ಬಿಜೆಪಿಗೆ ಅಧಿಕಾರದ ಮೇಲಿರುವ ಆತುರ, ಪ್ರೀತಿ ಬಡವರ ಮೇಲಿಲ್ಲ: ಡಿಕೆ ಶಿವಕುಮಾರ್ ಟೀಕೆ

ಡಿಜಿಟಲ್ ಕನ್ನಡ ಟೀಮ್:

‘ಪ್ರವಾಹದಿಂದ ಜನರ ಬದುಕು ಬೀದಿಗೆ ಬಿದ್ದಿದ್ದರೂ ಈವರೆಗೂ ಕೇಂದ್ರ ಸರ್ಕಾರ ನಯಾ ಪೈಸೆ ಪರಿಹಾರ ಘೋಷಣೆ ಮಾಡಿಲ್ಲ. ಬಿಜೆಪಿ ನಾಯಕರಿಗೆ ಅಧಿಕಾರದ ಮೇಲಿರುವ ಆತುರ- ಪ್ರೀತಿ, ಬಡ ಜನರ ಮೇಲಿಲ್ಲ. ಅಧಿಕಾರ ಇಲ್ಲದಿದ್ದಾಗ ಬಿಜೆಪಿ ನಾಯಕರು ಬಡವರ ಮೇಲೆ ತೋರಿದ್ದ ಹೃದಯ ಶ್ರೀಮಂತಿಕೆಯನ್ನು ಅಧಿಕಾರಕ್ಕೆ ಬಂದ ಮೇಲೆ ತೋರುತ್ತಿಲ್ಲ’ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ರಾಜ್ಯದ ನೆರೆ-ಬರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರದೇಶ ಕಾಂಗ್ರೆಸ್ ವತಿಯಿಂದ ಬೆಂಗಳೂರಿನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಡಿಕೆ ಶಿವಕುಮಾರ್, ರಮಾನಾಥ ರೈ, ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ಈ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

‘ರಾಜ್ಯದಲ್ಲಿ ಉಂಟಾಗಿರುವ ನೆರೆ ವಿಚಾರವಾಗಿ ಚರ್ಚೆ ಮಾಡಿ ಸಲಹೆಗಳನ್ನು ನೀಡಲು ವಿಶೇಷ ಅಧಿವೇಶನ ಕರೆಯಬೇಕು ಎಂದು ನಮ್ಮ ನಾಯಕರೆಲ್ಲರೂ ಒತ್ತಾಯಿಸುತ್ತಿದ್ದಾರೆ.  ಈ ಸರ್ಕಾರ ರಚನೆ ಆದ ಮೇಲೆ ಇಲ್ಲಿಯವರೆಗೂ ಸರ್ಕಾರದ ಜವಾಬ್ದಾರಿ ಏನಿರಬೇಕಿತ್ತು, ಆದರೆ ಏನಾಗಿದೆ ಎಂಬುದರ ಬಗ್ಗೆ ಪಕ್ಷದ ಕಾರ್ಯಕರ್ತರಾದ ನೀವುಗಳು ಜನರ ಗಮನ ಸೆಳೆಯಬೇಕು. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರುಗಳು ಏನೇನು ಮಾತನಾಡಿದರು ಎಂದು ನಿಮಗೆಲ್ಲ ಗೊತ್ತು. ಪ್ರವಾಹ ಬಂದ ಮೂರೇ ದಿನಕ್ಕೆ 50 ಸಾವಿರ ಕೋಟಿ ನಷ್ಟ ಅಂತಾ ಹೇಳಿದ್ರು. ಈಗ 1 ಲಕ್ಷ ಕೋಟಿವರೆಗೂ ನಷ್ಟ ಆಗಿದೆ ಎಂದು ಹೇಳುತ್ತಿದ್ದಾರೆ.

ಯಡಿಯೂರಪ್ಪನವರೆ ರಾಜ್ಯದಲ್ಲಿ ನಿಮ್ಮ ಸರ್ಕಾರ ಇದೆ. ಕೇಂದ್ರದಲ್ಲೂ ನಿಮ್ಮ ಸರ್ಕಾರ ಇದೆ. ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಇಲ್ಲಿಂದಲೇ ಆಯ್ಕೆಯಾದವರು ಕೇಂದ್ರ ಹಣಕಾಸುಮಂತ್ರಿಯಾಗಿದ್ದಾರೆ. ಇವರು ಪ್ರವಾಹ ಪ್ರರಿಸ್ಥಿತಿ ನೋಡಿದ್ದಾರೆ. ಜತೆಗೆ ಕೇಂದ್ರ ಗೃಹ ಮಂತ್ರಿಗಳು ಕೂಡ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಆದರೂ ಈವರೆಗೂ ನಯಾ ಪೈಸೆ ಪರಿಹಾರ ಹಣ ಬಿಚ್ಚಿಲ್ಲ.

ಪ್ರವಾಹದ ವಿಚಾರದಲ್ಲಿ ನಾವುಗಳು ನಿಮ್ಮ ವಿರುದ್ಧ ಯಾವುದೇ ತಕರಾರು ಮಾಡಲು ಹೋಗಲ್ಲ. ವಿರೋಧ ಪಕ್ಷವಾಗಿ ನಿಮಗೆ ಬೇಕಾದ ಸಂಪೂರ್ಣ ಸಹಕಾರ ನೀಡುವುದಾಗಿಯೂ ಹೇಳಿದ್ದೇವೆ. ಯಡಿಯೂರಪ್ಪನವರೇ ನೀವು ಮಾತೆತ್ತಿದರೆ, ನಾನು ಬಸವಣ್ಣನ ನಾಡಿನಿಂದ ಬಂದವನು. ಬಸವಣ್ಣನವರ ತತ್ವ ಅನುಸರಿಸುತ್ತೇನೆ ಅಂತಾ ಹೇಳುತ್ತೀರಿ. ಈಗ ನೀವು ನುಡಿದಂತೆ ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಪ್ರವಾಹ ಸಂತ್ರಸ್ತರಿಗೆ ತಿಂಗಳಿಗೆ ಮನೆ ಬಾಡಿಗೆಗಾಗಿ 5 ಸಾವಿರ ಕೊಡುತ್ತೇವೆ. ಹಾಳಾಗಿರುವ ಮನೆ ನಿರ್ಮಾಣ ಮಾಡಲು 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದೀರಿ. ನಾನು ಕೆಲವು ತಾಲೂಕುಗಳಲ್ಲಿ ಭೇಟಿ ಮಾಡಿದೆ. ಕುಂದಗೋಳದಲ್ಲಿ ಅಂದಾಜು 15-20 ಜನರಿಗೆ ಚೆಕ್ ನೀಡಲಾಗಿತ್ತು. ಆದರೆ ಬೆಳಗಾವಿಗೆ ಹೋದರೆ ಯೋರೋಬ್ಬರಿಗೂ ಒಂದೇ ಒಂದು ಪೈಸೆ ಕೊಟ್ಟಿಲ್ಲ. ನೀವು ನುಡಿದಂತೆ ನಡೆಯಿರಿ ಸ್ವಾಮಿ.

ಕೇಂದ್ರ ಸರ್ಕಾರದ ಎನ್ ಡಿಆರ್ ಎಫ್ ನೀತಿಯನ್ನು ನೀವು ಮತ್ತೆ ಕೇಂದ್ರ ಸರ್ಕಾರ ಕೂತು ಬದಲಾಯಿಸಿಕೊಂಡು ರಾಜ್ಯದ ಜನರಿಗೆ ಸಹಾಯ ಮಾಡಿ. ಅಧಿಕಾರ ಇಲ್ಲದಿದ್ದಾಗ ಬಡವರ ಬಗ್ಗೆ ತೋರುತ್ತಿದ್ದ ಹೃದಯ ಶ್ರೀಮಂತಿಕೆಯನ್ನು ಈಗ ಅಧಿಕಾರದಲ್ಲಿರುವಾಗ ತೋರಿಸಬೇಕು. ಕೇಂದ್ರ ಹಣಕಾಸು ಮಂತ್ರಿ ಹಾಗೂ ಗೃಹ ಮಂತ್ರಿ ಬಂದು ಪಿರಿಸ್ಥಿತಿ ನೋಡಿ ತುಟಿಕ್ ಪಿಟಿಕ್ ಅನ್ನದೇ ಹೋಗಿದ್ದಾರೆ ಎಂದರೆ ನಿಮಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂಬುದು ಗೊತ್ತಾಗುತ್ತದೆ.

ನಿಮಗೆ ಕುರ್ಚಿಯ ಬಗ್ಗೆ ಇದ್ದ ಕಾಳಜಿ ಆತುರ, ಬಡ ಜನರ ಮೇಲಿಲ್ಲ. ನಮ್ಮ ಮೈತ್ರಿ ಸರ್ಕಾರ ರಚನೆ ಆದಾಗ ಅವತ್ತೇ ಬಡವರ ಸಾಲದ ಬಗ್ಗೆ ಆತುರ ತೋರಿದ್ದಿರಿ. ಆದರೆ ಈಗ ಏನಾಯ್ತು ನಿಮ್ಮ ಆತುರ? ಎಲ್ಲಿ ಹೋಯ್ತು? ಪ್ರವಾಹ ಪರಿಸ್ಥಿತಿ ಬಂದಾಗ ನಿಮ್ಮಲ್ಲಿ ಮಂತ್ರಿ ಇರಲಿಲ್ಲ ಬಿಡಿ. ಆದರೆ ನಿಮ್ಮ ಶಾಸಕರುಗಳು ಎಲ್ಲಿದ್ದರು?

ನೀವು ಹೇಳಿದಂತೆ 1 ಲಕ್ಷ ಕೋಟಿ ನಷ್ಟವಾಗಿದೆ. ನೂರಾರು ಮಂದಿ ಸತ್ತಿದ್ದು, ಸಾವಿರಾರು ಜಾನುವಾರುಗಳು ಕೊಚ್ಚಿಹೋಗಿವೆ. ಬೆಳೆಗಳು ನಾಶವಾಗಿದ್ದು ರೈತರಿಗೆ ಅಪಾರ ನಷ್ಟವಾಗಿದೆ. ಇನ್ನು ಪ್ರವಾಹದಲ್ಲಿ ನದಿಯಲ್ಲಿದ್ದ ಮೊಸಳೆಗಳೆಲ್ಲಾ ಊರೊಳಗೆ ಬಂದಿವೆ. ನನ್ನ ಕ್ಷೇತ್ರದಲ್ಲೂ ಸಂಗಮದ ಪ್ರವಾಹದಿಂದ ಮೊಸಳೆಗಳು ಗ್ರಾಮಗಳಿಗೆ ಪ್ರವೇಶಿಸಿದ್ದವು. ತಕ್ಷಣೆವೆ ಗ್ರಾಮದ ಜನರನ್ನು ಸ್ಥಳಾಂತರಿಸಿ ನಂತರ ಮೊಸಳೆಗಳನ್ನು ಅರಣ್ಯಕ್ಕೆ ಶಿಫ್ಟ್ ಮಾಡಿಸಿದೆವು. ಹೀಗೆ ಕಾವೇರಿ, ಕೃಷ್ಣ, ತುಂಗಭದ್ರಾ ನದಿ ಪಾತ್ರದ ಪ್ರದೇಶಗಳ ಜನರು ಆತಂಕದಿಂದ ಬದುಕುವಂತಾಗಿದೆ. ಸರ್ಕಾರ ಇವರಿಗೆ ಶಕ್ತಿ ಕೊಡಬೇಕು. ಕೇವಲ ನಿಮ್ಮ ಖಾಲಿ ಮಾತುಗಳನ್ನು ಯಾರು ಕೇಳುವುದಿಲ್ಲ. ನಮ್ಮ ಪಕ್ಷದ ಶಾಸಕರುಗಳು ನಮ್ಮ ಒಂದು ತಿಂಗಳ ವೇತನವನ್ನು ನೀಡುವುದಾಗಿ ಘೋಷಣೆ ಮಾಡಿದ್ದೇವೆ. ಇನ್ನು ನನ್ನ ಶಾಸಕ ನಿಧಿಯಿಂದ 50 ಲಕ್ಷ ಘೋಷಣೆ ಮಾಡಿದ್ದೇನೆ.

ಬಡವರ ಕಣ್ಣೀರು ಒರೆಸಲು ನಿಮಗೆ ಅವಕಾಶ ಸಿಕ್ಕಿದೆ. ಅವರಿಗೆ ಸಹಾಯ ಮಾಡದಿದ್ದರೆ ಬಡವರ ಶಾಪಕ್ಕೆ ನೀವು ತುತ್ತಾಗುತ್ತೀರಿ ಎಂದು ಹೇಳುತ್ತೇನೆ. ಯಡಿಯೂರಪ್ಪನವರೇ ವಿಧಾನಸಭೆಯಲ್ಲಿ ಏನು ಹೇಳಿದ್ರಿ? ದ್ವೇಷದ ರಾಜಕಾರಣ ಮಾಡುವುದಿಲ್ಲ ಅಂತಾ ಹೇಳಿ ಈಗ ದ್ವೇಷದ ರಾಜಕಾರಣ ಆರಂಭಿಸಿದ್ದೀರಿ. ನಿಮ್ಮ ಅದಿಕಾರ ದುರುಪಯೋಗ ಮಾಡಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿರುವುದನ್ನು ನಾಳೆ ಮಾಧ್ಯಮದ ಮೂಲಕ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಹೇಳುತ್ತೇನೆ. ಉತ್ತಮ ಆಡಳಿತ ಕೊಡುತ್ತೇವೆ ಅಂತಾ ನೀವು ಮಾತು ಕೊಟ್ಟಿದ್ದೀರಿ. ಆದರೆ ಆರಂಭದಿಂದ ಇಲ್ಲಿಯವರೆಗೂ ಪ್ರತಿ ಹಂತದಲ್ಲೂ ನೀವು ಎಡವಿದ್ದೀರಿ. ಈಗಾಗಲೇ ನಿಮ್ಮ ಆಡಳಿತ ನೋಡಿ ನಿಮ್ಮ ಸರ್ಕಾರಕ್ಕೆ ಹೆಚ್ಚು ಆಯಸ್ಸು ಇಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅಸ್ಥಿರತೆ ನಿರ್ಮಾಣವಾಗಿದ್ದು, ಬಡ ಜನರ ನೋವಿಗೆ ಸ್ಪಂಧಿಸಿ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ.

Leave a Reply