ಬಿಎಸ್ ವೈ ಹಿಡಿತದಿಂದ ಜಾರುತ್ತಿದೆ ರಾಜ್ಯ ಬಿಜೆಪಿ!?

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಸಚಿವ ಸಂಪುಟ ರಚನೆ ಮಾಡಿಕೊಂಡ ಬಿಎಸ್ ಯಡಿಯೂರಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು, ಆ ಸ್ಥಾನವನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅಲಂಕರಿಸಿದ್ದಾರೆ.

ಸರ್ಕಾರದಲ್ಲಿ ಬಹುತೇಕ ತಮಗೆ ಬೇಕಾದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ತಮ್ಮ ಆಪ್ತರನ್ನು ಕೂರಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಸಂಪುಟ ವಿಚಾರದಲ್ಲಿ ಗೆದ್ದ ಯಡಿಯೂರಪ್ಪ ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಸೋತಿದ್ದಾರೆ.

ತನ್ನ ಆಪ್ತ ಅರವಿಂದ ಲಿಂಬಾವಳಿಗೆ ಅಧ್ಯಕ್ಷ ಪಟ್ಟ ಕೊಡಿಸುವ ಮೂಲಕ ತಾನು ಸರ್ಕಾರ ನಡೆಸಿದರೆ, ರಾಜ್ಯ ಬಿಜೆಪಿ ತನ್ನ ನಿಯಂತ್ರಣದಲ್ಲಿರುತ್ತದೆ ಎಂಬ ಲೆಕ್ಕಾಚಾರ ಬಿಎಸ್ ವೈ ಅವರದ್ದಾಗಿತ್ತು. ಆದರೆ ಅಂತಿಮವಾಗಿ ಹೈಕಮಾಂಡ್ ನಳಿನ್ ಕುಮಾರ್ ಕಟೀಲ್ ನೇಮಕ ಮಾಡುವ ಮೂಲಕ ಯಡಿಯೂರಪ್ಪ ಅವರ ಆಸೆಗೆ ತಮ್ಣೀರೆರೆಚಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್ ಆಯ್ಕೆ ಮೂಲಕ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಿಡಿತ ಹಂತಹಂತವಾಗಿ ಕೈತಪ್ಪುವ ಸೂಚನೆ ಸಿಕ್ಕಿದೆ. ಈ ಹಿಂದೆ ಪ್ರಬಲ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರ ಕೈಲಿ ಇಡೀ ಪಕ್ಷವನ್ನು ಕೊಟ್ಟಿದ್ದ ಬಿಜೆಪಿ ಅದರಿಂದ ಸಾಕಷ್ಟು ಪಾಠ ಕಲಿತಿದೆ. ಆದ್ದರಿಂದ ಬಿಎಸ್‌ವೈ ಹಿಡಿತದಿಂದ ಪಾರಾದರೆ ಸಾಕು ಅನ್ನೋ ಸ್ಥಿತಿಯಲ್ಲಿ‌ ಬಿಜೆಪಿ ಹೈಕಮಾಂಡ್ ಇದೆ.

ಏಕವ್ಯಕ್ತಿ ಕೇಂದ್ರಿತ ಆಡಳಿತಕ್ಕೆ ಒಪ್ಪದ ಆರ್ ಎಸ್ಎಸ್ ರಾಜ್ಯ ಬಿಜೆಪಿಯಲ್ಲಿ ಬಿಎಸ್ ವೈ ಅವರ ನಿಯಂತ್ರಣವನ್ನು ಸಡಿಲ ಮಾಡುವ ಉದ್ದೇಶದೊಂದಿಗೆ ಈ ತೀರ್ಮಾನ ಕೈಗೊಂಡಿದೆ. ಹೀಗಾಗಿ ದೆಹಲಿಯಲ್ಲಿ ಆರ್ ಎಸ್ಎಸ್ ನಾಯಕ ಸಂತೋಷ್ ಅವರು ತಮ್ಮ ಶಿಷ್ಯ ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕೂರಿಸಿ ಪಕ್ಷವನ್ನು ತಮ್ಮ ಮುಷ್ಠಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಟಿಕೆಟ್ ಹಂಚಿಕೆ ಸೇರಿದಂತೆ ಪಕ್ಷದ ಸಂಘಟನೆ ವಿಚಾರದಲ್ಲಿ ಯಡಿಯೂರಪ್ಪನವರ ಪ್ರಭಾವ ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ.

Leave a Reply