ದೋಸ್ತಿ ಸರ್ಕಾರ ಬೀಳಿಸಿದ್ದೇ ಸಿದ್ದರಾಮಯ್ಯ; ದೇವೇಗೌಡರ ನೇರ ಆರೋಪ

ಡಿಜಿಟಲ್ ಕನ್ನಡ ಟೀಮ್:

‘ಹೆಚ್.ಡಿ ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಲ್ಲಿ ನೋಡಲು ಸಿದ್ದರಾಮಯ್ಯಗೆ ಇಷ್ಟ ಇರಲಿಲ್ಲ. ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ…’ ಎಂದು ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ದೇವೇಗೌಡರು, ಸಿದ್ದರಾಮಯ್ಯ ತಾವು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಕೂರಲು ಯಡಿಯೂರಪ್ಪ ಸಿಎಂ ಆಗಬೇಕು ಎಂದು ಬಯಸಿದ್ದರು ಎಂದು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸೋಲು ಮಾಸದ ಗಾಯವಾಗಿದೆ. ಹೀಗಾಗಿ ನನ್ನ ಹಾಗೂ ನನ್ನ ಮಗನ ವಿರುದ್ಧ ಅವರು ದ್ವೇಷ ಕಾರುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿತು. ಇದು ಸಿದ್ದರಾಮಯ್ಯಗೆ ಇಷ್ಟ ಇರಲಿಲ್ಲ ಎಂದು ಗೌಡರು ಕಿಡಿಕಾರಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನನ್ನ ಹಾಗೂ ನನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯನೇ ಕಾರಣ. ಅವರ ಬೆಂಬಲಿಗರು ನಮ್ಮ ವಿರುದ್ಧ ಕೆಲಸ ಮಾಡಿದ್ದಾರೆ. ಅವರಿಗೆ ನಮ್ಮ ತಾಕತ್ತು ಏನು ಎಂದು ತೋರಿಸಬೇಕು. ಮೈತ್ರಿ ಸರ್ಕಾರದ ವಿರುದ್ಧ ತಮ್ಮ ಆಪ್ತರು ಎಷ್ಟೇ ಟೀಕೆ ಮಾಡಿದರೂ ಸಿದ್ದರಾಮಯ್ಯ ಒಂದೇ ಒಂದು ಬಾರಿ ನೋಟಿಸ್ ಜಾರಿ ಮಾಡಲಿಲ್ಲ. ಯಡಿಯೂರಪ್ಪ ಸಿಎಂ ಆಗಿ ತಾವು ವಿಪಕ್ಷ ನಾಯಕನಾಗಲು ಸಿದ್ದು ಬಯಸಿದ್ದರು. ಮೈತ್ರಿ ಸರ್ಕಾರ ಪತನಕ್ಕೆ ಅವರೇ ಕಾರಣ. ಬಳ್ಳಾರಿ ಪಾದಯಾತ್ರೆ ಮಾಡಿದ್ದು ಬಿಟ್ಟರೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಏನು ಮಾಡಿದರು? ಯಡಿಯೂರಪ್ಪ ಸರ್ಕಾರದ ವಿರುದ್ಧ ಹಾರಡಿಡ್ದು ಕುಮಾರಸ್ವಾಮಿ ಎಂದರು.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಸಿದ್ದರಾಮಯ್ಯ ಬೆಂಬಲ ನೀಡಿದ್ದಾರೆ. ಮಂಡ್ಯ ಹಾಗೂ ಹಾಸನದಲ್ಲಿ ಬಿಜೆಪಿ ಬೆಳೆಯಲು ಸಿದ್ದರಾಮಯ್ಯ ಕಾರಣ. ಅವರಿಂದಲೇ ಕಾಂಗ್ರೆಸ್ 79 ಸ್ಥಾನಕ್ಕೆ ಕುಸಿದಿದೆ ಎಂದು ಆರೋಪಿಸಿದರು.

Leave a Reply