ಯಡಿಯೂರಪ್ಪನವರದು ತುಘಲಕ್ ಸರ್ಕಾರ; ಕುಮಾರಸ್ವಾಮಿ ಟೀಕೆ

ಡಿಜಿಟಲ್ ಕನ್ನಡ ಟೀಮ್:

‘ಹತ್ತು ಕೋಟಿ ದೇಣಿಗೆ ನೀಡಿದವರ ಹೆಸರನ್ನು ಗ್ರಾಮಗಳಿಗೆ ನಾಮಕರಣ ಮಾಡುವುದಾಗಿ ಘೋಷಿಸುವ ಮೂಲಕ ಬಿಎಸ್ ಯಡಿಯೂರಪ್ಪನವರ ಸರ್ಕಾರ ತುಘಲಕ್ ರೀತಿ ನಿರ್ಧಾರ ಕೈಗೊಂಡಿದ್ದಾರೆ…’ ಇದು ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರುವ ಟೀಕೆ.

ಬುಧವಾರ ವಿಧಾನಸೌಧದಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರವಾಹದಿಂದಾಗಿ ರಾಜ್ಯದಲ್ಲಿ ತೀವ್ರ ಸಂಕಷ್ಟ ತಲೆದೋರಿದೆ. ಸಾವಿರಾರು ಹಳ್ಳಿಗಳು ನೆರೆಯಿಂದ ಮುಳುಗಡೆಯಾಗಿವೆ. ಸಾವಿರಾರು ಕೋಟಿ ನಷ್ಟ ಸಂಭವಿಸಿದೆ. ಪುನಃ ಈ ಗ್ರಾಮಗಳ ಪುನಶ್ಚೇತನಕ್ಕೆ ಭಾರೀ ಹಣದ ಅವಶ್ಯಕತೆ ಇದೆ. ಹೀಗಾಗಿ ಉದ್ಯಮಿಗಳು ನೆರೆ ಪರಿಹಾರಕ್ಕೆ 10 ಕೋಟಿಗಿಂತ ಅಧಿಕ ದೇಣಿಗೆ ನೀಡಿದರೆ ಅವರ ಹೆಸರನ್ನು ಆ ಗ್ರಾಮಗಳಿಗೆ ನಾಮಕರಣ ಮಾಡುವುದಾಗಿ ತಿಳಿಸಿದ್ದರು.

ಸಿಎಂ ಯಡಿಯೂರಪ್ಪ ಅವರ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್​, ಸಿಎಂ ನಿರ್ಧಾರ ತುಘಲಕ್​ ನಿರ್ಧಾರದಂತಿದೆ. ನಮ್ಮ ರಾಜ್ಯದ ಪ್ರತೀ ಗ್ರಾಮದ ಹೆಸರಿಗೂ ಅದರದ್ದೇ ಆದ ಹಿನ್ನೆಲೆಯಿದೆ. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವವರಿಗೆ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಮಾಡಬೇಡಿ. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ ಎಂದು ಖಾರವಾಗಿ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿದೆ.

Leave a Reply