ಕೈಗಾ ಅಣು ಕೇಂದ್ರದಲ್ಲಿ ನಡೆಯುತ್ತಾ ಫೋನ್ ಟ್ಯಾಪಿಂಗ್..?

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಫೋನ್ ಟ್ಯಾಪಿಂಗ್ ನಡೆದಿತ್ತು ಅನ್ನೋದು ಹಳೇ ಆರೋಪ. ಆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಈ ನಡುವೆ ಈಗಿನ ಸರ್ಕಾರ ಕೂಡ ಫೋನ್ ಟ್ಯಾಪಿಂಗ್ ನಡೆಸುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಅದರಲ್ಲೂ ದೇಶದ ಪ್ರಮುಖ ಅಣು ಕೇಂದ್ರ ಕೈಗಾದಲ್ಲಿ ಟ್ಯಾಪಿಂಗ್ ಕೇಂದ್ರ ಸ್ಥಾಪನೆ ಆಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ, ಮನವರಿಕೆ ಮಾಡಿದ್ದಾರೆ. ಜೊತೆಗೆ ಟೆಲಿಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸುವಂತೆ ಆಗ್ರಹಿಸಿ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. 2008 ರಿಂದ ಈ ವರೆಗೂ ಆಗಿರುವ ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಕೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ರಮೇಶ್ ಬಾಬು, ಕಳೆದ ಕೆಲವು ತಿಂಗಳಲ್ಲಿ ಫೋನ್ ಕದ್ದಾಲಿಕೆ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಈ ವಿಚಾರವನ್ನು ಸಿಬಿಐ ತನಿಖೆಗೂ ಒಳಪಡಿಸಲಾಗಿದೆ. ಇದು ಕೇವಲ ರಾಜಕೀಯ ಕಾರಣಗಳಿಗಾಗಿ ತೆಗೆದುಕೊಂಡಿರುವ ಕ್ರಮ ಅಷ್ಟೇ. ಅದರೆ ಸರ್ಕಾರ ನಡೆಸುವವರು ಈ ವಿಚಾರದಲ್ಲಿ ನ್ಯಾಯಯುತವಾಗಿ ನಡೆದು ಕೊಳ್ತಿಲ್ಲ ಎಂದು ಆರೋಪಿಸಿದರು. ಇತ್ತೀಚಿಗೆ ಒಂದು ದಿನ ನನಗೆ ಮಾಧ್ಯಮ ಒಂದರ ಹೆಸರು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ, ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ಕೊಟ್ಟಿರುವ ಹೇಳಿಕೆ ಬಗ್ಗೆ ನಿಮ್ಮ ಪಕ್ಷದಲ್ಲಿ ಹೇಗೆ ಚರ್ಚೆ ನಡೆಯುತ್ತಿದೆ ಎಂದು ಕೇಳಿದ್ರು. ನನಗೆ ಆ ಕರೆ ಬಗ್ಗೆ ಅನುಮಾನ ಬಂದು, ಆ ಮಾಧ್ಯಮ ಕಚೇರಿಗೆ ಕರೆ ಮಾಡಿ ವಿಚಾರಿಸಿದೆ. ಆದ್ರೆ ಮಾಧ್ಯಮ ಸಂಸ್ಥೆಯಲ್ಲಿ ಆ ದೂರವಾಣಿ ಸಂಖ್ಯೆಯೇ ಇಲ್ಲ ಎಂಬುದು ಖಚಿತವಾಯ್ತು ಎಂದಿದ್ದಾರೆ. ಗುಪ್ತಚರ ಇಲಾಖೆ ಸಿಬ್ಬಂದಿ ಫೋನ್ ಮಾಡಿ ಮಾಹಿತಿ ಪಡೆಯಲು ಯತ್ನಿಸಿದ್ರು ಅನ್ನೋದು ಖಚಿತವಾಯ್ತು ಎಂದಿದ್ದಾರೆ.

ಯಡಿಯೂರಪ್ಪ ಅವರ ಅವಧಿಯಲ್ಲಿ ಪ್ರತಿಪಕ್ಷ ಮುಖಂಡರ ಫೋನ್ ಕದ್ದಾಲಿಕೆ ಆಗ್ತಿದೆ. ಈ ಬಗ್ಗೆ ದೂರು ದಾಖಲಿಸಿದ್ದೇನೆ. ಇನ್ನು ಈ ಹಿಂದೆ ಟೆಲಿಫೋನ್ ಕದ್ದಾಲಿಕೆ ಮಾಡಿದ ಆರೋಪ ಸಿಬಿಐ ಮೇಲಿದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸೋದು ಸರಿಯಲ್ಲ ಎಂದಿರುವ ಅವರು, ರಾಜ್ಯದ ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನ ಎಸ್‌ಐಟಿಗೆ ವಹಿಸಬೇಕು ಎಂದಿದ್ದಾರೆ.

ಕೈಗಾ ಅಣುಸ್ಥಾವರದಲ್ಲಿ ಗುಪ್ತಚರ ವಿಭಾಗ ರಚಿಸಿ ಎಡಿಜಿಪಿ ಮಟ್ಟದ ಅಧಿಕಾರಿ ನೇಮಕ ಮಾಡಿದ್ದಾರೆ. ಅಧಿಕಾರಿಗಳು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಆದ್ರೆ ಪ್ರತಿಪಕ್ಷ ನಾಯಕರ ದೂರವಾಣಿ ಕದ್ದಾಲಿಕೆ ಮಾಡ್ತಿದ್ದಾರೆ. ಅವರು ಆ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Leave a Reply