ಅನರ್ಹರ ಅತಂತ್ರ ಸ್ಥಿತಿ ನೋಡಿ ಕಣ್ಣೀರಿಡುವುದೊಂದೇ ಸಿಎಂ ಯಡಿಯೂರಪ್ಪ ಮುಂದಿರುವ ದಾರಿ!

ಡಿಜಿಟಲ್ ಕನ್ನಡ ಟೀಮ್:

ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಮೈತ್ರಿ ಸರ್ಕಾರ ಉರುಳಿಸಿದ ಅನರ್ಹ ಶಾಸಕರು ಈಗ ಅತಂತ್ರ ಸ್ಥಿತಿಯಲ್ಲಿ ಕಣ್ಣು ಬಾಯಿ ಬಿಡುತ್ತಿದ್ದಾರೆ. ಇವರ ಸ್ಥಿತಿಯನ್ನು ನೋಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಣ್ಣೀರು ಹಾಕಿದ್ದಾರೆ ಎಂಬ ವರದಿಗಳು ಬರುತ್ತಿದ್ದು, ಎಲ್ಲವೂ ಹೈಕಮಾಂಡ್ ನಿಯಂತ್ರಣದಲ್ಲಿರುವಾಗ ಯಡಿಯೂರಪ್ಪನವರಿಗೆ ಕ್ಣಣೀರು ಹಾಕುವುದನ್ನು ಬಿಟ್ಟು ಬೇರೆ ದಾರಿ ಇಲ್ಲವಾಗಿದೆ.

ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಅನರ್ಹ ಶಾಸಕ ಮುನಿರತ್ನ, ತಮ್ಮನ್ನು ಅತಂತ್ರ ಸ್ಥಿತಿಯಿಂದ ಮುಕ್ತಿಗೊಳಿಸುವಂತೆ ಯಡಿಯೂರಪ್ಪನವರ ಮುಂದೆ ಅಂಗಲಾಚಿದ್ದರು ಎಂದು ವರದಿಗಳು ಬಂದಿವೆ.

‘ನಮ್ಮ ಕಣ್ಣೀರ ಮೇಲೆ ಸರ್ಕಾರ ಮಾಡುತ್ತಿದ್ದೀರಿ. ನಮ್ಮ ಕಣ್ಣಲ್ಲಿ ನೀರು ಹಾಕಿಸಿದರೆ ನಿಮ್ಮ ಸರ್ಕಾರ ಉಳಿಯಲ್ಲ. ಎಷ್ಟು ದಿನ ಅಂತಾ ನಾವು ಅನರ್ಹ ಪಟ್ಟಿ ಹೊತ್ತಿಕೊಂಡಿರಬೇಕು. ನಾವು ಅಂತಂತ್ರದಲ್ಲಿದ್ದೇವೆ. ನಮ್ಮ ಭವಿಷ್ಯವನ್ನು ಅಡವಿಟ್ಟು ನಿಮ್ಮ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ನಮ್ಮನ್ನು ನಡು ನೀರಲ್ಲಿ ಕೈಬಿಡಬೇಡಿ. ನಮ್ಮ ಕಾನೂನು ಹೋರಾಟಕ್ಕೆ ನೀವು ಕೈಜೋಡಿಸಿ ಬೇಗ ವಿಚಾರಣೆ ಮುಗಿಯುವಂತೆ ಮಾಡಿ’ ಎಂದು ಮುನಿರತ್ನ ಗೋಗರೆದಿದ್ದಾರೆ. ಮುನಿರತ್ನ ಅವರ ಈ ಮಾತುಗಳನ್ನು ಕೇಳಿ ಯಡಿಯೂರಪ್ಪ ಭಾವುಕರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಸದನದ ಒಳಗೆ ಹಾಗೂ ಹೊರಗೆ, ‘ಬಿಜೆಪಿಯವರು ನಿಮ್ಮನ್ನು ರಾಜಕೀಯವಾಗಿ ಸಮಾಧಿ ಮಾಡುತ್ತಿದ್ದಾರೆ. ಅವರ ಮಾತಿಗೆ ಮರಳಾಗಬೇಡಿ. ವಾಪಸ್ ಬನ್ನಿ’ ಎಂದು ಎಷ್ಟೇ ಎಚ್ಚರಿಸಿದ್ದರು ಅನರ್ಹ ಶಾಸಕರು ಎಚ್ಚೆತ್ತುಕೊಳ್ಳಲಿಲ್ಲ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ತ್ವರಿತ ವಿಚಾರಣೆ ನಡೆಯದೇ ಇರುವುದು ಕಾಂಗ್ರೆಸ್ ನಾಯಕರು ಅಂದು ನುಡಿದ ಭವಿಷ್ಯ ನಿಜವಾಗುತ್ತಿದೆಯಲ್ಲಾ ಎಂಬ ದಿಗಿಲಿಗೆ ಬಿದ್ದಿದ್ದಾರೆ.

ಸದ್ಯ ರಾಜ್ಯ ಬಿಜೆಪಿಯಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಎಲ್ಲವೂ ಬಿಜೆಪಿ ಹೈಕಮಾಂಡ್ ನಿರ್ದೇಶನದಂತೆ ನಡೆಯುತ್ತಿದೆ. ಹೆಸರಿಗೆ ಯಡಿಯೂರಪ್ಪ ಸಿಎಂ ಆಗಿದ್ದರೂ ಅವರ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ ಕೊಕ್ಕೆ ಹಾಕುತ್ತಿದೆ. ಅನರ್ಹ ಶಾಸಕರನ್ನು ಪಕ್ಷದೊಳಗೆ ಬಿಟ್ಟುಕೊಳ್ಳಲು ಬಿಜೆಪಿ ಹೈಕಮಾಂಡ್ ಬಿಲ್ ಕುಲ್ ಸಿದ್ಧವಿಲ್ಲ. ಇದೇ ಕಾರಣಕ್ಕೆ ತಮ್ಮನ್ನು ಭೇಟಿಯಾಗಲು ಬಯಸಿ ಬಂದಿದ್ದ ಅನರ್ಹರನ್ನು ಅಮಿತ್ ಶಾ ಭೇಟಿಯಾಗಲು ನಿರಾಕರಿಸಿದ್ದಾರೆ. ಸದ್ಯ ಹಲ್ಲು ಕಿತ್ತ ಹಾವಿನಂತಾಗಿರುವ ಯಡಿಯೂರಪ್ಪನವರು ಅನರ್ಹ ಶಾಸಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಕಣ್ಣೀರು ಸುರಿಸಲಷ್ಟೇ ಶಕ್ತರಾಗಿದ್ದಾರೆ.

Leave a Reply