ಅಮೆರಿಕ-ಚೀನಾ ವ್ಯಾಪಾರ ಸಮರ, ಭಾರತಕ್ಕೆ ವರ!

ಡಿಜಿಟಲ್ ಕನ್ನಡ ಟೀಮ್:

ಇಳಿಮುಖವಾಗಿರುವ ಭಾರತೀಯ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಶುಕ್ರವಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಮಧ್ಯೆ ಮೋದಿ ಸರ್ಕಾರಕ್ಕೆ ವರವಾಗಿ ಪರಿಣಮಿಸಿರೋದು ತೈಲ!

ಹೌದು, ಶುಕ್ರವಾರವೇ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಕುಸಿದಿರೋದು ಮೋದಿ ಸರ್ಕಾರಕ್ಕೆ ಆಪದ್ಭಾಂದವನಾಗಿ ಪರಿಣಮಿಸಿದೆ. ಹೇಗೆ ಅಂದರೆ…

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಮೆರಿಕದ ಕಚ್ಛಾತೈಲ ಬೆಲೆ ಶೇ.3ರಷ್ಟು ಕುಸಿದಿದ್ದು, ಪ್ರತಿ ಬ್ಯಾರೆಲ್ ಕಚ್ಛಾ ತೈಲ 53.58 ಅಮೆರಿಕನ್ ಡಾಲರ್ ಗೆ ಇಳಿದಿದೆ. ಇದಕ್ಕೆ ಪ್ರಮುಖ ಕಾರಣ ಅಮೆರಿಕ ಹಾಗೂ ಚೀನಾ ನಡುವಣ ವ್ಯಾಪಾರ ಸಮರ. ಚೀನಾ ಅಮೆರಿಕದ ಮೇಲೆ ಸುಂಕ ಹೆಚ್ಚಿಸಿದ ಪರಿಣಾಮವಾಗಿ ಜಾಗತಿಕ ಬೇಡಿಕೆ ಕಾರ್ಮೋಡ ಕವಿದಂತಾಗಿದೆ. ಹೀಗಾಗಿ ಅಮೆರಿಕ ಕಚ್ಛಾ ತೈಲದ ಬೆಲೆ ಕುಸಿದಿದೆ. ಇದರಿಂದ ಜಾಗತಿಕ ತೈಲ ಮಾರುಕಟ್ಟೆ ಬೆಲೆ ನಿಗದಿ ಮಾಡುವ ಬ್ರೆಂಟ್ ತೈಲ ಬೆಲೆಗೆ ಕತ್ತರಿ ಹಾಕಿದೆ.

ಪರಿಣಾಮ, ಭಾರತಕ್ಕೆ ಶೇ.2ರಷ್ಟು ಅಂದರೆ 1.19 ಡಾಲರ್ ಕಡಿಮೆ ದರದಲ್ಲಿ (ಪ್ರತಿ ಬ್ಯಾರೆಲ್ ಗೆ 58.75 ಡಾಲರ್) ಸಿಗುತ್ತಿದೆ. ಭಾರತದ ಪಾಲಿಗೆ ಸಕಾಲದಲ್ಲಿ ತೈಲ ಬೆಲೆ ಇಳಿಕೆಯಾಗಿದೆ. ಇದರಿಂದ ಭಾರತದ ಆರ್ಥಿಕತೆಗೆ ಹೇಗೆ ಉತ್ತೇಜನ ಸಿಗುತ್ತೆ ಎಂಬುದನ್ನು ನೋಡುವುದಾದರೆ, ಕಡಿಮೆ ದರದ ತೈಲದಿಂದ ಸಣ್ಣ ಆರ್ಥಿಕತೆಗಳು ಚೇತರಿಕೆ ಕಾಣುತ್ತವೆ. ಇದು ಸಹಜವಾಗಿ ಹಣದುಬ್ಬರವನ್ನು ನಿಯಂತ್ರಿಸುತ್ತದೆ.

ಕಡಿಮೆ ಬೆಲೆಗೆ ತೈಲ ಸಿಗುವುದರಿಂದ ಬೇಡಿಕೆ ಹೆಚ್ಚಾಗಲು ಸಹಕಾರಿಯಾಗಿ, ಡೀಸೆಲ್ ಚಾಲಿತ ಯಂತ್ರೋಪಕರಣ ಬಳಸುವ ರೈತರಿಗೆ ನೆರವಾಗಲಿದೆ. ಇನ್ ಸಾಮಾಜಿಕ ಹಾಗೂ ಮೂಲ ಸೌಕರ್ಯ ಕ್ಷೇತ್ರಗಳ ಮೇಲಿನ ವೆಚ್ಚಕೂಡ ಕಡಿಮೆ ಆಗುತ್ತದೆ. ಇದು ಅಂತಿಮವಾಗಿ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಮ್ಯಾಕ್ವೈರಿ ಕ್ಯಾಪಿಟಲ್ ವರದಿ ಪ್ರಕಾರ ಪ್ರತಿ ಬ್ಯಾರೆಲ್ ಗೆ 10 ಡಾಲರ್ ಬೆಲೆ ಕಡಿಮೆ ಆದಷ್ಟು, ಆಮದು ಬಿಲ್ ಹಾಗೂ ಸಿಎಡಿ (current account deficit) ನಲ್ಲಿ 9-10 ಬಿಲಿಯನ್ ಡಾಲರ್ ನಷ್ಟು ಉಳಿತಾಯವಾಗುತ್ತದೆ. ಇದು ಶೇ.0.43ರಷ್ಟು ಜಿಡಿಪಿ ಆಗಿದೆ.

2017ರಿಂದ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡ ಪರಿಣಾಮ 2018ರ ಮೇನಲ್ಲಿ ನಡೆದ ಕರ್ನಾಟಕ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಪ್ರತಿ ಬ್ಯಾರೆಲ್ ಗೆ 80 ಡಾಲರ್ ವರೆಗೂ ಏರಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎರಡು ಬಾರಿ ಸುಂಕ ಕಡಿಮೆ ಮಾಡುವ ಒತ್ತಡಕ್ಕೆ ಬಂದಿತ್ತು. ಆದರೆ ಕಳೆದ ಒಂದು ವರ್ಷದಲ್ಲಿ ಮತ್ತೆ ತೈಲ ಬೆಲೆ ಕುಸಿದಿದ್ದು, ಮೇನಲ್ಲಿ 70 ಡಾಲರ್ ಹಾಗೂ ಈಗ 60ಕ್ಕೆ ಇಳಿದಿತ್ತು. ನಿನ್ನೆಯ ಕುಸಿತದಿಂದ 58.78 ಡಾಲರ್ ಗೆ ಬಂದು ನಿಂತಿದೆ.

ಈಗ ತೈಲ ಬೆಲೆ ಕುಸಿತ ಮೋದಿ ಸರ್ಕಾರಕ್ಕೆ ಹೇಗೆ ಪ್ರಯೋಜನವಾಗುತ್ತಿದೆ ಎಂಬುದನ್ನು ನೋಡೋಣ. ಮೋದಿ 2014ರಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದಾಗ ಭಾರತ ಪ್ರತಿ ಬ್ಯಾರೆಲ್ ಕಚ್ಛಾ ತೈಲಕ್ಕೆ 108 ಅಮೆರಿಕನ್ ಡಾಲರ್ ನೀಡುತ್ತಿತ್ತು. ಮೂರು ವರ್ಷವಾಗುವಷ್ಟರಲ್ಲಿ ತೈಲ ಬೆಲೆ ಅರ್ಧದಷ್ಟು ಕುಸಿದು ಪ್ರತಿ ಬ್ಯಾರೆಲ್ ಗೆ 48 ಡಾಲರ್ ಆಗಿತ್ತು. ಈ ಹಂತದಲ್ಲಿ ಇಂಧನ ತೆರಿಗೆ ಹೆಚ್ಚಿಸಿದ ಮೋದಿ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಸಂಪನ್ಮೂಲ ಕ್ರೂಢೀಕರಣ ಮಾಡಿಕೊಳ್ಳಲು ಅವಕಾಶ ಸಿಕ್ಕಿತು.

ಇದೇ ಪರಿಸ್ಥಿತಿ ಈಗ ಮತ್ತೆ ಮರುಕಳಿಸುತ್ತಿದೆ. ಆರ್ಥಿಕತೆ ಇಳಿಮುಖವಾಗಿರುವಾಗ ತೈಲ ಬೆಲೆ ಇಳಿಕೆ ಸರ್ಕಾರಕ್ಕೆ ಹೊಸ ಚೈತನ್ಯ ತುಂಬುತ್ತಿದೆ. ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಇಂಧನ ತೆರಿಗೆಯನ್ನು 2 ರೂ. ಹೆಚ್ಚಿಸಿತು. ಹೀಗಾಗಿ ಸುಮಾರು 20 ಸಾವಿರ ಕೋಟಿ ಸರ್ಕಾರಕ್ಕೆ ಆದಾಯ ಹೆಚ್ಚಿತು. ಜಾಗತಿಕ ತೈಲ ಬೆಲೆ ಕುಸಿತ ಮುಂದುವರಿದರೆ ಸರ್ಕಾರ ಇಂಧನ ತೆರಿಗೆ ಹೆಚ್ಚಿಸಿ ಗ್ರಾಹಕರಿಗೆ ಈಗಿನ ಬೆಲೆಗೆ ನೀಡಿ ಜಾಗತಿಕ ಮಟ್ಟದ ಕುಸಿತದ ಲಾಭವನ್ನು ತಾನು ಪಡೆಯಲಿದೆ.

Leave a Reply