ಮೋದಿ ಕುರಿತ ಶಶಿ ತರೂರ್ ಉಪದೇಶ ಕೇವಲ ಕಾಂಗ್ರೆಸ್ ಗೆ ಮಾತ್ರ ಸೀಮಿತವಲ್ಲ!

ಸೋಮಶೇಖರ ಪಿ. ಭದ್ರಾವತಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕೆ ಮಾಡುತ್ತಾ ಸುದ್ದಿಯಾಗುತ್ತಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ಈಗ ಮತ್ತೆ ಚರ್ಚೆಯ ವಸ್ತುವಾಗಿದ್ದಾರೆ. ಜಸ್ಟ್ ಫಾರ್ ಎ ಚೇಂಜ್, ಈ ಬಾರಿ ಮೋದಿ ಗುಣಗಾನ ಮಾಡಿರೋದು ವಿಶೇಷ.

ಹೌದು, ‘ಮೋದಿ ಒಳ್ಳೆ ಕೆಲಸ ಮಾಡಿದಾಗ ನಾವು ಅದನ್ನು ಸ್ವಾಗತಿಸಬೇಕು. ಆಗ ಅವರು ತಪ್ಪು ಮಾಡಿದಾಗ ನಮ್ಮ ಟೀಕೆಗೆ ಬೆಲೆ ಇರುತ್ತದೆ. ಅದನ್ನು ಜನರೂ ಒಪ್ಪುತ್ತಾರೆ’ ಎಂದು ಶಶಿ ತರೂರ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಶಶಿ ತರೂರ್ ಕಾಂಗ್ರೆಸ್ ನಾಯಕರಿಂದ ಕಾರ್ಯಕರ್ತರವರೆಗೂ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ ತಮ್ಮ ಹೇಳಿಕೆಗೆ ವಿವರಣೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ತರೂರ್ ಗೆ ನೋಟಿಸ್ ನೀಡಿದೆ.

ಇವೆಲ್ಲದರ ಹೊರತಾಗಿಯೂ ಶಶಿ ತರೂರ್ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ನೀಡಿದ ಸ್ಪಷ್ಟನೆಯಲ್ಲಿ, ‘ಕಾಂಗ್ರೆಸ್ ತನ್ನ ತಂತ್ರಗಾರಿಕೆ ಬದಲಿಸಿಕೊಳ್ಳಬೇಕು. ನಾವು ಮೋದಿ ವಿರುದ್ಧ ಮಾಡುವ ಟೀಕೆ ಜನರಿಗೆ ಸರಿ ಎಂದು ವಿಶ್ವಾಸ ಮೂಡಿಸಬೇಕು. ಮೋದಿ ಮಾಡಿದ ಎಲ್ಲ ಕೆಲಸಗಳನ್ನು ನಾವು ಟೀಕಿಸಿದರೆ ಅವರಿಗೆ ಮತ ಹಾಕಿದ ಮತದಾರರನ್ನು ಮೂರ್ಖರು ಎಂದು ಹೇಳಿದಂತಾಗುತ್ತದೆ. 2014ರ ಚುನಾವಣೆಯಲ್ಲಿ ಮೋದಿ ಪಡೆದ ಮತ ಪ್ರಮಾಣ ಶೇ.31ರಷ್ಟು. 2019ರಲ್ಲಿ ಇದು ಶೇ.37ಕ್ಕೆ ಏರಿಕೆಯಾಗಿದೆ. ಮೋದಿ ಏನಾದರು ಮಾಡುತ್ತಾರೆ ಎಂಬ ವಿಶ್ವಾಸ ಜನರಲ್ಲಿದೆ. ಇದು ವಾಸ್ತವ ಇದನ್ನು ನಾವು ಒಪ್ಪಲೇಬೇಕು. ನಾವು ಕೇವಲ ನಮ್ಮ ಕಾರ್ಯಕರ್ತರ ವಿಶ್ವಾಸ ಮಾತ್ರ ಗಳಿಸಿದರೆ ಸಾಲದು, ಬಿಜೆಪಿ ಪರ ವಾಲುತ್ತಿರುವ ಜನರ ವಿಶ್ವಾಸ ಗಳಿಸುವುದು ಮುಖ್ಯ’ ಎಂದು ತರೂರ್ ವಿವರಿಸಿದ್ದಾರೆ.

ನಿಜ, ಶಶಿ ತರೂರ್ ಅವರ ಮಾತಿನಲ್ಲಿ ಅರ್ಥ ಇದೆ. ಬಿಜೆಪಿ ತಂತ್ರಗಾರಿಕೆ ಮುಂದೆ ಮಕಾಡೆ ಮಲಗಿರುವ ಎಲ್ಲ ವಿರೋಧ ಪಕ್ಷಗಳು ಶಶಿ ತರೂರ್ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು. ಆಗ ಮಾತ್ರ ದೇಶ ಮೋದಿ ಅಲೆಯನ್ನು ಸ್ವಲ್ಪ ಮಟ್ಟಿಗಾದರೂ ತಡೆಯಲು ಸಾಧ್ಯ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದ ಸಾಮಾನ್ಯ ಜನರ ಭಾವನೆ ಹಾಗೂ ವಿರೋಧ ಪಕ್ಷಗಳ ದೌರ್ಬಲ್ಯಗಳನ್ನೇ ಟಾರ್ಗೆಟ್ ಮಾಡುತ್ತಿದೆ. ಗೋಹತ್ಯೆ, ವಂದೇ ಮಾತರಂ, ರಾಷ್ಟ್ರೀಯತೆ, ಕಾಶ್ಮೀರ, ರಾಮ ಮಂದಿರ, ಭಾರತ್ ಮಾತಾ ಕಿ ಜೈ… ಹೀಗೆ ಅನೇಕ ಭಾವನಾತ್ಮಕ ವಿಚಾರಗಳು ಬಿಜೆಪಿಗೆ ಚುನಾವಣೆ ಅಸ್ತ್ರವಾಗಿವೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಈ ವಿಚಾರಗಳಲ್ಲೂ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳ ನಾಯಕರ ಹೇಳಿಕೆಗಳು ತಿರುಗುಬಾಣವಾಗಿ ಅವರನ್ನೇ ನಾಟಿವೇ. ಬಿಜೆಪಿ ಇಂತಹ ಭಾವನಾತ್ಮಕ ವ್ಯೂಹ ರಚಿಸಿ ವಿರೋಧ ಪಕ್ಷಗಳನ್ನು ಸಿಲುಕಿಸಿ ಚುನಾವಣೆಯಲ್ಲಿ ಮಕಾಡೆ ಮಲಗುವಂತೆ ಮಾಡಿದೆ.

ಚುನಾವಣೆ ಸಂದರ್ಭದಲ್ಲಿ ಮೋದಿ ಹಾಗೂ ಬಿಜೆಪಿ ತಮ್ಮ ಮೇಕ್ ಇನ್ ಇಂಡಿಯಾ, ಮುದ್ರಾ ಹಾಗೂ ಇತರೆ ಯೋಜನೆಗಳಿಗಿಂತ ಹೆಚ್ಚಾಗಿ ಪ್ರಯೋಗಿಸಿದ್ದು ಈ ಭಾವನಾತ್ಮಕ ಅಸ್ತ್ರಗಳನ್ನೇ. ಇನ್ನು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ನಿರ್ಧಾರವನ್ನೇ ತಗೊಳಿ ಆಗಲೇ ಬಿಜೆಪಿ ಇದನ್ನು 2024ರ ಚುನಾವಣೆಯ ಅಸ್ತ್ರವಾಗಿ ಬಳಸಿಕೊಳ್ಳಲು ಆರಂಭಿಸಿದೆ. ಆದರೆ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಇನ್ನು ಚುನಾವಣೆಯಲ್ಲಿನ ಸೋಲಿನ ಪೆಟ್ಟನ್ನು ಸುಧಾರಿಸಿಕೊಳ್ಳುವುದರಲ್ಲೇ ಸಮಯ ಕಳೆಯುತ್ತಿದೆ.

ಬಿಜೆಪಿಯ ಈ ಭಾವನಾತ್ಮಕ ಅಸ್ತ್ರಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದರೆ, ತಮ್ಮ ವೈಫಲ್ಯಗಳನ್ನು ಪ್ರಶ್ನಿಸಬೇಕಾದ ಜನರೇ ಅವರ ಪರವಾಗಿ ನಿಲ್ಲುವಂತೆ ಮಾಡಿದೆ. ಉದಾಹರಣೆಗೆ ಯುಪಿಎ 2ನೇ ಅವಧಿ ವೇಳೆ ಹಣ ದುಬ್ಬರ, ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿಂಜರಿತ ಎದುರಾದಾಗ ಬೀದಿಗಿಳಿದು ಹೋರಾಡಿದವರು, ಇಂದು ಮೋದಿ ಸರ್ಕಾರದ ಅವಧಿಯಲ್ಲಿ ಇದೇ ನಿರುದ್ಯೋಗ, ಆರ್ಥಿಕ ಹಿಂಜರಿತ, ಕೈಗಾರಿಕೆಗಳ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಕೇಂದ್ರ ಸರ್ಕಾರದ ವಕ್ತಾರರಂತೆ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಣೆಗೆ ನಿಂತಿದ್ದಾರೆ.

ಪೀಣ್ಯ ಕೈಗಾರಿಕ ಪ್ರದೇಶ, ಶಿವಮೊಗ್ಗ ಕೈಗಾರಿಕೆಗಳು ಆರ್ಥಿಕ ಹಿಂಜರಿತದಿಂದ ತತ್ತರಿಸಿ ಬಾಗಿಲು ಮುಚ್ಚುತ್ತಿವೆ ಎಂಬ ಸುದ್ದಿಗಳು ವರದಿಯಾಗುತ್ತಿವೆ. ಇನ್ನು ರಾಜ್ಯದಲ್ಲೇ 6000 ಕೈಗಾರಿಕೆಗಳು ನಷ್ಟದಲ್ಲಿವೆ. 20 ಲಕ್ಷಕ್ಕೂ ಹೆಚ್ಚು ಉದ್ಯೋಗಕ್ಕೆ ಕುತ್ತು ಬಂದಿವೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹೇಳಿದೆಯಾದರೂ ಯಾರು ಕೂಡ ಈ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ. ಬದಲಿಗೆ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಕೇಂದ್ರವನ್ನು ಸಮರ್ಥಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ಬಿಜೆಪಿಯ ತಂತ್ರಗಾರಿಕೆ ಯಾವ ಮಟ್ಟದಲ್ಲಿ ಜನರನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ ಎಂದು.

ಬಿಜೆಪಿ ತನ್ನ ತಂತ್ರಗಾರಿಕೆಯಲ್ಲಿ ಸಾಕಷ್ಟು ಮುಂದುವರಿದಿದೆ. ಆದರೆ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಇನ್ನು 80ರ ದಶಕದ ಕಾಲದ ತಂತ್ರಗಾರಿಕೆಯನ್ನೇ ಬಳಸುತ್ತಿದೆ. ಇದನ್ನೇ ಶಶಿ ತರೂರು ಹೇಳುತ್ತಿರುವುದು. ಜನರ ಭಾವನಾತ್ಮಕ ವಿಚಾರಗಳಲ್ಲಿ ಬಿಜೆಪಿಯನ್ನು ಟೀಕಿಸುವ ಬದಲು ಸರ್ಕಾರದ ವೈಫಲ್ಯಗಳನ್ನು ಟೀಕಿಸಿ ಜನರ ವಿಶ್ವಾಸ ಗಳಿಸಿ ಎಂದು. ಇದನ್ನು ಅರ್ಥ ಮಾಡಿಕೊಳ್ಳದ ಹೊರತಾಗಿ ಕಾಂಗ್ರೆಸ್ ಸೇರಿದಂತೆ ಯಾವುದೇ ವಿರೋಧ ಪಕ್ಷಗಳು ಬಿಜೆಪಿಯನ್ನು ಎದುರಿಸಲು ಆಗುವುದಿಲ್ಲ.

Leave a Reply