ಅಧಿಕಾರ ಶಾಶ್ವತ ಅಲ್ಲ, ದ್ವೇಷದ ರಾಜಕಾರಣ ಮಾಡಬೇಡಿ: ಡಿಕೆ ಶಿವಕುಮಾರ್ ಮನವಿ

ಡಿಜಿಟಲ್ ಕನ್ನಡ ಟೀಮ್:

ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ರದ್ದುಗೊಳಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಈಗಾಗಲೇ ದ್ವೇಷದ ರಾಜಕಾರಣ ಆರಂಭಿಸಿದೆ. ಇದು ಯಡಿಯೂರಪ್ಪನವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್ ಹೇಳಿದ್ದಿಷ್ಟು…

‘ಸದನದಲ್ಲಿ ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದ ಸಿಎಂ ಯಡಿಯೂರಪ್ಪನವರು ತಮ್ಮ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಆರಂಭವಾಗಿದೆ. ನನ್ನ ಕ್ಷೇತ್ರ ಕನಕಪುರಕ್ಕೆ ನೀಡಲಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ನೀಡಿದ್ದಾರೆ. ನಿನ್ನೆ ನಮಗೆ ನೀಡಲಾಗಿದ್ದ ವೈದ್ಯಕೀಯ ಕಾಲೇಜು ಮಂಜೂರಾತಿ ರದ್ದತಿ ಆದೇಶ ನಿನ್ನೆ ಬೆಳಗ್ಗೆ ನನ್ನ ಕೈ ಸೇರಿದೆ.

ರಾಹುಲ್ ಗಾಂಧಿ ಅವರು ನನಗೆ ಹೆಚ್ಚುವರಿಯಾಗಿ ಯಾವ ಖಾತೆ ಬೇಕು ಎಂದು ಕೇಳಿದಾಗ ನನ್ನ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ನೀಡಲು ವೈದ್ಯಕೀಯ ಶಿಕ್ಷಣ ಇಲಾಖೆ ಪಡೆದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರಕಾರದಲ್ಲೇ ಈ ಬೇಡಿಕೆ ಇಟ್ಟಿದ್ದೆ. ಆದರೆ ಅದು ಆಗಿರಲಿಲ್ಲ. ಕುಮಾರಸ್ವಾಮಿ ಅವರು ನನ್ನ ಮನವಿಗೆ ಒಪ್ಪಿ ಕನಕಪುರಕ್ಕೆ ಕಾಲೇಜು ಮಂಜೂರು ಮಾಡಿದರು. ಇದರ ವರ್ಕ್ ಆರ್ಡರ್ ಪಾಸಾಗಿ, ಭೂಮಿ ಪೂಜೆ ಮಾಡಿ ಕಾಲೇಜು ನಿರ್ಮಾಣ ಕಾರ್ಯ ಆರಂಭಿಸುವಾಗ ಮಂಜೂರು ರದ್ದು ಮಾಡಲಾಗಿದೆ.

ಕೇವಲ ನನ್ನ ಕ್ಷೇತ್ರ ಮಾತ್ರವಲ್ಲ ನಮ್ಮ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಸುಮಾರು ನೂರು ಶಾಸಕರ ಕ್ಷೇತ್ರಗಳಲ್ಲಿ ನೀಡಲಾಗಿದ್ದ ಯೋಜನೆಗಳನ್ನು ಯಡಿಯೂರಪ್ಪನವರ ಸಂಪುಟ ರದ್ದು ಮಾಡಿದೆ. ಇಂತಹ ದ್ವೇಷದ ರಾಜಕಾರಣ ಬೇಡ.

ನೀವು ಚಿಕ್ಕಬಳ್ಳಾಪುರಕ್ಕೆ ಮಾತ್ರ ಅಲ್ಲ ಇನ್ನೂ 20 ಕಡೆ 100 ಕಾಲೇಜಿಗೆ ಅನುಮತಿ ನೀಡಿ ನಮ್ಮ ಅಭ್ಯಂತರವಿಲ್ಲ. ಆದರೆ ನಮಗೆ ನೀಡಿರುವ ಕಾಲೇಜು ಕಸಿದುಕೊಳ್ಳಬೇಡಿ. ನಮ್ಮ ಸರ್ಕಾರದಲ್ಲಿ ನಾವು ಈ ರೀತಿ ರಾಜಕಾರಣ ಮಾಡಿಲ್ಲ. ನನ್ನ ಸಚಿವಾಲಯದಿಂದ ಅನೇಕ ಬಿಜೆಪಿ ಶಾಸಕರು ತಮಗೆ ಬೇಕಾದ ಕೆಲಸ ಮಾಡಿಕೊಂಡಿದ್ದಾರೆ.

ಶನಿವಾರದ ಒಳಗಾಗಿ ಮತ್ತೆ ನಮ್ಮ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಹಬ್ಬ ಹರಿದಿನ ನೋಡುವುದಿಲ್ಲ. ನಮಗೆ ವೈದ್ಯಕೀಯ ಕಾಲೇಜು ಸಿಕ್ಕರೆ ಅದೇ ದೊಡ್ಡ ಹಬ್ಬ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ನೀಡಲಾಗಿದ್ದ ಯೋಜನೆ ರದ್ದು ಮಾಡಿದರೆ ನಾವೆಲ್ಲರು ಒಟ್ಟಾಗಿ ಹೋರಾಡುತ್ತೇವೆ.

ನನ್ನ ಕ್ಷೇತ್ರದ ಜನರು ನನಗೆ 80 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ನಮ್ಮ ಏಕೈಕ ಸಂಸದ ನನ್ನ ಸಹೋದರನನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮತದಾರರು ಲಕ್ಷಕ್ಕೂ ಹೆಚ್ಚು ಅಂತರದ ಮತಗಳಿಂದ ಗೆಲ್ಲಿಸಿದ್ದಾರೆ. ಈ ಕಾರಣಕ್ಕಾಗಿ ನಮ್ಮ ಕ್ಷೇತ್ರಕ್ಕೆ ನೀಡಿರುವ ಯೋಜನೆ ಕಿತ್ತುಕೊಳ್ಳುವುದು ಎಷ್ಟು ಸರಿ?

ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಭವಿಷ್ಯವನ್ನು ನಾನು ಹೇಳುವುದಿಲ್ಲ. ಕಾಲ ಚಕ್ರ ತಿರುಗುತ್ತದೆ. ಹೀಗಾಗಿ ದ್ವೇಷದ ರಾಜಕಾರಣ ಮಾಡಬೇಡಿ.

Leave a Reply