ಕೆಎಂಎಫ್ ಅಧ್ಯಕ್ಷ ಚುನಾವಣೆ; ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆ

ಡಿಜಿಟಲ್ ಕನ್ನಡ ಟೀಮ್:

ಕಡೇ ಕ್ಷಣದಲ್ಲಿ ಮಾಜಿ ಸಚಿವ ರೇವಣ್ಣ ಅವರ ನಾಮಪತ್ರ ಹಿಂಪಡೆದ ಪರಿಣಾಮ ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್)ಯ ನೂತನ ಅಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ನಡೆದ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬೆಳಗಾವಿ ಜಿಲ್ಲೆ ಅರಬಾವಿ ವಿಧಾನಸಭಾ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ರೇವಣ್ಣ ಸ್ಪರ್ಧಿಸಿದ್ದರಾದರೂ ನಿರೀಕ್ಷಿತ ಬೆಂಬಲ ಸಿಗುವುದಿಲ್ಲ ಎಂಬುದನ್ನು ಅರಿತ ರೇವಣ್ಣ ಅಂತಿಮ ಹಂತದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರ ವಿರುದ್ಧ ಯಾವುದೇ ಅಭ್ಯರ್ಥಿ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಮ್ಮ ಬೆಂಬಲಿಗ ನಿರ್ದೇಶಕರೊಂದಿಗೆ ಆಗಮಿಸಿದ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಚುನಾವಣಾಧಿಕಾರಿಯಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಜಾರಕಿಹೊಳಿ ಅವರಿಗೆ ಬೆಂಬಲ ನೀಡಿ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದರು.

ಚುನಾವಣಾಧಿಕಾರಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತಾವು ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆಯುವುದಾಗಿ ಪತ್ರ ಸಲ್ಲಿಸಿದ್ದರು. ಚುನಾವಣೆಗೆ ನಿಗದಿಪಡಿಸಿದ ಸಮಯ ಮುಗಿಯುತ್ತಿದ್ದಂತೆ ಚುನಾವಣಾಧಿಕಾರಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

Leave a Reply