ಭಾರತದ ವಿರುದ್ಧ ಏನೂ ಕಿಸಿಯಲಾಗದ ಪಾಕಿಸ್ತಾನ ಮಾಡಿದ್ದೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಏನೂ ಕಿಸಿಯಲಾಗದವನು ಮೈ ಪರಚಿಕೊಂಡನಂತೆ… ಸದ್ಯ ಈ ಮಾತು ಪಾಕಿಸ್ತಾನಕ್ಕೆ ಹೇಳಿ ಮಾಡಿಸಿದಂತಿದೆ.

ಹೌದು, ಕಾಶ್ಮೀರ ವಿಚಾರವಾಗಿ ಭಾರತವನ್ನು ಎದುರಿಸಲು ಸಾಧ್ಯವಾಗದೆ ಕಂಗೆಟ್ಟಿರುವ ಪಾಕಿಸ್ತಾನ ತನ್ನ ನೆಲದಲ್ಲಿ ಭಾರತೀಯ ಚಿತ್ರಗಳ ಸಿಡಿ ಮಾರಾಟ ಹಾಗೂ ಭಾರತೀಯ ಉತ್ಪನ್ನಗಳ ಜಾಹೀರಾತು ಪ್ರಸಾರವನ್ನು ಶುಕ್ರವಾರ ನಿಷೇಧಿಸಿದೆ.

ಈ ಕುರಿತು ಪಾಕಿಸ್ತಾನದ ಪತ್ರಿಕೆ ಡಾನ್ ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಪ್ರಧಾನಿ ಮಾಹಿತಿ ಸಲಹೆಗಾರ ಆಶಿಕ್ ಅವಾನ್, ‘ನಾವು ಭಾರತೀಯ ಉತ್ಪನ್ನಗಳ ಜಾಹೀರಾತು ಪ್ರಸಾರವನ್ನು ನಿಷೇಧಿಸಿದ್ದು, ಸಿಡಿ ಮಳಿಗೆಗಳ ಮೇಲೆ ದಾಳಿ ಮಾಡಿ ಭಾರತೀಯ ಸಿನಿಮಾಗಳ ಸಿಡಿ ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಈಗಾಗಲೇ ಇಸ್ಲಾಮಾಬಾದ್ ನಲ್ಲಿ ಸಿಡಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇತರ ಪ್ರದೇಶಗಳಲ್ಲೂ ಕಾರ್ಯಾಚರಣೆ ವಿಸ್ತರಿಸುತ್ತೇವೆ ಎಂದು ಹೇಳಿದ್ದಾರೆ.

ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸಿ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನ ಈ ನಿರ್ಧಾರದಿಂದ ಭಾರತಕ್ಕೆ ಹಾನಿ ಮಾಡುವುದಕ್ಕಿಂತ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಿದೆ. ಭಾರತೀಯ ಜಾಹೀರಾತು ನಿಷೇಧದಿಂದ ಪಾಕ್ ಮಾಧ್ಯಮಗಳಿಗೆ ಸಿಗುತ್ತಿದ್ದ ಹಣಕ್ಕೆ ಕಲ್ಲು ಹಾಕಿದೆ. ಒಟ್ಟಿನಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಮಾಡಿದಂತೆ ಪಾಕಿಸ್ತಾನ ಭಾರತದ ಮೇಲೆ ಸೇಡು ತೀರಿಸಿಕೊಳ್ಳುವ ಭರದಲ್ಲಿ ತನಗೆ ಹಳ್ಳ ತೋಡಿಕೊಳ್ಳುತ್ತಿದೆ.

Leave a Reply