ಚೀನಾ ಆರ್ಥಿಕತೆ ಹಿಂದಿಕ್ಕುವ ಮೋದಿಯ ಕನಸು ಮತ್ತು ವಾಸ್ತವ ಸ್ಥಿತಿ…!

ಸೋಮಶೇಖರ್ ಪಿ. ಭದ್ರಾವತಿ

ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಪ್ರಬಲವಾಗಿ ಬೆಳೆಯುತ್ತಿದೆ. ಆಮೂಲಕ ಭಾರತ ಜಾಗತಿಕ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ… ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕಳೆದ ಲೋಕಸಭೆ ಚುನಾವಣೆ ವೇಳೆ ಬಳಸಿದ ಪ್ರಮುಖ ಅಸ್ತ್ರಗಳಲ್ಲಿ ಒಂದು.

ಆರ್ಥಿಕ ಪ್ರಗತಿಯ ಮಾನದಂಡ ಏನು? ಅಂತಾ ಕೇಳಿದರೆ ಒಬ್ಬರು ಜಿಡಿಪಿ ಅಂದ್ರೆ, ಮತ್ತೊಬ್ಬರು ಬಂಡವಾಳ ಹೂಡಿಕೆ ಅಂತಾರೆ. ಅದೇರೀತಿ ಹಣದುಬ್ಬರ, ಷೇರು ಮಾರುಕಟ್ಟೆ, ರುಪಾಯಿ ಮೌಲ್ಯ, ಉದ್ಯೋಗ ಸೃಷ್ಠಿ ಹೀಗೆ ಮಾನದಂಡಗಳ ಪಟ್ಟಿ ಉದ್ದುದ್ದ ಬೆಳೆಯುತ್ತಾ ಹೋಗುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಚೀನಾಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ಭಾರತದ ಆರ್ಥಿಕತೆ ಯಾಕೋ ಮಂಕಾಗುತ್ತಿದೆಯಲ್ಲಾ ಎಂಬ ಅನುಮಾನ ಕಾಡಲಾರಂಭಿಸಿದೆ. ದಿನ ಬೆಳಗಾದರೆ ಪತ್ರಿಕೆ ಮಾಧ್ಯಮಗಳಲ್ಲಿ ಇತ್ತೀಚಿನ ಸುದ್ದಿಗಳತ್ತ ಒಮ್ಮೆ ಗಮನ ಹರಿಸಿ ಆಟೋಮೊಬೈಲ್ ಕ್ಷೇತ್ರ ಕುಸಿಯುತ್ತಿದ್ದು, ಸಾವಿರಾರು ಉದ್ಯೋಗ ಕಡಿತ, ಪಾರ್ಲೆ ಕಂಪನಿ 10 ಸಾವಿರ ಉದ್ಯೋಗ ಕಡಿತ, ಷೇರು ಮಾರುಕಟ್ಟೆ ತಲ್ಲಣ, ರುಪಾಯಿ ಮೌಲ್ಯ ಕುಸಿತ, ಇನ್ನು ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇ.5.7ಕ್ಕೆ ಕುಸಿದಿದೆ.

ಭಾರತ, ಚೀನಾ ಆರ್ಥಿಕತೆಗೆ ತೀವ್ರ ಪೈಪೋಟಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಚೀನಾ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂಬ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಸದ್ಯ ಭಾರತದ ಆರ್ಥಿಕತೆ ಸಾಗುತ್ತಿದೆ. ಭಾರತ ಹಾಗೂ ಚೀನಾ ಆರ್ಥಿಕತೆ ಹೋಲಿಕೆ ವಿಚಾರದಲ್ಲಿ ಅನೇಕ ತಜ್ಞರು ಹಾಗೂ ಮಾಧ್ಯಮಗಳು ಭಾರತದ ಆರ್ಥಿಕತೆಯನ್ನು ಬಹಳ ವರ್ಣರಂಜಿತವಾಗಿ ಬಿಂಬಿಸಿದ್ದವು. ಆದರೆ ವಾಸ್ತವಿಕವಾಗಿ ನೋಡುವುದಾದರೆ ಚೀನಾದ ವಾರ್ಷಿಕ ಒಟ್ಟು ಆರ್ಥಿಕತೆ 13 ಲಕ್ಷ ಕೋಟಿಯಾದರೆ ಭಾರತದ್ದು, 2.6 ಲಕ್ಷ ಕೋಟಿ. ಅಲ್ಲಿಗೆ ಭಾರತದ ಆರ್ಥಿಕತೆಗಿಂತ ಚೀನಾ ಆರ್ಥಿಕತೆ ಐದು ಪಟ್ಟು ಹೆಚ್ಚಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತನ್ನ ಎರಡನೇ ಅವಧಿಯಲ್ಲಿ ಸಾಕಷ್ಟು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗ ಸೃಷ್ಟಿ ದೊಡ್ಡ ಸವಾಲಾಗಿರುವುದರ ಜತೆಗೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ವಿದೇಶಿ ಬಂಡವಾಳ ಹೂಡಿಕೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಟ್ಟ ಸಾಲ ಅಥವಾ ವಸೂಲಾಗದ ಸಾಲದ ಪ್ರಮಾಣ ಹೆಚ್ಚಳದ ಸಮಸ್ಯೆ ಭಾರತದ ಆರ್ಥಿಕ ಪ್ರಗತಿಗೆ ಮೂಗುದಾರವಾಗಿ ಪರಿಣಮಿಸಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲು ಮೇಕ್ ಇನ್ ಇಂಡಿಯಾ, ಉದ್ಯೋಗ ಸೃಷ್ಟಿಗೆ ಪರ್ಯಾಯವಾಗಿ ಯುವಕರು ವ್ಯಾಪಾರ ಆರಂಭಿಸಲು ಸಾಲ ಸೌಲಭ್ಯಕ್ಕಾಗಿ ಮುದ್ರಾ ಯೋಜನೆ, ಹೊಸ ಉದ್ಯಮಗಳಿಗೆ ಪ್ರೋತ್ಸಾಹಿಸಲು ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಹೀಗೆ ಸಾಲು ಸಾಲು ಯೋಜನೆಗಳನ್ನು ತಮ್ಮ ಆಡಳಿತದ ಮೊದಲ ಅವಧಿಯಲ್ಲಿ ಜಾರಿಗೆ ತಂದರು. ಆದರೆ ಈ ಯೋಜನೆಗಳಿಂದ ನಿರೀಕ್ಷಿತ ಫಲಿತಾಂಶ ಸಿಕ್ಕಿದೆಯೇ?

ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಬಹುಮತದೊಂದಿಗೆ 2.0 ಆಗಿ ಅಪ್ ಡೇಟ್ ಆಗಿ ಮತ್ತೆ ಅಧಿಕಾರ ನಡೆಸುತ್ತಿದೆ. ಎರಡನೇ ಅವಧಿ ಆರಂಭವಾಗಿ ಮೂರು ತಿಂಗಳಾದರೂ ಕಳೆದ ಬಾರಿ ತಂದ ಯೋಜನೆಗಳ ಪ್ರಗತಿ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

ಈ ಮಧ್ಯೆ ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿರುವುದು ಅಪಾಯದ ಸೂಚನೆ ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಕೇಂದ್ರ ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ. ಭಾರತದ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮಂಡಿಸಿರುವ ಸಂಶೋಧನಾ ವರದಿಯಲ್ಲಿ 2011ರ ನಂತರ ಭಾರತದ ಜಿಡಿಪಿ ಬೆಳವಣಿಗೆಯನ್ನು ವಾಸ್ತವಕ್ಕಿಂತ ಶೇ.2.5ರಷ್ಟು ಹೆಚ್ಚಾಗಿ ಬಿಂಬಿಸಲಾಗಿದೆ ಎಂದು ಹೇಳಿದೆ. ಅಂದರೆ 2011ರ ನಂತರ ಭಾರತದ ಜಿಡಿಪಿ ಶೇ.3.5ರಿಂದ 5.5ರಷ್ಟು ಬೆಳವಣಿಗೆ ಆಗಿದ್ದು ಅದನ್ನು ಶೇ.6.9 ಎಂದು ಬಿಂಬಿಸಲಾಗಿದೆ.

ಜೊತೆಗೆ 2019-20 ಯ ಮೊದಲ ತ್ರೈಮಾಸಿಕದಲ್ಲಿ ಜಿಎಸ್ ಟಿ ಆದಾಯ ಅಂದುಕೊಂಡಿದ್ದ 18% ಬದಲಾಗಿ ಕೇವಲ 1.4% ರಷ್ಟು ಮಾತ್ರ ಏರಿಕೆಯಾಗಿದೆ. ಹೀಗಾದಾಗ ಸರ್ಕಾರದ ಹತ್ತಿರವೂ ಸಾರ್ವಜನಿಕ ಬಂಡವಾಳ ಹೂಡಲು ಹಣಕಾಸಿನ ತೊಂದರೆಯಾಗುತ್ತದೆ. ಹಾಗೂ ಖಾಸಗಿ ಬಂಡವಾಳದ ಹರಿವೂ ಭಾರೀ ಪ್ರಮಾಣದಲ್ಲಿ ಕುಂಠಿತವಾಗಿದೆ.

ಈ ಎಲ್ಲ ಅಂಶಗಳು ಭಾರತದ ಆರ್ಥಿಕತೆ ಮೋಲ್ನೋಟಕ್ಕೆ ಬಿಂಬಿತವಾದಷ್ಟು ವರ್ಣರಂಜಿತವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ರಾಹುಲ್ ಬಜಾಜರ “ಬೇಡಿಕೆ ಕುಸಿದಿದೆ, ಬಂಡವಾಳವೂ ಹರಿದುಬರುತ್ತಿಲ್ಲ, ಹೀಗಿರುವಾಗ ಅಭಿವೃದ್ದಿಯೇನು ಸ್ವರ್ಗದಿಂದ ಉದುರುವುದೇ?” ಎಂಬ ಮಾತುಗಳು ಹಾಗೂ ಬ್ರಿಟಾನಿಯಾ ಎಂಡಿ ವರುಣ್ ಬೆರಿ ಹೇಳಿದ ” ಈಗ ಜನ ಐದು ರೂಪಾಯಿಯ ಬಿಸ್ಕತ್ ಖರೀದಿಸಲೂ ಎರಡು ಬಾರಿ ಯೋಚಿಸುತ್ತಿದ್ದಾರೆ” ಎಂಬಂತ ಮಾತುಗಳೂ ದೇಶದ ಆರ್ಥಿಕ ಸಂಕಷ್ಟದ ಸ್ಥಿತಿಯನ್ನು ಬಿಂಬಿಸುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿ ಚೀನಾ ಆರ್ಥಿಕತೆಯನ್ನು ಹಿಂದಿಕ್ಕುತ್ತೇವೆ ಮತ್ತು 2024 ಕ್ಕೆ ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುತ್ತೇವೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗುವುದು ಸದ್ಯದ ಸ್ಥಿತಿಯಲ್ಲಿ ಅಸಾಧ್ಯವೆಂದೇ ತೋರುತ್ತಿದೆ.

Leave a Reply