ಸ್ವಾತಂತ್ರೋತ್ಸವ ಭಾಷಣದಲ್ಲಿ ಮೋದಿ ಜಲ ಜಪ!

ಡಿಜಿಟಲ್ ಕನ್ನಡ ಟೀಮ್:

ಭವಿಷ್ಯದಲ್ಲಿ ಜಲ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಲು ಜಲಶಕ್ತಿ ಅಭಿವೃದ್ಧಿಗೆ ಪ್ರತಿಯೊಬ್ಬ ಪ್ರಜೆ ಶ್ರಮಿಸಬೇಕುಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೋತ್ಸವ ಭಾಷಣದಲ್ಲಿ ತಿಳಿಸಿದರು.

73ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆ ಮೇಲೆ ತಿರಂಗವನ್ನು ಹಾರಿಸಿ, ಮಾತನಾಡಿದ ಮೋದಿ ಸ್ವಾತಂತ್ರ ಹಾಗೂ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದವರನ್ನು ಸ್ಮರಿಸಿದರು. ಈ ವೇಳೆ ಮೋದಿ ಮಾಡಿದ ಭಾಷಣದ ಸಾರಾಂಶ ಹೀಗಿದೆ…

‘ದೇಶದ ಜನರಿಗೆ ಸ್ವಾತಂತ್ರೋತ್ಸವ ಹಾಗೂ ರಕ್ಷಾಬಂಧನ ಶುಭಾಶಯ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನನ್ನ ಸಲಾಂ. ಭಾರತದ ಭವಿಷ್ಯಕ್ಕಾಗಿ ಬಲಿದಾನ ಮಾಡಿದವರಿಗೆ, ತ್ಯಾಗಿಗಳಿಗೆ, ತಪಸ್ವಿಗಳಿಗೆ ನನ್ನ ನಮನಗಳು. ಅನೇಕ ಪ್ರಾಣ ಬಲಿದಾನದಿಂದಾಗಿ ನಾವು ಸ್ವಾತಂತ್ರ್ಯ ದಿನವನ್ನು ಪವಿತ್ರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಗೆ ಪಣ ತೊಡಬೇಕಾಗಿದೆ.’

‘ಭವಿಷ್ಯದ ಜಲ ಸಂಕಟ ನಿರ್ಮೂಲನೆ ಆಗಬೇಕಿದೆ. ಜಲಶಕ್ತಿ ವೃದ್ಧಿಗೆ ಪ್ರತಿಯೊಬ್ಬ ಪ್ರಜೆ ಶ್ರಮಿಸಬೇಕು. ದೇಶದ ಅನೇಕ ರಾಜ್ಯಗಳಲ್ಲಿ ಅತಿವೃಷ್ಟಿ ಆಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.’

‘ಸಂವಿಧಾನದ 370 ಹಾಗೂ 35(ಎ) ರದ್ದಾಗಿದೆ. ಸರ್ದಾರ್ ಪಟೇಲ್ ಕನಸು ನನಸು ಮಾಡಿದ್ದೇವೆ. ತ್ರಿವಳಿ ತಲಾಖ್ ನಿಷೇಧದ ಮೂಲಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದ್ದೇವೆ. ಎನ್‌ಐಎ, ಯುಎಪಿಎ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದೇವೆ. ದೇಶದ ರಕ್ಷಣೆಗೆ ಇನ್ನಷ್ಟು ಬಲ ನೀಡಿದ್ದೇವೆ.’

‘2014-19ರವರೆಗೆ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದಿರಿ. ಆದಿವಾಸಿಗಳು, ಶೋಷಿತರನ್ನು ಮುನ್ನೆಲೆಗೆ ತರಲು ಶ್ರಮಿಸಿದ್ದೇವೆ. ಅವಶ್ಯಕತೆಗಳನ್ನು ಪೂರೈಸುವ ಅನಿವಾರ್ಯತೆ ಇತ್ತು. ನಿಮ್ಮ ಕನಸು ಸಾಕಾರಗೊಳಿಸುವ ಸಮಯ ಬಂದಿದೆ.  5 ವರ್ಷಗಳಲ್ಲಿ ದೇಶದ ಚಿತ್ರಣ ಬದಲಾಗುತ್ತಿದೆ. ದೇಶದ ಜನರ ನಿರಾಸೆ ಆಸೆಯಾಗಿ ಬದಲಾಗಿದೆ. ಪ್ರತಿ ಕ್ಷಣ ಅವರಿಗೋಸ್ಕರ ಶ್ರಮಿಸಿದ್ದೇವೆ.’

‘ರೈತರ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ನಾವು ಜಾರಿಗೆ ತಂದ ಕಿಸಾನ್ ಸಮ್ಮಾನ್ ರೈತರಿಗೆ ತಲುಪಿದೆ. ರೈತರ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಆಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ಸಮೃದ್ಧ ಭಾರತ ನಿರ್ಮಾಣವಾಗಲಿದೆ. ಭ್ರೂಣ ಹತ್ಯೆ ತಡೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ದೇಶದ ಜನರಲ್ಲಿ ಹೊಸ ವಿಶ್ವಾಸ ಮೂಡಿದೆ’.

‘ದೇಶದ ಏಕೀಕರಣಕ್ಕೆ ಎಲ್ಲರ ಶ್ರಮ ಇದೆ. ಒಂದು ದೇಶ ಒಂದೇ ಸಂವಿಧಾನ ಎನ್ನುವ ಕಲ್ಪನೆ 70 ವರ್ಷಗಳ ಬಳಿಕ ಇದು ಸಾಕಾರ ಆಗಿದೆ. ಇದನ್ನು ಸಾಕಾರಗೊಳಿಸಿದ ಹೆಮ್ಮೆ ನಮಗಿದೆ. ಒಂದು ದೇಶ ಒಂದೇ ಚುನಾವಣೆಯನ್ನು ಜಾರಿಗೊಳಿಸಬೇಕಿದೆ. ಒಂದೇ ಭಾರತ, ಶ್ರೇಷ್ಠ ಭಾರತ.’

‘ಹನಿ ಹನಿ ನೀರು ಉಳಿಸುವ ಕೆಲಸ ಆಗಬೇಕಿದೆ. ಜಲ ಸಂರಕ್ಷಣೆ ಒಂದು ತಪಸ್ಸು ಆಗಬೇಕು. ದೇಶದ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಇದೆ. ಹನಿ ನೀರಿಗೆ ಕಿಲೋ ಮೀಟರ್‌ಗಟ್ಟಲೆ ಹೋಗುತ್ತಿದ್ದಾರೆ. ಜಲ ಸಮಸ್ಯೆ ವಿರುದ್ಧ ನಾವು ಹೋರಾಡಬೇಕು. ಜಲ್ ಜೀವನ್ ಮಿಷನ್‌ಗಾಗಿ 3.5 ಲಕ್ಷ ಕೋಟಿ ಮೀಸಲಿಟ್ಟಿದ್ದೇವೆ. ಶತಮಾನದ ಹಿಂದೆಯೇ ತಿರುವಳ್ಳುವರ್ ಈ ಸಮಸ್ಯೆ ಬಗ್ಗೆ ಹೇಳಿದ್ದರು. ಈಗಿನಿಂದಲೇ ಎಲ್ಲರೂ ಸ್ವಯಂಪ್ರೇರಣೆಯಿಂದ ಶ್ರಮಿಸಿ. ಜಲ ಅಭಿಯಾನ ಪ್ರತಿಯೊಬ್ಬರ ಅಭಿಯಾನ ಆಗಬೇಕು.’

‘ದಿನೇ ದಿನೇ ದೇಶದ ಜನಸಂಖ್ಯೆ ಹೆಚ್ಚುತ್ತಿದೆ. ಈಗಿನಿಂದಲೇ ಮುಂದಿನ ಪೀಳಿಗೆಗೆ ನೀರು ಉಳಿಸಬೇಕಿದೆ. ಜಲ ಸಂರಕ್ಷಣೆಗೆ ಸಾಮಾಜಿಕ ಜಾಗೃತಿ ಆಗಬೇಕು. ಸಮಾಜದ ಎಲ್ಲರೂ ಇದಕ್ಕಾಗಿ ಶ್ರಮ ವಹಿಸಬೇಕು. ಕೇಂದ್ರ, ರಾಜ್ಯ ಸರ್ಕಾರಗಳ ಜೊತೆ ಕೈಜೋಡಿಸಿ. ಶಿಕ್ಷಿತ ಸಮಾಜ ನಮ್ಮದು ಜಲ ಸಂರಕ್ಷಣೆಗೆ ಶ್ರಮಿಸಿ.’

‘ಭ್ರಷ್ಟಾಚಾರ ಬೇರುಸಮೇತ ಕಿತ್ತು ಹಾಕಬೇಕಿದೆ. ಇದು ಸಾಧ್ಯವಾಗಲು ನೀವೆಲ್ಲಾ ಕೈಜೋಡಿಸಬೇಕು. ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇದು ಕೇವಲ ಸರ್ಕಾರಗಳಿಂದ ಮಾತ್ರ ಸಾಧ್ಯವಿಲ್ಲ. ನಿಮ್ಮ ಇಚ್ಛಾಶಕ್ತಿ ಕೂಡ ಇದಕ್ಕೆ ಸಹಕಾರಿ. ವಿಶ್ವಮಟ್ಟದಲ್ಲಿ ಭಾರತಕ್ಕೆ ಉತ್ತಮ ಸ್ಥಾನಮಾನ ಸಿಗಬೇಕು. ಭಾರತದ ಶಕ್ತಿಮೇಲೆ ಇಡೀ ವಿಶ್ವವೇ ನಂಬಿಕೆ ಇಟ್ಟಿದೆ. ಅಗ್ರಪಂಥಿ 50 ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲಬೇಕು. ಈ ಕನಸು ಸಾಕಾರಗೊಳಿಸಲು ಹಗಲಿರುಳು ಶ್ರಮಿಸ್ತೇವೆ.

‘ಯಾರಿಗೆ ಏನು ಸಿಕ್ಕಿದೆ? ಯಾವಾಗ ಸಿಕ್ಕಿದೆ? ನಾವೆಲ್ಲರೂ ಸೇರಿ ದೇಶವನ್ನು ಎಲ್ಲಿಗೆ ಕೊಂಡೊಯ್ಯಬೇಕು. ದೇಶಕ್ಕಾಗಿ ಏನು ಮಾಡಬೇಕು ಎನ್ನುವ ಕನಸಿರಬೇಕು. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಕಷ್ಟವಿಲ್ಲ. 2 ಟ್ರಿಲಿಯನ್‌ನಿಂದ 3 ಟ್ರಿಲಿಯನ್‌ ಡಾಲರ್‌ಗೆ ತಲುಪಿದ್ದೇವೆ. 70 ವರ್ಷಗಳಲ್ಲಿ ಆಗದ್ದನ್ನು 5 ವರ್ಷಗಳಲ್ಲಿ ಸಾಧಿಸಿದ್ದೇವೆ.

Leave a Reply