ಅಮಿತ್ ಶಾ ವರ್ಸಸ್ ಚಿದಂಬರಂ; ರಾಜಕೀಯ ಸ್ಕ್ರಿಪ್ಟ್ ಒಂದೇ, ಆದ್ರೆ ಪಾತ್ರ ಮಾತ್ರ ಬದಲು!

ಡಿಜಿಟಲ್ ಕನ್ನಡ ಟೀಮ್:

2010ರಲ್ಲಿ ಜೈಲು ಸೇರಿದ್ದು ಅಮಿತ್ ಶಾ, ಅಂದು ಕೇಂದ್ರ ಗೃಹ ಮಂತ್ರಿ ಪಿ.ಚಿದಂಬರಂ. 2019ರಲ್ಲಿ ರೈಲು ಸೇರಿರೋದು ಪಿ.ಚಿದಂಬರಂ, ಇಂದು ಕೇಂದ್ರ ಗೃಹಮಂತ್ರಿ ಆಗಿರೋದು ಅಮಿತ್ ಶಾ. ಕಳೆದ 10 ವರ್ಷಗಳ ರಾಜಕೀಯ ಆಟದ ಒಂದೇ ದೃಶ್ಯ, ಒಂದೇ ಸಂಭಾಷಣೆ, ಆದರೆ ಪಾತ್ರಧಾರಿಗಳು ಮಾತ್ರ ಅದಲು ಬದಲಾಗಿರೋದು ಕಾಲಚಕ್ರದ ಮಹಿಮೆ.

ಪ್ರಸ್ತುತ ರಾಜಕೀಯ ಚಿತ್ರಣ ಹತ್ತು ವರ್ಷಗಳ ಹಿಂದಿನ ಚಿತ್ರಣಕ್ಕೆ ತದ್ವಿರುದ್ಧವಾಗಿದೆ. ಹೀಗಾಗಿ ಎರಡು ಘಟನೆಗಳು ಒಂದೇ ದೃಶ್ಯದಂತೆ ಕಂಡರೂ ಪಾತ್ರಧಾರಿಗಳು ಅದಲುಬದಲಾಗುವಂತಾಗಿದೆ. 2010ರಲ್ಲಿ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಎರಡನೇ ಅವಧಿಗೆ ಅಧಿಕಾರದಲ್ಲಿತ್ತು. ಆದರೆ ಗುಜರಾತ್ ರಾಜ್ಯ ರಾಜಕಾರಣದ ಮೂಲಕ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ದೇಶದಲ್ಲಿ ಹೊಸ ರಾಜಕೀಯ ಮುನ್ನುಡಿ ಬರೆಯಲು ಪಣ ತೊಟ್ಟು ಕಾಂಗ್ರೆಸ್ ವಿರುದ್ಧ ತೊಡೆತಟ್ಟಿ ನಿಂತಿದ್ದರು.

ಗುಜರಾತಿನ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಸಾಕಷ್ಟು ಸದ್ದು ಮಾಡುತ್ತಿದ್ದರು. ಮೋದಿ ಬೆನ್ನೆಲುಬಾಗಿ ನಿಂತು ಬಿಜೆಪಿಯ ಮಾಸ್ಟರ್ ಮೈಂಡ್ ಆಗಿದ್ದವರು ಅಮಿತ್ ಶಾ. ಇವರಿಬ್ಬರ ಜೋಡಿಯ ಅಪಾಯವನ್ನು ಅರಿತ ಕಾಂಗ್ರೆಸ್ ಇವರಿಬ್ಬರನ್ನು ಮಟ್ಟ ಹಾಕಲು ಸೂಕ್ತ ಸಮಯಕ್ಕಾಗಿ ಪರಿತಪಿಸುತ್ತಿತ್ತು. ಆಗ ಕಾಂಗ್ರೆಸ್ ಗೆ ಅಸ್ತ್ರವಾಗಿ ಸಿಕ್ಕಿದ್ದೇ ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣ!

ಈ ಪ್ರಕರಣದಲ್ಲಿ ಅಮಿತ್ ಶಾ ಅವರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ಅಮಿತ್ ಶಾ ವರನ್ನು ಬಂಧಿಸಿ ಜೈಲಿಗಟ್ಟಿತ್ತು. ಆಗಿನ ಗೃಹಮಂತ್ರಿಯಾಗಿದ್ದ ಪಿ.ಚಿದಂಬರಂ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಮಿತ್ ಶಾ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು.

ಈಗ ಕಾಲಚಕ್ರ ಉರುಳಿದೆ. ಬಿಜೆಪಿ ನೇತೃತ್ವದಲ್ಲಿ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರದಲ್ಲಿದೆ. ಅಂದು ಬಂಧನವಾಗಿದ್ದ ಅಮಿತ್ ಶಾ ಇಂದು ಗೃಹ ಮಂತ್ರಿ ಸ್ಥಾನದಲ್ಲಿದ್ದಾರೆ. ಅಂದು ಗೃಹ ಮಂತ್ರಿಯಾಗಿದ್ದ ಪಿ.ಚಿದಂಬರಂ ಐಎನ್ಎಕ್ಸ್ ಮಿಡಿಯಾ ಹಗರಣದ ಆರೋಪಿಯಾಗಿ ಬಂಧನವಾಗಿದ್ದಾರೆ. ಅಂದು ಬಿಜೆಪಿ ಮಾಡಿದ್ದ ಅಧಿಕಾರ ದುರ್ಬಳಕೆ ಹಾಗೂ ರಾಜಕೀಯ ಪಿತೂರಿ ಆರೋಪಗಳು ಇಂದು ಕಾಂಗ್ರೆಸ್ ನಾಯಕರ ಬಾಯಿಂದ ಹೊರಬೀಳುತ್ತಿದೆ.

ಇನ್ನು 2010ರಲ್ಲಿ ಸಿಬಿಐನಿಂದ ಬಂಧನವಾಗುವ ಮುನ್ನ ಅಮಿತ್ ಶಾ ಹೇಗೆ ಪತ್ರಿಕಾಗೋಷ್ಠಿ ನಡೆಸಿ ತಾವು ನಿರಪರಾಧಿ, ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ಇದು ರಾಜಕೀಯ ಪಿತೂರಿ ಅಂತಾ ಹೇಳಿದ್ದರೋ ಇಂದು ಪಿ.ಚಿದಂಬರಂ ಸಿಬಿಐನಿಂದ ಬಂಧನವಾಗುವ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಅದೇ ಮಾತುಗಳನ್ನು ಆಡಿದ್ದಾರೆ.

Leave a Reply