370ನೇ ವಿಧಿ ರದ್ದತಿ: ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370 ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್, ಅರ್ಜಿಯಲ್ಲಿರೋ ಲೋಪ ಸರಿ ಪಡಿಸಿ ಎಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದೆ.

ಶುಕ್ರವಾರ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್ ಈ ಅರ್ಜಿ ಲೋಪದೋಷದಿಂದ ಕೂಡಿದೆ. ಇದನ್ನು ಸರಿಪಡಿಸಿಕೊಳ್ಳಿ. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅರ್ಜಿದಾರ ಎಂ.ಎಲ್.ಶರ್ಮಾ ಅವರನ್ನು ಉದ್ದೇಶಿಸಿ ನ್ಯಾಯಪೀಠ ನಿರ್ದೇಶನ ನೀಡಿದೆ. ವಿಚಾರಣೆ ಮುಂದೂಡಿರುವ ನ್ಯಾಯಾಲಯ ನ್ಯಾಯಾಲಯ ಮುಂದಿನ ವಿಚಾರಣೆಯ ಕುರಿತು ಯಾವುದೇ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ.

‘ಇದು ಯಾವ ರೀತಿಯ ಅರ್ಜಿ? ಇದನ್ನು ವಜಾಗೊಳಿಸಬಹುದಿತ್ತು ಆದರೆ ಇದರೊಡನೆ ಇನ್ನೂ ಐದು ಮನವಿಗಳಿವೆ. ಹೀಗಾಗಿ ಇದನ್ನು ಪರಿಗಣಿಸುತ್ತಿದ್ದೇವೆ. ಇದರಲ್ಲಿರುವ ಲೋಪಗಳನ್ನು ಸರಿಪಡಿಸಿ’ ಎಂದು ಸಿಜೆಐ ರಂಜನ್ ಗೊಗೊಯ್ ಅವರ ಪೀಠ ತಿಳಿಸಿದೆ.

ಕಣಿವೆ ರಾಜ್ಯದಲ್ಲಿ ದೂರವಾಣಿ, ಅಂತರ್ಜಾಲ ಸೇವೆ ಸೇರಿದಂತೆ ಮಾಧ್ಯಮಗಳ ಮೇಲಿನ ನಿರ್ಬಂಧಗಳನ್ನು ಹೇರಲಾಗಿದೆ. ಮಾಧ್ಯಮಗಳನ್ನು ನಿರ್ಬಂಧಿಸಿರುವ ಕುರಿತು ಅರ್ಜಿ ಹಾಕಲಾಗಿದ್ದು, ‘ಸಂಪರ್ಕಿತ ಇತರ ವಿಷಯಗಳ ಜೊತೆಗೆ ಮಾಧ್ಯಮ ನಿರ್ಬಂಧಗಳ ಕುರಿತು ನಾವು ಗಮನಿಸುತ್ತೇವೆ’ ಎಂದು ಪೀಠ ತಿಳಿಸಿದೆ.

Leave a Reply