ಅನರ್ಹರಿಗೆ ಗಾಯದ ಮೇಲೆ ಬರೆ ಎಳೆದ ಸುಪ್ರೀಂ ಕೋರ್ಟ್!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ ಗಾಯದ ಮೇಲೆ ಬರೆ ಎಳೆದಿದೆ.

ಅನರ್ಹತೆಯಿಂದ ಎದುರಾಗಿರುವ ಕಾನೂನು ತೊಡಕುಗಳನ್ನು ಆದಷ್ಟು ಬೇಗ ಬಗೆಹರಿಸಿಕೊಂಡರೆ ಆಗ ಬಿಜೆಪಿ ಸಂಪುಟ ಸುಲಭವಾಗಿ ಸೇರಿಬಿಡಬಹುದು ಎಂಬ ಲೆಕ್ಕಾಚಾರ ಅನರ್ಹ ಶಾಸಕರದ್ದು. ಹೀಗಾಗಿ ತಮ್ಮನ್ನು ಅನರ್ಹ ಮಾಡಿರುವ ಸ್ಪೀಕರ್ ನಿರ್ಧಾರದ ತೀರ್ಪನ್ನು ಪ್ರಶ್ನಿಸಿದ್ದರು. ಜತೆಗೆ ಈ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ಮಾಡಿ ಎಂಬ ಅತೃಪ್ತ ಶಾಸಕರ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಹೀಗಾಗಿ 17 ಶಾಸಕರನ್ನು ತ್ರಿಶಂಕು ಪರಿಸ್ಥಿತಿಗೆ ದಬ್ಬಿದಂತಾಗಿ, ಅನರ್ಹರ ಲೆಕ್ಕಾಚಾರ ಉಲ್ಟಾ ಆಗಿದೆ.

ಬಿಜೆಪಿ ಸಂಪುಟ ರಚನೆ ಬೆನ್ನಲ್ಲೇ ಖಾತೆ ಹಂಚಿಕೆ ನಡೆಯುತ್ತಿದೆ. ತಾವು ಬಯಸಿದ ಪ್ರಮುಖ ಖಾತೆ ಕಂಡವರ ಪಾಲಾಗುವ ಆತಂಕದಲ್ಲಿರುವ ಅನರ್ಹರು ಆದಷ್ಟು ಬೇಗ ಕಾನೂನಿನ ಸಮರ ಮುಗಿಸಿ ಸಂಪುಟ ಸೇರಲು ಬಯಸುತ್ತಿದ್ದಾರೆ.

ಮೈತ್ರಿ ಸರ್ಕಾರ ಬೀಳಿಸುವಾಗ ರಾಜ್ಯ ಬಿಜೆಪಿ ನಾಯಕರು ಅಂಗೈಯಲ್ಲೇ ಆಕಾಶ ತೋರಿದ್ದರು. ಆದರೆ ಈಗ ಬಿಜೆಪಿ ಹೈಕಮಾಂಡ್ ಇವರನ್ನು ಕ್ಯಾರೆ ಎನ್ನದೆ ಕಡೆಗಣಿಸಿರೋದು ಅನರ್ಹರ ನಿದ್ದೆಗೆಡಿಸಿದೆ. ಇದಕ್ಕೆ ಸಾಕ್ಷಿ ಕಳೆದ ವಾರ ತಮ್ಮನ್ನು ಭೇಟಿ ಮಾಡಲು ಬಂದ ಅನರ್ಹರು ಹಾಗೂ ಸಿಎಂ ಯಡಿಯೂರಪ್ಪ ಅವರನ್ನು ಖಾಲಿ ಕೈಯಲ್ಲಿ ವಾಪಸ್ ಕಳಿಸಿದ್ದು.

Leave a Reply