ಮಾರ್ವಾಡಿಗಳ ಮನಗೆಲ್ಲಲು ಹೋಗಿ ಕನ್ನಡಿಗರ ಕಿಚ್ಚು ಮೈಮೇಲೆ ಎಳೆದುಕೊಂಡ ತೇಜಸ್ವಿ ಸೂರ್ಯ!

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಇಲ್ಲದೆ ಹಿಂದಿ ಭಾಷೆಯಲ್ಲಿ ನಾಮಫಲಕ ಹಾಕಿದ್ದನ್ನು ಪ್ರಶ್ನಿಸಿದ ಪ್ರಕರಣವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾದ ಸಂಸದ ತೇಜಸ್ವಿ ಸೂರ್ಯ ಕನ್ನಡಿಗರ ಕಿಚ್ಚನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕನ್ನಡ ಪರ ಸಂಘಟನೆಯ ಸದಸ್ಯರನ್ನು ಬಂಧಿಸಿರುವುದು ಹಾಗೂ ಕನ್ನಡ ಹೋರಾಟಗಾರರನ್ನು ರೌಡಿಗಳು ಎಂಬ ತೇಜಸ್ವಿ ಸೂರ್ಯ ಅವರ ಹೇಳಿಕೆ ಖಂಡಿಸಿ ಶನಿವಾರ ಬೆಂಗಳೂರು ಬಂದ್ ಆಚರಿಸಲು ಕನ್ನಡ ಸಂಘಟನೆಗಳು ನಿರ್ಧರಿಸಿವೆ.

ಭಗವಾನ್ ಮಹಾವೀರ್ ಜೈನ್ ರಸ್ತೆಯಲ್ಲಿರುವ ಜೈನ ಮಂದಿರದ ಸಮೀಪವಿರುವ ಗಣೇಶ್ ಬಾಗ್ ಪ್ರಾರ್ಥನಾ ಸ್ಥಳದಲ್ಲಿ ಜೈನ ಸಮುದಾಯದವರು ತಮ್ಮ ಚಾತುರ್ಮಾಸ್ಯ ಕಾರ್ಯಕ್ರಮ ಆಚರಿಸುತ್ತಿದ್ದಾರೆ. ಈ ಸಂಬಂಧ ಕಟ್ಟಡದ ಹೊರಗೆ ಹಿಂದಿಯಲ್ಲಿ ನಾಮಫಲಕವನ್ನು ಹಾಕಿದ್ದಾರೆ. ಕೆಲ ಕನ್ನಡಪರ ಕಾರ್ಯಕರ್ತರು ಸ್ಥಳಕ್ಕೆ ಹೋಗಿ ಬೋರ್ಡ್​ನಲ್ಲಿ ಕನ್ನಡ ಇಲ್ಲದಿರುವುದಕ್ಕೆ ಆಕ್ಷೇಪಿಸಿ ಗಲಾಟೆ ಮಾಡಿದ್ದಾರೆ. ಬಳಿಕ ಫಲಕವನ್ನು ಏಣಿ ಏರಿ ಕಿತ್ತುಹಾಕಿದ್ದಾರೆ. ಇವೆಲ್ಲವೂ ಮೊಬೈಲ್​ನಲ್ಲಿ ರೆಕಾರ್ಡ್ ಆಗಿ ವಿಡಿಯೋ ವೈರಲ್ ಅಗಿದೆ.

ತಮ್ಮ ಸರ್ಕಾರದ ಹಿಂದಿ ಹೇರಿಕೆಯನ್ನು ಸಮರ್ಥಿಸಿಕೊಳ್ಳಲೋ ಅಥವಾ ತಮ್ಮ ಕ್ಷೇತ್ರದಲ್ಲಿರುವ ಜೈನ ಸಮುದಾಯದವರನ್ನು ಮೆಚ್ಚಿಸಲೋ ತೇಜಸ್ವಿ ಸೂರ್ಯ ಟ್ವೀಟ್ ಮಾಡಿ, ಕನ್ನಡಪರ ಹೋರಾಟಗಾರರ ವರ್ತನೆಯನ್ನು ರೌಡಿಸಂಗೆ ಹೋಲಿಕೆ ಮಾಡಿ ಖಂಡಿಸಿದ್ದರು.

‘ಹಿಂದಿಯಲ್ಲಿ ಬ್ಯಾನರ್ ಬರೆದಿದ್ದಕ್ಕೆ ಕೆಲ ರೌಡಿಗಳು ಜೈನ ಸಮುದಾಯದವರ ಮೇಲೆ ಹಲ್ಲೆ ಮಾಡಿದ್ದು ತುಂಬಾ ನೋವಾಯಿತು. ಬೆಂಗಳೂರಿನಲ್ಲಿ ಉರ್ದು ಬಳಕೆಯಾಗುತ್ತಿದ್ದರೂ ಇವರು ಅದನ್ನು ಪ್ರಶ್ನೆ ಮಾಡಲ್ಲ’ ಎಂದು ಭಾಷೆಯ ವಿಷಯವನ್ನು ಧರ್ಮದ ವಿಷಯವನ್ನಾಗಿ ಪರಿವರ್ತಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾದರು.

ತೇಜಸ್ವಿ ಸೂರ್ಯ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಕಾರಣವಾಯಿತು. ಟೀಕೆ ಜತೆಗೆ ಟ್ರೋಲ್ ಪೇಜ್ ಗಳು ತೇಜಸ್ವಿ ಸೂರ್ಯ ಅವರನ್ನು ತರಾಟೆಗೆ ತೆಗೆದುಕೊಂಡವು.

ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತೇಪೆ ಹಚ್ಚಲು ಮುಂದಾದ ತೇಜಸ್ವಿ, ಜೈನರಿಗೆ ಕನ್ನಡ ಕಲಿಯಬೇಕೆಂದು ಸಲಹೆ ನೀಡಿ ಮತ್ತೊಂದು ಟ್ವೀಟ್ ಮಾಡಿದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ರಮೇಶ್ ಗೌಡ, ಆಂಜಿನಪ್ಪ, ಹರೀಶ್, ಮಾದೇಶ ಗೌಡ, ಮಂಜುನಾಥ್ ಮತ್ತು ಚಂದ್ರಶೇಖರ್ 6 ಹೋರಾಟಗಾರರನ್ನು ಬಂಧಿಸಲಾಯಿತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದು, ದಾಂಧಲೆ, ಬೆದರಿಕೆ ಹಾಕಿದ್ದು ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಸೆಕ್ಷನ್ 153ಎ, 427, 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದೆಲ್ಲದರ ಪರಿಣಾಮ ಕನ್ನಡ ಸಂಘಟನೆಗಳು ಪ್ರತಿಭಟನೆ ಮಾಡಿ ಶನಿವಾರ ಬಂದ್ ಗೆ ಕರೆ ನೀಡಿವೆ.

ತೇಜಸ್ವಿ ಸೂರ್ಯ ಅವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸದಿದ್ದರೆ ಬೆಂಗಳೂರ ಬಂದ್ ಮೂಲಕ ಕನ್ನಡಿಗರ ಶಕ್ತಿ ತೋರಿಸಬೇಕಾಗುತ್ತದೆ. ಮುಂದಾಗುವ ಅನಾಹುತಗಳಿಗೆ ಅವರೇ ಹೊಣೆ ಎಂದು ಕನ್ನಡ ಹೋರಾಟಗಾರ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

Leave a Reply