ಅಮಿತ್ ಶಾ ಪಾದದಲ್ಲಿ ನಕ್ಷತ್ರ ಎಣಿಸುತ್ತಿರುವ ಅನರ್ಹ ಶಾಸಕರು!

ಸಂಧ್ಯಾ ಸೊರಬ

ಅತ್ತ ತಾವು ಸಲ್ಲಿಸಿರುವ ಮೇಲ್ಮನವಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿರುವುದು, ಇತ್ತ ಯಡಿಯೂರಪ್ಪನವರು ತಮ್ಮನ್ನು ಬಿಟ್ಟು ಸಚಿವ ಸಂಪುಟ ರಚನೆ ಮಾಡಿರುವುದು ಅನರ್ಹ ಶಾಸಕರಿಗೆ ಗಾಯದ ಮೇಲೆ ಬರೆ ಎಳೆದು, ಖಾರದ ಪುಡಿ ಸುರುವಿದಂತಾಗಿದೆ.

ಪರಿಣಾಮ ಅನರ್ಹರು ಆ ಕಡೆಯೂ ಇಲ್ಲ ಈ ಕಡೆಯೂ ಇಲ್ಲ ಎಂಬಂತಾಗಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಒತ್ತಡ ಹೇರುವ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ. ಅದಕ್ಕಾಗಿ ಎರಡು ತಂಡಗಳಲ್ಲಿ ದೆಹಲಿಗೆ ತೆರಳಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶ ಏನಪ್ಪಾ ಅಂದ್ರೆ ಆಪರೇಷನ್ ಕಮಲದಲ್ಲಿ ಬಿಎಸ್ ವೈ ಬೆನ್ನಿಗೆ ಸೈನಿಕನಂತೆ ನಿಂತಿದ್ದ ಯೋಗೇಶ್ವರ್ ಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ ದೋಸ್ತಿ ಸರ್ಕಾರದ ಅತೃಪ್ತರ ಜತೆ ಬಿಜೆಪಿಯ ಅತೃಪ್ತ ಯೋಗೇಶ್ವರ್ ಕೂಡ ಜತೆಯಾಗಿದ್ದಾರೆ. ಯೋಗೇಶ್ವರ್ ಕಾರಿನಲ್ಲಿಯೇ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸೇರಿದಂತೆ ಕೆಲವು ಅನರ್ಹರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ಹಾರಿರುವುದು ಕುತೂಹಲ ಮೂಡಿಸಿದೆ. ಇನ್ನು ಕೆ. ಸುಧಾಕರ್ ಸಂಜೆ ಬೇರೊಂದು ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಅವರೀಗ ಬಿಜೆಪಿ ಹೈಕಮಾಂಡ್ ಬಳಿ ಯಾವ ರೀತಿ ಲಾಬಿ ಮಾಡಲಿದ್ದಾರೆ ಎಂಬುದು ರೋಚಕ ಸಂಗತಿಯಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಅನರ್ಹಗೊಂಡಿರುವ 17 ಶಾಸಕರು ತಮ್ಮ ವಿರುದ್ಧದ ಸ್ಪೀಕರ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ತಮ್ಮ ಅರ್ಜಿಯನ್ನು ತ್ವರಿತ ವಿಚಾರಣೆ ಮಾಡುವಂತೆ ಕೋರಿದ್ದರು. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಸ್ಪಷ್ಟವಾಗಿ ನಿರಾಕರಿಸಿದೆ.

ಇನ್ನು ಯಡಿಯೂರಪ್ಪನವರ ಜತೆಯಲ್ಲೇ ಸಂಪುಟ ಸೇರುವ ಕನಸು ಕಾಣುತ್ತಿದ್ದ ಅನರ್ಹ ಶಾಸಕರಿಗೆ ಕಾನೂನು ತೊಡಕು ಇನ್ನಿಲ್ಲದಂತೆ ಕಾಡುತ್ತಿದೆ. ಈ ಮಧ್ಯೆ ಮಂಗಳವಾರ ಬಿಜೆಪಿಯ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನೂ 17 ಸಚಿವ ಸ್ಥಾನಗಳು ಖಾಲಿ ಉಳಿದಿದ್ದು, ಇದನ್ನು ಹಿಂದಿನ ದೋಸ್ತಿ ಸರಕಾರದ ಅನರ್ಹ ಶಾಸಕರಿಗೆ ಮುಡುಪಾಗಿಡಲಾಗಿದೆ ಎಂದೇ ಬಿಂಬಿಸಲಾಗುತ್ತಿದೆ. ಆದರೂ ಅನರ್ಹರು ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ಬೇರೆಯೇ ಇದೆ.

ಮಂಗಳವಾರ ರಚನೆಯಾದ ಸಂಪುಟಕ್ಕೆ ಬೆಳಗಾವಿಯ ಲಕ್ಷ್ಮಣ ಸವದಿ ಸೇರಿರುವುದು ಅನರ್ಹ ಶಾಸಕರನ್ನು ಕಂಗೆಡಿಸಿದೆ. ಜಾರಕಿಹೊಳಿ ಕುಟುಂಬದವರನ್ನು ಕಡೆಗಣಿಸಿರುವುದು ಹತಾಶರನ್ನಾಗಿಸಿದೆ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕಾಯ್ದಿರಿಸಲಾಗಿದೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿದೆಯಾದರೂ ಕಾನೂನು ತೊಡಕು ನಿವಾರಣೆ ಆಗೋದು ಯಾವಾಗ? ಅವರು ಮಂತ್ರಿ ಆಗೋದು ಯಾವಾಗ? ಎಂಬ ಅನುಮಾನ ಅನರ್ಹರ ಜತೆಜತೆಗೆ ಜಾರಕಿಹೊಳಿ ಕುಟುಂಬದವರನ್ನೇ ಕಾಡುತ್ತಿದೆ.

ಇನ್ನು ಮೈತ್ರಿ ಸರ್ಕಾರ ಬೀಳಿಸುವ ಆತುರದಲ್ಲಿ ಪ್ರಮುಖ ಖಾತೆಗಳನ್ನು ನೀಡುವುದಾಗಿ ಬಿಜೆಪಿ ನಾಯಕರು ಅನರ್ಹರಿಗೆ ಆಸೆ ತೋರಿಸಿದ್ದರು. ಈಗ ರಚನೆಯಾಗಿರುವ ಸಂಪುಟದ ಸದಸ್ಯರೇ ಎಲ್ಲ ಪ್ರಮುಖ ಖಾತೆಯನ್ನು ಬಾಚಿಕೊಂಡರೆ ನಮ್ಮ ಗತಿ ಏನು ಎಂಬುದು ಅವರ ಮತ್ತೊಂದು ಕೊರಗು.

ಈಗ ಪ್ರಮಾಣ ವಚನ ಸ್ವೀಕರಿಸಿರುವ ಬಿಜೆಪಿ ನಾಯಕರ ಪೈಕಿ ಬಹುತೇಕರು ಹಿರಿಯರು. ಹಿಂದೆ ಬಿಎಸ್ ವೈ ಸರ್ಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದವರು. ಅವರು ಸಣ್ಣ ಖಾತೆ ಪಡೆದು ನಮಗೆ ದೊಡ್ಡ ಖಾತೆ ಉಳಿಸುತ್ತಾರೆ ಎಂಬ ನಂಬಿಕೆ ಅನರ್ಹರಲ್ಲಿ ಉಳಿದಿಲ್ಲ. ಹೀಗಾಗಿ ಅವರು ದಶ ದಿಕ್ಕುಗಳಿಂದಲೂ ದಾರಿ ಕಾಣದಾಗಿದ್ದಾರೆ.

ಒಟ್ಟಿನಲ್ಲಿ ದೋಸ್ತಿ ಸರ್ಕಾರ ಪತನ ಮಾಡುವಾಗ ಅನರ್ಹ ಶಾಸಕರಿಗೆ ಆಕಾಶದಲ್ಲಿ ಚಂದ್ರ, ನಕ್ಷತ್ರ ತೋರಿಸಿದ್ದ ಬಿಜೆಪಿ ಈಗ ಯಾವ ಹೆಜ್ಜೆ ಇಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Leave a Reply