ನಮ್ಮ ಯೋಜನೆ ರದ್ದು ಮಾಡಿದರೆ ಸುಮ್ಮನೆ ಕೂರಲ್ಲ: ಡಿಕೆ ಶಿವಕುಮಾರ್ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್:

‘ಮುಖ್ಯಮಂತ್ರಿ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡಲ್ಲ ಅಂತಾ ಹೇಳಿದ್ದಾರೆ. ನಮ್ಮ ಹಳೇ ಯೋಜನೆಗಳನ್ನು ರದ್ದು ಮಾಡಿದರೆ ನಾವು ಸುಮ್ಮನೆ ಕೂರಲ್ಲ’ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ‘ಸಿದ್ದರಾಮಯ್ಯನವರೆ ರೈತರಿಗೆ ಅನುಕೂಲ ಆಗಲಿ ಅಂತಾ ಒಣ ಭೂಮಿ ಹೊಂದಿರುವ ರೈತರಿಗೆ 10 ಸಾವಿರ ನೀಡುವ ಯೋಜನೆ ಘೋಷಿಸಿದ್ದರು. ಆದರೆ ಈಗ ಯಡಿಯೂರಪ್ಪನವರು ಅದಕ್ಕೆ ಹೊಸ ಬಣ್ಣ ಹಾಕಿಕೊಂಡು ಜಾಹಿರಾತುಗಳಲ್ಲಿ ಪೋಸ್ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

ನಮ್ಮ ಸರ್ಕಾರ ಫೋನ್ ಟ್ಯಾಪ್ ಮಾಡಿಲ್ಲ

‘ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಾವು ಯಾವ ಫೋನ್ ಟ್ಯಾಪ್ ಮಾಡಿಲ್ಲ. ಮಾಧ್ಯಮಗಳಲ್ಲಿ ಹೇಗೆ ಬಂದಿದೆಯೋ ಗೊತ್ತಿಲ್ಲ. ನಾನು ನನಗೆ ಗೊತ್ತಿರುವವರನ್ನು ವಿಚಾರಿಸಿದೆ. ಯಾವುದೇ ರೀತಿಯ ಟ್ಯಾಪಿಂಗ್ ಆಗಿಲ್ಲ. ನಾವು ಇಂತಹ ಕೆಲಸಕ್ಕೆ ಕೈ ಹಾಕಿಲ್ಲ. ಈ ಬಗ್ಗೆ ಯಾವುದೇ ತನಿಖೆ ಬೇಕಾದರೂ ಮಾಡಲಿ. ನಮ್ಮ ಅಭ್ಯಂತರವಿಲ್ಲ.

ಹಿಂದಿನ ಸಚಿವರು (ಆರ್.ಅಶೋಕ್) ರಾಜಕೀಯವಾಗಿ ಏನೇನೋ ಮಾತನಾಡಿದರೆ ಅದಕ್ಕೆ ಅರ್ಥ ಇಲ್ಲ. ಅವರಿಗೆ ಮುಂಚೆಯೇ ಗೊತ್ತಿದ್ದರೆ ಕಂಪ್ಲೇಂಟ್ ಮಾಡಿದ್ದರೆ ಆಗಲೇ ಏನು ಬೇಕಾದರೂ ಮಾಡಬಹುದಿತ್ತು. ಅವರಿಗೆ ರಾಜಕಾರಣ ಬೇಕಿತ್ತು ಅದಕ್ಕೆ ಮಾತನಾಡುತ್ತಿದ್ದಾರೆ. ಈ ಹಿಂದೆ ನಮ್ಮ ಫೋನ್ ಟ್ಯಾಪ್ ಎನೇನಾಯ್ತು ಅಂತಾ ಪಟ್ಟಿ ಕೊಡ್ಲಾ? ನಮ್ಮ ಮೇಲೆ ರೈಡ್ ಆದಾಗ ಸುಮ್ಮನೆ ಬಂದಿದ್ರಾ? ಈಗ ಆದರ ಚರ್ಚೆ ಮಾಡೋದು ಬೇಡ. ಅವರಿಗೆ ಯಾವ ತನಿಖೆ ಬೇಕೋ ಮಾಡಲಿ.’

ನಾನು ಸೀನಿಯರ್ ಅಲ್ಲ, ಜೂನಿಯರ್!

ಕೆಪಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳ ನೇಮಕವನ್ನು ನಮ್ಮ ಹಿರಿಯ ನಾಯಕರು ನೋಡಿಕೊಳ್ಳುತ್ತಾರೆ. ನಾನು ಸೀನಿಯರ್ ಅಲ್ಲ, ನಾನೊಬ್ಬ ಜೂನಿಯರ್ ಶಾಸಕ. ಯಾರು ಅಧಿಕಾರದಲ್ಲಿದ್ದಾರೋ ಅವರನ್ನು ಕೇಳಿ. ಈಗ ಜನರ ಕೆಲಸ ಮಾಡೋಕೆ ಬಿಟ್ಟರೆ ಸಾಕು. ನನಗೆ ಯಾವ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ. ನನಗೆ ಯಾವ ಅರ್ಜೆಂಟ್ ಇಲ್ಲ. ಪ್ರಸ್ತುತ ಇರುವವರಿಗೆ ನಾನು ಸಹಕಾರ ಕೊಡ್ತೇನೆ.

ಯಡಿಯೂರಪ್ಪ ಕೊಟ್ಟ ಮಾತಂತೆ ನಡೆಯಲಿ

‘ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ಇದೆ. ಕೊಡಗು, ಮಲೆನಾಡು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗಿದೆ. ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸಿಎಂ ಪ್ರತಿ ಮನೆಗೆ 5 ಸಾವಿರ ಕೊಡ್ತೇನೆ, 5 ಲಕ್ಷ ಕೊಡ್ತೇನೆ ಎಂದು ಘೋಷಿಸಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳಲಿ. ಇದೀಗ ದೆಹಲಿಗೆ ಹೋಗಿದ್ದಾರೆ. ಅಲ್ಲಿಂದ ಎಷ್ಟು ಗಿಫ್ಟ್ ತರ್ತಾರೆ ನೊಡೋಣ. ನಾನು ಶಾಸಕರ ನಿಧಿಯಿಂದ 50 ಲಕ್ಷವನ್ನು ಸಿಎಂ ಪರಿಹಾರ ನಿಧಿಗೆ ಕೊಡುತ್ತೇನೆ.’

Leave a Reply