ಕೈಗೆ ಸಿಗದ ಅಮಿತ್ ಶಾ! ಆತಂಕದಲ್ಲಿ ಬಿಎಸ್ ವೈ, ಅನರ್ಹರು

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಸರ್ಕಾರದಲ್ಲಿ ತಮ್ಮ ಸ್ಥಾನಮಾನ ಗಟ್ಟಿ ಮಾಡಿಕೊಳ್ಳಲು ಅನರ್ಹ ಶಾಸಕರು, ಖಾತೆ ಹಂಚಿಕೆ ವಿಚಾರದ ಗೊಂದಲ ಬಗೆಹರಿಸಲು ಸಿಎಂ ಯಡಿಯೂರಪ್ಪ, ದೆಹಲಿಗೆ ತೆರಳಿದ್ದಾರೆ. ಆದರೆ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇವರ ಕೈಗೆ ಸಿಗದಿರುವುದು ಮುಖ್ಯಮಂತ್ರಿ ಹಾಗೂ ಅನರ್ಹ ಶಾಸಕರನ್ನು ಆತಂಕಕ್ಕೆ ದೂಡಿದೆ.

ತಮ್ಮ ಅನರ್ಹತೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರದ ಸಂಪುಟ ರಚನೆಯಾಗಿರೋದು ಅನರ್ಹರ ರಾಜಕೀಯ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತಾಗಿದೆ. ಹೀಗಾಗಿ ಆಪರೇಷನ್ ಕಮಲದ ಸಂದರ್ಭದಲ್ಲಿ ತಮಗೆ ನೀಡಲಾಗಿದ್ದ ಭರವಸೆಗಳನ್ನು ಪೂರ್ಣಗೊಳಿಸಬೇಕು ಎಂದು ಅನರ್ಹರು ಪಟ್ಟು ಹಿಡಿದು ಅಮಿತ್ ಶಾರ ಭೇಟಿ ಮಾಡಲು ದೆಹಲಿಗೆ ತೆರಳಿದ್ದರು.

ಅನರ್ಹರ ಪೈಕಿ ಪ್ರಮುಖರಾಗಿರುವ ರಮೇಶ್ ಜಾರಕಿಹೋಳಿ ಗುಡುಗಿದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಬೆದರಿ ದೆಹಲಿಗೆ ಹಾರಿದ್ದರು. ಅನರ್ಹರಿಗೆ ಪ್ರಮುಖ ಖಾತೆ ಕಾಯ್ದಿರಿಸಿ ಈಗ ರಚನೆಯಾಗಿರುವ ಸಂಪುಟ ಸಚಿವರಿಗೆ ಖಾತೆ ಹಂಚುವ ಸಲುವಾಗಿ ಹೈಕಮಾಂಡ್ ಜತೆ ಚರ್ಚೆ ಮಾಡಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಆದರೆ ಅಮಿತ್ ಶಾ ಅವರ ಭೇಟಿ ಸಾಧ್ಯವಾಗದೇ ಕಂಗೆಟ್ಟಿದ್ದಾರೆ. ಮೂಲಗಳ ಪ್ರಕಾರ ಬಿಎಸ್ ವೈ ಜತೆಯಲ್ಲೇ ಅನರ್ಹ ಶಾಸಕರು ಕೂಡ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು.

ಆದರೆ… ಅಮಿತ್ ಶಾ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದು, ಇವರನ್ನು ಈವರೆಗೂ ಭೇಟಿಯಾಗಿಲ್ಲ. ಪೂರ್ವನಿಗದಿತ ವೇಳಾಪಟ್ಟಿ ಪ್ರಕಾರ ಯಡಿಯೂರಪ್ಪ ಅವರು ಅಮಿತ್ ಶಾರನ್ನು ಭೇಟಿ ಮಾಡಿ ಇಂದು ಮಧ್ಯಾಹ್ನ 1.30ಕ್ಕೆ ರಾಜ್ಯಕ್ಕೆ ಮರಳಬೇಕಾಗಿತ್ತು. ಆದರೆ ಅಮಿತ್ ಶಾ ಅವರು ಕೈಗೆ ಸಿಗದಿರುವುದರಿಂದ ಬರೀಗೈಯಲ್ಲಿ ವಾಪಸ್ಸಾಗಲು ಯಡಿಯೂರಪ್ಪಗೆ ಮನಸ್ಸಿಲ್ಲ. ಹೀಗಾಗಿ ಯಡಿಯೂರಪ್ಪ ಅವರು ಅಮಿತ್ ಶಾರನ್ನು ಭೇಟಿಯೇ ವಾಪಸ್ ತೆರಳಲು ನಿರ್ಧರಿಸಿದ್ದಾರೆ ಎಂಬ ವರದಿಗಳು ಬಂದಿವೆ. ಇನ್ನು ಅತೃಪ್ತರಂತೂ ಒಂದುವಾರವಾದ್ರೂ ಸರಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ನಮ್ಮ ಸ್ಥಾನಮಾನದ ಕುರಿತು ಅವರಿಂದಲೇ ಸ್ಪಷ್ಟ ಚಿತ್ರಣ ಪಡೆಯುವವರೆಗೂ ದೆಹಲಿಯಿಂದ ಕದಲಬಾರದು ಎಂದು ನಿರ್ಧರಿಸಿದ್ದಾರೆ.

ಮೈತ್ರಿ ಸರ್ಕಾರ ಬೀಳಿಸುವಾಗ ಅತೃಪ್ತ ಶಾಸಕರಿಗೆ ಕಲರ್ ಕಲರ್ ಕನಸು ತೋರಿಸಿದ್ದ ಬಿಎಸ್ ವೈ, ಈಗ ಕೈಕೊಟ್ಟರೆ ಅವರು ಸುಮ್ಮನೇ ಕೂರುವುದಿಲ್ಲ. ಮೂರ್ನಾಲ್ಕು ತಿಂಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಆ ವೇಳೆ ಇವರು ತಿರುಗಿ ಬಿದ್ದರೆ ನಂತರ ತಮ್ಮ ಸರ್ಕಾರದ ಬುಡ ಅಲ್ಲಾಡುತ್ತದೆ ಎಂಬ ಭಯ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಹೀಗಾಗಿ ಅಮಿತ್ ಶಾ ಅವರ ಜತೆ ಚರ್ಚೆ ಮಾಡಿ ಅನರ್ಹರು ಮತ್ತು ಖಾತೆ ಹಂಚಿಕೆ ವಿಚಾರವಾಗಿ ತೀರ್ಮಾನಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ.

Leave a Reply