ದೇವೇಗೌಡರು, ಸಿದ್ರಾಮಯ್ಯ ಒಂದಾಗ್ತಾರೆ ಅನ್ನೋದು ಸಾಬೂನು ಗುಳ್ಳೆಯೇ ಸರಿ!

ರಾಜಕೀಯ ಕಡುವೈರಿಗಳಾದ ದೇವೇಗೌಡರು ಮತ್ತು ಸಿದ್ದರಾಮಯ್ಯನವರು ಎಲ್ಲಾದರೂ ಒಂದಾಗಲು ಸಾಧ್ಯವೇ? ಇವರು 14 ತಿಂಗಳು ಹಲ್ಲುಮುರಿ ಕಚ್ಚಿಕೊಂಡು ಸುಮ್ಮನಿದ್ದಿದ್ದೇ ಹೆಚ್ಚು. ಡಿಲ್ಲಿ ಹುಕುಂಗೆ ಮಣಿದು ಕೈಯಲ್ಲಿ ಜಾಲಿ ಮುಳ್ಳಿಟ್ಟುಕೊಂಡೇ ಗೌಡರ ವಿಷದೆಗಲು ತಡವಿದ್ದ ಸಿದ್ದರಾಮಯ್ಯ ಪೆಟ್ಟಿದೇಟಿಗೆ ಮೈತ್ರಿ ಸರಕಾರ ತರಗೆಲೆಯಂತೆ ತೂರಿ ಹೋಗಿದೆ.

‘ತಾತ್ಕಾಲಿಕ ಹೊರವಿರಾಮ’ದ ನಂತರ ವೈರಿಗಳು ಮತ್ತೆ ಕಿತ್ತಾಡಿಕೊಂಡಿದ್ದಾರೆ. ಹಿಂದೆ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ಸಂದರ್ಭ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಹೋದಾಗ ಗೌಡರು ಮತ್ತು ಸಿದ್ದಾರಾಮಯ್ಯ ಒಂದಾಗಿದ್ದಾರೆಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿತ್ತು. ಆದರೆ ಈ ಹಾವು-ಮುಂಗುಸಿ ಒಂದಾಗಲು ಸಾಧ್ಯವೇ ಇಲ್ಲ ಎಂದು ಎರಡು ವರ್ಷದ ಹಿಂದೆಯೇ (01-05-2017) ‘ಒಳಸುಳಿ’ ಅಂಕಣದಲ್ಲಿ ಬರೆದಿದ್ದೆ. ಅಂದು ಬರೆದಿದ್ದು ಇಂದಿಗೂ ಪ್ರಸ್ತುತವೆನಿಸಿ ಹಾಗೇ ನಿಮ್ಮ ಮುಂದಿಡುತ್ತಿದ್ದೇನೆ…

ಇದೊಳ್ಳೆ ತಮಾಷೆ ಆಯ್ತು. ಬೆಂಕಿ ಮತ್ತು ಬಿರುಗಾಳಿ ಸ್ನೇಹ ಹಿತವಾಗೋದು ಸಾಧ್ಯವೇ? ಎಣ್ಣೆ ಮತ್ತು ಸೀಗೆಕಾಯಿ ಸಂಬಂಧ ಊರ್ಜಿತ ಆಗುವುದುಂಟೆ? ಹಾಕ್ಕೊಂಡು ಉಜ್ಜಿದರೆ ತೊಳಕೊಂಡು ಹೋಗೋದಿಲ್ವೇ..? ಇದೆಲ್ಲ ಬರೀ ಗಾಳಿಯಲ್ಲಿ ಬುರಬುರನೇ ಹಾರಿಹೋಗೋ ಸಾಬೂನು ಗುಳ್ಳೆ ರೀತಿ ಸ್ವಲ್ಪ ಹೊತ್ತು ನೋಡುವುದಕಷ್ಟೇ ಚೆಂದ. ಆಮೇಲೆ ಹುಡುಕಿದರೂ ಸಿಗುವುದಿಲ್ಲ. ಗಾಳಿಯಲ್ಲಿ ಲೀನವಾಗಿ ಹೋಗಿರುತ್ತದೆ.

ಯಾಕೆ ಈ ಪೀಠಿಕೆ ಅಂದರೆ… ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಗಳಸ್ಯ-ಕಂಠಸ್ಯ’ ಆಗಿ ಹೋಗಿದ್ದಾರೆ, ಮುಂದಿನ ವರ್ಷ ಬರಲಿರುವ ಸಾರ್ವತ್ರಿಕ ಚುನಾವಣೆಗೆ ಇವರಿಬ್ಬರೂ ಒಳಒಪ್ಪಂದ ಮಾಡಿಕೊಂಡಿದ್ದಾರೆ, ಇನ್ನೇನಿದ್ರೂ ಬರೀ ಡೋಲು ಬಾರಿಸೋದು ಒಂದೇ ಬಾಕಿ ಉಳಿದಿರೋದು, ನೋಡ್ತಾ ಇರಿ.. ಕಾಂಗ್ರೆಸ್ ಮತ್ತು ಜೆಡಿಎಸ್ ಹೆಂಗೆ ಹೆಗಲ ಮೇಲೆ ಕೈ ಹಾಕಿಕೊಂಡು ಚುನಾವಣೆಗೆ ಹೋಗುತ್ತವೆ ಅಂತ ರಾಜಕೀಯರಂಗದಲ್ಲಿ ಒಂದಷ್ಟು ಜನ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಿದ್ದಾರೆ. ಆದರೆ ಮೈಗೆ ಹರಳೆಣ್ಣೆ ಸವರಿಕೊಂಡು ಗರಡಿ ಮನೆ ಮಟ್ಟಿ ಮೇಲೆ ತೊಡೆ ತಟ್ಟಿ ನಿಂತಿರುವ ಗೌಡರು, ಅವರಿಗೆ ಹರಳೆಣ್ಣೆ ಕುಡಿಸುವುದು ಹೇಗೆಂದು ಯೋಜನೆ ಬರೆಯುವ ಸಿದ್ದರಾಮಯ್ಯನವರು ಪರಸ್ಪರ ಒಬ್ಬರ ಕೈಗೆ ಒಬ್ಬರು ಜುಟ್ಟು ಕೊಡುವುದು ಉಂಟೇ? ಇಬ್ಬರ ಮನೆದೇವರಾಣೆಗೂ ಇದು ಆಗುವ-ಹೋಗುವ ಮಾತಲ್ಲ.

ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ಕಾಂಗ್ರೆಸ್ ಗೆಲುವಿಗೆ ಪರೋಕ್ಷ ನೆರವು ನೀಡಿದ ದೇವೇಗೌಡರು ಹಾಗೂ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಹೇಳಿದ್ದು, ಜೆಡಿಎಸ್ ಜತೆ ವೈರ ಬೇಡ ಎಂದು ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ಸೂಚನೆ ಕೊಟ್ಟಿರುವುದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಜತೆ ಆರೋಗ್ಯಕರ ಸ್ಪರ್ಧೆಯಷ್ಟೇ ಇರುತ್ತದೆ ಎಂದು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿರುವುದು – ಇವೆಲ್ಲವನ್ನು ಆಧಾರವಾಗಿಟ್ಟುಕೊಂಡು ಭವಿಷ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಳ್ಳುತ್ತವೆ ಎಂಬ ಮಾತು ರಾಜಕೀಯ ರಂಗದಲ್ಲಿ ಚಾಲ್ತಿ ಪಡೆದುಕೊಂಡಿದೆ.

ಹೀಗೊಂದು ಸುದ್ದಿ ಹರಿದಾಡುತ್ತಿದ್ದಂತೆ ಇಬ್ಬರೂ ಮುಖಂಡರು ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ ಎಂದು ಸ್ಪಷ್ಟನೆ ಕೊಟ್ಟರು. ಆದರೆ ರಾಜಕೀಯದಲ್ಲಿ ಇಂಥ ಸ್ಪಷ್ಟನೆಗಳೆಲ್ಲ ನಿಮಿತ್ತ ಮಾತ್ರ. ರಾಜಕಾರಣಿಗಳು ನುಡಿದಂತೆ ಎಲ್ಲಿ ನಡೆದುಕೊಳ್ಳುತ್ತಾರೆ? ಹೊರಗೆ ತೋರಿಸುವುದೊಂದು, ಒಳಗೆ ನಡೆದುಕೊಳ್ಳುವುದೇ ಮತ್ತೊಂದು. ದೇಶಾದ್ಯಂತ ಬೀಸುತ್ತಿರುವ ಮೋದಿ ಅಲೆಗೆ ಕಡಿವಾಣ ಹಾಕಲು ಇಬ್ಬರೂ ಮುಖಂಡರು ಒಳಗೊಳಗೇ ಮಾತಾಡಿಕೊಂಡಿದ್ದಾರೆ. ಇದಕ್ಕೆ ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆ ಫಲಿತಾಂಶವೇ ಪ್ರೇರಣೆ. ಈ ಮರುಚುನಾವಣೆಯಲ್ಲೂ ಒಳಗೊಳಗೇ ಹೊಂದಾಣಿಕೆ ಮಾಡಿಕೊಂಡಿದ್ದನ್ನು ಗೌಡರಾಗಲಿ, ಸಿದ್ದರಾಮಯ್ಯ ಅವರಾಗಲಿ ಚುನಾವಣೆಗೆ ಮೊದಲು ಯಾರಿಗೂ ಹೇಳಿಕೊಂಡಿರಲಿಲ್ಲ. ಫಲಿತಾಂಶ ಬಂದ ನಂತರ ಒಬ್ಬರ ಬೆನ್ನನ್ನು ಮತ್ತೊಬ್ಬರು ತಟ್ಟಿಕೊಂಡಿದ್ದಾರೆ. ಮುಂದಿನ ಚುನಾವಣೆ ಒಳಒಪ್ಪಂದ ಕೂಡ ಹಾಗೆಯೇ ಎಂದು ಇಬ್ಬರು ನಾಯಕರ ಸ್ಪಷ್ಟನೆಯನ್ನೂ ಮೀರಿದ ಲೆಕ್ಕಾಚಾರಗಳು ಎರಡೂ ಪಕ್ಷಗಳ ಪಾಳೆಯದಲ್ಲೂ ಮುಂದುವರಿದಿವೆ. ಆದರೆ ಗೌಡರು ಮತ್ತು ಅವರ ಗರಡಿಯಲ್ಲೇ ಪಳಗಿರುವ ಸಿದ್ದರಾಮಯ್ಯನವರ ರಾಜಕೀಯ ಪಟ್ಟುಗಳನ್ನು ಒಳಹೊಕ್ಕಿ ನೋಡುವುದಾದರೆ ಇದೊಂದು ಬಾಲಂಗೋಚಿಯಿಲ್ಲದ ಬರೀ ಲಾಂಡಾಪಟವೆಂದು ಮನದಟ್ಟಾಗುತ್ತದೆ.

ನಿಜ, ಮರುಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಗೌಡರು ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡಿದ್ದು ಒಂದಂಶವಾದರೆ, ಅದನ್ನು ಮೀರಿದ ಬಹುಮುಖ್ಯ ಅಂಶ ಪಕ್ಷಾತ್ಮ ರಕ್ಷಣೆಯದ್ದು. ಒಂದೊಮ್ಮೆ ಈ ಮರುಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರೆ ಅದನ್ನು ಮೋದಿ ಅಲೆ ವಿಸ್ತರಣೆಗೆ ಅರ್ಪಣೆ ಮಾಡಲಾಗುತ್ತಿತ್ತು. ಮುಂದಿನ ವರ್ಷ ನಡೆವ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ಪೈಪೋಟಿ ಎಂದು ಬಿಂಬಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ನೇಪಥ್ಯಕ್ಕೆ ಸರಿಸುವ ಅವಕಾಶವಾಗಿ ಪರಿವರ್ತಿಸಲಾಗುತ್ತಿತ್ತು. ಮೇಲಾಗಿ ಸೋಲುವ ಚುನಾವಣೆಗೆ ಜೆಡಿಎಸ್ ಕನಿಷ್ಠ 25 ಕೋಟಿ ರುಪಾಯಿಯನ್ನಾದರೂ ಖರ್ಚು ಮಾಡಬೇಕಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ಶತ್ರುಗಳೇ. ಆದರೆ ಜೆಡಿಎಸ್ ಪಾರುಪತ್ಯೆ ಇರುವ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಾರಂಪರಿಕ ಶತ್ರು. ಈ ಭಾಗದಲ್ಲೇ ನಡೆದ ಮರುಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರೆ ಮತ್ತೊಬ್ಬ ಹೊಸ ಶತ್ರುವನ್ನು ಜೆಡಿಎಸ್ ಮೈಮೇಲೆ ಆವಾಹನೆ ಮಾಡಿಕೊಂಡಂತಾಗುತ್ತಿತ್ತು. ಹೀಗಾಗಿ ಹೊಸ ಶತ್ರು ಸಂಹಾರಕ್ಕೆ ಹಳೇ ಶತ್ರುವಿಗೆ ಒಂದಷ್ಟು ಬಲತುಂಬುವ ಕೆಲಸವನ್ನು ಜೆಡಿಎಸ್ ಮಾಡಿತೇ ಹೊರತು ಬೇರೇನೂ ಅಲ್ಲ. ಇವತ್ತಿಗೂ ಮುಂದೆಂದಿಗೂ ಜೆಡಿಎಸ್‌ನ ಮೊದಲ ಶತ್ರು ಕಾಂಗ್ರೆಸ್ಸೇ. ಅದೇ ರೀತಿ ಕಾಂಗ್ರೆಸ್ಸಿಗೂ ಜೆಡಿಎಸ್ ಚುನಾವಣೆ ಶತ್ರುವೇ. ಮರುಚುನಾವಣೆ ಲೆಕ್ಕಾಚಾರ ಅದರ ಫಲಿತಾಂಶದೊಂದಿಗೇ ಚುಕ್ತಾ. ಮುಂದೆ ಮರುಕಳಿಸುವುದೆಲ್ಲ ಮತ್ತದೇ ಹಳೆ ಕತೆಯೇ!

ರಾಜಕೀಯದಲ್ಲಿ ವ್ಯಕ್ತಿಗತ ಸಂಬಂಧ ಹಾಗೂ ಪಕ್ಷ ಸಂಬಂಧಕ್ಕೆ ತಳುಕು ಹಾಕಲು ಸಾಧ್ಯವಿಲ್ಲ. ಅವೇನಿದ್ದರೂ ಬೇರೆ-ಬೇರೆಯೇ. ಸಾಂದರ್ಭಿಕ ಸಂಬಂಧ ಸುಧಾರಣೆ ಯಾವತ್ತಿಗೂ ಶಾಶ್ವತ ಅಲ್ಲ. ಆ ಕ್ಷಣ ದಾಟಿದ ನಂತರ ಗೆಳೆತನದ ಜಾಗದಲ್ಲಿ ಹಗೆತನ ಮರುಪ್ರತಿಷ್ಠಾಪನೆ ಆಗಿರುತ್ತದೆ. ಹಿಂದೆ ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಹಾಕಿರಲಿಲ್ಲ. ಅದೇ ರೀತಿ ಪದ್ಮನಾಭನಗರದಲ್ಲಿ ಬಿಜೆಪಿಯ ಅಶೋಕ್ ವಿರುದ್ಧ ಕಾಂಗ್ರೆಸ್ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಜೆಡಿಎಸ್ ಕೂಡ ಎಷ್ಟೋ ಕಡೆ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಎದುರಾಳಿ ಪಕ್ಷದ ವ್ಯಕ್ತಿಗತ ವೈರಿಗಳನ್ನು ಸಂಹಾರ ಮಾಡಿರುವುದು ಉಂಟು. ತಮಗಾಗದವರನ್ನು ರಾಜಕೀಯವಾಗಿ ಮುಗಿಸಲು ಯಾರೊಂದಿಗೆ ಬೇಕಾದರೂ ಕೈ ಜೋಡಿಸುವುದುಂಟು. ಇವೆಲ್ಲ ವೈಯಕ್ತಿಕ ಸಂಬಂಧದ ನೆಲೆಗಟ್ಟಿನಲ್ಲಿ ನಡೆಯುವಂಥದ್ದು. ಎಲ್ಲ ಪಕ್ಷಗಳೂ ಈ ಕೆಲಸ ಮಾಡುತ್ತವೆ. ಇಲ್ಲಿ ತತ್ತ್ವ-ಆದರ್ಶ ಎಲ್ಲ ಬರೀ ಬದನೆಕಾಯಿ. ಹಾಗೆಂದು ಇದನ್ನು ಪಕ್ಷ-ಪಕ್ಷಗಳ ನಡುವಣ ಪ್ರೀತಿ ಎಂದಾಗಲಿ, ಮೈತ್ರಿ ಎಂದಾಗಲಿ ಭಾವಿಸುವಂತಿಲ್ಲ. ಬರೀ ಶತ್ರುಸಂಹಾರಕ್ಕೆ ಸೀಮಿತವಾದ ಆ ಕ್ಷಣದ ಅಪವಿತ್ರ ಯಾತ್ರೆ ಅಷ್ಟೇ. ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆ ಒಳಹೊಂದಾಣಿಕೆ ಕೂಡ ಅಷ್ಟಕ್ಕೇ ಸೀಮಿತ.

ಸಿದ್ದರಾಮಯ್ಯ ಪುತ್ರ ರಾಕೇಶ್ ನಿಧನರಾದಾಗ ದೇವೇಗೌಡರು ಮುಖ್ಯಮಂತ್ರಿ ಮನೆಗೆ ಹೋಗಿ ಸಾಂತ್ವನ ಹೇಳಿ ಬಂದಿರಬಹುದು. ಅದೊಂದು ಮಾನವೀಯತೆಗೆ ಸೀಮಿತವಾದ ವಿಚಾರ. ಅದೇ ರೀತಿ ಕಾವೇರಿ ನೀರು ಬಿಡುಗಡೆಗೆ ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರಕ್ಕೆ ತಾಕೀತು ಮಾಡಿದಾಗ ಸಲಹೆ ಪಡೆಯಲು ಸಿದ್ದರಾಮಯ್ಯನವರೂ ಗೌಡರ ಮನೆಗೆ ಹೋಗಿರಬಹುದು. ಅದು ಕೂಡ ವಿಷಯಾಧಾರಿತ. ಹಾಗೆಂದು ಇಬ್ಬರ ನಡುವೆ ರಾಜಕೀಯ ದ್ವೇಷವೆಲ್ಲ ಅಳಿಸಿ ಹೋಗಿ, ಪ್ರೀತಿ-ಪ್ರೇಮ ಉಕ್ಕಿ ಹರಿಯುತ್ತಿದೆ ಎಂದು ಅರ್ಥೈಸಲಾದೀತೇ? ಗೌಡರು ಮತ್ತು ಸಿದ್ದರಾಮಯ್ಯ ದ್ವೇಷ ರಾಜಕೀಯ, ಹಗೆತನ ಸಾಧಿಸುವುದರಲ್ಲಿ ಪರಮ ನಿಸ್ಸೀಮರು. ಅವರು ತಣ್ಣಗೆ ಮಾತಾಡಿದರು ಎಂದರೆ ಅಲ್ಲಿ ಹಾವು ಹರಿಯುತ್ತಿದೆ ಎಂದೇ ಅರ್ಥ. ಅದು ಯಾವಾಗ ಬೇಕಾದರೂ ಬುಸಗುಡಬಹುದು, ಹೆಡೆ ಬಿಚ್ಚಬಹುದು.

ಒಂದೊಮ್ಮೆ ದೇವೇಗೌಡರಿಗೆ ಸಿದ್ದರಾಮಯ್ಯನವರ ಬಗ್ಗೆ ಒಳಪ್ರೀತಿ ಮರುಸ್ಥಾಪನೆ ಆಗಿತ್ತು ಎಂದಿಟ್ಟುಕೊಳ್ಳೋಣ. ಹಾಗೇನಾದರೂ ಆಗಿದ್ದಿದ್ದರೆ ಸಿದ್ದರಾಮಯ್ಯ ಅವರನ್ನು ಹಾದಿಬೀದಿಯಲ್ಲಿ ಬಾಯಿಗೆ ಬಂದಂತೆ ಹರಾಜು ಹಾಕಿರುವ ಮಾಜಿ ಸಚಿವ, ಮಾಜಿ ಸಂಸದ ಎಚ್. ವಿಶ್ವನಾಥ್‌ರನ್ನು ಜೆಡಿಎಸ್ಸಿಗೆ ಸೇರಿಸಿಕೊಳ್ಳಲು ದೇವೇಗೌಡರು ಮುಂದಾಗುತ್ತಿದ್ದರೆ? ಅದೇ ರೀತಿ ರಾಮನಗರದಲ್ಲಿ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿಯುವಂತೆ ಡಿ.ಕೆ. ಸುರೇಶ್ ಅವರನ್ನು ಎತ್ತಿಕಟ್ಟಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದರೆ? ರಾಜಕೀಯದಲ್ಲಿ ಇವೆಲ್ಲ ಆಗದ-ಹೋಗದ ಮಾತುಗಳು.

ನಿಜ, 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ತಾವು ಮುಖ್ಯಮಂತ್ರಿ ಆಗುವ ಅವಕಾಶವನ್ನು ತಪ್ಪಿಸಿದ್ದೇ ದೇವೇಗೌಡರು ಎಂದು ಅವತ್ತು ಬರೀ ಗೌಡರ ಬಗ್ಗೆ ಅಲ್ಲ, ಇಡೀ ಒಕ್ಕಲಿಗ ಸಮುದಾಯದ ವಿರುದ್ಧವೇ ಒಡಲಲ್ಲಿ ತುಂಬಿಸಿಕೊಂಡ ದ್ವೇಷವನ್ನು ಸಿದ್ದರಾಮಯ್ಯನವರು ಇವತ್ತಿಗೂ ಕಕ್ಕಿಲ್ಲ. ಅದು ಕುದ್ದು, ಕುದ್ದು ಅಲ್ಲಿಯೇ ಅಗ್ನಿ ಪರ್ವತವಾಗಿದೆ. ಅಹಿಂದ ಸಂಘಟನೆ ಮೂಲಕ ದೇವೇಗೌಡರಿಗೆ ಸೆಡ್ಡು ಹೊಡೆದು ಜೆಡಿಎಸ್‌ನಿಂದ ಹೊರಹಾಕಿಸಿಕೊಂಡ ಸಿದ್ದರಾಮಯ್ಯ ಮತ್ತೆ ಅವರೊಂದಿಗೆ ಸ್ನೇಹದ ಕನಸು ಕಾಣಲು ಸಾಧ್ಯವೇ? ಅದು ಎಲ್ಲಾದರೂ ಉಂಟೇ. ಕಾಂಗ್ರೆಸ್ಸಿಗೆ ಬಂದು ಮುಖ್ಯಮಂತ್ರಿ ಆದ ತಕ್ಷಣ ಅವರು ಮಾಡಿದ ಮೊದಲ ಕೆಲಸ ವಿಧಾನಸೌಧದ ಕೆಲ ಕಚೇರಿಗಳಲ್ಲಿ ಮಾಜಿ ಪ್ರಧಾನಿ ಚೌಕಟ್ಟಿನೊಳಗೆ ತೂಗಾಡುತ್ತಿದ್ದ ದೇವೇಗೌಡರ ಫೋಟೊ ತೆಗೆಸಿ ಹಾಕಿಸಿದ್ದು. ಜತೆಗೆ ಸರಕಾರದ ಆಯಕಟ್ಟಿನ ಜಾಗಗಳಲ್ಲಿ ದೇವೇಗೌಡರು ನಿಯೋಜಿಸಿದ್ದ ಅಧಿಕಾರಿಗಳ ಪಲ್ಲಟ. ಒಂದೂವರೇ ವರ್ಷ ಆಟ ಆಡಿಸಿ ಸಂಪುಟಕ್ಕೆ ತೆಗೆದುಕೊಂಡ ಡಿ.ಕೆ. ಶಿವಕುಮಾರ್ ಅವರನ್ನು ದೇವೇಗೌಡರ ವಿರುದ್ಧ ಎತ್ತಿ ಕಟ್ಟಿದರು. ಅದೇ ರೀತಿ ಹಾಸನದಲ್ಲಿ ಗೌಡರು ಮತ್ತು ರೇವಣ್ಣ ಪ್ರಾಬಲ್ಯ ಮುರಿಯಲು ಎ. ಮಂಜು ಅವರನ್ನು ಬಳಸಿಕೊಂಡರು. ಮಂತ್ರಿ ಸ್ಥಾನದ ಋಣವನ್ನು ಮಂಜು ತಮ್ಮ ಕೈಲಾದ ಮಟ್ಟಿಗೆ ಸಂದಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಹೀಗೆ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡುವೆ ಹಳೇ ಬಾಕಿ ತೀರಿಸುವ ಕೆಲಸವೇ ಇನ್ನೂ ಮುಗಿಯದಿರುವಾಗ ಸ್ನೇಹ ಕೊನರಲು ಸಾಧ್ಯವೇ? ರಾಜಕೀಯ ಮೈತ್ರಿ ಸಾಧ್ಯವೇ? ಹಾಗೇನಾದರೂ ಆದರೆ ಅದು ಪರಸ್ಪರ ರಾಜಕೀಯ ಆತ್ಮಾಹುತಿ ಮಾಡಿಕೊಂಡಂತೆ. ಇದು ಇಬ್ಬರಿಗೂ ಗೊತ್ತಿದೆ.

ಈ ರಾಜಕೀಯ ಹಗೆತನವೇ ಹಾಗೆ. ಒಮ್ಮೆ ಒಡಮೂಡಿದ್ದು ಮತ್ತೆ ಅಳಿಸಿ ಹೋಗುವುದು ಅಷ್ಟು ಸುಲಭದ್ದಲ್ಲ. ದೇವೇಗೌಡರು ಮತ್ತು ಎಸ್.ಎಂ. ಕೃಷ್ಣ ಅವರಿಗೆ ಮೊದಲಿಂದಲೂ ರಾಜಕೀಯ ಕಡುವೈರ. 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಮತ್ತೆ ಮುಖ್ಯಮಂತ್ರಿ ಆಗಬಯಸಿದ ಎಸ್.ಎಂ. ಕೃಷ್ಣ ಅವರನ್ನು ಗೌಡರು ದಿಲ್ಲಿಯ ತಮ್ಮ ಮನೆಗೆ ಬರುವಂತೆ ಮಾಡಿಕೊಂಡರು. ಇಬ್ಬರ ನಡುವೆ ಹಗೆ ಮರೆಯಾಯಿತು ಎಂದು ಎಲ್ಲರೂ ಮಾತಾಡಿಕೊಂಡರು. ಆದರೆ ಧರ್ಮಸಿಂಗ್ ಮುಖ್ಯಮಂತ್ರಿ ಅಗುವಂತೆ ನೋಡಿಕೊಂಡ ಗೌಡರು, ಕೃಷ್ಣ ಅವರಿಗೆ ಕೈ ಎತ್ತುವ ಮೂಲಕ ಮತ್ತಷ್ಟು ಅಪಮಾನ ಮಾಡಿದರು. ಅಷ್ಟೇ ಅಲ್ಲ, ಸಿಎಂ ಮಾಡಿ ಎಂದು ಕೇಳಿಕೊಂಡು ಕೃಷ್ಣ ತಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂದು ಇವತ್ತಿಗೂ ಆಡಿಕೊಳ್ಳುತ್ತಿದ್ದಾರೆ. ತೀರಾ ಇತ್ತೀಚೆಗೆ ಹಲವೆಡೆ ವೇದಿಕೆ ಹಂಚಿಕೊಂಡು ಎಸ್.ಎಂ. ಕೃಷ್ಣ ಅವರನ್ನು ಹಾಡಿ ಹೊಗಳಿದ್ದ ಗೌಡರು ಮರುಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಕೃಷ್ಣ ಬಂದದ್ದು ಅಪ್ರಸ್ತುತ ಎನ್ನಿಸುವಷ್ಟರ ಮಟ್ಟಿಗೆ ರಾಜಕೀಯ ದಾಳ ಉರುಳಿಸಿಬಿಟ್ಟರು.

ಇತ್ತ ಸಿದ್ದರಾಮಯ್ಯನವರೂ ಅಷ್ಟೇ. ಅವಕಾಶವಾದಿ ರಾಜಕಾರಣದಲ್ಲಿ ಅವರು ಯಾರಿಗೂ ಕಡಿಮೆ ಇಲ್ಲ. ಗೌಡರ ವಿರುದ್ಧ ದಾಳವಾಗಿ ಬಳಸಿಕೊಂಡ ಡಿ.ಕೆ. ಶಿವಕುಮಾರ್ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರದ ಬಂದಾಗ ಪಕ್ಕಕ್ಕೆ ತಳ್ಳಿದ್ದಾರೆ. ತಾವು ಕಾಂಗ್ರೆಸ್ಸಿಗೆ ಬರಲು ಮೂಲ ಕಾರಣಕರ್ತರಾದ ಎಚ್. ವಿಶ್ವನಾಥ್, ಮೂಲ ಕಾಂಗ್ರೆಸ್ಸಿಗರು ತಮ್ಮ ವಿರುದ್ಧ ದಿಲ್ಲಿಯತ್ತ ಎಸೆಯುತ್ತಿದ್ದ ಅಸ್ತ್ರಗಳಿಗೆ ತಡೆಗೋಡೆಯಾಗಿ ನಿಂತಿದ್ದ ಹರಿಪ್ರಸಾದ್ ಅವರಂಥ ನಾಯಕರನ್ನು ಉಪ್ಪಿನ ಕಾಗದದಂತೆ ಉಜ್ಜಿ ಬಿಸಾಡಿದ್ದಾರೆ. ಎಷ್ಟೇ ಆಗಲಿ ಅವರೂ ಗೌಡರ ಗರಡಿಯಲ್ಲೇ ಪಳಗಿದವರಲ್ಲವೇ? ಹಗೆತನ ವಿಚಾರಕ್ಕೆ ಬಂದಾಗ ಗೌಡರು ಮತ್ತು ಸಿದ್ದರಾಮಯ್ಯ ಇಬ್ಬರೂ ಹಾವಿನ ವಿಷದಲ್ಲೂ ವಿಷ ಹೆಕ್ಕುವವರೇ. ಇಂಥವರ ನಡುವೆ ಚುನಾವಣೆ ಮೈತ್ರಿ, ಒಳಒಪ್ಪಂದ ಹೇಗೆ ಸಾಧ್ಯ?

ಇಲ್ಲಿ ಇನ್ನೊಂದು ವಿಚಾರವಿದೆ. ರಾಜಕೀಯದಲ್ಲಿ ಎದುರಾಳಿಗಳನ್ನು ದುರ್ಬಲಗೊಳಿಸಲು ಮೃದು ಧೋರಣೆ ಅಸ್ತ್ರ ಪ್ರಯೋಗವೂ ಒಂದು. ಇದೊಂದು ರೀತಿಯಲ್ಲಿ ಜಾಣತನದ ನಡೆ. ಜಾತ್ಯತೀತ ಮನಸ್ಸುಗಳನ್ನು ಸೆಳೆಯಲು ಎದುರಾಳಿಯ ಬಗ್ಗೆ ನಯಭಾವ ಪ್ರದರ್ಶಿಸುವುದು. ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ, ತಮ್ಮ ಈ ನಡೆ ಎದುರಾಳಿಗೆ ಸಹ್ಯವಾಗುವುದಿಲ್ಲ, ಬದಲಿಗೆ ತಮ್ಮ ಮೇಲೆ ಎರಗಿ ಬರುತ್ತಾನೆ ಎಂದು. ಆಗ ಇವರು ಮೃದುವಾಗಿದ್ದರೂ ಎದುರಾಳಿ ವಿನಾಕಾರಣ ಕಾಳಗಕ್ಕೆಳೆಯುತ್ತಿದ್ದಾನೆ ಎಂಬ ಸಂದೇಶ ಜನಸಾಮಾನ್ಯರಿಗೆ ರವಾನೆ ಆಗುತ್ತದೆ. ಈಗ ಚುನಾವಣೆ ಮೈತ್ರಿ ಸಂಬಂಧ ಕಾಂಗ್ರೆಸ್ ಮತ್ತು ಜೆಡಿಎಸ್ ಕ್ರಿಯೆ, ಪ್ರತಿಕ್ರಿಯೆಯಲ್ಲಿ ಕಂಡು ಬರುತ್ತಿರುವುದು ಇದೇ ಆಗಿದೆ.

ಲಗೋರಿ: ಕುಸ್ತಿ ಆಡುವ ಮೊದಲು ಹಸ್ತಲಾಘವ ಸಾಮಾನ್ಯ.

ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಣ ಪ್ರಸ್ತುತ ಕಲಹಕ್ಕೆ ಕಾರಣ ಕುರಿತ ವಿಶ್ಲೇಷಣೆ ಇನ್ನೊಂದು ಅಂಕಣದಲ್ಲಿ ನಿರೀಕ್ಷಿಸಿ…

Leave a Reply