ಡಿಕೆಶಿ ಮಕ್ಕಳಿಂದ ತಂದೆ ಪರವಾಗಿ ಪೂರ್ವಿಕರ ಪೂಜೆ ಇಂದು

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಪುತ್ರ ಆಕಾಶ್ ಕೆಂಪೇಗೌಡ ಮತ್ತು ಪುತ್ರಿ ಕನಕಪುರದ ದೊಡ್ಡ ಆಲಹಳ್ಳಿಯಲ್ಲಿ ಗಣೇಶ ಹಬ್ಬದ ದಿನವಾದ ಸೋಮವಾರ ಬೆಳಗ್ಗೆ 11 ಗಂಟೆಗೆ ತಮ್ಮ ತಂದೆ ಪರವಾಗಿ ಪೂರ್ವಿಕರ ಸಮಾಧಿಗಳಿಗೆ ಎಡೆ ಇಟ್ಟು ಪೂಜೆ ಸಲ್ಲಿಸಲಿದ್ದಾರೆ.

ಜಾರಿ ನಿರ್ದೇಶನಾಲಯ (ಇ.ಡಿ.) ಡಿ.ಕೆ. ಶಿವಕುಮಾರ್ ಅವರನ್ನು ಸಮನ್ಸ್ ನೀಡಿ ದಿಲ್ಲಿಗೆ ಕರೆಸಿಕೊಂಡು ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದೆ. ಪುರಾತನ ಕಾಲದಿಂದ ನಡೆದು ಬಂದಿರುವ ಸಂಪ್ರದಾಯದಂತೆ ಗಣೇಶ ಹಬ್ಬದ ದಿನದಂದು ತಮ್ಮ ಪೂರ್ವಿಕರಿಗೆ ಎಡೆಯಿಟ್ಟು, ಅವರ ಸಮಾಧಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಡಿ.ಕೆ. ಶಿವಕುಮಾರ್ ಅವರು ಮಾಡಿಕೊಂಡ ಮನವಿಯನ್ನು ಇ.ಡಿ. ತನಿಖಾಧಿಕಾರಿಗಳು ತಳ್ಳಿಹಾಕಿರುವುದರಿಂದ ಅವರ ಮಕ್ಕಳೇ ಪೂಜಾವಿಧಿ ನೆರವೇರಿಸುವುದು ಅನಿವಾರ್ಯವಾಗಿದೆ.

ಗೌರಿ-ಗಣೇಶ ಹಬ್ಬದ ದಿನವಾದ ಸೋಮವಾರವೂ ಶಿವಕುಮಾರ್ ಅವರ ವಿಚಾರಣೆಯನ್ನು ಇ.ಡಿ. ಮುಂದುವರಿಸುತ್ತಿದೆ. ಬೆಳಗ್ಗೆ 11 ಕ್ಕೆ ವಿಚಾರಣೆ ಆರಂಭವಾಗಲಿದೆ.
ಡಿ.ಕೆ. ಶಿವಕುಮಾರ್ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ದಿಲ್ಲಿಯಲ್ಲಿರುವುದರಿಂದ ಅವರು ಕೂಡ ಈ ಪೂಜಾವಿಧಿಯಲ್ಲಿ ಭಾಗವಹಿಸಲು ಆಗುತ್ತಿಲ್ಲ.

ಡಿ.ಕೆ. ಸಹೋದರರಿಬ್ಬರೂ ಜೀವನದಲ್ಲಿ ಇದೇ ಮೊದಲ ಬಾರಿಗೆ ತಮ್ಮ ಸಂಪ್ರದಾಯ ಪಾಲನೆಯಿಂದ ವಂಚಿತರಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಪೂಜೆ ಆರಂಭವಾಗುವ ಹೊತ್ತಿಗೆ ದೆಹಲಿಯಲ್ಲಿ ವಿಚಾರಣೆ ಆರಂಭವಾಗುತ್ತಿರುವುದು ಕಾಕತಾಳೀಯ.

Leave a Reply