ಬೆಂಗಳೂರು ಉಗ್ರರ ಟಾರ್ಗೆಟ್.. ಖಾಕಿ ಕಟ್ಟೆಚ್ಚರ..!?

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಆಯ ಕಟ್ಟಿನ ಸ್ಥಳಗಳಲ್ಲಿ ಭಾರೀ ಭದ್ರತೆ ವಹಿಸುವಂತೆ ಬೆಂಗಳೂರು ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ಎಲ್ಲಾ ಕಡೆ ಸಿಸಿಟಿವಿ ಕಾರ್ಯನಿರ್ವಹಣೆ ಮಾಡುವಂತೆ ನೋಡಿಕೊಳ್ಳಲು ಸೂಚನೆ ನೀಡಿರುವ ಅವರು, ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಪ್ರಮುಖ ಸ್ಥಳಗಳಲ್ಲಿ ಖುದ್ಧು ಭದ್ರತೆ ನೋಡಿಕೊಳ್ಳಬೇಕು, ನಗರದಲ್ಲಿ ಅನುಮಾನಸ್ಪಾದ ವ್ಯಕ್ತಿಗಳು ಹಾಗೂ ಅನುಮಾನ ಕಂಡು ಬರೋ ವಾಹನಗಳನ್ನು ತಪಾಸಣೆ ಮಾಡಬೇಕು. ಅನುಮಾನಸ್ಪಾದವಾಗಿ ಕಂಡು ಬರೋ ಬ್ಯಾಗ್ ಗಳನ್ನು ತಪಾಸಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಭದ್ರತೆಗೆ ಪೊಲೀಸರು ಸಾಕಾಗದೆ ಇದ್ದರೆ ಪ್ರೈವೆಟ್ ಸೆಕ್ಯೂರಿಟಿ ಗಾರ್ಡ್‌ಗಳನ್ನು ಭದ್ರತೆಗೆ ಬಳಸಿಕೊಳ್ಳಿ ಎಂದೂ ಸೂಚನೆ ರವಾನಿಸಿರುವ ಆಯುಕ್ತರು, ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ರೌಂಡ್ಸ್‌ನಲ್ಲಿ ಇರಬೇಕು. ತಮ್ಮ ವ್ಯಾಪ್ತಿಯ ಆಯಕಟ್ಟಿನ ಪ್ರದೇಶದಲ್ಲಿ ಹಿರಿಯ ಅಧಿಕಾರಿಗಳು ಮೊಕ್ಕಾಂಗೆ ಸೂಚಿಸಿದ್ದಾರೆ. ಇನ್ನು ನೈಟ್ ರೌಂಡ್ಸ್ ಇರೋ ಅಧಿಕಾರಿಗಳು ಶಂಕಾಸ್ಪಾದ ವ್ಯಕ್ತಿಗಳು ಹಾಗೂ ವಾಹನ ಕಂಡು ಬಂದ್ರೆ ವಶಕ್ಕೆ ಪಡೆಯಬೇಕು. ಪೇಯಿಂಗ್ ಗೆಸ್ಟ್ ಹೌಸ್ (ಪಿಜಿ ಹಾಸ್ಟಲ್), ಅಪಾರ್ಟ್ ಮೆಂಟ್, ಮಸೀದಿ, ದೇವಸ್ಥಾನಗಳ ಬಳಿ ಪೊಲೀಸರು ಭದ್ರತೆ ಒದಗಿಸುವಂತೆಯೂ ಹಾಗೂ ತಮ್ಮ ತಮ್ಮ ಏರಿಯಾಗಳಲ್ಲಿ ಬಿಟ್ ಪೊಲೀಸರು ಅಲರ್ಟ್ ಆಗಿರಬೇಕು ಎಂದು ಕಟ್ಟೆಚ್ಚರ ಕೊಟ್ಟಿದ್ದಾರೆ. ಪ್ರಮುಖ ಆಯಕಟ್ಟಿನ ಪ್ರದೇಶಗಳಲ್ಲಿ ಸಂಪೂರ್ಣ ತಪಾಸಣೆ ಮಾಡಬೇಕು. ಚೆಕ್ ಪೋಸ್ಟ್ ಗಳು, ನಗರದ ಒಳಗೆ ಹೊರಗೆ ಹೋಗುವ ವಾಹನಗಳ ತಪಾಸಣೆಯಾಗಬೇಕು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಉಗ್ರರು ನುಸುಳಿರುವ ಮಾಹಿತಿ ಸಿಕ್ಕಿದ್ದು, ನಗರ ಪೊಲೀಸ್ ಆಯುಕ್ತರಿಗೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆಯಿಂದ ಮಾಹಿತಿ ರವಾನೆ ಆಗಿದೆ ಎನ್ನಲಾಗಿದೆ. ಬೆಂಗಳೂರು ನಗರ ಸಾಫ್ಟ್‌ ಕಾರ್ನರ್ ಪ್ರದೇಶ ಆಗಿರುವ ಕಾರಣ. ನಗರದಲ್ಲಿಯೂ ಕಟ್ಟೆಚ್ಚರ‌ ವಹಿಸುವಂತೆ ಸೂಚನೆ. ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಈಗಾಗಲೇ ನಗರದೆಲ್ಲೆಡೆ‌ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ 370 ಹಾಗೂ 35A ರದ್ದು ಬಳಿಕ ಪಾಕಿಸ್ತಾನ ಕೊತಕೊತ ಕುದಿಯುತ್ತಿದ್ದು, ದುಷ್ಕೃತ್ಯ ಮೆರೆಯಲು ಹವಣಿಸುತ್ತಿದೆ. ಗಡಿಯಲ್ಲಿ ಸೇನೆ ಹಾಗೂ ಶಸ್ತ್ರಾಸ್ತ್ರ ಸಂಗ್ರಹ ಮಾಡುವ ಮೂಲಕ ಯುದ್ಧ ಸನ್ನದ್ಧ ಎಂದು ಸಂದೇಶ ರವಾನೆ ಮಾಡ್ತಿದೆ. ಅದರ ಜೊತೆಗೆ ಯುದ್ಧ ಘೋಷಣೆಯಾದರೆ ಇರುವ ಬಂಡಾರ ಖಾಲಿಯಾಗುವ ಭೀತಿಯಿಂದ ಉಗ್ರವಾದದ ಮೂಲಕ ಸೇಡು ತೀರಿಸಿಕೊಳ್ಳುವ ಹುನ್ನಾರ ಮಾಡಿದೆ ಅನ್ನೋ ಸುದ್ದಿಗಳು ವರದಿಯಾಗಿದ್ವು. ಇದೀಗ ಕೇಂದ್ರ ಗುಪ್ತಚರ ಇಲಾಖೆ ಕೊಟ್ಟಿರುವ ಖಡಕ್ ಸಂದೇಶದಿಂದ ಪಾಕ್ ನೀಚತನ ಬಯಲಾಗಿದೆ. ದೇಶದಲ್ಲಿ‌ ಕಾನೂನು ಸುವ್ಯವಸ್ಥೆಗೆ ನಮ್ಮ ಪೊಲೀಸರು ಕಟಿಬದ್ಧರಾಗಿದ್ದು ಯಾವುದೇ ಸವಾಲು ಮೆಟ್ಟಿನಿಲ್ಲುವ ಚಾಕಚಕ್ಯತೆ ಹೊಂದಿದ್ದಾರೆ. ನಾಗರಿಕರೂ ಸಹ ಪೊಲೀಸರೊಂದಿಗೆ ಕೈ ಜೋಡಿಸಿದ್ರೆ ಉಗ್ರರನ್ನೂ ಸದೆಬಡಿಯುವ ಶಕ್ತಿ ಹೊಂದಿದ್ದಾರೆ.

Leave a Reply