ಕೇಂದ್ರದ ಬಳಿ ಹಣ ಕೇಳಲು ಭಯವಾದ್ರೆ, ಸರ್ವಪಕ್ಷ ನಿಯೋಗ ಕರೆದೊಯ್ಯಲಿ ನಾವೇ ಕೇಳ್ತೀವಿ; ಸಿಎಂಗೆ ಸಿದ್ರಾಮಯ್ಯ ಟಾಂಗ್

ಡಿಜಿಟಲ್ ಕನ್ನಡ ಟೀಮ್:

ಪ್ರವಾಹ ಪೀಡಿತರ ನೆರವಿಗಾಗಿ ಕೇಂದ್ರ ಸರ್ಕಾರದ ಬಲಿ ಪರಿಹಾರ ಕೇಳಲು ಮುಖ್ಯಮಂತ್ರಿಗಳಿಗೆ ಭಯವಾದರೆ, ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲಿ ನಾವೇ ಪ್ರಧಾನಿ ಬಳಿ ಹಣ ಕೇಳ್ತೀವಿ… ಇದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೊಟ್ಟಿರುವ ಟಾಂಗ್.

ಕಾವೇರಿ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಿದ್ದರಾಮಯ್ಯ, ಪ್ರವಾಹ ಪರಿಸ್ಥಿತಿಯಲ್ಲಿ ಕೇಂದ್ರದ ಮಲತಾಯಿ ಧೋರಣೆ, ತಮ್ಮ ಸರ್ಕಾರದ ಯೋಜನೆಗಳನ್ನು ರದ್ದು ಮಾಡುವ ನಿರ್ಧಾರ, ಸರ್ಕಾರದಲ್ಲಿ ಸಂಪುಟ ರಚನೆಯಾಗದ ವಿಚಾರವಾಗಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಅವರು ಹೇಳಿದ್ದಿಷ್ಟು…

‘ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ಮಂತ್ರಿಗಳಿಲ್ಲದೆ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ಇದ್ಯಾ? ಅಥವಾ ಇದನ್ನೆ ಪ್ರಜಾಪ್ರಭುತ್ವ ಅಂತಾ ಕರೆಯಬೇಕಾ? ಬೇರೆ ವಿಚಾರಗಳಲ್ಲಿ ಯಡಿಯೂರಪ್ಪ ಬಹಳ ಮಾತಾಡ್ತಾರೆ, ಆದರೆ ಪ್ರವಾಹ ವಿಚಾರದಲ್ಲಿ ಕೇಂದ್ರದ ಮೇಲೆ ಯಾಕೆ ಒತ್ತಡ ಹೇರುತ್ತಿಲ್ಲ? ಕೇಂದ್ರದಿಂದ ಇವತ್ತಿನವರೆಗೂ ಒಂದು ರೂಪಾಯಿ ಬಂದಿಲ್ಲ.

ಕಳೆದ ನೂರು ವರ್ಷಗಳಲ್ಲೇ ಕಂಡು ಕೇಳರಿಯದಂತಹ ಪ್ರವಾಹಕ್ಕೆ ರಾಜ್ಯ ತತ್ತರಿಸಿದೆ ಅಂತಾ ಯಡಿಯೂರಪ್ಪನವರೇ ಹೇಳ್ತಾರೆ. ಈ ಸಂದರ್ಭದಲ್ಲಿ ಪ್ರಧಾನಿಗಳೇ ಸ್ವತಃ ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಆದರೆ ನೀಡಿಲ್ಲ. ಇಬ್ಬರು ಸಚಿವರನ್ನ ಕಳುಹಿಸಿದ್ದೇವೆ ಅಂತಾರೆ. ಅವರು ಬಂದರು ಹೋದರು. ಅವರೇನಾದ್ರೂ ಪರಿಹಾರ ಘೋಷಿಸಿದ್ದಾರಾ? ಈವರೆಗೆ ಎಷ್ಟು ನಷ್ಟ ಆಗಿದೆ ಎಂಬ ವರದಿಯನ್ನೇ ರಾಜ್ಯ ಸರ್ಕಾರ ತಯಾರಿಸಿಲ್ಲ.

ಯಡಿಯೂರಪ್ಪನವರ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಇಂತಹ ಸರ್ಕಾರವನ್ನ ನಾನು ಎಂದಿಗೂ ನೋಡಿಲ್ಲ. ಪ್ರಧಾನ ಮಂತ್ರಿಗಳು ರಾಜ್ಯದ ಪ್ರವಾಹದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ. 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಆಗಿದೆ. 1 ಲಕ್ಷ ಕೋಟಿ ನಷ್ಟ ಆಗಿದೆ. ಕೂಡಲೇ ಕೇಂದ್ರ ಸರ್ಕಾರ 5 ಸಾವಿರ ಕೋಟಿ ಬಿಡುಗಡೆ ಮಾಡ್ಬೇಕು. ಸಿಎಂ ಯಡಿಯೂರಪ್ಪ ಅವರಿಗೆ  ಪ್ರಧಾನ ಮಂತ್ರಿಗಳ ಬಳಿ ಹಣ ಕೇಳಲು ಹೆದರಿಕೆಯಾದರೆ, ಸರ್ವ ಪಕ್ಷ ನಿಯೋಗವನ್ನಾದರೂ ಕರೆದುಕೊಂಡು ಹೋಗಲಿ. ನಾವೇ ಪ್ರಧಾನಿ ಬಳಿ ಮಾತನಾಡಿ ಹಣ ಕೇಳ್ತೇವೆ.

ರಾಜ್ಯದಲ್ಲಿ ಪ್ರಜಾಪ್ರಭುತ್ವ ವಿರೋಧಿಯಾಗಿ ಸರ್ಕಾರ ರಚನೆ ಆಗಿದೆ. ಈ ಸರ್ಕಾರಕ್ಕೆ ತತ್ವ ಸಿದ್ಧಾಂತಗಳೇ ಇಲ್ಲ. ರಾಜ್ಯದಲ್ಲಿ ಇಷ್ಟೇಲ್ಲಾ ಆಗಿದೆ ಇದರ ಬಗ್ಗೆ ಚರ್ಚೆ ಮಾಡೋಕೆ ಅಧಿವೇಶನ ಕರೆಯಿರಿ. ಬರ, ನೆರೆ ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳೋಣ.

ನಮ್ಮ ಯೋಜನೆ ರದ್ದು ಮಾಡಿದ್ರೆ ಉಗ್ರ ಹೋರಾಟ

ನಮ್ಮ ಸರ್ಕಾರ ರಾಜ್ಯದಲ್ಲಿ ಬಿಪಿಎಲ್ ಕಾರ್ಡು ಹೊಂದಿರುವ ನಾಲ್ಕು ಕೋಟಿ ಜನರಿಗೆ 7 ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡಿದೆ. ಬಿಜೆಪಿ ಸರ್ಕಾರ ರಚನೆ ಆದ ಮೇಲೆ ಅನ್ನಭಾಗ್ಯ ಅಕ್ಕಿ ಕಡಿಮೆ ಮಾಡಲು ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಕಡಿತ ಮಾಡಿದ ಅಕ್ಕಿ ಹಣವನ್ನ ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ರೈತರಿಗೆ 4 ಸಾವಿರ ಕೊಡಲು ನಮ್ಮದೇನು ಅಡ್ಡಿ ಇಲ್ಲ. ಆದ್ರೆ, ಬಡವರ ಅಕ್ಕಿ ಕಡಿತ ಮಾಡಿ ಹಣ ನೀಡ್ತೇವೆ ಅನ್ನೊದು ಬಡವರ ವಿರೋಧಿ ಧೋರಣೆ.

7 ಕೆಜಿ ಅಕ್ಕಿಯಲ್ಲಿ ಕಡಿತ ಮಾಡಿದ್ರೆ ಬಡವರ ಹೊಟ್ಟೆ ಮೇಲೆ ಹೊಡೆದ ಹಾಗೆ ಆಗುತ್ತೆ. ಕಾಂಗ್ರೆಸ್ ಇದನ್ನ ತೀವ್ರವಾಗಿ ವಿರೋಧಿಸುತ್ತೆ. ಅನ್ನಭಾಗ್ಯ ಅಕ್ಕಿ ಕಡಿತ ಮಾಡುವ ಯೋಚನೆ ಸರ್ಕಾರದ ಮುಂದೆ ಇದ್ದರೆ ಅದನ್ನ ಕೂಡಲೇ ಕೈ ಬಿಡಬೇಕು. ಅನ್ನಭಾಗ್ಯ ಯೋಜನೆಯಿಂದ ಗುಳೆ ಪದ್ಧತಿ ಕಡಿಮೆ ಆಗಿದೆ. ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಮೆಚ್ಚುಗೆ ಪಡೆದಿರುವ ಕಾರ್ಯಕ್ರಮ.

ಇನ್ನು ಇಂದಿರಾ ಕ್ಯಾಂಟೀನ್ ‌ಗೆ ಸರ್ಕಾರ ಹಣ ನೀಡುತ್ತಿಲ್ಲ. ಬಿಬಿಎಂಪಿಯವರೇ ನಿರ್ವಹಿಸಬೇಕು ಎಂದು ಹೇಳುತ್ತಿದ್ದಾರೆ. ನಿರಂತರವಾಗಿ ಇಂದಿರಾ ಕ್ಯಾಂಟೀನ್ ನಡೆಯಬೇಕಾದ್ರೆ, ಅಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗಬೇಕಾದ್ರೆ ಇಂದಿರಾ ಕ್ಯಾಂಟೀನ್ ವೆಚ್ಚವನ್ನ ರಾಜ್ಯ ಸರ್ಕಾರ ಭರಿಸಬೇಕು. ಬಡವರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಸಿಗಬೇಕು ಅಂತಾ ಈ ಯೋಜನೆ ಮಾಡಲಾಗಿದೆ.

ನಮ್ಮ ಸರ್ಕಾರದ ಯೋಜನೆಗಳಿಗೆ ಕತ್ತರಿ ಹಾಕುವ ಪ್ರಯತ್ನ ಮಾಡಿದ್ರೆ ನಾವು ಸುಮ್ಮನೆ ಕೂರಲ್ಲ. ಈ ವಿಚಾರವಾಗಿ ನಾವು ಬೀದಿಗಿಳಿದು ಪ್ರತಿಭಟನೆ ಮಾಡ್ತೇವೆ. ಸದನದ ಒಳಗೆ ಹೊರಗೆ ಹೋರಾಟ ಮಾಡ್ತೀವಿ.

ಈ ಸರ್ಕಾರ ಯಾಕಿರಬೇಕು?

ಸಿಎಂ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ 22 ದಿನ ಕಳೆದಿವೆ. ಆದರೂ ಇನ್ನು ರಾಜ್ಯದಲ್ಲಿ ಸರ್ಕಾರ ಇಲ್ಲ. ಒಂದೆಡೆ ಪ್ರವಾಹ, ಇನ್ನೊಂದೆಡೆ ಬರ ಎರಡೂ ಇದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ವಾಡಿಕೆ ಮಳೆಗಿಂತ 20% ಕಡಿಮೆ ಆಗಿದೆ. ಇವತ್ತಿನವರೆಗೆ ಬರ ಪೀಡಿತ ಪ್ರದೇಶಗಳು ಅಂತಾ ಘೋಷಣೆ ಆಗಿಲ್ಲ. ಬರ ಪೀಡಿತ ಅಂತಾ ಘೋಷಣೆ ಮಾಡದೆ ಇದ್ದರೆ ಬರ ಪರಿಹಾರ ಪಡೆಯಲು ಆಗಲ್ಲ. ಭಿತ್ತನೆ ಮಾಡಿರುವ ಬೆಳೆ ಹಾಳಾಗಿದೆ. ಕೆಲವೆಡೆ ಭಿತ್ತನೆ ಮಾಡೋಕೆ ಆಗ್ತಿಲ್ಲ. ಮಳೆ ಇಲ್ಲದೆ ಜಾನುವಾರುಗಳುಗೆ ಮೇವಿಲ್ಲ. ಇಷ್ಟೆಲ್ಲಾ ಆದರೂ ಏನೂ ಮಾಡದ ಸರ್ಕಾರ ಯಾಕೆ ಇರಬೇಕು?

Leave a Reply