುಂಗಾರು ನಂಬಿ ಮಾಡಿದ ಬಿತ್ತನೆ ಪಸಲಾಗುವ ಮೊದಲೇ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ರೈತರು ದಿಕ್ಕು ಕಾಣದೆ ಕೂತಿದ್ದಾರೆ. ಸಾವಿರಾರು ಜನ ಮನೆ ಇಲ್ಲದೆ ನಿರಾಶ್ರಿತರಾಗಿದ್ದಾರೆ. ರಾಜ್ಯದ ಸಹೃದಯಿ ಜನರ ಸಹಾಯ, ನೆರವಿನಿಂದ ಹಲವು ಸಂತ್ರಸ್ತರ ಕೇಂದ್ರಗಳಲ್ಲಿ ಊಟ, ಬಟ್ಟೆ ಮತ್ತಿತರೆ ವ್ಯವಸ್ಥೆ ತಕ್ಕ ಮಟ್ಟಿಗೆ ಆಗುತ್ತಿದೆ.

ರಾಜ್ಯ ಸರ್ಕಾರದಿಂದ ನೀವೇನು ಮಾಡಿದ್ದೀರಿ ಸ್ವಾಮಿ? ಪ್ರವಾಹ ಸ್ಥಳಕ್ಕೆ ಹೋಗಿ ಇಷ್ಟು ಕೊಡ್ತೀವಿ, ಅಷ್ಟು ಕೊಡ್ತೀವಿ ಅಂತಾ ಪುಗಸಟ್ಟೆ ಆಶ್ವಾಸನೆ ನೀಡಿದ್ದು ಬಿಟ್ಟರೆ ಬೇರೇನು ಮಾಡಿದ್ದೀರಿ? ಅದರಲ್ಲೂ ತವರು ಜಿಲ್ಲೆ ಕಣ್ಣಿಗೆ ಬೆಣ್ಣೆ, ಉಳಿದ ಜಿಲ್ಲೆಗಳ ಕಣ್ಣಿಗೆ ಸುಣ್ಣ. ಅದರ ಮಧ್ಯೆ ಇಂತಹ ಬೇಜವಾಬ್ದಾರಿ ಹೇಳಿಕೆ ಬೇರೆ. ನಿಮಗೆ ಮನಸ್ಸಾದ್ರು ಹೇಗೆ ಬರುತ್ತೆ?

ಸರ್ಕಾರ ರಚಿಸುವ ಮುನ್ನ ಇದ್ದ ವೇಗ ಈಗ ನಿಮ್ಮಲ್ಲಿಲ್ಲ. ಅದಕ್ಕೆ ಕಾರಣ ನಿಮ್ಮ ಪಕ್ಷದ ಆಂತರಿಕ ವಿಚಾರಗಳು. ಸಂಪುಟ ರಚನೆ ಆಗದೇ ನೀವೊಬ್ಬರೇ ಎಷ್ಟು ಅಂತಾ ನಿಭಾಯಿಸ್ತೀರಿ ಅಲ್ಲವೇ? ನಿಮಗೆ ಕಷ್ಟ ಆಗಿದೆ ಅಂತಾ ಜನಕ್ಕೆ ಕಷ್ಟ ಕೊಟ್ಟರೆ ಆ ಶಿವ ಮೆಚ್ಚುವನೇ ಯಡಿಯೂರಪ್ಪನವರೇ..?

Leave a Reply