ಭಾರತದ ರಾಜತಾಂತ್ರಿಕ ಶಕ್ತಿ ಮುಂದೆ ಮಂಡಿಯೂರಿದ ಚೀನಾ- ಪಾಕಿಸ್ತಾನ!

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರದ ವಿಚಾರವಾಗಿ ಪಾಕಿಸ್ತಾನ ಹಾಗೂ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ನಡೆಸಿದ ಮಸಲತ್ತನ್ನು ಭಾರತೀಯ ರಾಜತಾಂತ್ರಿಕತೆ ಮಣ್ಣು ಮಾಡಿದೆ.

ಪಾಕಿಸ್ತಾನದ ಕುಮ್ಮಕ್ಕಿನ ಮೇರೆಗೆ ಚೀನಾ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಗೌಪ್ಯ ಸಭೆ ನಡೆಸಲು ಪ್ರಸ್ತಾವ ಮುಂದಿಟ್ಟಿತು. ಆ ಮೂಲಕ ಕಾಶ್ಮೀರದ ವಿಚಾರದಲ್ಲಿ ಭಾರತದ ಮೇಲೆ  ಅಂತಾರಾಷ್ಟ್ರೀಯ ಒತ್ತಡ ಹೇರುವ ಪ್ರಯತ್ನ ಮಾಡಿತು. ಆದರೆ ಭಾರತದ ವಿದೇಶಾಂಗ ನೀತಿ ಹಾಗೂ ರಾಜತಾಂತ್ರಿಕತೆ ಈ ಪ್ರಯತ್ನವನ್ನು ಮಣಿಸಿದೆ.

ಸಭೆಯಲ್ಲಿ ಪಾಕಿಸ್ತಾನದ ಪರವಾಗಿ ಚೀನಾ, ಭಾರತದ ನಿರ್ಧಾರಕ್ಕೆ ಆಕ್ಷೇಪ ಎತ್ತಿತು. ಕಾಶ್ಮೀರದ ಪರಿಸ್ಥಿತಿ ಗಂಭೀರವಾಗಿದ್ದು, ಮಾನವ ಹಕ್ಕು ಉಲ್ಲಂಘನೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಚೀನಾ ರಾಯಭಾರಿ ಝಾಂಗ್ ಜುನ್ ಆತಂಕ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಭಾರತದ ಪರವಾಗಿ ಮೊದಲು ಧ್ವನಿ ಎತ್ತಿದ ರಷ್ಯಾ, ‘ಇದು ಭಾರತದ ಆಂತರಿಕ ವಿಚಾರ. ಅದರಲ್ಲಿ ನಾವು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಎರಡೂ ದೇಶಗಳ ಜತೆ ನಮ್ಮ ಸಂಬಂಧ ಉತ್ತಮವಾಗಿದೆ. ಮುಂದಿನಗಳಲ್ಲೂ ಇದು ಮುಂದುವರಿಯಲಿದೆ. ಈ ವಿವಾದವನ್ನು ದ್ವಿಪಕ್ಷೀಯ ಮಾತುಕತೆಯಿಂದಲೇ ಬಗೆಹರಿಸಿಕೊಳ್ಳುವುದು ಉತ್ತಮ’ ಎಂದು ತಿಳಿಸಿತು. ಅದರೊಂದಿಗೆ ಕಳೆದ ಏಳು ದಶಕಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಆಪ್ತಮಿತ್ರನಾಗಿರುವ ರಷ್ಯಾ ಮತ್ತೊಮ್ಮೆ ತಾನು ಭಾರತದ ಪರ ಎಂಬುದನ್ನು ಸಾಬೀತುಪಡಿಸಿದೆ.

ರಷ್ಯಾದ ಈ ನಿರ್ಧಾರಕ್ಕೆ ಅಮೆರಿಕ ಸೇರಿದಂತೆ ಒಟ್ಟು ನಾಲ್ಕು ರಾಷ್ಟ್ರಗಳು ಬೆಂಬಲ ಸೂಚಿಸಿದವು. ರಷ್ಯಾ ಹಾಗೂ ಭಾರತದ್ದು ಹಳೇ ಸ್ನೇಹ ಸರಿ. ಆದರೆ ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತಿದೆ ಅಂದರೆ ಅದು ಭಾರತದ ರಾಜತಾಂತ್ರಿಕತೆಯ ಶಕ್ತಿ ಎಂಬುದು ಸಾಬೀತಾಗುತ್ತದೆ. ದಶಕಗಳ ಹಿಂದೆ ಪಾಕಿಸ್ತಾನದ ಬೆನ್ನಿಗೆ ನಿಂತಿದ್ದ ಅಮೆರಿಕ ಈಗ ಮಗ್ಗಲು ಬದಲಿಸಿ ಭಾರತಕ್ಕೆ ಬೆಂಬಲ ನೀಡುತ್ತಿದೆ. ವ್ಯಾಪಾರ ಸುಂಕ, ಇರಾನ್ ನಿಂದ ತೈಲ ಖರೀದಿ ವಿಚಾರವಾಗಿ ಭಾರತ ಹಾಗೂ ಅಮೆರಿಕ ಭಿನ್ನರಾಗ ಹಾಡಿದೆಯಾದರೂ ಪಾಕಿಸ್ತಾನ ಹಾಗೂ ಭಯೋತ್ಪಾದನೆ ವಿಚಾರದಲ್ಲಿ ಭಾರತದ ರಾಜತಾಂತ್ರಿಕತೆ ಅಮೆರಿಕವನ್ನು ತನ್ನ ಕಡೆ ಹಿಡಿದಿಟ್ಟುಕೊಂಡಿದೆ.

ಭಾರತದ ರಾಜತಾಂತ್ರಿಕ ಶಕ್ತಿಯ ಪರಿಣಾಮವಾಗಿ ಈ ಸಭೆಯಲ್ಲಿ ಪಾಕಿಸ್ತಾನದ ಪರ ಕೇವಲ ಚೀನಾ ನಿಂತರೆ ಉಳಿದ ದೇಶಗಳು ಭಾರತದ ಪರವಾಗಿ ನಿಂತವು. ಹೀಗಾಗಿ ಸಭೆಯಲ್ಲಿ ಭಾರತದ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ ಮಾಡಲು ಸಭೆ ನಿರಾಕರಿಸಿತು. ಅದರೊಂದಿಗೆ ಪಾಕಿಸ್ತಾನ ಹಾಗೂ ಚೀನಾದ ಪ್ರಯತ್ನ ವಿಫಲವಾಯಿತು.

ಇನ್ನು ಈ ಸಭೆಯಲ್ಲಿ ಭಾರತದ ಪರ ವಾದ ಮಂಡಿಸಿದ ವಿಶ್ವಸಂಸ್ಥೆ ಭಾರತದ ಪ್ರತಿನಿಧಿ ಸೈಯದ್ ಅಕ್ರುದ್ದೀನ್, ‘ಕಾಶ್ಮೀರ ಭಾರತದ ಆಂತರಿಕ ವಿಚಾರ. ಇದಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಕಾಶ್ಮೀರ ಹಾಗೂ ಲಡಾಕ್ ಜನರ ಹಿತದೃಷ್ಟಿಯಿಂದ ಹಾಗೂ ಈ ಪ್ರದೇಶಗಳ ಅಭಿವೃದ್ಧಿಗಾಗಿ ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಜಮ್ಮು ಕಾಶ್ಮೀರದಲ್ಲಿ ಶಾಂತಿ ಕಾಪಾಡಿ ಕಾನೂನು ಸುವ್ಯವಸ್ಥೆ ಸ್ಥಾಪಿಸಲು ಭದ್ರತೆ ಹೆಚ್ಚಿಸಲಾಗಿದೆ. ಆದರೆ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಪಾಕಿಸ್ತಾನ ಸುಳ್ಳನ್ನು ವೈಭವೀಕರಿಸುತ್ತಿದೆ’ ಎಂದರು.

Leave a Reply