ದೇವೇಗೌಡರ ಕುಟುಂಬ ವ್ಯಾಮೋಹವೇ ಸರ್ಕಾರ ಪತನಕ್ಕೆ ಕಾರಣ: ಸಿದ್ದರಾಮಯ್ಯ ಗುಡುಗು

ಡಿಜಿಟಲ್ ಕನ್ನಡ ಟೀಮ್:

‘ನನ್ನ ವಿರುದ್ಧ ದೇವೇಗೌಡರು ಮಾಡಿರುವ ಎಲ್ಲ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿದೆ. ಅವರ ತಪ್ಪನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆ ಮೂಲಕ ಜನರ ಸಿಂಪತಿ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ದೇವೇಗೌಡರ ಕುಟುಂಬ ವ್ಯಾಮೋಹವೇ ಕಾರಣ…’ ಇದು ಮಾಜಿ ಪ್ರಧಾನಿ ದೇವೇಗೌಡರ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ ಪರಿ.

ಶುಕ್ರವಾರ ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ದೇವೇಗೌಡರು ಮಾಡಿದ ಎಲ್ಲ ಆರೋಪಗಳಿಗೂ ಸ್ಪಷ್ಟನೆ ನೀಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಇವತ್ತು ದೇಶದಲ್ಲಿ ಕೋಮುವಾದಿ ಪಕ್ಷ ಅಧಿಕಾರದಲ್ಲಿದೆ. ಅವರು ಅಧಿಕಾರಕ್ಕೆ ಬಂದಮೇಲೆ ಕಳೆದ ಐದು ವರ್ಷಗಳಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಸರ್ವಾಧಿಕಾರಿ ಪ್ರವೃತ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇದರ ವಿರುದ್ಧ ಜಾತ್ಯಾತೀತ ಶಕ್ತಿಗಳು ಹೋರಾಟ ಮಾಡಬೇಕು. ಇಂತಹ ಸಂದರ್ಭದಲ್ಲಿ ಎಲ್ಲ ಜಾತ್ಯಾತೀತ ಪಕ್ಷಗಳು ಒಂದಾಗಿ ಪ್ರಜಾಪ್ರಭುತ್ವ ರಕ್ಷಿಸುವ ಅಗತ್ಯ ಇತ್ತು. ನಾನು ಅದರಲ್ಲಿ ನಂಬಿಕೆ ಇಟ್ಟು ಅದೇ ರೀತಿ ನಡೆದುಕೊಂಡಿದ್ದೇನೆ.

ಶ್ರೀಮಾನ್ ದೇವೇಗೌಡರು ನನ್ನ ಮೇಲೆ ಗುರುತರ ಆರೋಪ ಮಾಡಿದ್ದು, ಅದು ಆಧಾರ ರಹಿತ. ರಾಜಕೀಯ ದುರುದ್ದೇಶದ ಆರೋಪ ಮಾಡಿದ್ದಾರೆ. ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ. ಕುಮಾರಸ್ವಾಮಿ ಅವರನ್ನು ಸಿಎಂ ಆಗಿ ನೋಡಲು ಇಷ್ಟವಿಲ್ಲ ಎಂದಿದ್ದಾರೆ. ನಮ್ಮ ನಡುವೆ ದ್ವೇಷ ಇದೇ ಅಂತಾ ಅವರೇ ಹೇಳಿದ್ದಾರೆ. ನನ್ನಲ್ಲಿ ಆ ಭಾವನೆ ಇಲ್ಲ.

ಜೆಡಿಎಸ್ ಜತೆ ಸರ್ಕಾರ ರಚನೆ ಮಾಡಲು ಹೈಕಮಾಂಡ್ ತೀರ್ಮಾನಿಸಿದಾಗ ನಾನು ಮರು ಮಾತನಾಡದೆ ಆ ತೀರ್ಮಾನ ಒಪ್ಪಿಕೊಂಡಿದ್ದೇನೆ. 14 ತಿಂಗಳು ಸಂಪೂರ್ಣ ಬೆಂಬಲ ನೀಡಿದ್ದೇನೆ. ಅವರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮೈತ್ರಿ ಸರ್ಕಾರ ಬೀಳಲು ಸಿಎಂ ಕುಮಾರಸ್ವಾಮಿ, ರೇವಣ್ಣ, ದೇವೇಗೌಡರೇ ಕಾರಣ ಅಂತಾ ಎಲ್ಲ ಶಾಸಕರು ಹೇಳುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಹೋಗದೆ ಇರುವುದು ಸರ್ಕಾರ ಬೀಳಲು ಕಾರಣ. ಇದನ್ನು ನಾನು ಹೇಳುತ್ತಿಲ್ಲ. ಶಾಸಕರು ಹಾಗೂ ಸಚಿವರೇ ಹೇಳುತ್ತಿದ್ದಾರೆ.

ನಾನು 5 ವರ್ಷ ಪೂರ್ಣ ಅವಧಿಯಲ್ಲಿ ಅಧಿಕಾರ ಮಾಡಿದ್ದೇನೆ. ಆಗ ನನ್ನ ವಿರುದ್ಧ ಒಬ್ಬೇ ಒಬ್ಬ ಶಾಸಕ ಧ್ವನಿ ಎತ್ತಲಿಲ್ಲ. ಇವರ ತಪ್ಪು ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷನಾಗಿ ನೇಮಕ ಮಾಡಿದ್ದರು. ನಾವೂ ಸುಮಾರು ಐದು ಬಾರಿ ಸಮನ್ವಯ ಸಭೆ ಮಾಡಿದೆವು. ಸಭೆಯಲ್ಲಿ ನಾವು ಹೇಳಿದ್ದನ್ನು ಕುಮಾರಸ್ವಾಮಿ ಒಂದೂ ಕೆಲಸ ಮಾಡಲಿಲ್ಲ. ಅದರ ಬಗ್ಗೆ ನಾವು ಚಕಾರ ಎತ್ತಲಿಲ್ಲ. ಮೈತ್ರಿ ಸರ್ಕಾರ ಉಳಿಸಲು ನಮ್ಮ ಪಕ್ಷದಿಂದ ಕೊನೆ ಕ್ಷಣದವರೆಗೂ ಎಲ್ಲ ಪ್ರಯತ್ನ ಮಾಡಿದ್ದೇವೆ.

ನನ್ನ ಮೇಲೆ ಸುಳ್ಳು ಆರೋಪ ಮಾಡಿ ದೇವೇಗೌಡರು ಯಾರನ್ನೂ ಖುಷಿ ಪಡಿಸಲು ಹೊರಟಿದ್ದಾರೊ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕರಾಗಲು ದೇಶದಲ್ಲಿ, ಪ್ರಪಂಚದಲ್ಲಿ ಯಾರಾದರೂ ಸರ್ಕಾರ ಬೀಳಿಸಿದ್ದಾರ. ನಾನಂತೂ ನೋಡಿಲ್ಲ. ದೇವೇಗೌಡರು ಎಲ್ಲಿ ನೋಡಿದ್ದಾರೊ ಗೊತ್ತಿಲ್ಲ.

ನಾನು ಎಂದಿಗೂ ಅಧಿಕಾರದ ಹಿಂದೆ ಹೋಗಿಲ್ಲ. ಸಮ್ಮಿಶ್ರ ಸರ್ಕಾರ ಬೆಂಬಲಿಸುವಂತಹ ನೀಚ ರಾಜಕಾರಣ ಮಾಡಲ್ಲ. ಅದು ದೇವೇಗೌಡರು ಹಾಗೂ ಅವರ ಮಕ್ಕಳ ಹುಟ್ಟುಗುಣ. ದೇವೇಗೌಡರು ಬೇರೆ ಸರ್ಕಾರ ಬೀಳಿಸುವುದರಲ್ಲಿ ನಿಸ್ಸೀಮರು. ಧರ್ಮಸಿಂಗ್ ಸರ್ಕಾರ ಬೀಳಿಸಿದ್ದು ಯಾರು? ಬೊಮ್ಮಾಯಿ ಸರ್ಕಾರ ಬೀಳಿಸಿದ್ದು ಯಾರು?

ಇವತ್ತು ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ದೇವೇಗೌಡ, ಕುಮಾರಸ್ವಾಮಿ ಕಾರಣ. 2006ರಲ್ಲಿ ದೇವೇಗೌಡರ ಅನುಮತಿ ಇಲ್ಲದೆ ಯಡಿಯೂರಪ್ಪ ಜತೆ ಸರ್ಕಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. 20 ತಿಂಗಳ ಒಪ್ಪಂದ ಮಾಡಿಕೊಂಡು ಅಧಿಕಾರ ಮಾಡಿ, ನಂತರ ಬಿಜೆಪಿಗೆ ಅಧಿಕಾರ ಕೊಟ್ಟಿದ್ದು ಯಾರು? ವಚನಭ್ರಷ್ಟ ಆಗಿದ್ದು ಯಾರು? ಬಿಜೆಪಿ ರಾಜ್ಯದಲ್ಲಿ ಬೇರೂರಬೇಕಾದರೆ ದೇವೇಗೌಡ ಕುಟುಂಬ ಕಾರಣ. ಆದರೆ ಅವರು ಯಡಿಯೂರಪ್ಪ ಸಿಎಂ ಆಗಲು ಸಿದ್ದರಾಮಯ್ಯ ಬಯಸಿದ್ದರು ಅಂತಾ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಾರೆ. ಇದು ಅವರಿಗೇ ನನ್ನ ಮೇಲೆ ಎಷ್ಟು ಸೇಡು ಇದೇ ಎಂಬುದು ಗೊತ್ತಾಗುತ್ತದೆ.

ದೇವೇಗೌಡರು ತಮಗೆ ಬೆಂಬಲ ಕೊಟ್ಟ ಪಕ್ಷಕ್ಕೆ ದ್ರೋಹ ಬಗೆದಿರುವಂತಹವರು. ಪ್ರಧಾನಿ ಮಾಡಿದ ಸೀತಾರಾಮ್ ಕೇಸರಿ ವಿರುದ್ಧವೇ ಕ್ರಿಮಿನಲ್ ಕೇಸ್ ಹಾಕಲು ಹೋದರು. ಅದಕ್ಕೆ ಅವರು ಬೆಂಬಲ ವಾಪಸ್ ಪಡೆದು ಪ್ರಧಾನಿ ಹುದ್ದೆ ಕಳೆದುಕೊಳ್ಳಬೇಕಾಯಿತು. ಇಲ್ಲದಿದ್ದರೆ ಇನ್ನು ಸ್ವಲ್ಪದಿನ ಪ್ರಧಾನಿಯಾಗಿ ಮುಂದುವರಿಯಬಹುದಿತ್ತು.

ನನ್ನನ್ನು ಸಿಎಂ ಮಾಡಲಿಲ್ಲ ಎಂದು ಕುಮಾರಸ್ವಾಮಿ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ನಾನು ಎಂದಿಗೂ ಅದನ್ನು ಹೇಳಿಕೊಂಡು ತಿರುಗುತ್ತಿಲ್ಲ. ಇತಿಹಾಸವನ್ನು ಇವರು ಮರೆತಿದ್ದಾರೆ. ಜನ ಮರೆತಿಲ್ಲ. ಲೋಕಸಭೆ ಚುನಾವಣೆಯಲ್ಲಿ ನಾವು ಫ್ರೆಂಡ್ಲಿ ಫೈಟ್ ಮಾಡೋಣ ಅಂತಾ ಹೇಳಿದ್ದು ನಿಜ. ಹಳೇ ಮೈಸೂರು ಭಾಗದಲ್ಲಿ ಸ್ಥಳೀಯ ಮಟ್ಟದಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಕಿತ್ತಾಡಿದ್ದಾರೆ. ಹೀಗಾಗಿ ಮೈತ್ರಿ ಮಾಡಿಕೊಂಡರೆ ನಮ್ಮ ವೋಟು ಅವರಿಗೆ ಬೀಳಲ್ಲ, ಅವರ ವೋಟು ನಮಗೆ ಬೀಳಲ್ಲ ಎಂದು ಹೇಳಿದ್ದೆ. ಇನ್ನು ಹಲವು ಕಡೆಗಳಲ್ಲಿ ನಾನು ಹಾಗೂ ದೇವೇಗೌಡರು ಜಂಟಿಯಾಗಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದೇವೆ. ಒಟ್ಟಿಗೆ ವಿಮಾನದಲ್ಲೂ ತೆರಳಿದ್ದೇವೆ.

ಅವರ ಸೇಲಿಗೆ ನಾನೇ ಕಾರಣ ಅಂತಾ ಹೇಳ್ತಾರಲ್ಲಾ? ನಮ್ಮ ಪಕ್ಷ ಅಭ್ಯರ್ಥಿಗಳು ಸೋಲಿಗೆ ಕಾರಣ ಯಾರು? ನಾನು ಹಾಸನಕ್ಕೆ ಹೋಗಿದ್ದೆ ಹಾಗಿದ್ದರೆ ಅಲ್ಲಿ ಅವರ ಮೊಮ್ಮಗ ಹೇಗೆ ಗೆದ್ದರು? ಅಲ್ಲಿ ನಮ್ಮ ಪಕ್ಷದವರು ಕೆಲಸ ಮಾಡಿಲ್ವಾ? ಕೇವಲ ಮಂಡ್ಯ, ತುಮಕೂರಲ್ಲಿ ಮಾತ್ರ ಯಾಕೆ ಹೇಳುತ್ತಾರೆ. ನಾನು ನೇರವಾಗಿ ರಾಜಕಾರಣ ಮಾಡುತ್ತಾ ಬಂದಿದ್ದು. ಎಂದಿಗೂ ಹಿಂದೆಯಿಂದ ಪಿತೂರಿ ರಾಜಕಾರಣ ಮಾಡಿಲ್ಲ. ಮಂಡ್ಯದ ಸೋಲಿಗೆ ಕಾರಣ ಏನು ಅಂತಾ ಕೇಳಿದರೆ ಜನ ಅವರ ಕುಟುಂಬ ರಾಜಕಾರಣದಿಂದ ಬೇಸತ್ತು ಸೋಲಿಸಿದರು ಎಂದು ಹೇಳುತ್ತಿದ್ದಾರೆ. ದೇವೇಗೌಡರು ಮೊದಲಿನಿಂದಲೂ ನನ್ನ ವಿರುದ್ಧ ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನನ್ನು ಪಕ್ಷದಿಂದ ಹೊರಹಾಕಿದಾಗ ನಾನು ಅವರನ್ನು ಟೀಕಿಸಿದೆ ನಿಜ. ರಾಜಕೀಯವಾಗಿ ದೇವೇಗೌಡರ ವಿರೋಧಿಸಿದರೆ ಅದು ಜಾತಿ ವೀರೊಧವೆ? ಅಥವಾ ನಾನು ಅವರನ್ನು ಟೀಕೆ ಮಾಡಲೇಬಾರದಾ? ನಾನು ಲಿಂಗಾಯತ ವಿರೋಧಿ, ಒಕ್ಕಲಿಗ ವಿರೋಧಿ ಅಂತಾ ಆರೋಪ ಮಾಡುತ್ತಾರೆ. ನಾನು ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಟ್ಟವನು. ನನ್ನ ಕಾರ್ಯದ ಬಗ್ಗೆ ಜನ ಸರ್ಟಿಫಿಕೇಟ್ ಕೊಡ್ತಾರೆ. ದೇವೇಗೌಡರು ಅಲ್ಲ.

ನನ್ನಿಂದ ಕಾಂಗ್ರೇಸ್ 79 ಸ್ಥಾನಕ್ಕೆ ಕುಸಿತು ಅಂತಾರಲ್ಲ, ಅವರ ಮಗ ಸಿಎಂ ಆಗಿದ್ದಾಗ ಉತ್ತಮ ಕೆಲಸ ಮಾಡಿದ್ರು ಆಂತಾ ಹೇಳ್ತಾರಲ್ಲಾ ಅವರು ಯಾಕೆ 58ರಿಂದ 28ಕ್ಕೆ ಬಿದ್ರು? ದೇವೇಗೌಡರು ಬೇರೆಯವರನ್ನು ಬೆಳೆಸುವುದಿಲ್ಲ. ಬೇರೆಯವರಿರಲಿ ಅವರ ಜಾತಿಯವರನ್ನೇ ದೇವೇಗೌಡರು ಬೆಳೆಸುವುದಿಲ್ಲ. ಅವರು ತಮ್ಮ ಕುಟುಂಬವನ್ನು ಮಾತ್ರ ಬೆಳೆಸುತ್ತಾರೆ.

ಹೀಗಾಗಿ ದೇವೇಗೌಡರ ಎಲ್ಲ ಆರೋಪ ಆಧಾರ ರಹಿತ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದೆ. ರಾಜ್ಯದ ಜನ ನನ್ನ ಇತಿಹಾಸ ಹಾಗೂ ಅವರ ಇತಿಹಾಸವನ್ನು ನೋಡಿದ್ದಾರೆ. ಇಬ್ಬರ ನಡವಳಿಕೆಯನ್ನು ನೋಡಿದ್ದಾರೆ. ಹೀಗಾಗಿ ಅವರು ಅರ್ಥಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.’

Leave a Reply