ಚಿದಂಬರಂ ಸುತ್ತ ಕಾನೂನಿನ ‘ಇಡಿ’ತ! ಸುಪ್ರೀಂ ವಿಚಾರಣೆ ಮೇಲೆ ಎಲ್ಲರ ಕಣ್ಣು

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದ್ದು, ಬಂಧನದ ಸಾಧ್ಯತೆ ಹೆಚ್ಚಾಗಿದೆ. ಈ ಮಧ್ಯೆ ಚಿದಂಬರಂ ಯಾರ ಸಂಪರ್ಕಕ್ಕೂ ಸಿಗದೇ ಫೋನ್ ಆಫ್ ಮಾಡಿಕೊಂಡಿರುವ ವರದಿಗಳು ಬಂದಿವೆ.

ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿ ಸಂಜೆ 4 ಗಂಟೆಗೆ ವಿಚಾರಣೆ ನಡೆಸಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ವಿಚಾರಣೆ ತೀವ್ರಗೊಳಿಸಿದ್ದು, ಚಿದಂಬರಂ ವಿಚಾರಣೆ ಮಾಡಲು ಪ್ರಯತ್ನಿಸುತ್ತಿದೆ. ಇದರಿಂದ ಚಿದಂಬರಂ ಬಂಧನವಾಗುವ ಸಾಧ್ಯತೆ ಹೆಚ್ಚಾಗಿದೆ.

ಹೈಕೋರ್ಟ್ ತೀರ್ಪು ಬೆನ್ನಲ್ಲೇ ಚಿದಂಬರಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ತುರ್ತು ವಿಚಾರಣೆಗೆ ನ್ಯಾಯ ಪೀಠ ನಿರಾಕರಿಸಿದೆ. ಇದು ಚಿದಂಬರಂಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಪ್ರಕರಣದಲ್ಲಿ ಇಂದ್ರಾಣಿ ಹಾಗೂ ಪೀಟರ್ ದಂಪತಿಗಳು ನೀಡಿರುವ ಹೇಳಿಕೆ ಚಿದಂಬರಂ ಅವರನ್ನು ಸಿಲುಕಿಸಿದೆ. ಇನ್ನು ಇಡಿ ಚಿದಂಬರಂ ವಿರುದ್ಧ ಅನೇಕ ಪ್ರಕರಣ ದಾಖಲಿಸಿಕೊಂಡಿದೆ. ಈ ಹಗರಣದ ಹಣದಿಂದ ಚಿದಂಬರಂ ಲಂಡನ್ ನಲ್ಲಿ ಟೆನಿಸ್ ಕ್ಲಬ್ ಹಾಗೂ ವಿದೇಶಗಳಲ್ಲಿ ಕಂಪನಿ ಹೊಂದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

Leave a Reply