ಕಾಂಪೌಂಡ್ ಹಾರಿ ಚಿದಂಬರಂ ಬಂಧಿಸಿದ್ಯಾಕೆ ಸಿಬಿಐ..?

ಡಿಜಿಟಲ್ ಕನ್ನಡ ಟೀಮ್:

ಐಎನ್ ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ. ಅದೂ ಕಾಂಪೌಂಡ್ ಹಾರಿ!

ಹೌದು, ನಿನ್ನೆ ಸಂಜೆ ದೆಹಲಿ ಹೈಕೋರ್ಟ್ ಚಿದಂಬರಂ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿದ ನಂತರ ಈ ಪ್ರಕರಣ ದೇಶದ ಗಮನವನ್ನು ಸಂಪೂರ್ಣ ತನ್ನತ್ತ ಸೆಳೆದುಕೊಂಡಿತು. ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಎಷ್ಟೇ ಪ್ರಯತ್ನ ಮಾಡಿದರು ಚಿದಂಬರಂ ಅವರ ಕೈಗೆ ಸಿಕ್ಕಿರಲಿಲ್ಲ.

ಹೀಗಾಗಿ ಚಿದಂಬರಂ ನಾಪತ್ತೆಯಾಗಿದ್ದಾರೆ, ಮೊಬೈಲ್‌ ಸ್ವಿಚ್ ಆಫ್ ಆಗಿದೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು‌ ಆರೋಪಿಸಿದರು. ದೇಶ ಬಿಟ್ಟು ಹೋಗದಂತೆ ಲುಕ್‌ಔಟ್ ನೋಟಿಸ್ ನೀಡಿದ್ದೇವೆ ಎಂದೂ ಅಧಿಕಾರಿಗಳು ಹೇಳಿಕೆ ನೀಡಿದರು.

ಇದರ ಬೆನ್ನಲ್ಲೇ ಪಿ. ಚಿದಂಬರಂ ಅವರು ದೆಹಲಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷವಾಗಿ ಮಾಧ್ಯಮಗೋಷ್ಠಿ ನಡೆಸಿದ್ರು. ‘ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಯಾವುದೇ ಕೇಸ್ ಕೂಡ ಇಲ್ಲ. ಆದರೂ ಬಂಧಿಸುವ ಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದ್ರು. ಕಾಂಗ್ರೆಸ್ ಕಚೇರಿ ಬಳಿಯೂ ಸಿಬಿಐ ಅಧಿಕಾರಿಗಳು ಮಫ್ತಿಯಲ್ಲಿ ಗಮನಿಸುತ್ತಿದ್ರು. ಇದನ್ನು ಅರಿತ ಪಿ.ಚಿದಂಬರಂ ಕಾಂಗ್ರೆಸ್ ನಾಯಕರು ಹಾಗೂ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ ಮನು ಸಿಂಘ್ವಿ ಜೊತೆ ನಿವಾಸಕ್ಕೆ ಪರಾರಿಯಾದ್ರು. ಬಳಿಕ ಮನೆ ಬಳಿಗೆ ಬಂದ ಸಿಬಿಐ ಅಧಿಕಾರಿಗಳ ತಂಡ, ಗೇಟ್ ಓಪನ್ ಮಾಡಿಸಲು ಪ್ರಯತ್ನ ಮಾಡಿದ್ರು. ಯಾವಾಗ ಮನೆ ಗೇಟ್ ಓಪನ್ ಮಾಡಲಿಲ್ವೋ ಕಾಂಪೌಂಡ್ ಹಾರಿದ ಸಿಬಿಐ ಅಧಿಕಾರಿಗಳು, ಪಿ.ಚಿದಂಬರಂ ಅವರನ್ನು ಬಂಧಿಸಿ ಕಚೇರಿ ಬಳಿಗೆ ಕರೆತಂದ್ರು.

ಚಿದಂಬರಂ ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಆದರೂ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಚಿದಂಬರಂ ಅವರನ್ನು ಬಂಧಿಸುವ ಪಿತೂರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.

Leave a Reply