ಕಾಶ್ಮೀರ ವಿಚಾರ ಭಾರತ-ಪಾಕ್ ಬಗೆಹರಿಸಿಕೊಳ್ಳಲಿ: ಮಧ್ಯಸ್ಥಿಕೆಯಿಂದ ಹಿಂದೆ ಸರಿದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರ ವಿಚಾರವಾಗಿ ಯಾರ ಮಧ್ಯಸ್ಥಿಕೆಯ ಅಗತ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೆಜ್ಜೆ ಹಿಂದಿಟ್ಟಿದ್ದಾರೆ. ಕಾಶ್ಮೀರ ವಿಚಾರವನ್ನು ಭಾರತ ಹಾಗೂ ಪಾಕಿಸ್ತಾನವೇ ಬಗೆಹರಿಸಿಕೊಳ್ಳಬಹುದು ಎಂದು ಹೇಳಿ ತಮ್ಮ ಮಧ್ಯಸ್ಥಿಕೆ ನಿರ್ಧಾರಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ.

ಜಿ7 ರಾಷ್ಟ್ರಗಳ ಸಭೆ ಬೆನ್ನಲ್ಲೇ ಸೋಮವಾರ ಮೋದಿ ಹಾಗೂ ಟ್ರಂಪ್ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ಜನ ಸ್ವಾಗತಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಪೀಗಾಗಿ ಈ ವಿಚಾರವನ್ನು ಭಾರತ ಹಾಗೂ ಪಾಕಿಸ್ತಾನವೇ ಬಗೆಹರಿಸಿಕೊಳ್ಳಬಹುದು. ಹೀಗಾಗಿ ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡುವ ಅಗತ್ಯ ಇಲ್ಲ ಎಂದು ನಯವಾಗಿಯೇ ಮೋದಿ ಟ್ರಂಪ್ ಗೆ ತಮ್ಮ ನಿರ್ಧಾರ ಸರಿಯಿಲ್ಲ ಎಂದು ಮನವರಿಕೆ ಮಾಡಿದ್ದರು.

ಮೋದಿ ಜತೆಗಿನ ಮಾತುಕತೆ ನಂತರ ಟ್ರಂಪ್ ಈ ವಿಚಾರದಲ್ಲಿ ಮೂಗು ತೂರಿಸದಿರಲು ನಿರ್ಧರಿಸಿದ್ದು, ಕಾಶ್ಮೀರ ವಿಚಾರವನ್ನು ಉಭಯ ದೇಶಗಳು ಬಗೆಹರಿಸಿಕೊಳ್ಳಲಿ ಎಂದಿದ್ದಾರೆ. ಅಲ್ಲದೆ ಕಾಶ್ಮೀರದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೋದಿ ತಮಗೆ ತಿಳಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

‘ಭಾರತ ಹಾಗೂ ಪಾಕಿಸ್ತಾನ ಪ್ರಧಾನಿಗಳ ಅತ್ಯುತ್ತಮ ಸ್ನೇಹಿತನಾಗಿ ನಾನಿಲ್ಲಿ ನಿಂತಿದ್ದೇನೆ. ನನ್ನ ಪ್ರಕಾರ ಕಾಶ್ಮೀರ ವಿಚಾರವನ್ನು ಅವರಿಬ್ಬರೇ ಬಗೆಹರಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.

Leave a Reply