ನಮ್ಮ ಸ್ಯಾಂಡಲ್ವುಡ್ ಮಂದಿಗೆ ಪರದೇಶಿ ಸನ್ಮಾನ ಪರಮಾನ್ನ; ಕನ್ನಡ ನೆಲದ್ದು ಹಳಸಲನ್ನ!

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರರಂಗ ಈಗ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಬಾಕ್ಸ್ ಆಫಿಸ್ ಕಲೆಕ್ಷನ್ ಮಾತ್ರವಲ್ಲ, ರಾಷ್ಟ್ರ ಚಲನಚಿತ್ರ ಪ್ರಶಸ್ತಿಗಳಲ್ಲೂ ಅತ್ಯುತ್ತಮ ಪ್ರಶಂಸೆ ಹಾಗೂ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರೋದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ. ಆದರೆ…

ನಮ್ಮ ಸ್ಯಾಂಡಲ್ ವುಡ್ ಮಂದಿಗೆ ಐಷಾರಾಮಿ ಕಾರ್ಪೋರೇಟ್ ಶೈಲಿಯ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮಗಳ ಮೇಲಿರುವ ಒಲವು, ಕನ್ನಡ ಸಂಘ, ಚಲನಚಿತ್ರ ಅಕಾಡೆಮಿ, ಇತರೆ ಸಂಘ ಸಂಸ್ಥೆಗಳು ನೀಡುವ ಗೌರವದ ಮೇಲೆ ಇಲ್ಲ. ಇದು ಈಗ ಕೇಳಿ ಬರುತ್ತಿರೋ ದೂರಲ್ಲ. ಕಳೆದ ಅನೇಕ ವರ್ಷಗಳಿಂದ ಪದೇ ಪದೇ ಇಂತಹ ದೂರು ನಮ್ಮ ನಟ ನಟಿಯರ ಮೇಲೆ ಬರುತ್ತಲೇ ಇದೆ.

ಈ ವಿಚಾರ ಈಗೇಕೆ ಚರ್ಚೆ ಅಂತೀರಾ, ಅದಕ್ಕೆ ಕಾರಣ ಇದೆ. ನಿನ್ನೆ ನಡೆದ ಸೈಮಾ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಪ್ರಶಂಸೆಗೆ ಪಾತ್ರವಾದ ಕೆಜಿಎಫ್ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ನಟ ಯಶ್ ಸೇರಿದಂತೆ ಚಿತ್ರ ತಂಡದ ಅನೇಕ ಮಂದಿ ಕತಾರ್ ಗೆ ತೆರಳಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದೂ ಕೂಡ ನಾವೆಲ್ಲರೂ ಹೆಮ್ಮೆ ಪಡುವ ವಿಚಾರವೆ ನಿಜ. ಆದರೆ ಕಳೆದ ವರ್ಷ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೆಜಿಎಫ್ ಚಿತ್ರದ ಪ್ರದರ್ಶನ ಹಾಗೂ ಚಿತ್ರತಂಡದೊಂದಿಗಿನ ಸಂವಾದ ಕಾರ್ಯಕ್ರಮ ಇತ್ತು. ಅದರಲ್ಲೂ ತಾಂತ್ರಿಕವಾಗಿ ತುಂಬಾ ದೊಡ್ಡ ಮಟ್ಟದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟ, ಬೇರೆ ಭಾಷೆಗಳಿಗೂ ಸೆಡ್ಡು ಹೊಡೆದಿದ್ದ ಈ ಚಿತ್ರದ ಸಂವಾದ ಅಂದು ಮಹತ್ವದ್ದಾಗಿತ್ತು. ಹೀಗಾಗಿ ವಿದೇಶಿ ಪ್ರತಿನಿಧಿಗಳು, ಕನ್ನಡದ ಹಲವು ಹೊಸ ತಲೆಮಾರಿನ ನಿರ್ದೇಶಕರು, ತಂತ್ರಜ್ಞರು ಚಿತ್ರೋತ್ಸವದಲ್ಲಿ ಕೆಜಿಎಫ್ ಚಿತ್ರವನ್ನು ನೋಡಿಕೊಂಡು ಸಂವಾದಕ್ಕೆ ಬಂದಿದ್ದರು. ಬಂದವರು ಹಲವು ಗಂಟೆ ಕಾದರೂ ಚಿತ್ರತಂಡದಿಂದ ಒಬ್ಬೇ ಒಬ್ಬರು ಬಂದಿರಲಿಲ್ಲ. ಕಾರಣ ಆಸಕ್ತಿಯ ಕೊರತೆ. ಇದು ಬರೀ ಕತಾರ್ ಕಥೆ ಮಾತ್ರವಲ್ಲ, ಶಾರ್ಜಾ, ಅಬುಧಾಬಿ ಸೇರಿದಂತೆ ಹೈದರಾಬಾದ್, ಬಾಂಬೆಯಲ್ಲಿ ನಡೆಯುವ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇವರಿಗೆ ನಮ್ಮ ಕನ್ನಡ ಪ್ರಶಸ್ತಿ ಬೇಕು ಆದರೆ ಅದನ್ನು ತಗೋಳೋಕೆ ಕನ್ನಡ ನೆಲ ಬೇಡ. ಇದು ನಮ್ಮ ದುರಂತ.

ನಮ್ಮ ಚಿತ್ರರಂಗದ ಮಂದಿಗೆ ಇಂತಹ ಗೌರವಕ್ಕಿಂತ ರಂಗುರಂಗಿನ ಅವಾರ್ಡ್ಸ್ ಕಾರ್ಯಕ್ರಮಗಳು ಹೆಚ್ಚು ರುಚಿಕರ ಹಾಗೂ ಆಸಕ್ತಿದಾಯಕವಾಗಿರೋದು ಸ್ಪಷ್ಟ. ಈ ವಿಚಾರವಾಗಿ ಕೆಜಿಎಫ್ ಚಿತ್ರ ತಂಡದ ಪ್ರಸ್ತಾಪ ಕೇವಲ ಒಂದು ತಾಜಾ ಉದಾಹರಣೆ ಮಾತ್ರ.  ಇದು ಕೇವಲ ಕೆಜಿಎಫ್ ಚಿತ್ರ ತಂಡದ ಕಥೆ ಮಾತ್ರವಲ್ಲ. ಚಿತ್ರರಂಗದಲ್ಲಿ ಒಂದು ಹಂತದಲ್ಲಿ ನೆಲೆ ಕಂಡುಕೊಂಡಿರುವ ಬಹುತೇಕರ ಕಥೆಯೂ ಇದೆ ಆಗಿದೆ.

ಇನ್ನು ಕೆಲವರಂತೂ ಈ ಅವಾರ್ಡ್ಸ್ ಕಾರ್ಯಕ್ರಮಗಳ ಪರ್ಮನೆಂಟ್ ಗಿರಾಕಿಗಳಂತೆ ಕಾಣುತ್ತಾರೆ. ತಮಗೆ ಪ್ರಶಸ್ತಿ ಸಿಗುತ್ತೋ ಬಿಡುತ್ತೋ ದೂರದ ದೇಶದಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮ, ವಿಮಾನ ಪ್ರಯಾಣ, ಐಷಾರಾಮಿ ಹೋಟೇಲ್, ಕಾರ್ಪೋರೇಟ್ ಶೈಲಿ ಕಾರ್ಯಕ್ರಮ, ಇಲ್ಲಿ ಗ್ಲಾಮರಸ್ ಆಗಿ ಡ್ರಸ್ ಮಾಡಿಕೊಂಡು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಮಿಂಚಿದರೆ ಸಾಕು. ಅವರಿಗೆ ಅದರಲ್ಲಿ ಸಿಗುವ ಆನಂದ, ನಮ್ಮ ಸಂಘ ಸಂಸ್ಥೆಗಳು ಕರೆದು ಕೊಡುವ ಲೋ ಬಜೆಟ್ ಕಾರ್ಯಕ್ರಮದಲ್ಲಿ ಸಿಗುವುದಿಲ್ಲ.

ಸುಮ್ಮನೆ ಗಮನಿಸಿ ನೋಡಿ ಇಂತಹ ಕಲರ್ ಫುಲ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅದೆಷ್ಟು ನಟ ನಟಿಯರು ನಮ್ಮೂರಿನಲ್ಲಿ ನಡೆಯುವ ಚಿತ್ರೋತ್ಸವ, ಸಿನಿಮಾ ಸೆಮಿನಾರ್, ಅಕಾಡಮಿ, ವಾರ್ತಾ ಇಲಾಖೆಯ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ? ಕಾರ್ಯಕ್ರಮ ಅಷ್ಟೇ ಅಲ್ಲ ಯಾರಾದರೂ ಹಿರಿಯ ಕಲಾವಿದನೋ, ಕಲಾವಿದೆಯೋ, ತಂತ್ರಜ್ಞನೋ ತೀರಿಕೊಂಡರೂ ಅವರನ್ನು ನೋಡಿ ಗೌರವಿಸಲೂ ಬರಲ್ಲ. ಇದಕ್ಕೆ ಉದಾಹರಣೆ ಕೊಡೋದಾದ್ರೆ ಬಂಗಾರದ ಮನುಷ್ಯನ ಸೂತ್ರದಾರ ನಿರ್ದೇಶಕ ಸಿದ್ದಲಿಂಗಯ್ಯ ನಿಧನರಾದಾಗ ಅವರನ್ನು ನೋಡಲು ಯಾವ ಸ್ಟಾರ್‌ಗಳು ಬಂದಿದರು?

ಚಿತ್ರರಂಗದವರು ಫಿಲ್ಮ್ ಅವಾರ್ಡ್ ಕಾರ್ಯಕ್ರಮಗಳಿಗೆ ಹೋಗುವುದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಅಂತಹ ಕಾರ್ಯಕ್ರಮಗಳ ಮೇಲಿರುವ ಒಲವು ನಮ್ಮ ಜನರು, ಸಂಘ ಸಂಸ್ಥೆಗಳು ಪ್ರೀತಿಯಿಂದ ನಡೆಸುವ ಕಾರ್ಯಕ್ರಮಗಳ ಮೇಲೂ ಇರಲಿ ಎಂಬುದಷ್ಟೇ ಎಲ್ಲರ ಆಶಯ.

Leave a Reply