2022ರ ವೇಳೆಗೆ ದೇಶದ ಜನತೆಗೆ ಮೋದಿ ಕೊಟ್ಟ ಟಾಸ್ಕ್ ಏನು?

ಡಿಜಿಟಲ್ ಕನ್ನಡ ಟೀಮ್:

ಸ್ವಚ್ಛ ಭಾರತ, ಜಲಶಕ್ತಿಯಂತಹ ಸಾಮಾಜಿಕ ಯೋಜನೆಗಳನ್ನು ಮಾಡಿ ಮನಗೆದ್ದಿರುವ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಮ್ಮೆ ದೇಶದ ಜನರಿಗೆ ಇಂತಹುದೇ ಮಹತ್ವದ ಟಾಸ್ಕ್ ಕೊಟ್ಟಿದ್ದಾರೆ. ಅದೇನೆಂದರೆ 2022ರ ವೇಳೆಗೆ ಭಾರತವನ್ನು ಒಂದು ಬಾರಿ ಬಳಕೆಯಾಗುವ ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡುವುದು!

ಹೌದು, ಕಳೆದ ವಾರ ಮುಂಬೈ ಪ್ರವಾಹಕ್ಕೆ ತತ್ತರಿಸಿದಾಗ, ಸಮುದ್ರ ಸೇರಿದ ಪ್ಲಾಸ್ಟಿಕ್ ತ್ಯಾಜ್ಯ ಅಲೆಗಳ ಮೂಲಕ ಬಂದು ದಡದಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ವಿಡಿಯೋವನ್ನು ನಿವೆಲ್ಲರು ನಿಬ್ಬೆರಗಾಗಿ ನೋಡಿದ್ದು ನೆನಪಿದೆ ತಾನೆ. ಪ್ರಕೃತಿ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದ ಮೂಲಕ ನಾವು ಮಾಡುತ್ತಿರುವ ದೌರ್ಜನ್ಯವನ್ನು ನಿಯಂತ್ರಿಸಲು ನಾವೆಲ್ಲರೂ ಎಚ್ಛೆತ್ತುಕೊಳ್ಳಬೇಕಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರವಾಗಿ ದೇಶದ ಜನರಿಗೆ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಭಾರತಕ್ಕೆ ಸೀಮಿತವಾದುದಲ್ಲ. ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆ. ಕೇವಲ ಭೂ ಪ್ರದೇಶ ಮಾತ್ರವಲ್ಲದೆ ಸಾಗರ ಸಮುದ್ರಗಳಲ್ಲೂ ಪ್ಲಾಸ್ಟಿಕ್ ತ್ಯಾಜ್ಯದ ಗಂಭೀರ ಪರಿಣಾಮ ಪ್ರಕೃತಿ ಹಾಗೂ ಜೀವ ರಾಶಿಗಳ ಮೇಲೆ ವ್ಯತಿರಿಕ್ತವಾಗಿ ಬೀರುತ್ತಿದೆ. ಹೀಗಾಗಿ ಮಹಾತ್ಮ ಗಾಂಧಿ ಅವರ ಸ್ಮರಣಾತ್ರವಾಗಿ ಈ ಯೋಜನೆ ಯಶಸ್ವಿ ಮಾಡುವಂತೆ ಮೋದಿ ಕರೆಕೊಟ್ಟಿದ್ದಾರೆ.

‘ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಅವರ ಜನ್ಮದಿನದಂದು ಈ ಯೋಜನೆಗೆ ಚಾಲನೆ ನೀಡಲಿದ್ದು, ಪ್ರತಿಯೊಬ್ಬರು ತಮ್ಮ ಮನೆಯಿಂದ ಹಿಡಿದು, ಬಿದಿಗಳು, ವೃತ್ತಗಳು, ಚರಂಡಿಗಳಲ್ಲಿರುವ ಒಂದು ಬಾರಿ ಬಳಕೆಯಾಗುವ ಪ್ಲಾಸ್ಚಿಕ್ ಅನ್ನು ನಿರ್ಮೂಲನೆ ಮಾಡಬೇಕು. ಈ ನಿಟ್ಟಿನಲ್ಲಿ ದೇಶದ ಜನರು ಮಹತ್ವದ ಹೆಜ್ಜೆಯೊಂದನ್ನು ಇಡಬೇಕು’ ಎಂದು ಮೋದಿ ಕರೆ ನೀಡಿದ್ದಾರೆ.

‘ಆತ್ಮೀಯ ದೇಶದ ಪ್ರಜೆಗಳೆ ಅಕ್ಟೋಬರ್ ನಿಂದ ಭಾರತವನ್ನು ಒಂದು ಬಾರಿ ಬಳಕೆಯಾಗುವ ಪ್ಲಾಸ್ಟಿಕ್ ನಿಂದ ಮುಕ್ತ ಮಾಡೋಣ ಬನ್ನಿ’ ಎಂದು ಮೋದಿ ಕೆಂಪುಕೋಟೆಯಲ್ಲಿ ಸ್ವಾತಂತ್ರ ದಿನಾಚಾರಣೆ ಅಂಗವಾಗಿ ರಾಷ್ಟ್ರಧ್ವಜ ಹಾರಿಸಿ ಈ ಕರೆ ಕೊಟ್ಟಿದ್ದಾರೆ.

‘ಪ್ರತಿ ವರ್ಷ ದೀಪಾವಳಿಗೆ ನಾವು ಬೇರೆಯವರಿಗೆ ಉಡುಗೊರೆ ನೀಡುತ್ತೇವೆ. ಆಗ ನಾವೆಲ್ಲರೂ ಪ್ಲಾಸ್ಟಿಕ್ ಬ್ಯಾಗ್ ಬಳಸುತ್ತಿದ್ದೆವು. ಈ ವರ್ಷ ಪ್ಲಾಸ್ಟಿಕ್ ಬದಲು ಬಟ್ಟೆ ಅಥವಾ ಪೇಪರ್ ಬ್ಯಾಗ್ ಬಳಸೋಣ. ಇನ್ನು ಅಂಗಡಿ ಮುಂಗಟ್ಟುಗಳಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಕೈಚೀಲ ನೀಡುವ ಬದಲು ಬಟ್ಟೆ ಅಥವಾ ಪೇಪರ್ ಕವರ್ ಬಳಸಬೇಕು. ಬಟ್ಟೆ ಕೈಚೀಲ ಬಳಸಿದರೆ ರೈತರಿಗೂ ನೇರವಾಗುತ್ತದೆ. ಇವೆಲ್ಲವೂ ಸಣ್ಣ ಸಣ್ಣ ವಿಷಯವಾದರೂ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತವೆ. ಆ ಮೂಲಕ ಉತ್ತಮ ಪರಿಸರವನ್ನು ನಾವೆಲ್ಲರೂ ಸೇರಿ ನಿರ್ಮಿಸೋಣ’ ಎಂದು ಮೋದಿ ಕರೆ ಕೊಟ್ಟರು.

ಕಳೆದ ವರ್ಷ ವಿಶ್ವ ಪರಿಸರದ ದಿನದಂದು ಭಾರತ ಸ್ವಯಂ ಪ್ರೇರಿತವಾಗಿ 2022ರ ವೇಳೆಗೆ ಒಂದು ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್ ಮುಕ್ತ ದೇಶವಾಗಿ ಪರಿವರ್ತನೆಯಾಗುವುದಾಗಿ ಪಣ ತೊಟ್ಟಿದೆ. ಹೀಗಾಗಿ ಈ ಸದುದ್ದೇಶ ಸಾಕಾರಗೊಳ್ಳಲು ಎಲ್ಲರು ಸಹಕರಿಸಬೇಕು ಎಂದು ಮೋದಿ ದೇಶದ ಜನರಲ್ಲಿ ಮನವಿ ಮಾಡಿದರು.

ಕ್ಯಾರಿ ಬ್ಯಾಗ್, ಆಹಾರ ಪಟ್ಟಣ ಕಟ್ಟುವ, ಬಾಟೆಲ್, ಸ್ಟ್ರಾ, ಕಪ್ ಗಳ ಮೂಲಕ ಪ್ರತಿನಿತ್ಯ ಅಪಾರ ಪ್ರಮಾಣದಲ್ಲಿ ಒಂದು ಬಾರಿ ಬಳಸುವ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗುತ್ತಿದೆ. ಕೇಂದ್ರ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ಭಾರತ ಪ್ರತಿನಿತ್ಯ 25,940 ಟನ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರಹಾಕುತ್ತಿದೆ. ಅದರಲ್ಲಿ ಶೇ.40ರಷ್ಟು ಅಂದರೆ ದಿನ 10,376 ಟನ್ ಪ್ಲಾಸ್ಟಿಕ್ ತ್ಯಾಜ್ಯ ಕಲೆಹಾಕದೇ ಉಳಿದು ಬಿಡುತ್ತಿವೆ. ಇಂತಹ ಕಲೆಹಾಕದೇ ಉಳಿದ ಪ್ಲಾಸ್ಟಿಕ್ ತ್ಯಾಜ್ಯಗಳು, ಚರಂಡಿ, ನದಿಗಳನ್ನು ಸೇರಿ ಸಮುದ್ರ ಹಾಗೂ ಸಾಗರ ಸೇರುತ್ತಿವೆ. ಇದರಿಂದ ಸಮುದ್ರದ ಜೀವರಾಶಿ ಹಾಗೂ ಅಲ್ಲಿನ ಪರಿಸರ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇನ್ನು ಪ್ಲಾಸ್ಟಿಕ್ ತ್ಯಾಜ್ಯದ ಪರಿಣಾಮವಾಗಿ ಭೂ ಮಾಲೀನ್ಯವೂ ಹೆಚ್ಚುತ್ತಿದೆ.

Leave a Reply