ಬಿಜೆಪಿಗಿಂತ ಸಿದ್ದುನೇ ನಮ್ಮ ಮೊದಲ ಶತ್ರು! ವರಸೆ ಬದಲಿಸಿದ ಹೆಚ್ ಡಿಕೆ

ಡಿಜಿಟಲ್ ಕನ್ನಡ ಟೀಮ್:

ಸಿದ್ದರಾಮಯ್ಯ ಅವರ ಟೀಕೆಗೆ ಸಮಯ ಬಂದಾಗ ಉತ್ತರ ನೀಡುತ್ತೇನೆ ಎಂದು ನಿನ್ನೆಯಷ್ಟೇ ಹೇಳಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಇಂದು ತಮ್ಮ ವರಸೆ ಬದಲಿಸಿದ್ದಾರೆ. ನಮಗೆ ರಾಜಕೀಯವಾಗಿ ಬಿಜೆಪಿಗಿಂತ ಸಿದ್ದರಾಮಯ್ಯ ಅವರೇ ನಮ್ಮ ಮೊದಲ ಶತ್ರು ಎಂದು ಕಿಡಿಕಾರಿದ್ದಾರೆ.

ದೇವೇಗೌಡರ ಆರೋಪಕ್ಕೆ ತಾವು ಕಾರಣ ಎಂಬ ಆರೋಪಕ್ಕೆ ಮೊನ್ನೆ ಉತ್ತರ ನೀಡಿದ್ದ ಸಿದ್ದರಾಮಯ್ಯ, ‘ಸರ್ಕಾರ ಪತನಕ್ಕೆ ದೇವೇಗೌಡರ ಕುಟುಂಬ ಕಾರಣ. ಅವರು ಬೇರೆಯವರನ್ನು ಬೆಳೆಸುವುದಿಲ್ಲ. ನೀಚ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈ ಟೀಕೆ ಬೆನ್ನಲ್ಲೇ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, ‘ಸಿದ್ದರಾಮಯ್ಯ ಟೀಕೆಗೆ ಉತ್ತರ ನೀಡಲು ಇದು ಸಕಾಲವಲ್ಲ. ಸಮಯ ಬಂದಾಗ ಉತ್ತರಿಸುತ್ತೇನೆ.’ ಎಂದು ಸಿದ್ದರಾಮಯ್ಯ ವರ್ಸಸ್ ದೇವೇಗೌಡರ ಮಾತಿನ ಸಮರಕ್ಕೆ ವಿರಾಮ ಹಾಕುವ ಪ್ರಯತ್ನ ಮಾಡಿದ್ದರು.

ಆದರೆ ಈಗ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿರುವ ಕುಮಾರಸ್ವಾಮಿ ಹೇಳಿದ್ದಿಷ್ಟು…

ನಾನು ಸಿಎಂ ಆಗಿದ್ದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ತಮ್ಮ ಆಪ್ತ ಶಾಸಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡಿಕೊಂಡು ಬಂದರು. ಶಾಸಕರ ರಾಜೀನಾಮೆಗೆ ಸಿದ್ದರಾಮಯ್ಯನವರೇ ನೇರ ಕಾರಣ. ಮೈತ್ರಿ ಸರ್ಕಾರ ಮುಂದುವರೆಯಬೇಕೆಂಬುದು ಕಾಂಗ್ರೆಸ್‍ನ ಹೈಕಮಾಂಡ್‍ತೀರ್ಮಾನವಾಗಿತ್ತು. ಆದರೆ ಸಿದ್ದರಾಮಯ್ಯ ಅವರಿಗೆ ಇಷ್ಟವಿರಲಿಲ್ಲ. ಸಿಎಂ ಆಗಿ ನಾನು ಕೈಗೊಂಡ ಕೆಲವು ತೀರ್ಮಾನಗಳನ್ನು ಸಹಿಸಿಕೊಳ್ಳದೆ ಸರ್ಕಾರದ ಪತನಕ್ಕೆ ನಿರಂತರ ಪ್ರಯತ್ನ ಮಾಡಿದ್ದರು.

ಫೋನ್ ಟಾಪಿಂಗ್‍ಪ್ರಕರಣ ಸಿಬಿಐ ತನಿಖೆಗೆ ವಹಿಸಿರುವುದು ಕೂಡ ಸಿದ್ದರಾಮಯ್ಯನವರ ಕರಾಮತ್ತೇ ಕಾರಣ. ಅತೃಪ್ತ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧರಾಗಿದ್ದರೂ ಅದಕ್ಕೆ ಅವಕಾಶ ನೀಡಲಿಲ್ಲ. ನಾನು ಸಿಎಂ ಕುರ್ಚಿಯಲ್ಲಿ ಕೂರುವುದನ್ನು ಸಹಿಸದ ಸಿದ್ದರಾಮಯ್ಯ ಸರ್ಕಾರದ ಪತನದ ರೂವಾರಿ. ತಮ್ಮ ಬೆಂಬಲಿಗರನ್ನು ಛೂ ಬಿಡುವ ಮೂಲಕ ಬಂಡಾಯಕ್ಕೆ ನಾಂದಿ ಹಾಡಿದ್ದರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ನನ್ನ ವಿರುದ್ಧ ಕತ್ತಿ ಮಸೆಯುತ್ತಿದ್ದರು. ಶಾಸಕರನ್ನು ವಿಶೇಷ ವಿಮಾನದಲ್ಲಿ ಕಳುಹಿಸುವ ಮೂಲಕ ಸರ್ಕಾರ ಪತನಕ್ಕೆ ಕಾರಣರಾದ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡಲಿಲ್ಲ.

ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿರಲಿಲ್ಲ, ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದೆ. ನಾನು ಸಿಎಂ ಆಗುವುದೇ ಸಿದ್ದರಾಮಯ್ಯನವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಹಂತ ಹಂತವಾಗಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದರು. ಮತ್ತೆ ಸಿಎಂ ಆಗಬೇಕೆಂಬ ಹುನ್ನಾರ ನಡೆಸಿದ್ದರು. ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಸರ್ಕಾರ ಪತನಗೊಳಿಸಿದ್ದಾರೆ.’

Leave a Reply