ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಡಿಜಿಟಲ್ ಕನ್ನಡ ಟೀಮ್:

ಅನೇಕ ಪ್ರಹಸನಗಳ ನಂತರ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂಗಳವಾರ ಸಚಿವ ಸಂಪುಟ ರಚನೆ ಆಗಿದೆ. ಸಂಪುಟ ರಚನೆ ಆಗುತ್ತಿರುವ ಬೆನ್ನಲ್ಲೇ ಸಚಿವ ಸ್ಥಾನ ಸಿಗದ ಶಾಸಕರು ತಮ್ಮ ಅತೃಪ್ತಿಯನ್ನು ಬಹಿರಂಗವಾಗಿ ಹೊರಹಾಕಿದ್ದು, ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ.

ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಮಾಧ್ಯಮಗಳ ಮುಂದೆ ತಮ್ಮ ಅಸಮಾಧಾನ ಹೊರ ಹಾಕಿದ ಬಿಜೆಪಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ, ‘ಸಚಿವ ಸಂಪುಟ ರಚನೆಯ ಪಟ್ಟಿ ನೋಡಿ ನಮಗೆ ಬೇಸರ ತಂದಿದೆ. ನಮಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಮೇಲೆ ಅಪಾರ ಗೌರವ ಇದೆ. ನಾವು ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇವೆ. ನಮ್ಮನ್ನು ಪರಿಗಣಿಸದೆ ಇರುವುದು ಬೇಸರ ತಂದಿದೆ. ಕೇವಲ ನನಗೆ ಮಾತ್ರ ಅಲ್ಲ. ನನ್ನಂತ ಅನೇಕ ಹಿರಿಯರಿಗೆ ನಿರಾಸೆ ಆಗಿದೆ. ನಾವೆಲ್ಲ ಸಭೆ ನಡೆಸುತ್ತೇವೆ. ನಮಗೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯ ಹಾಗೂ ದೆಹಲಿ ನಾಯಕರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇವೆ’ ಎಂದಿದ್ದಾರೆ. ಇನ್ನು ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ತಿಪ್ಪಾರೆಡ್ಡಿ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ.

ಇನ್ನು ಆರು ಬಾರಿ ಸೂಳ್ಯ ಶಾಸಕ ಎಸ್.ಅಂಗಾರ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಸಚಿವ ಆಗಬೇಕು ಅನ್ನೋ ಅಪೇಕ್ಷೆ ನಮ್ಮ ಕ್ಷೇತ್ರದ ಜನರದ್ದು. ನಾನು ತತ್ವ, ನಿಷ್ಠೆಗೆ ಬದ್ಧನಾಗಿದ್ದೇನೆ. ತತ್ವ, ನಿಷ್ಠೆಗೆ ಬೆಲೆ ಸಿಗದಿರುವುದು ಬೇಸರ ತಂದಿದೆ. ಅವರು ತತ್ವ, ನಿಷ್ಠೆಗೆ ಬೆಲೆ ನೀಡದಿದ್ದರು, ನಾವು ಅದನ್ನು ಬಿಡುವುದಿಲ್ಲ. ಪಕ್ಷದ ಸಂಘಟನೆಯತ್ತ ಗಮನಹರಿಸುತ್ತೇನೆ’ ಎಂದರು.

ಇನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ರೇಣುಕಾಚಾರ್ಯ, ಸಿಪಿ ಯೋಗೇಶ್ವರ್, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಗೂಳಿಹಟ್ಟಿ ಶೇಖರ್ ಸೇರಿದಂತೆ ಅನೇಕರು ಗೈರಾಗಿದ್ದು, ತಮ್ಮ ಅಸಮಾಧಾನ ಹೊರಹಾಕಿರೋದು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿರುವುದನ್ನು ತೋರುತ್ತಿದೆ. ಇದೇ ವೇಳೆ ಸಚಿವ ಸ್ಥಾನ ಸಿಗದ ಅತೃಪ್ತರು ಸಭೆ ನಡೆಸುವ ನಿರ್ಧಾರಕ್ಕೆ ಬಂದಿರುವ ವರದಿ ಬಂದಿದೆ.

Leave a Reply