ಕ್ರಿಕೆಟ್ ನ ಒಲಿಂಪಿಕ್ಸ್ ಹಾದಿಗೆ ಅಡ್ಡಗೋಡೆಯಾಗಿರೋದೆ ಬಿಸಿಸಿಐ!

ಸೋಮಶೇಖರ ಪಿ. ಭದ್ರಾವತಿ:

ಒಲಿಂಪಿಕ್ಸ್… ಇಡೀ ವಿಶ್ವವೇ ಕಾದಾಟ ನಡೆಸುವ ಪ್ರತಿಷ್ಠಿತ ಕ್ರೀಡಾ ವೇದಿಕೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಕ್ರೀಡಾಪಟುಗಳ ಜೀವನದ ಕನಸು. ಇಂತಹ ಮಹಾನ್ ವೇದಿಕೆಯಲ್ಲಿ ಕ್ರಿಕೆಟ್ ಅನ್ನು ನೋಡುವುದು ಯಾವಾಗ? ಎಂಬ ಕಾತುರ ಅಭಿಮಾನಿಗಳದ್ದು. ಅಭಿಮಾನಿಗಳ ಈ ಕನಸನ್ನು ಸಾಕಾರಗೊಳಿಸುವತ್ತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಈ ಎಲ್ಲ ಪ್ರಯತ್ನಗಳಿಗೆ ಅಡ್ಡಗೋಡೆಯಾಗಿ ನಿತಿರೋದು ಜಾಗತಿಕ ಕ್ರಿಕೆಟ್ ನ ದೊಡ್ಡಣ್ಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ!

ಹೌದು, 1900ರ ಪ್ಯಾರೀಸ್ ಒಲಿಂಪಿಕ್ಸ್ ನಂತರ ಕ್ರಿಕೆಟ್ ಈ ಕ್ರೀಡಾಕೂಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಕೇವಲ ಟೆಸ್ಟ್ ಮಾದರಿಯಲ್ಲಿದ್ದ ಕ್ರಿಕೆಟ್ ಅನ್ನು ಎಲ್ಲ ದೇಶಗಳು ಭಾಗವಹಿಸಿ ಆಡಿಸಲು ಕಾಲಾವಕಾಸ ದೊಡ್ಡ ಸವಾಲಾಗಿ ಕಾಡಿತ್ತು. ಆದರೆ 1970ರ ದಶಕದ ನಂತರ ಏಕದಿನ ಕ್ರಿಕೆಟ್ ಹಂತ ಹಂತವಾಗಿ ಬೆಳೆಯಿತು. ಈ ಮಾದರಿಯಲ್ಲಾದರೂ ಕ್ರಿಕೆಟ್ ಒಲಿಂಪಿಕ್ಸ್ ಭಾಗವಾಗುವುದೇ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ಕಳೆದ ಒಂದು ದಶಕದಿಂದ ಟಿ20 ಮಾದರಿ ಜನಪ್ರಿಯವಾಗಿರೋದು ಕ್ರಿಕೆಟ್ ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯನ್ನು ಹುಟ್ಟು ಹಾಕಿತು. ಈ ನಿಟ್ಟಿಯಲ್ಲಿ ಐಸಿಸಿ ನಿರಂತರ ಪ್ರಯತ್ನ ನಡೆಸುತ್ತಿದ್ದು, ಅದರ ಮೊದಲ ಹೆಜ್ಜೆಯಾಗಿ 2022ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಹಿಳಾ ಟಿ20 ಸೇರ್ಪಡೆಯಾಗಿದೆ. ಈ ಹಿಂದೆ 1998ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಏಕದಿನ ಕ್ರಿಕೆಟ್ ಅನ್ನು ಸೇರಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿರಲಿಲ್ಲ. ಈಗ ಮಹಿಳಾ ಟಿ20 ಸೇರ್ಪಡೆಯಾಗಿರೋದು ಮತ್ತೊಮ್ಮೆ ಕ್ರಿಕೆಟ್ ಪ್ರಿಯರಲ್ಲಿ ಹೊಸ ಭರವಸೆ ಮೂಡಿಸಿದೆ.

2028ರ ಒಲಿಂಪಿಕ್ಸ್ ಲಾಸ್ ಏಂಜಲೀಸ್ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಆ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿಸಬೇಕು ಎಂದು ಐಸಿಸಿ ಎಲ್ಲ ಪ್ರಯತ್ನ ನಡೆಸುತ್ತಿದೆ. 2022ರ ಕಾಮನ್ವೆಲ್ತ್ ಕ್ರೀಡಾಕೂಡದಲ್ಲಿ ಕ್ರಿಕೆಟ್ ಪಂದ್ಯಗಳ ಆತಿಥ್ಯವನ್ನು ಐಸಿಸಿ ಹಾಗೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಜಂಟಿಯಾಗಿ ವಹಿಸಿಕೊಂಡಿದೆ.

ಹೀಗೆ ಐಸಿಸಿ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರಿಸಬೇಕು ಎಂಬ ಉದ್ದೇಶದಿಂದ ಪ್ರಯತ್ನ ಪಡುತ್ತಿದೆಯಾದರೂ ಈ ಹಾದಿಗೆ ಅಡ್ಡವಾಗಿ ನಿಂತಿರೋದು ಬಿಸಿಸಿಐ. ಅದು ಹೇಗೆ ಅಂದರೆ, ಕ್ರಿಕೆಟ್ ಒಲಿಂಪಿಕ್ಸ್ ನ ಭಾಗವಾಗಬೇಕಾದರೆ ಎಲ್ಲ ದೇಶದ ಕ್ರಿಕೆಟ್ ಮಂಡಳಿಗಳು ಆಯಾ ದೇಶಗಳ ಒಲಿಂಪಿಕ್ಸ್ ಸಮಿತಿಯೊಳಗೆ ಸೇರ್ಪಡೆಯಾಗಬೇಕು. ಹೀಗಾಗಿ ಬಿಸಿಸಿಐ ಕೂಡ ಭಾರತೀಯ ಒಲಿಂಪಿಕ್ಸ್ ಸಮಿತಿ ವ್ಯಾಪ್ತಿಗೆ ಒಳಪಡಬೇಕಿದೆ. ಅದರೊಂದಿಗೆ ರಾಷ್ಟ್ರೀಯ ಕ್ರೀಡಾ ಫೇಡರೇಷನ್ ಆಗಿ ಬಿಸಿಸಿಐ ಮಾನ್ಯತೆ ಪಡೆಯಬೇಕಿದೆ. ಈಗ ಸ್ವತಂತ್ರವಾಗಿ ವಿಶ್ವ ಕ್ರಿಕೆಟ್ ಮೇಲೆ ನಿಯಂತ್ರಣ ಸಾಧಿಸಿ ಬೀಗುತ್ತಿರುವ ಬಿಸಿಸಿಐ ಸುಖಾಸುಮ್ಮನೆ ತನ್ನ ಸ್ವಾಯತ್ತತ್ತೆಯನ್ನು ಕಳೆದುಕೊಳ್ಳಲು ಇಚ್ಛಿಸುತ್ತಿಲ್ಲ. ತನ್ನಲ್ಲಿರುವ ಸರ್ವಾಧಿಕಾರವನ್ನು ಬಿಟ್ಟು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಡಿಯಲ್ಲಿ ಸೇರಲು ಬಿಲ್ ಕುಲ್ ಮನಸ್ಸು ಮಾಡಿಲ್ಲ. ಇದು ಕ್ರಿಕೆಟ್ ಒಲಿಂಪಿಕ್ಸ್ ಭಾಗವಾಗುವುದಕ್ಕೆ ಎದುರಾಗಿರುವ ಪ್ರಮುಖ ಸವಾಲು.

ಈ ಹಿಂದೆ 2017ರಲ್ಲಿ ಸ್ವತಃ ಬಿಸಿಸಿಐ, ‘ನಾವು ನಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ನಮ್ಮ ಸ್ಥಾನ ಹೇಗಿರುತ್ತದೋ ಗೊತ್ತಿಲ್ಲ. ಹೀಗಾಗಿ ಇದನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿತ್ತು. ಇದರೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಹಿಡಿತದಲ್ಲಿ ಎಲ್ಲವೂ ಇರಬೇಕು ಎಂಬುದನ್ನು ಬಯಸುತ್ತಿದ್ದು, ತಾನು ಬೇರೆಯವರ ನಿಯಂತ್ರಣಕ್ಕೆ ಒಳಪಡುವುದಕ್ಕೆ ಸಿದ್ಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಇದರ ಜತೆಗೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕಾದರೆ ಆಯಾ ಕ್ರೀಡಾ ಮಂಡಳಿ ಹಾಗೂ ಕ್ರೀಡಾಪಟುಗಳು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಬೇಕು. ಇಷ್ಟು ದಿನಗಳ ಕಾಲ ಕ್ರಿಕೆಟ್ ಆಟಗಾರರು ಈ ಪ್ರಕ್ರಿಯೆಯಿಂದ ಹೊರಗಿದ್ದರು. ಅಲ್ಲದೆ ಬಿಸಿಸಿಐ, ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆ (ನಾಡಾ) ವ್ಯಾಪ್ತಿಗೆ ಒಳಪಟ್ಟಿರಲಿಲ್ಲ. ಆದರೆ ಕಳೆದ ಒಂದು ವಾರದಲ್ಲಿ ಬಿಸಿಸಿಐ ನಾಡಾ ವ್ಯಾಪ್ತಿಗೆ ಸೇರುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿರೋದು ಬದಲಾವಣೆಯ ನಿರೀಕ್ಷೆ ಗೆರೆಗಳು ಮೂಡಿದಂತಾಗಿದೆ. ಈ ವಿಚಾರವಾಗಿ ಬಿಸಿಸಿಐ ಆಡಳಿತ ಮಂಡಳಿ ಸಭೆ ನಡೆಸಲಿದ್ದು ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಮುಖ್ಯವಾಗಲಿದೆ.

ಐಸಿಸಿ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಸೇರಿಸಬೇಕು ಎಂಬ ಉದ್ದೇಶದಿಂದ ಎಷ್ಟೇ ಸರ್ಕಸ್ ಮಾಡಿದರೂ ಬಿಸಿಸಿಐನ ಸಹಕಾರ ಸಿಗದೇಹೋದರೆ ಕ್ರಿಕೆಟ್ ಒಲಿಂಪಿಕ್ಸ್ ಭಾಗವಾಗುವ ಕನಸು ಕನಸಾಗಿಯೇ ಉಳಿಯಲಿದೆ.

Leave a Reply