ಯುವ ನಾಯತ್ವಕ್ಕೆ ಪ್ರೋತ್ಸಾಹಿಸಿ ಹೊಸ ಕ್ರಾಂತಿಗೆ ಕಾರಣರಾದವರು ರಾಜೀವ್ ಗಾಂಧಿ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ಯುವ ನಾಯಕರಿಗೆ ಪ್ರೋತ್ಸಾಹ, ಐಟಿ-ಬಿಟಿಗೆ ಹೆಚ್ಚಿನ ಪ್ರಾಶಸ್ತ್ಯ, ಉದ್ಯೋಗ ಸೃಷ್ಟಿಗೆ ಉತ್ತೇಜನದಂತಹ ಐತಿಹಾಸಿಕ ನಿರ್ಧಾರಗಳಿಂದ ದೇಶದಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ’ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಅಂಬೇಡ್ಕರ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಕೆ ಶಿವಕುಮಾರ್ ತಮ್ಮ ರಾಜಕೀಯದ ಆರಂಭಿಕ ದಿನಗಳಲ್ಲಿ ಕಂಡ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ನಾಯಕತ್ವವನ್ನು ಸ್ಮರಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಇಂದು ದೇಶ ಮತ್ತು ರಾಜ್ಯದ ಎರಡು ಮಹಾಚೇತನಗಳನ್ನು ನೆನೆಸಿಕೊಳ್ಳುವ ದಿನ. ಈ ದಿನ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಹೆಸರಿನಲ್ಲಿ ಅವರ ಜನ್ಮದಿನ ಆಚರಿಸಲು ಹಾಗೂ ಕಾಂಗ್ರೆಸ್ ಉಳಿಸಲು ಆಗಮಿಸಿರುವ ನಿಮಗೆ ಕೋಟಿ ನಮಸ್ಕಾರಗಳು.

ನಮಗೆ ಅಧಿಕಾರ ಇತ್ತು ಅದನ್ನು ಅನುಭವಿಸಿದ್ದೀವಿ. ಆದರೆ ಅಧಿಕಾರ ಅನುಭವಿಸದಿದ್ದರೂ ಕಾಂಗ್ರೆಸ್ ಉಳಿಸಬೇಕು ಎಂದು ನೀವು ಇಲ್ಲಿಗೆ ಬಂದಿದ್ದೀರಿ. ಈ ಕಾರ್ಯಕ್ರಮವನ್ನು ಕೆಪಿಸಿಸಿ ಕಚೇರಿಯಲ್ಲಿ ಮಾಡದೇ ಹೊರಗಡೆ ಮಾಡಿ ನಿಮ್ಮನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟ ಅಧ್ಯಕ್ಷರಿಗೆ ಅಭಿನಂದನೆಗಳು. ನಮ್ಮ ರಾಜಕಾರಣ ಪ್ರಾರಂಭವಾದಾಗ ರಾಜೀವ್ ಗಾಂಧಿ ಅವರ ಸಂಪರ್ಕಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ಆಗ ಯುವ ನಾಯಕರನ್ನು ಬೆಳೆಸಬೇಕು ಅಂತಾ ಹೇಳಿ ವಿದ್ಯಾರ್ಥಿ ನಾಯಕರುಗಳಿಗೆ ಪಕ್ಷದಿಂದ ಟಿಕೆಟ್ ನೀಡಲಾಗುತ್ತಿತ್ತು. ಹೀಗಾಗಿ ನನಗೆ ಆಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿ ಇಂದು ಈ ಮಟ್ಟಕ್ಕೆ ಬಂದಿದ್ದೇನೆ.

ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಮುನ್ಸಿಪಾಲಿಟಿಯಂತಹ ಸ್ಥಳೀಯ ಮಟ್ಟದಿಂದ ನಾಯಕತ್ವ ಬೆಳೆಯಬೇಕು ಎಂದು ಪ್ರತಿಪಾದನೆ ಮಾಡಿದವರು ರಾಜೀವ್ ಗಾಂಧಿ. ಸಂವಿಧಾನಕ್ಕೆ 73,74ನೇ ತಿದ್ದುಪಡಿ ಮಾಡುವ ಸಂದರ್ಭದಲ್ಲಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸುವ ರಾಜೀವ್ ಗಾಂಧಿ ಅವರ ನಿರ್ಧಾರವನ್ನು ವಿರೋಧ ಪಕ್ಷಗಳು ಸಾಕಷ್ಟು ಟೀಕಿಸಿದ್ದವು. ಆಗ ಉತ್ತರ ಕೊಟ್ಟ ರಾಜೀವ್ ಗಾಂಧಿ ಅವರು ‘ನಾವು 16ನೇ ವಯಸ್ಸಿನ ಹುಡುಗರನ್ನು ಸೇನೆಗೆ ಸೇರಿಸಿ ದೇಶ ಕಾಯಲು ಹೇಳುತ್ತೇವೆ. ಅಂತಹ ಸಂದರ್ಭದಲ್ಲಿ 18ನೇ ವಯಸ್ಸಿನ ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ನೀಡದಿದ್ದರೆ ನಾವು ಪ್ರಧಾನಿ ಆಗಿರುವುದಕ್ಕೆ ಯೋಗ್ಯತೆ ಇರುವುದಿಲ್ಲ’ ಎಂದು ಹೇಳಿದ್ದರು. ಅವರ ಇಂತಹ ನಿರ್ಧಾರಗಳು ಸ್ವಾರ್ಥಕ್ಕೆ ಹೊರತಾಗಿದ್ದವು. ಹೀಗಾಗಿ ಇಂದು ಆ ನಿರ್ಧಾರಗಳು ಪರಿಣಾಮಕಾರಿಯಾಗಿ ನಿಂತಿವೆ.

80ರ ಕಾಲದಲ್ಲಿ ನಮಗೆ ಫೋನ್ ಹಾಕಿಸಿಕೊಳ್ಳಲು 2, 3ವರ್ಷ ಕಾಯಬೇಕಿತ್ತು. ಸಂಸದರ ಹೆಸರಿನಲ್ಲಿ ಬೇಡಿಕೆ ಇಟ್ಟು ಅದನ್ನು ಪಡೆಯಬೇಕಾಗಿತ್ತು. ಆದರೆ ಇಂದು ನಮ್ಮ ಕೈಯಲ್ಲಿ ಎರಡು, ಮೂರು ಫೋನ್ ಗಳಿವೆ. ಇದಕ್ಕೆಲ್ಲ ಕಾರಣ ರಾಜೀವ್ ಗಾಂಧಿ ಅವರು. ಐಟಿ-ಬಿಟಿಗೆ ಹೆಚ್ಚಿನ ಮಹತ್ವ ನೀಡಿ, ಉದ್ಯೋಗ ಸೃಷ್ಟಿ ಮಾಡಿ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲು ಅವತ್ತು ರಾಜೀವ್ ಗಾಂಧಿ ಅವರ ಐತಿಹಾಸಿಕ ನಿರ್ಧಾರಗಳೇ ಕಾರಣ. ವಿರೋಧ ಪಕ್ಷಗಳು ಕೂಡ ರಾಜೀವ್ ಗಾಂಧಿ ಅವರನ್ನು ದ್ವೇಷಿಸುತ್ತಿರಲಿಲ್ಲ. ಅವರು ಹೃದಯ ಶ್ರೀಮಂತಿಕೆಯಿಂದ ಬೇರೆ ನಾಯಕರನ್ನು ಬೆಳೆಸುತ್ತಿದ್ದರು. ಈ ಬಗ್ಗೆ ಸ್ವತಃ ವಾಜಪೇಯಿ ಅವರೇ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ವಿದ್ಯಾರ್ಥಿ ಹಾಗೂ ಯುವ ನಾಯಕರನ್ನು ಬೆಳೆಸುವುದೇ ನಮ್ಮ ಅಡಿಪಾಯ. ಹೀಗಾಗಿ ಈ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡುತ್ತಿದ್ದೇನೆ. ಗಾಂಧಿ ಪಕ್ಷ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲು ಸಾಧ್ಯವೇ ಇಲ್ಲ. ಹೀಗಾಗಿ ಗಾಂಧಿ ಕುಟುಂಬದ ಮೇಲೆ ನಾವು ಅಪಾರ ನಂಬಿಕೆ ಇಟ್ಟುಕೊಂಡಿದ್ದೇವೆ. ಸೋನಿಯಾ ಗಾಂಧಿ ಅವರು ಸಂಕಷ್ಟದ ಸಮಯದಲ್ಲಿ ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರಿಗೆ ಪ್ರಧಾನಿಯಾಗುವ ಅವಕಾಶ ಬಂದಿದ್ದರೂ ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿ ತ್ಯಾಗ ಮಾಡಿದ್ದರು. ರಾಹುಲ್ ಗಾಂಧಿ ಅವರೂ ಕೂಡ ಮಂತ್ರಿಯಾಗಬಹುದಿತ್ತು, ಉಪ ಪ್ರಧಾನಿಯಾಗಬಹುದಿತ್ತು. ಅವರೂ ಕೂಡ ತಮಗೆ ಬೇಡ ಎಂದು ತ್ಯಾಗ ಮಾಡಿದ್ದಾರೆ. ಪ್ರಪಂಚದಲ್ಲಿ ಇಂತಹ ತ್ಯಾಗವನ್ನು ಯಾರಾದರೂ ಮಾಡಿದ್ದರೆ ಅದು ಸೋನಿಯಾ ಗಾಂಧಿ ಮಾತ್ರ. ನೆಹರೂ ಅವರಿಂದ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರು ದೇಶಕ್ಕೆ ತ್ಯಾಗ ಮಾಡುತ್ತಲೇ ಬಂದಿದ್ದಾರೆ. ಅವರ ತ್ಯಾಗವನ್ನು ನಾವು ಮರೆಯಲು ಸಾಧ್ಯವಿಲ್ಲ.

ಇನ್ನು ದೇವರಾಜ ಅರಸು ಅವರ ಕಾಲದಲ್ಲೂ ನಾವು ಕೆಲಸ ಮಾಡಿದ್ದೇವೆ. ಅವರು ಕೂಡ ಯುವಕರನ್ನು ಬೆಳೆಸುವ, ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ನಾಯಕರು. ಅರಸು ಅವರು ನಮ್ಮ ಸಮಾಜದಲ್ಲಿ ಮಾಡಿದ ಕ್ರಾಂತಿಯನ್ನು ನಾವೆಲ್ಲ ಇವತ್ತು ಸ್ಮರಿಸಬೇಕಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ನಾವು ಇಬ್ಬರು ನಾಯಕರನ್ನು ನೆನೆಯುತ್ತಿದ್ದೇವೆ.

ನಾವೆಲ್ಲರೂ ಈಗ ಹೋರಾಟ ಮಾಡಬೇಕಾಗಿದೆ. ಸೂರ್ಯ ಮೇಲೂ ಇರುತ್ತಾನೆ. ಕೆಳಗೂ ಬರುತ್ತಾನೆ. ರಾತ್ರಿಯಾಗಿ ಕತ್ತಲು ಆಗುತ್ತದೆ. ನಾವೆಲ್ಲರೂ ಹೋರಾಟ ಮಾಡಿ ಮತ್ತೆ ಬೆಳಕನ್ನು ಪಡೆಯಬೇಕಿದೆ.

Leave a Reply