ಯಡಿಯೂರಪ್ಪ ರಾಜಕೀಯ ಲೆಕ್ಕಾಚಾರವೆಲ್ಲಾ ಉಲ್ಟಾಪಲ್ಟಾ!

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲ ಮಾಡಿ ಮುಖ್ಯಮಂತ್ರಿ ಆಗಿರುವ ಬಿ.ಎಸ್ ಯಡಿಯೂರಪ್ಪಗೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ನಿದ್ದೆಗೆಡಿಸಿವೆ. ಕಾರಣ, ತಮ್ಮದೇ ರಾಜಕೀಯ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಒಂದು ತೀರ್ಮಾನ ತೆಗೆದುಕೊಂಡರೆ ಅದಕ್ಕೆ ವಿರುದ್ಧವಾಗಿ ಹೈಕಮಾಂಡ್ ಮತ್ತೊಂದು ನಿರ್ಧಾರ ಕೈಗೂಳ್ಳುತ್ತಿದೆ. ಹೀಗಾಗಿ ಸದ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ವರ್ಸಸ್ ಬಿಜೆಪಿ ಹೈಕಮಾಂಡ್ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಧಾನಸಭಾಧ್ಯಕ್ಷರ ಆಯ್ಕೆಯಲ್ಲಿ ಮೊದಲ ಬಾರಿ ಯಡಿಯೂರಪ್ಪಗೆ ಶಾಕ್ ಕೊಡಲು ಆರಂಭಿಸಿದ ಹೈಕಮಾಂಡ್ ಲಕ್ಷ್ಮಣ ಸವದಿ ಸೇರಿ ಮೂವರು ಡಿಸಿಎಂ ಆಯ್ಕೆ ಮಾಡುವವರೆಗೂ ಮುಂದುವರಿಸಿದೆ. ಸಚಿವ ಗೋವಿಂದ ಕಾರಾಜೋಳ, ಲಕ್ಣ್ಮಣ ಸವದಿ, ಡಾ. ಅಶ್ವತ್ಥನಾರಾಯಣ ಅವರನ್ನು ಡಿಸಿಎಂ ಮಾಡಿದ ಹೈಕಮಾಂಡ್ ನಿರ್ಧಾರ ಪಕ್ಷದಲ್ಲಿ ಅಸಮಾಧಾನದ ಬೀಜ ಬಿತ್ತಿ ಮೊಳಕೆಯೊಡೆಯುವಂತೆ ಮಾಡಿದೆ.

ಈ ಹಿಂದೆ ಡಿಸಿಎಂ ಆಗಿದ್ದ ಸಚಿವ ಆರ್ ಆಶೋಕ್, ಕೆ.ಎಸ್ ಈಶ್ವರಪ್ಪ ಅವರಿಗೆ ಈ ತೀರ್ಮಾನ ಹಿಂಬಡ್ತಿಯಂತೆ ಕಾಣುತ್ತಿದೆ. ಇನ್ನು ಕಾಟಾಚಾರಕ್ಕೆ ಎಂಬಂತೆ ಸಿಕ್ಕಿರುವ ಖಾತೆಯಿಂದ ಸಿ.ಟಿ ರವಿ ಸೇರಿದಂತೆ ಪಕ್ಷದ ಹಲವು ನಾಯಕರ ಕಣ್ಣು ಕೆಂಪಾಗಿಸಿದೆ. ಈಗ ಇವರೆಲ್ಲರು ಯಡಿಯೂರಪ್ಪನವರ ಮುಂದೆ ಬುಸುಗುಡಲು ಆರಂಭಿಸಿದ್ದಾರೆ.

ಈಗಾಗಲೇ ಸಚಿವ ಸಿ.ಟಿ ರವಿ ಮಾತನಾಡಿ, ನಾನು ಬೇಸರ ಇಲ್ಲ ಎಂದು ಹೇಳಲಾರೆ. ಆದ್ರೆ ಪಕ್ಷದ ವೇದಿಯಲ್ಲಿ ಯಾರ ಬಳಿ ಮಾತನಾಡಬೇಕು ಅವರ ಹತ್ತಿರ ಮಾತನಾಡ್ತೇನೆ. ನನ್ನ ಮನಸ್ಸಿನಲ್ಲಿ ಉಂಟಾಗಿರುವ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ತೇನೆ ಎಂದಿದ್ದಾರೆ.

ವಾಲ್ಮೀಕಿ ಸಮುದಾಯದ ನಾಯಕ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡ್ತೇವೆ ಎಂದಿದ್ದ ಬಿಜೆಪಿ ಇದೀಗ ಅಧಿಕಾರಕ್ಕೆ ಬಂದ ಬಳಿಕ ಕೊಕ್ ಕೊಟ್ಟಿದೆ. ಇದ್ರಿಂದ ವಾಲ್ಮೀಕಿ ಸಮುದಾಯ ಆಕ್ರೋಶಗೊಂಡಿದೆ. ಶ್ರೀರಾಮುಲು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಾಸಕರಾಗಿ ಇರುವಂತೆ ಒತ್ತಡ ಕೇಳಿ ಬರುತ್ತಿದೆ. ಈ ನಡುವೆ ನಿನ್ನೆ ತನಕ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದ ಶ್ರೀರಾಮುಲು ಇಂದು ಖಾಸಗಿ ಕಾರಿನಲ್ಲಿ ಸಿಎಂ ನಿವಾಸಕ್ಕೆ ಆಗಮಿಸಿರೋದು ಎಲ್ಲರಲ್ಲೂ ಅನುಮಾನ ಮೂಡುವಂತೆ ಮಾಡಿದೆ.

ಈ ಎಲ್ಲ ಬೆಳವಣಿಗೆಗಳು ಪಕ್ಷ ಹಾಗೂ ಸರ್ಕಾರದಲ್ಲಿ ತಾಳ ಮೇಳ ಸರಿಯಾಗಿ ಹೊಂದಾಣಿಕೆ ಆಗ್ತಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿವೆ.

Leave a Reply