ಅಮಿತ್ ಶಾಗೇ ಚಳ್ಳೆಹಣ್ಣು ತಿನ್ನಿಸಲೋಗಿ ಮೆಳ್ಳೆಗಣ್ಣಾಗಿರುವ ಯಡಿಯೂರಪ್ಪ!

 ಯಾರಿಗೇ ಆಗಲಿ ಹಳೇ ಅನುಭವಗಳು ಪಾಠವಾಗಬೇಕು. ಪಾಠ ಕಲಿಯಲು ಅವರದೇ ಅನುಭವಗಳು ಆಗಬೇಕೆಂದೇನೂ ಇಲ್ಲ. ಬೇರೆಯವರದೂ ಆಗಬಹುದು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಮ್ಮದೇ ಅನುಭವಗಳು ಪಿ.ಎಚ್ಡಿ ಸಂಶೋಧನೆಗೆ ವಸ್ತುವಾಗುವಷ್ಟು ರಾಶಿ ಬಿದ್ದಿದ್ದರೂ ಪಾಠ ಕಲಿಸಿಲ್ಲ. ಮತ್ತದೇ ತಪ್ಪಿನ ಮೇಲೆ ತಪ್ಪನ್ನು ತಮ್ಮ ಮೇಲೆ ಹೇರಿಕೊಳ್ಳುತ್ತಿರುವ ಯಡಿಯೂರಪ್ಪ ಅದರಡಿ ಸಿಕ್ಕು ಉಸಿರಾಡಲಾಗದೆ ವಿಲವಿಲನೇ ಒದ್ದಾಡುತ್ತಿದ್ದಾರೆ.

‘ಕಾಮಾತುರಾಣಂ ನ ಲಜ್ಜಾಂ ನ ಭಯಂ’ ಅನ್ನೋ ಮಾತಿದೆ. ಆದರೆ ಯಡಿಯೂರಪ್ಪ ವಿಚಾರದಲ್ಲಿ ಇದು‘ಅಧಿಕಾರಾತುರಾಣಂ ನ ಲಜ್ಜಾಂ ನ ಭಯಂ’ ಎಂಬಂತೆ ಆಗಿದೆ. ಹೀಗಾಗಿಯೇ ಅವರಿಗೆ ಹಿಂದೆ ಸಿಎಂ ಆಗಿದ್ದಾಗ, ಆ ಪದವಿ ಕಳೆದುಕೊಂಡಾಗ ಹಾಗೂ ಪ್ರತಿಪಕ್ಷ ಸ್ಥಾನದಲ್ಲಿದ್ದಾಗಲೂ ಆದ ಅನುಭವಗಳ್ಯಾವವೂ ಪಾಠವಾಗಿ ಪರಿಣಮಿಸಿಲ್ಲ. ಜತೆಗೆ ಹುಂಬತನ, ಹಪಾಹಪಿ, ಧಾಷ್ಟ್ಯ ಅವರನ್ನೀಗ ಬಲವಂತವಾಗಿ ದಕ್ಕಿಸಿಕೊಂಡ ಸಿಎಂ ಗಾದಿಯನ್ನು ನೆಮ್ಮದಿಯಾಗಿ ಅನುಭವಿಸಲಾಗದ ದುಸ್ಥಿತಿಗೆ ತಳ್ಳಿದೆ.

ಆಪರೇಷನ್ ಕಮಲದಿಂದ ಹಿಡಿದು ಸಂಪುಟ ರಚನೆವರೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನೀಡಿದ ಸಲಹೆಗಳನ್ನು ಯಥವತ್ತಾಗಿ ಪರಿಗಣಿಸದೇ ಹೋದ ಯಡಿಯೂರಪ್ಪನವರು ಬ್ಲಾಕ್ ಮೇಲ್  ಮಾದರಿಯಲ್ಲಿ ಆಳ್ವಿಕೆ ಹಿಡಿದು, ಚಲಾಯಿಸುತ್ತಿರುವುದು ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದೆ. ವರಿಷ್ಠರು ಆಲೋಚನೆ ಮಾಡಿದ್ದೇ ಒಂದಾದರೇ ರಾಜಕೀಯ ಬದುಕಿನ ಸಂಧ್ಯಾಕಾಲದಲ್ಲಿರುವ ಯಡಿಯೂರಪ್ಪನವರು ಅನುಷ್ಠಾನಕ್ಕೆ ತಂದದ್ದೇ ಬೇರೋಂದು. ಇದರಿಂದ ಕೆಂಡಮಂಡಲರಾಗಿರುವ ವರಿಷ್ಠರು ಅಡಿಗಡಿಗೂ ತಮ್ಮ ಮಾತು ಕೇಳದೇ ಹೋದ ಯಡಿಯೂರಪ್ಪನವರು ಅಲಂಕರಿಸಿದ ಸಿಎಂ ಪದವಿಯನ್ನೇ ಈಗ ಮಾರಿಬಲಿಯ ಕುರಿಯಂತೆ ಅಣಿಗೊಳಿಸುತ್ತಿದ್ದಾರೆ. ತಮ್ಮ ರಾಜಕೀಯ ತಂತ್ರಕ್ಕೆ ಗುಳಿ ಕೊರೆಯಲು ಹೋದ ಯಡಿಯೂರಪ್ಪನವರನ್ನು ಚಾಣಾಕ್ಷ್ಯ ಅಮಿತ್ ಶಾ ಒಳಸುಳಿಯಲ್ಲಿ ಕೆಡವಿ ಅಡಿಗಡಿಗೂ ಹಣಿಯುತ್ತಿದ್ದಾರೆ. ತತ್ಪರಿಣಾಮ ಯಡಿಯೂರಪ್ಪನವರಿಗೆ ಈಗ ರಾಜಕೀಯ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ನಿಜ ಹೇಳಬೇಕೆಂದರೆ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದಲ್ಲಿ ದೋಸ್ತಿ ಪಕ್ಷಗಳು ಕಚ್ಚಾಡಿಕೊಂಡು ಸರಕಾರ ಬೀಳುವುದು ಬೇಕಿತ್ತೇ ಹೊರತು ಆಪರೇಷನ್ ಕಮಲದಿಂದ ಬೀಳಿಸುವುದಲ್ಲ, ಯಡಿಯೂರಪ್ಪನವರನ್ನು ಸಿಎಂ ಮಾಡುವುದಲ್ಲ. ಅಂತಃಕಲಹದಿಂದ ದೋಸ್ತಿ ಸರಕಾರ ಬಿದ್ದರೆ ಚುನಾವಣೆಗೆ ಹೋಗಿ ಬಿಜೆಪಿಗೆ ಸ್ಪಷ್ಟ ಬಹುಮತ ಪಡೆಯಬೇಕು ಎನ್ನುವುದು ಅವರ ಯೋಚನೆಯಾಗಿತ್ತು. ಹೀಗಾಗಿಯೇ ಮೊದಲ ದಿನದಿಂದಲೂ ಯಡಿಯೂರಪ್ಪನರವರು ಪಠಿಸುತ್ತಿದ್ದ ಆಪರೇಷನ್ ಕಮಲ ಮಂತ್ರಕ್ಕೆ ಅವರು ಸೊಪ್ಪು ಹಾಕಿರಲಿಲ್ಲ. ಹದಿನೇಳು ಶಾಸಕರು ರಾಜೀನಾಮೆ ಕೊಟ್ಟು ದೋಸ್ತಿ ಸರಕಾರ ಬಿದ್ದಾಗಲೂ ಅವರು ಪರ್ಯಾಯ ಸರಕಾರ ರಚನೆಗೆ ಮನಸ್ಸು ಮಾಡಿರಲಿಲ್ಲ. ಹೀಗಾಗಿಯೇ ಸರಕಾರ ಬಿದ್ದು ಮೂರು ದಿನವಾದರೂ ಯಡಿಯೂರಪ್ಪನವರನ್ನು ಅವರು ದಿಲ್ಲಿಗೆ ಕರೆದಿರಲಿಲ್ಲ. ಹತ್ತು ವರ್ಷಗಳಿಂದ ಅಧಿಕಾರವಿಲ್ಲದೆ ಹೈರಾಣಾಗಿ ಹೋಗಿದ್ದ ಯಡಿಯೂರಪ್ಪನವರಿಗೆ ಒಂದೊಂದು ಕ್ಷಣವೂ ಯುಗವಾಗಿ ಹೋಗಿತ್ತು. ಹೀಗಾಗಿ ತಾವಾಗಿಯೇ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ ಅವರನ್ನೊಳಗೊಂಡ ನಿಯೋಗವನ್ನು ದಿಲ್ಲಿಗೆ ಕಳುಹಿಸಿ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ ಮಾಡಿದರು. ಆಗಲೂ ವರಿಷ್ಠರು ಒಪ್ಪಿರಲಿಲ್ಲ. 17 ಸ್ಥಾನಗಳ ಉಪಚುನಾವಣೆಗೆ ಹೋಗುವ ಬದಲು ಮಧ್ಯಂತರ ಚುನಾವಣೆಗೆ ಹೋಗುವುದು ಉತ್ತಮ. ಏಕೆಂದರೆ ಈ 17 ಮಂದಿಯಲ್ಲಿ ಎಷ್ಟು ಜನ ಗೆಲ್ಲುತ್ತಾರೋ ಗೊತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅವರ ಅನರ್ಹತೆ ಪ್ರಶ್ನಿಸಿರುವ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ಇನ್ನೂ ಇತ್ಯರ್ಥ ಆಗಿಲ್ಲ. ಅವರ ಬದಲು ಸ್ಪರ್ಧಿಸುವ ಕುಟುಂಬ ಸದಸ್ಯರಿಗೆ ಜನ ಅದೆಷ್ಟು ಕಿಮ್ಮತ್ತು ಕೊಡುತ್ತಾರೋ ಅದೂ ಗೊತ್ತಿಲ್ಲ. ಒಂದೊಮ್ಮೆ ಕಿಮ್ಮತ್ತು ಸಿಕ್ಕರೂ ಅಲ್ಪಮತದ ದೋಸ್ತಿ ಸರಕಾರದಂತೆ ಅಸ್ಥಿರತೆ, ಆತಂಕದಲ್ಲೇ ಕಾಲ ದೂಡಬೇಕಾಗುತ್ತದೆ. ಅದರ ಬದಲು ಚುನಾವಣೆಗೆ ಹೋದರೆ ಮೋದಿ ಅಲೆನಿಮಿತ್ತ ಸ್ಪಷ್ಟ ಬಹುಮತ ಬರುತ್ತದೆ. ನೆಮ್ಮದಿಯಾಗಿ ಆಳ್ವಿಕೆ ನಡೆಸಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಅದು ಸರಿಯಾಗಿಯೂ ಇತ್ತು.

ಆದರೆ ಈಗಾಗಲೇ 76 ದಾಟಿ 77 ನೇ ವಯಸ್ಸಿಗೆ ಕಾಲಿಟ್ಟಿರುವ ಯಡಿಯೂರಪ್ಪನವರಿಗೆ ಈ ಅವಕಾಶ ಬಿಟ್ಟರೆ ಮುಂದೆ ಸಿಎಂ ಆಗುತ್ತೇನೆ ಎಂಬ ಯಾವ ನಂಬಿಕೆಯೂ ಇರಲಿಲ್ಲ. ಹೀಗಾಗಿ ನಿಯೋಗದ ಮೂಲಕ ಪಟ್ಟು ಮತ್ತಷ್ಟು ಬಿಗಿಗೊಳಿಸಿದರು. ಇದನ್ನರಿತ ವರಿಷ್ಠರು ಯಡಿಯೂರಪ್ಪ ಬದಲು ಉತ್ತಮ ಸಂಸದೀಯ ಪಟು ಮಾಧುಸ್ವಾಮಿ ಅವರನ್ನೇ ಸಿಎಂ ಮಾಡಿದರೆ ಹೇಗೆ ಎಂಬ ಪ್ರತ್ಯಸ್ತ್ರ ಬಿಟ್ಟಿದ್ದೇ ತಡ ಯಡಿಯೂರಪ್ಪನವರು, ತಮ್ಮನ್ನು ಸಿಎಂ ಮಾಡದಿದ್ದರೆ 25 ಮಂದಿ ಶಾಸಕರ ಜತೆ ಪಕ್ಷ ತೊರೆಯುವುದಾಗಿ ಅಮಿತ್ ಶಾ ಅವರಿಗೇ ಬೆದರಿಕೆ ಸಂದೇಶ ರವಾನಿಸಿದರು. ಮೊನ್ನೆ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಎಂದು ಮಾಧುಸ್ವಾಮಿ ಹೇಳಿದ್ದು ಬಾಯಿತಪ್ಪಿ ಅನ್ನೋದಕ್ಕಿಂತ, ಅದು ಬಿಜೆಪಿ ಹೈಕಮಾಂಡ್ ಇಂಗಿತದ ಕನವರಿಕೆ ಎಂದು ಹೇಳಬಹುದು. ತಮಗೆ ಸಿಗದ ಅಧಿಕಾರ ಬೇರೆಯವರಿಗೆ ಬೇಡ ಎಂಬುದು ಯಡಿಯೂರಪ್ಪನವರ ‘ಮಾಡು ಇಲ್ಲವೇ ಮಡಿ’ ನಡೆಯ ಹಿಂದಿನ ನುಡಿಯಾಗಿತ್ತು. ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕರ್ನಾಟಕದಲ್ಲಿ ಪಕ್ಷ ಮತ್ತೆ ವಿಭಜನೆ ಆದರೆ ಕೆಟ್ಟ ಸಂದೇಶ ರವಾನೆ ಆಗುತ್ತದೆ ಎನ್ನುವ ಕಾರಣಕ್ಕೆ ಒಲ್ಲದ ಮನಸ್ಸಿಂದ ಯಡಿಯೂರಪ್ಪ ಪ್ರಮಾಣ ಸ್ವೀಕಾರಕ್ಕೆ ಒಪ್ಪಿದ ವರಿಷ್ಠರು ಮುಂದೆ ಮಾರಿ ಹಬ್ಬ ಮಾಡುವ ಪಣ ತೊಟ್ಟರು. ವಿಶ್ವಾಸಮತ ಸಾಬೀತು, ಅನರ್ಹರ ಕೋರ್ಟ್ ಹಣೆಬರಹ, ಮರುಚುನಾವಣೆ ಗೆಲ್ಲುವ ಜವಾಬ್ದಾರಿ ಎಲ್ಲವೂ ನಿಮ್ಮದೇ ಎಂದು ಹೇಳಿ ಕೈ ತೊಳೆದುಕೊಂಡರು.

ವರಿಷ್ಠರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಬಿಎಸ್ ವೈ ಸೂಚಿಸಿದ ಕೆ.ಜಿ. ಬೋಪಯ್ಯ ಬದಲು ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ವಿಧಾನಸಭೆ ಸ್ಪೀಕರ್ ಮಾಡಿ ಮುಂದೆ ತಾವು ಬಿಡುವ ಬಾಣಗಳ ಸೂಚನೆ ಕೊಟ್ಟರು. ಜತೆಗೆ ಪ್ರಮಾಣ ಸ್ವೀಕರಿಸಿ 25 ದಿನ ಕಳೆದರೂ ಸಂಪುಟ ರಚನೆಗೆ ಒಪ್ಪಿಗೆ ಕೊಡಲಿಲ್ಲ. ಏಕಾಂಗಿಯಾಗಿಯೇ ಅಧಿಕಾರ ಚಲಾಯಿಸುತ್ತಿದ್ದ ಯಡಿಯೂರಪ್ಪನವರ ಬಗ್ಗೆ ಪಕ್ಷದೊಳಗೇ ಅಸಮಾಧಾನ ಶುರುವಾಯಿತು. ಅವರು ಸಿಎಂ ಆಗಲೂ ಕಾರಣರಾದ ಅತಂತ್ರರೂ ಧಮಗುಟ್ಟಿದರು. ಪಕ್ಷದ ಒಳಗೆ ಮತ್ತು ಹೊರಗೆ ಯಡಿಯೂರಪ್ಪನವರ ಒನ್ ಮ್ಯಾನ್ ಶೋ, ಅಧಿಕಾರ ಲಾಲಸೆ ಟೀಕೆಗೆ ವಸ್ತುವಾಯಿತು. ವರಿಷ್ಠರಿಗೆ ಇದು ಬೇಕಿತ್ತು!

ಈ ಮಧ್ಯೆ, ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಜಿಲ್ಲೆಗಳನ್ನು ಕಾಡಿದ ಪ್ರವಾಹ ಪರಿಸ್ಥಿತಿ ನಿಭಾಯಿಸಲು ವಿಫಲರಾದ ಯಡಿಯೂರಪ್ಪ ಜನರ ಬಾಯಿಗೂ ಆಹಾರವಾದರು. 40 ಸಾವಿರ ಕೋಟಿ ರುಪಾಯಿ ಹಾನಿಯಾಗಿದ್ದರೂ ಪರಿಹಾರ ಬಿಡುಗಡೆ ಮಾಡದೇ ತಜ್ಞರ ತಂಡ ಕಳುಹಿಸಿ ಸಮೀಕ್ಷೆ ನಡೆಸುವುದಾಗಿ ನೆಪ ಹೇಳಿದ್ದಾರೆ. ಕೇಂದ್ರದ ಈ ನಡೆಯ ಹಿಂದಿದ್ದದ್ದು ಯಡಿಯೂರಪ್ಪ ಅಸಮರ್ಥ ಎಂಬುದನ್ನು ಬಿಂಬಿಸುವುದು. ಇದರ ಜತೆಗೆ ಅಧಿಕಾರಿಗಳ ವರ್ಗಾವಣೆ, ನೇಮಕ, ಯೋಜನೆ, ಕಾಮಗಾರಿಗಳ ಮಂಜೂರು, ಸ್ಥಗಿತ ಎಲ್ಲವನ್ನೂ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಇಬ್ಬರೇ ನಿಭಾಯಿಸುತ್ತಿದ್ದರ ಹಿಂದೆ ಕೋಟ್ಯಂತರ ರುಪಾಯಿ ವ್ಯವಹಾರ ನಡೆದಿದೆಯೆಂಬ ದೂರುಗಳು ವರಿಷ್ಠರ ಅಂಗಳದಲ್ಲಿ ಗುಡ್ಡೆಯಾದವು. ಬೇರೆಯವರ ಜತೆ ಅಧಿಕಾರ ಹಂಚಿಕೊಂಡು ವರ್ಷಗಟ್ಟಲೆ ಆಳ್ವಿಕೆ ನಡೆಸುವ ಬದಲು ತಾವೊಬ್ಬರೇ ಎಲ್ಲ ಅಧಿಕಾರವನ್ನು ಒಂದು ತಿಂಗಳು ಸವೆಸಿದರೂ ಹೆಚ್ಚು ಲಾಭವೆಂಬ ಮನಸ್ಥಿತಿಯಲ್ಲಿ ಅವರಿದ್ದಾರೆ ಎಂಬ ಆರೋಪ ರಾಜಕೀಯ ವಲಯ, ಜನಮಾನಸದಲ್ಲಿ ತೇಲಿ ಹೋಯಿತು.

ಮಂತ್ರಿ ಪದವಿ ಆಕಾಂಕ್ಷಿತ ಪಕ್ಷದ ಹಿರಿಯರು ಮತ್ತು ಅತಂತ್ರರು ಬೇರೆಯದೇ ಯೋಚನೆ ಮಾಡುತ್ತಿದ್ದಾರೆ ಎಂದು ಗೊತ್ತಾದ ಮೇಲೆ ಸಂಪುಟ ರಚನೆಗೆ ಯಡಿಯೂರಪ್ಪನವರು ದಿಲ್ಲಿಯಲ್ಲಿ ಠಿಕಾಣಿ ಹೂಡಿದರು. ಆದರೆ ಅಲ್ಲೂ ಕೂಡ ವರಿಷ್ಠರು ಸತಾಯಿಸಿದರು. ಕೊನೆಗೆಂಬಂತೆ ಆಗಲೂ ಮತ್ತೊಮ್ಮೆ ಬುದ್ಧಿ ಮಾತು ಹೇಳಿದರು. ‘ಈಗಲೂ ಕಾಲ ಮಿಂಚಿಲ್ಲ. ಸಂಪುಟ ರಚನೆ ಬೇಡ. ಭಿನ್ನಮತ ಭುಗಿಲೇಳುತ್ತದೆ. ಆಕಾಂಕ್ಷಿಗಳು ಅನೇಕರಿದ್ದಾರೆ. ಸರಕಾರಕ್ಕೆ ಯಡವಟ್ಟಾಗುತ್ತದೆ. ಅದರ ಬದಲು ಮಧ್ಯಂತರ ಚುನಾವಣೆಗೆ ಹೋಗುವುದು ಲೇಸು. ಸ್ಪಷ್ಟ ಬಹುಮತ ಬರುತ್ತದೆ’ ಎಂದು. ಆದರೆ ಯಡಿಯೂರಪ್ಪ  ಬಿಲ್ ಕುಲ್ ಒಪ್ಪಲಿಲ್ಲ.

ಈಗ ಸಂಪುಟ ರಚನೆ ಆಗಿದೆ. ನಿರೀಕ್ಷೆಯಂತೆ ಭಿನ್ನಮತ ಭುಗಿಲೆದ್ದಿದೆ. ಎಂಟು ಬಾರಿ ಗೆದ್ದಿದ್ದ ಉಮೇಶ ಕತ್ತಿ, ಮೂರು ಬಾರಿ ಗೆದ್ದಿದ್ದ ಬಾಲಚಂದ್ರ ಜಾರಕಿಹೊಳಿ ಅವರಂಥವರನ್ನು ಬಿಟ್ಟು ಚುನಾವಣೆ ಸೋತಿದ್ದ ಲಕ್ಷ್ಮಣ ಸವದಿಗೆ ಅವಕಾಶ ಕಲ್ಪಿಸಲಾಗಿದೆ. ಸವದಿ ವಿರುದ್ಧ ಗೆದ್ದಿದ್ದ ಮಹೇಶ್ ಕುಮಟಳ್ಳಿ ದೋಸ್ತಿ ಸರಕಾರ ಉರುಳಿಸಿ ಬಂದು ಇಲ್ಲಿ ಮಂಗ ಆಗಿದ್ದಾರೆ. ಆಸ್ತಿ ಮಾರಿಯಾದರೂ ಸರಕಾರ ಬೀಳಿಸುತ್ತೇನೆ ಎಂದು ಉಮೇಶ್ ಕತ್ತಿ ಶಪಥ ಮಾಡಿದ್ದಾರಲ್ಲದೆ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ, ತಿಪ್ಪಾರೆಡ್ಡಿ ಬೆಂಬಲಿಗರ ಸಭೆ ನಡೆಸಿದ್ದಾರೆ. ಯಡಿಯೂರಪ್ಪ ಆಪ್ತ ವಲಯದ ರೇಣುಕಾಚಾರ್ಯ, ಅರವಿಂದ ಲಿಂಬಾವಳಿ, ಗೂಳಿಪಟ್ಟಿ ಶೇಖರ, ಅಂಗಾರ, ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಕಿಡಿ ಕಾರುತ್ತಿದ್ದಾರೆ. ಸಿ.ಪಿ. ಯೋಗೇಶ್ವರ್ ಅವರಂಥವರು ಒಳಗೊಳಗೇ ಹಲ್ಲು ಕಡಿಯುತ್ತಿದ್ದಾರೆ. ದಿನೇ ದಿನೇ ಬಿಜೆಪಿ ಅತೃಪ್ತರ ಸಂಖ್ಯೆ ಹೆಚ್ಚುತ್ತಿದೆ.

ಈ ಮಧ್ಯೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತಂದ ದೋಸ್ತಿ ಸರಕಾರದ ಅನರ್ಹರು ಅಮಿತ್ ಶಾ ಭೇಟಿಗಾಗಿ ದಿಲ್ಲಿಯಲ್ಲಿ ಬಸ್ಕಿ ಹೊಡೆಯುತ್ತಿದ್ದಾರೆ. ಅವರಿಗೆ ಗ್ಲುಕೋಸ್ ಕೊಟ್ಟು, ಕೊಟ್ಟು ಯಡಿಯೂರಪ್ಪ ಕೂಡ ಸುಸ್ತಾಗಿ ಹೋಗಿದ್ದಾರೆ. ಯಾರನ್ನು ಸಮಾಧಾನ ಮಾಡೋದು, ಯಾರನ್ನ ಬಿಡೋದು ಅನ್ನೋದೇ ಅವರಿಗೆ ಗೊತ್ತಾಗುತ್ತಿಲ್ಲ. ಅಮಿತ್ ಶಾ ಮಾತು ಅಲ್ಲಗಳೆದಿದ್ದರ ಪರಿಣಾಮದ ಅರಿವು ಅವರಿಗೀಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ಹಾಳಾದ್ದು ಅಧಿಕಾರದ ಆಸೆ! ಅದರ ಮುಂದೆ ಅಮಿತ್ ಶಾ ಅವರೂ ಇಲ್ಲ. ನರೇಂದ್ರ ಮೋದಿ ಅವರೂ ಇಲ್ಲ. ಹೀಗಾಗಿ ಇದ್ದಷ್ಟು ದಿನ ನಡೆದು ಹೋಗಲಿ ಎನ್ನುವ ತೀರ್ಮಾನಕ್ಕೆ ಅವರು ಬಂದಂತಿದೆ.

ಆದರೆ ವರಿಷ್ಠರ ಲೆಕ್ಕಾಚಾರವೇ ಬೇರೆ ಇದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರಿಂದ, ಅವರು ಪ್ರತಿನಿಧಿಸುವ ಲಿಂಗಾಯತ ಸಮುದಾಯದ ಮತಗಳಿಂದ ಮಾತ್ರ ಬಿಜೆಪಿ ಎನ್ನುವುದು ದೂರ ಸರಿದು ಬಹಳ ಕಾಲವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು, ಹಿಂದುಳಿದ ವರ್ಗದವರು, ಪರಿಶಿಷ್ಟರು ಸೇರಿದಂತೆ ಜಾತಿಬೇಧ ಮರೆತು ಎಲ್ಲರೂ ಮತ ಹಾಕಿದ್ದರಿಂದ ಕರ್ನಾಟಕದಲ್ಲಿ ಬಿಜೆಪಿಗೆ 25 ಸ್ಥಾನಗಳು ಲಭಿಸಿವೆ. ಪ್ರಧಾನಿ ನರೇಂದ್ರ ಮೋದಿ ನೋಡಿ ಬಿಜೆಪಿಗೆ ಮತ ಹಾಕಿದ್ದಾರೆಯೇ ಹೊರತು ಯಡಿಯೂರಪ್ಪ ಅವರ ಮುಖ ನೋಡಿ ಅಲ್ಲ. ಇದು ಯಡಿಯೂರಪ್ಪನವರಿಗೂ ಗೊತ್ತು, ಬಿಜೆಪಿ ವರಿಷ್ಠರಿಗೂ ಗೊತ್ತು, ರಾಜ್ಯ ನಾಯಕರಿಗೂ ಗೊತ್ತು. ಎಲ್ಲಕ್ಕಿಂತ ಮಿಗಿಲಾಗಿ ಕರ್ನಾಟಕದ ಮತದಾರರಿಗೂ ಗೊತ್ತು!

ಹೀಗಾಗಿ ಮತ್ತೆ ಸಿಎಂ ಆಗಬೇಕೆಂಬ ಯಡಿಯೂರಪ್ಪನವರ ಕೊನೇ ಆಸೆಯನ್ನು ನಾಮ್-ಕೇ-ವಾಸ್ಥೆಗೆ ನೆರವೇರಿಸಿರುವ ಬಿಜೆಪಿ ವರಿಷ್ಠರು ಈಗಾಗಲೇ ಕರ್ನಾಟಕದಲ್ಲಿ ಪರ್ಯಾಯ ಶಕ್ತಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಪೋಷಿಸುತ್ತಿದ್ದಾರೆ. ತಮ್ಮ ಪರಮಾಪ್ತ ಅರವಿಂದ ಲಿಂಬಾವಳಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದು ಪಕ್ಷ ಮತ್ತು ಸರಕಾರ ಎರಡನ್ನೂ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಹೆಬ್ಬಯಕೆ ಯಡಿಯೂರಪ್ಪ ಅವರದಾಗಿತ್ತು. ಆದರೆ ಸಂತೋಷ್ ಅವರ ಪರಮಾಪ್ತ, ಸಂಸದ ನಳೀನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವುದು ಯಡಿಯೂರಪ್ಪನವರ ರಾಜಕೀಯ ಸಾಮ್ರಾಜ್ಯ ಕುಸಿಯುತ್ತಿರುವುದರ ಸಂಕೇತ. ವರಿಷ್ಠರ ಮೂಲ ಬಯಕೆಯಂತೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡದೇ ತೀರುತ್ತದೆ ಎಂಬುದಕ್ಕೆ ಬಿಜೆಪಿ ಸರಕಾರ ಮತ್ತದರ ಸುತ್ತ ಈಗ ನಡೆಯುತ್ತಿರುವ ಪ್ರತಿಕೂಲ ಬೆಳವಣಿಗೆಗಳೇ ಸಾಕ್ಷಿ!

ಲಗೋರಿ: ವಯಸ್ಸಿನ ಜತೆ ಬುದ್ಧಿ ಮಾಗಬೇಕೇ ಹೊರತು ಸವೆಯಬಾರದು.

Leave a Reply