ಆರ್ಥಿಕ ಕುಸಿತದ ಕರಾಳತೆ ಹೇಗಿದೆ ಗೊತ್ತಾ?

ಡಾ. ಬಸವರಾಜು ಬಿ.ಸಿ

ಚಳ್ಳಕೆರೆ ಕಡೆಯಿಂದ ಬಂದು ಬೆಂಗಳೂರಲ್ಲಿ ನೆಲೆಸಿರೋ ಮೂರ್ತಿ ಪೀಣ್ಯದ ವಾಹನಗಳ ಬಿಡಿಭಾಗ ತಯಾರಿಸೊ ಒಂದು ಸಣ್ಣ ಕಾರ್ಖಾನೆಯಲ್ಲಿ ದಿನಗೂಲಿ ನೌಕರ. ಅವತ್ತು ಅವನಿಗೆ ದಿನದ ಕೊನೆಲಿ ಸಿಗೋ ಮುನ್ನೂರು ರೂಪಾಯಿಯಲ್ಲಿ ಒಂದೆರಡು ಟೀ ಶರ್ಟು, ಒಂದೆರಡು ಅಂಡರ್ ವೇರ್ ತೆಗೆದುಕೊಳ್ತಾನೆ. ಇವನಿಂದ ತೆಗೆದುಕೊಂಡ ಮುನ್ನೂರು ರೂಪಾಯಿಯಲ್ಲಿ ಆ ಸಣ್ಣ ಬಟ್ಟೆ ಅಂಗಡಿಯ ಮಾಲೀಕ ಅಬ್ದುಲ್ಲಾ ತನ್ನ ಮಗಳಿಗೆ ಕೆಲ ಪುಸ್ತಕ ಪೆನ್ನು ಇತ್ಯಾದಿ ಕೊಂಡುಕೊಳ್ತಾನೆ. ಆ ಪುಸ್ತಕದಂಗಡಿಯ ಒಡತಿ ಗೌರಿ ಆ ಮುನ್ನೂರು ರೂಪಾಯಿಯಲ್ಲಿ ಅವತ್ತು ಸಂಜೆ ಗಂಡ ಮಕ್ಕಳ ಜತೆ ಹೋಗಿ ಹೋಟಲಲ್ಲಿ ತಿಂಡಿ ತಿನ್ನುತ್ತಾರೆ. ಆ ಹೋಟೆಲಿನ ಮಾಲೀಕ ಸಂದೇಶ್ ಆ ಮುನ್ನೂರು ರೂಪಾಯಿಯಲ್ಲಿ ಹೋಗಿ‌ ಪೆಟ್ರೋಲ್ ಬಂಕಲ್ಲಿ ತನ್ನ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ತಾನೆ. ಆ ಪೆಟ್ರೋಲ್ ಬಂಕಿನ ಜಾರ್ಜ್ ಅದೇ ಮುನ್ನೂರು ರೂಪಾಯಿಯಲ್ಲಿ ತನ್ನ ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ತಾನೆ. (ಈ ಉದಾಹರಣೆಯಲ್ಲಿ ವಿಷಯವನ್ನು ಸರಳಗೊಳಿಸುವ ಕಾರಣಕ್ಕಾಗಿ ಕೈಗೆ ಬಂದ ಅಷ್ಟೂ ಹಣವನ್ನು ಖರ್ಚು ಮಾಡಿದಂತೆ ತೋರಿಸಲಾಗಿದೆ.)

 

ಇಷ್ಟಾಗುವ ಹೊತ್ತಿಗೆ, ಮೂರ್ತಿ ದುಡಿದ ಮುನ್ನೂರು ರೂಪಾಯಿ ಒಟ್ಟಾರೆಯಾಗಿ ಸಾವಿರದ ಐನೂರು ರೂಪಾಯಿಯಷ್ಟು ಆರ್ಥಿಕ ಚಟುವಟಿಕೆ ಮಾಡಿದೆ. ಅಂದರೆ ಈ ಮುನ್ನೂರು ರೂಪಾಯಿ ದೇಶದ ಜಿಡಿಪಿಗೆ ( ದೇಶದ ಒಟ್ಟು ಆಂತರಿಕ ಉತ್ಪನ್ನ ) ಒಂದೂವರೆ ಸಾವಿರ ರೂಪಾಯಿಗಳಷ್ಟು ಕೊಡುಗೆ ನೀಡಿದೆ ( ಜಿಡಿಪಿ ಅಂದರೆ ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೊತ್ತ ).

ಇದೇ ಉದಾಹರಣೆಯ ಇನ್ನೊಂದು ಮಜಲನ್ನೂ ನೋಡುವುದಾದರೆ, ಮೂರ್ತಿಗೆ ಮುನ್ನೂರು ರೂಪಾಯಿ ಕೊಟ್ಟು ಅವನಿಂದ ಕೆಲಸ ತೆಗೆದುಕೊಂಡ ಕಾರ್ಖಾನೆಯ ಮಾಲೀಕ ಹಿತೇಶ್, ಆ ಮುನ್ನೂರು ರೂಪಾಯಿಗೆ ಪ್ರತಿಯಾಗಿ ಐನೂರು ರೂಪಾಯಿಯಷ್ಟು ಬೆಲೆಬಾಳುವ ಬಿಡಿಭಾಗ ತಯಾರಿಸಿಕೊಂಡಿರುತ್ತಾನೆ. ಆ ಬಿಡಿಭಾಗವನ್ನು ವಾಹನಾ ತಯಾರಿಕಾ ಸಂಸ್ಥೆಗೆ ಮಾರಿ ಇನ್ನೂರು ರೂಪಾಯಿ ಸಂಪಾದನೆ ಮಾಡಿಕೊಂಡು ತನ್ನ ಅವಶ್ಯಕತೆಗೆ ಬಳಸಿಕೊಳ್ಳುತ್ತಾನೆ ( ಇದರಿಂದ ಇನ್ನೊಂದು ಆರ್ಥಿಕ ಚಟುವಟಿಕೆಯ ಸರಪಳಿ‌ ಆರಂಭವಾಗುತ್ತದೆ). ಆ ಬಿಡಿಭಾಗ ಉಪಯೋಗಿಸಿ ವಾಹನ ತಯಾರಿಸಿ ಗ್ರಾಹಕರಿಗೆ ಮಾರುವ ವಾಹನಾ ತಯಾರಿಕಾ ಸಂಸ್ಥೆ ಬರುವ ದುಡ್ಡಲ್ಲಿ ತನ್ನ ನೌಕರರಿಗೆ ಸಂಬಳ ಕೊಟ್ಟು ಮಿಕ್ಕ ಲಾಭವನ್ನು ಮತ್ತೆ ಉತ್ಪಾದನೆಯಲ್ಲಿ ತೊಡಗಿಸಿ ಮತ್ತಷ್ಟು ಆರ್ಥಿಕ ಚಟುವಟಿಕೆಗೆ ಕಾರಣವಾಗುತ್ತದೆ.

ಆದರೆ, ದೇಶದಲ್ಲಿ ಸರ್ಕಾರದ ಕೆಲ ತಪ್ಪು ನಡೆಗಳಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಾಗ ಜನರಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾಗಿ ಮೇಲಿನ ಉದಾಹರಣೆಯಲ್ಲಿ ಬರುವ ವಾಹನ ತಯಾರಿಕಾ ಸಂಸ್ಥೆಯ ವಾಹನಗಳು ಮಾರಾಟವಾಗದೆ ಉಳಿಯುತ್ತವೆ. ಆಗ ಬಿಡಿಭಾಗ ತಯಾರಿಕಾ ಕಾರ್ಖಾನೆಯವರಿಗೂ ವ್ಯಾಪಾರವಾಗದೆ ಅವರು ಮೂರ್ತಿಯನ್ನು ಕೆಲಸದಿಂದ ತೆಗೆಯುತ್ತಾರೆ. ಒಬ್ಬ ಮೂರ್ತಿಯ ಕೆಲಸ ಹೋಗಿ ಸಂಪಾದನೆಗೆ ಪೆಟ್ಟು ಬಿದ್ದಾಗ ಮೇಲೆ ಹೆಸರಿಸಿದ ಅಷ್ಟೂ ಜನರ ಸಂಪಾದನೆಗೂ‌ ಒಂದು ಮಟ್ಟಿನ ಪೆಟ್ಟು ಬಿದ್ದು ಅವರು ಖರ್ಚು ಮಾಡುವುದೂ ಕಡಿಮೆಯಾಗುತ್ತದೆ. ಇಲ್ಲಿ ಒಬ್ಬನ ಖರ್ಚು ಮತ್ತೊಬ್ಬನ ಸಂಪಾದನೆಯಾಗಿದ್ದು, ಈ ರೀತಿಯ ಸರಪಳಿಯೇ ಕಡಿದುಬೀಳುತ್ತದೆ. ಒಟ್ಟಾರೆಯಾಗಿ ಆರ್ಥಿಕ ಚಟುವಟಿಕೆ ಕಡಿಮೆಯಾಗುತ್ತದೆ ಮತ್ತು ಅದರಿಂದ ದೇಶದ ಜಿಡಿಪಿ‌ ಕುಸಿಯುತ್ತದೆ. ಇದು ಇನ್ನಷ್ಟು ಉದ್ಯೋಗ ನಷ್ಟಕ್ಕೆ ಕಾರಣವಾಗಿ ಜನರನ್ನು ಮತ್ತೂ ಸಂಕಷ್ಟಕ್ಕೆ ದೂಡುತ್ತದೆ.

ಈಗ ದೇಶದಲ್ಲಿ ಇಂತದೇ ಆರ್ಥಿಕ ಹಿಂಜರಿತ ಉಂಟಾಗಿದ್ದು 2019-20 ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯ ಬೆಳವಣಿಗೆ ಶೇ5 ಕ್ಕೆ ಕುಸಿದಿದ್ದು ಇದು ಕಡೆಯ ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಟ ಜಿಡಿಪಿ ಬೆಳವಣಿಗೆಯಾಗಿದೆ. ಇಂತಹ ಆರ್ಥಿಕ ಹಿಂಜರಿತದ ಸಮಯದಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಹಣವನ್ನು ಸಾರ್ವಜನಿಕ ಯೋಜನೆಗಳಿಗೆ ಖರ್ಚು ಮಾಡುವ ಮೂಲಕ ಜನರ ಕೈಲಿ ಸ್ವಲ್ಪ ಹಣಕಾಸು ಓಡಾಡುವಂತೆ ಮಾಡಿ ಆರ್ಥಿಕ ಪುನಶ್ಚೇತನಕ್ಕೆ ಪ್ರಯತ್ನಿಸಬೇಕಾಗುತ್ತದೆ.

ಅಂದರೆ, ಈಗ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಯೋಜನೆಗಳಿಗೆ ಹೆಚ್ಚು ಹಣ ಕೊಟ್ಟು ಜನರ ಬಳಿ ಹಣ ಓಡಾಡುವಂತೆ ಮಾಡಿ ಒಟ್ಟಾರೆ ಬೇಡಿಕೆಯನ್ನು ಒಂದು ಮಟ್ಟಿಗೆ ಹೆಚ್ಚಳ ಮಾಡಬಹುದು. ಹೀಗೆ ಮಾಡಿದಾಗ ಆರ್ಥಿಕ‌ ಪುನಶ್ಚೇತನ ಹೇಗಾಗುತ್ತದೆ ಎಂದು ಒಂದು ಸರಳ ಉದಾಹರಣೆಯೊಂದಿಗೆ ನೋಡೋಣ.

ಗಂಗಮ್ಮ ರಾಯಚೂರಿನ ಹಳ್ಳಿಯೊಂದರಲ್ಲಿ‌ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಲ್ಲಿಯ ಕೆರೆ ಊಳೆತ್ತುವ ಕೆಲಸಕ್ಕೆ ಹೋಗುತ್ತಾಳೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಹಣ ಕೊಡುತ್ತದೆ. ಅಲ್ಲಿಂದ ಗಂಗಮ್ಮ ಗಳಿಸಿದ ದುಡ್ಡನ್ನು ಅವಳ ಕುಟುಂಬದ ಅವಶ್ಯಗಳಿಗೆ ಖರ್ಚು ಮಾಡುವುದರ ಮೂಲಕ ಅವಳು ಒಂದು ಮಟ್ಟಿಗಿನ ಕೊಡುಗೆಯನ್ನು ದೇಶದ ಆರ್ಥಿಕ ಚಟುವಟಿಕೆಗಳಿಗೆ ಕೊಡುತ್ತಾಳೆ. ಇತ್ತಕಡೆ, ಕೆರೆಯ ಮಣ್ಣನ್ನು ಬಳಸಿಕೊಂಡ ಪಕ್ಕದ ಹೊಲಗಳ ಫಲವತ್ತತೆ ಹೆಚ್ಚಾಗಿ ಅಲ್ಲಿಯ ಇಳುವರಿ ಹೆಚ್ಚಾಗಿ ಆ ರೈತನ ಸಂಪಾದನೆ, ಖರ್ಚು ( ಮಕ್ಕಳ ಫೀಜು ಕಟ್ಟುವುದು ಇತ್ಯಾದಿ) ಮತ್ತು ಉಳಿತಾಯ ಎಲ್ಲವೂ ಹೆಚ್ಚಿ ಮತ್ತಷ್ಟು ಆರ್ಥಿಕತೆ ಮುಂದುವರೆಯುತ್ತದೆ. ಮತ್ತೊಂದೆಡೆ, ಕೆರೆಯ ಊಳೆತ್ತಿದ್ದರಿಂದ ಕೆರೆಯ ನೀರು ಶೇಖರಣಾ ಸಾಮರ್ಥ್ಯ ಹೆಚ್ಚಿ ಸುತ್ತಮುತ್ತಲ ಅಂತರ್ಜಲ ಹೆಚ್ಚುವುದಲ್ಲದೆ, ಪ್ರವಾಹದಂತಹ ಸಮಯದಲ್ಲಿ ಪ್ರವಾಹದ ತೀವ್ರತೆ ಅಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ. ಒಟ್ಟಾರೆ, ಸರ್ಕಾರ ಈ ರೀತಿ ಪ್ರಜೆಗಳ ಮೇಲೆ ಮಾಡುವ ಖರ್ಚು ನೇರವಾಗಿ ಆರ್ಥಿಕ ಚಟುವಟಿಕೆ ಹೆಚ್ಚಿಸುವುದಲ್ಲದೆ, ಪರೋಕ್ಷವಾಗಿ ಸಾಮಾಜಿಕ ಬಂಡವಾಳವಾಗಿಯೂ ( ಭೂಮಿಯ ಫಲವತ್ತತೆಯ ಹೆಚ್ಚಳ) ಕೆಲಸಮಾಡಿ ಒಟ್ಟಾರೆ ಆರ್ಥಿಕತೆಯ ಚಕ್ರ ಸರಾಗವಾಗಿ‌ ಉರುಳಲು ಸಹಾಯ ಮಾಡುತ್ತದೆ. ಇದನ್ನೇ ರಸ್ತೆ ನಿರ್ಮಾಣವೂ ಸೇರಿದಂತೆ ಯಾವುದೇ ಸಾರ್ವಜನಿಕ ಯೋಜನೆಗಳಿಗೆ ಅನ್ವಯಿಸಬಹುದು.

ಆದರೆ, ಈ ರೀತಿ ಸಾರ್ವಜನಿಕ ಕೆಲಸಗಳಿಗೆ ಹೆಚ್ಚು ಹೆಚ್ಚು ಹಣ ಕೊಟ್ಟು ಆರ್ಥಿಕ ಪುನಶ್ಚೇತನಗೊಳಿಸಲೂ ಸಹ ಹಣವಿಲ್ಲದಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದುಕೊಂಡಿದೆ. ಅಂದರೆ, ದೇಶ ತಕ್ಷಣ ಚೇತರಿಸಿಕೊಳ್ಳಲು ಸುಲಭ ಸಾಧ್ಯವಿರದಂತಹ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಆದರೆ, ಸರ್ಕಾರದ ಕೆಲ ಸಮರ್ಥಕರು ಈಗಿನ ಆರ್ಥಿಕ ಹಿಂಜರಿತವನ್ನು ಒಪ್ಪುತ್ತಲೇ ದೇಶದ ಎಲ್ಲ ಆರ್ಥಿಕ ವಲಯಗಳೂ ಈ ಹಿಂಜರಿಕೆಗೆ ಸಿಕ್ಕಿಲ್ಲವಾದ್ದರಿಂದ ಇದೊಂದು ತಾತ್ಕಾಲಿಕ ಆರ್ಥಿಕ ಹಿಂಜರಿತವಷ್ಟೆ. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಈ ಪರಿಸ್ಥಿತಿಯಿಂದ ದೇಶ ಈಚೆ ಬರಲಿದೆ ಎಂಬ ಮಾತಾನಾಡುತ್ತಿದ್ದಾರೆ.

ಹಾಗಿದ್ದರೆ, ದೇಶದ ಯಾವ್ಯಾವ ವಲಯಗಳಲ್ಲಿ ಆರ್ಥಿಕ ಹಿಂಜರಿಕೆಯಾಗಿದೆ ಮತ್ತು ಇದರಿಂದ ಮೂರ್ನಾಲ್ಕು ತಿಂಗಳಲ್ಲಿಯೇ ಹೊರಬರಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸೋಣ.

1) ವಾಹನ ಮಾರಾಟ ಕ್ಷೇತ್ರ: ಕಾರುಗಳ ಮಾರಾಟ 2018 ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ 2019 ರ ಮೊದಲ ತ್ರೈಮಾಸಿಕದಲ್ಲಿ ಶೇ 23.3 ರಷ್ಟು ಇಳಿಕೆಯಾಗಿದ್ದು ಇದು ಕಡೆಯ 15 ವರ್ಷಗಳಲ್ಲೇ ಅತ್ಯಂತ ದೊಡ್ಡ ಇಳಿಕೆಯಾಗಿದೆ.
ಇದಕ್ಕೆ ತಕ್ಕಂತೆ ವಾಹನ ಸಾಲದ ಪ್ರಮಾಣವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 5.1 ರಷ್ಟು ಕಡಿಮೆಯಾಗಿದೆ.

ಅದೇ ರೀತಿ ದ್ವಿಚಕ್ರ ವಾಹನಗಳ‌ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ 11.7 ರಷ್ಟು ಇಳಿಕೆಯಾಗಿದ್ದು ಮತ್ತು ಮೊಪೆಡ್ ಗಳ ಮಾರಾಟ ಶೇ 19.9 ರಷ್ಟು ಇಳಿಕೆಯಾಗಿದ್ದು ಇದು 2008 ರ ನಂತರ ಅತಿ ದೊಡ್ಡ ಇಳಿಕೆಯಾಗಿದೆ.

ಟ್ರ್ಯಾಕ್ಟರುಗಳ ಮಾರಾಟ ಕಳೆದ ವರ್ಷದ ಹೋಲಿಕೆಯಲ್ಲಿ ಶೇ 14 ರಷ್ಟು ಇಳಿಕೆಯಾಗಿದ್ದು ಗ್ರಾಮೀಣ ಭಾಗದಲ್ಲಿಯ ಬೇಡಿಕೆ ಕುಸಿತವನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

2) ದೇಶೀಯ ವಾಣಿಜ್ಯ ವಾಹನಗಳ ಮಾರಾಟ: ವಾಣಿಜ್ಯ ವಾಹನಗಳ ( ಟ್ರಕ್, ಮಿನಿ ಲಾರಿ ಇತ್ಯಾದಿ) ಮಾರಾಟದ ಪ್ರಮಾಣವು ಇಡೀ ದೇಶದ ಕೈಗಾರಿಕಾ ಚಟುವಟಿಕೆಯ ಮತ್ತು ಮೂಲಸೌಕರ್ಯದ ಮಟ್ಟವನ್ನು ಸೂಚಿಸುತ್ತದೆ.

ಏಕೆಂದರೆ, ಈ ವಾಣಿಜ್ಯ ವಾಹನಗಳು ಸಿದ್ಧಪಡಿಸಿದ ಸರಕುಗಳು ಮತ್ತು ಅರೆ ಸಿದ್ಧಪಡಿಸಿದ ಸರಕುಗಳನ್ನು ( finished and semi finished goods) ದೇಶದ ಉದ್ದಗಲಕ್ಕೆ ಸಾಗಿಸುತ್ತವೆ. ಆ ಕಾರಣಕ್ಕಾಗಿಯೇ, ಆರ್ಥಿಕ ಚಟುವಟಿಕೆ ಹೆಚ್ಚಿದ್ದಷ್ಟೂ ಈ ವಾಣಿಜ್ಯ ವಾಹನಗಳ ಅವಶ್ಯಕತೆ ಹೆಚ್ಚಾಗಿಯೇ ಇರುತ್ತದೆ.

ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವಾಣಿಜ್ಯ ವಾಹನಗಳ ಮಾರಾಟ ಶೇ 9.5 ರಷ್ಟು ಇಳಿಕೆಯಾಗಿದ್ದು ಇಡೀ ದೇಶದ ಕೈಗಾರಿಕಾ ಚಟುವಟಿಕೆಯೇ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ.

ಒಟ್ಟಾರೆಯಾಗಿ, ಮೇಲಿನ ಎರಡೂ ಅಂಶಗಳು ವಾಹನಾ ತಯಾರಿಕಾ ಕ್ಷೇತ್ರದ ( Automobile sector) ಬೆಳವಣಿಗೆ ಭಾರೀ ಕುಂಠಿತವಾಗಿರುವುದನ್ನು ಸೂಚಿಸುತ್ತವೆ. ಇದರಿಂದಾಗಿಯೇ ಕಳೆದ ಕೇವಲ ನಾಲ್ಕು ತಿಂಗಳುಗಳಲ್ಲಿ ಈ ಒಂದು ಕ್ಷೇತ್ರದಲ್ಲಿಯೇ ಮೂರೂವರೆ ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದು, ಮುಂದಿನ ತಿಂಗಳುಗಳಲ್ಲಿ ಇನ್ನೂ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ ( ಆಗಸ್ಟ್ 2019 ರ ಮಾರಾಟ ಕೂಡ ಭಾರೀ ಇಳಿಕೆ ಕಂಡಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು).

ಯಾವಾಗ ವಾಹನ ತಯಾರಿಕಾ ಕ್ಷೇತ್ರ ಹಿನ್ನಡೆ ಅನುಭವಿಸುತ್ತದೆಯೋ ಆಗ ಅದಕ್ಕೆ ಸಂಬಂದಿಸಿದ ಸ್ಟೀಲ್, ಟೈರ್, ಪೇಂಟ್, ಗ್ಲಾಸ್, ಬಿಡಿಭಾಗಗಳು ಕಡೆಗೆ ಸ್ಟಿಕರ್ ತಯಾರಿಕೆಯಂತಹ ಉದ್ಯಮಗಳೂ ಹಿನ್ನಡೆ ಅನುಭವಿಸುತ್ತವೆ ( ಇದು ಈಗಾಗಲೇ ಆರಂಭವಾಗಿದೆ). ಈ ಎಲ್ಲಾ ಸಂಬಂಧಿತ ಉದ್ಯಮಗಳಲ್ಲೂ ಬೇಡಿಕೆಯ ಕೊರತೆ, ಉತ್ಪಾದನೆಯ ಇಳಿಕೆ ಮತ್ತು ಅದರಿಂದ ಉದ್ಯೋಗ ನಷ್ಟವೂ ಆಗಿ ಆರ್ಥಿಕ ಹಿಂಜರಿತ ಮತ್ತಷ್ಟು ಜಾಸ್ತಿಯಾಗುತ್ತಾ ಎಲ್ಲಾ ವಲಯಗಳನ್ನೂ ಆವರಿಸುತ್ತದೆ.

3) ಗ್ರಾಹಕ ಸರಕುಗಳು (Fast Moving Consumer Goods, FMCG): ದಿನನಿತ್ಯದ ಬಳಕೆಯ ವಸ್ತುಗಳಾದ ಕಾಫಿ ಪೌಡರ್, ಬಿಸ್ಕತ್, ಎಣ್ಣೆ, ಬಟ್ಟೆ, ಮೆಮೋರಿ ಕಾರ್ಡ್ ಇತ್ಯಾದಿಗಳು ಗ್ರಾಹಕ ಸರಕುಗಳ ಅಡಿಯಲ್ಲಿ ಬರುತ್ತವೆ. ಈ ಸರಕುಗಳ ಮಾರಾಟವೂ ಕುಸಿದಿರುವುದು ಜನರಲ್ಲಿ ಕೊಳ್ಳುವ ಶಕ್ತಿಯೇ ಕಡಿಮೆಯಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಪ್ರಮುಖ ಗ್ರಾಹಕ ಸರಕು ತಯಾರಿಕಾ ಕಂಪನಿಗಳಾದ ಹಿಂದೂಸ್ತಾನ್ ಯೂನಿಲಿವರ್ ( 2018ರ ಮೊದಲ ತ್ರೈಮಾಸಿಕದಲ್ಲಿ 12% ಮತ್ತು 2019ರಲ್ಲಿ 5% ) , ಬ್ರಿಟಾನಿಯ ( 2018 ರಲ್ಲಿ 13% ಮತ್ತು 2019 ರಲ್ಲಿ 6%) , ಡಾಬರ್ ( 2018 ರಲ್ಲಿ 21% ಮತ್ತು 2019 ರಲ್ಲಿ 6%) ಗಳ ಬೆಳವಣಿಗೆಯ ದರ ಹೋದವರ್ಷಕ್ಕಿಂತ ಕಡಿಮೆಯಾಗಿದೆ.
ಬ್ರಿಟಾನಿಯ ಎಂಡಿ ವರುಣ್ ಬೆರಿ ಹೇಳಿದ ” ಐದು ರೂಪಾಯಿಯ ಬಿಸ್ಕತ್ ಪ್ಯಾಕ್ ಖರೀದಿಸಲೂ ಕೂಡ ಜನ ಹಿಂದೆ ಮುಂದೆ ನೋಡುತ್ತಿದ್ದಾರೆ” ಎಂಬ ಮಾತುಗಳನ್ನು ಮತ್ತು ಪಾರ್ಲೆ ಜಿ ಕಂಪನಿಯು ತನ್ನ ಹತ್ತು ಸಾವಿರ ಉದ್ಯೋಗಿಗಳನ್ನು ತೆಗೆದುಹಾಕುವ ಸಾಧ್ಯತೆಯನ್ನೂ ಈ ಹಿನ್ನೆಲೆಯಲ್ಲಿ ಗಮನಿಸಬಹುದು.

4) ಉತ್ಪಾದನಾ ವಲಯ ( Manufacturing sector): ಉತ್ಪಾದನಾ ವಲಯವು ದೇಶದ ಜಿಡಿಪಿಗೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚು ಕೊಡುಗೆ ನೀಡುವ ಕ್ಷೇತ್ರವಾಗಿದ್ದು 2018 ರ ಮೊದಲ ತ್ರೈಮಾಸಿಕದಲ್ಲಿ 12.1% ರಷ್ಟು ಬೆಳವಣಿಗೆ ಕಂಡಿದ್ದ ಈ ವಲಯ 2019 ರಲ್ಲಿ ಕೆರವಲ 0.6% ರಷ್ಟು ಬೆಳವಣಿಗೆ ಕಂಡಿದೆ. ಇದು ಭಾರೀ ಕಳವಳಕಾರಿ ಎನ್ನುವಷ್ಟು ಕಡಿಮೆ ಬೆಳವಣಿಗೆಯಾಗಿದ್ದು ದೇಶದ ಜಿಡಿಪಿ ಮತ್ತು ಉದ್ಯೋಗ ಸೃಷ್ಟಿ ಎರಡರ ಮೇಲೂ ಮತ್ತಷ್ಟು ನಕಾರಾತ್ಮಕ ಪರಿಣಾಮ ಬೀರಲಿದೆ.

5) ಕೃಷಿ ಕ್ಷೇತ್ರ: ಕಳೆದ ವರ್ಷ ಒಳ್ಳೆಯದು ಎನಿಸುವ 5.1% ರಷ್ಟು ಬೆಳವಣಿಗೆ ಕಂಡಿದ್ದ ಕೃಷಿ ಕ್ಷೇತ್ರ 2019 ಏಪ್ರಿಲ್ – ಜೂನ್ ಮದ್ಯೆ ಕೇವಲ 2% ರಷ್ಟು ಮಾತ್ರ ಬೆಳೆದಿದೆ. ಈಗಲು ದೇಶದ ಕನಿಷ್ಟ ಶೇ. ಐವತ್ತರಷ್ಟು ಮಂದಿ ಕೃಷಿಯ ಮೇಲೆಯೇ ಅವಲಂಬಿತರಾಗಿದ್ದು ಈ ರೀತಿಯ ಕನಿಷ್ಟ ಬೆಳವಣಿಗೆ ಗ್ರಾಮೀಣ ಭಾಗದ ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಈಗಾಗಲೇ ಕುಸಿದಿರುವ ಟ್ರಾಕ್ಟರ್ , ಮೊಪೆಡ್ ಮತ್ತು ಗ್ರಾಹಕ ಸರಕುಗಳ ಮಾರಾಟದಲ್ಲಿ ಪ್ರತಿಫಲಿತವಾಗುತ್ತಿದೆ.

6) ಕಟ್ಟಡ ನಿರ್ಮಾಣ ಕ್ಷೇತ್ರ: ನಿರ್ಮಾಣ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಅಂದಾಜು ಶೇ ಹತ್ತರಷ್ಟು ಜನರಿಗೆ ( ದೇಶದ ಒಟ್ಡು ಉದ್ಯೋಗಗಳಲ್ಲಿ ಶೇ ಹತ್ತು) ಉದ್ಯೋಗ ನೀಡುವ ಕ್ಷೇತ್ರವಾಗಿದ್ದು, ಒಂದು ಮಟ್ಟಿಗೆ ದೇಶದ ಆರ್ಥಿಕ ಚಟುವಟಿಕೆಗಳ ಚಾಲನಾ ಶಕ್ತಿಯೂ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 9.7 ರಷ್ಟು ಬೆಳವಣಿಗೆ ಕಂಡಿದ್ದ ಈ ಕ್ಷೇತ್ರ ಈ ವರ್ಷ ಕೇವಲ ಶೇ 5.7 ರಷ್ಟು ಮಾತ್ರ ಬೆಳೆದಿದೆ.

7) ನಿರ್ಮಿತ ವಸತಿಗಳ ಮಾರಾಟ: ಲಯಾಸಸ್ ಫೊರಾಸ್ ( Liases Foras, a real estate research company) ವರದಿಯ ಪ್ರಕಾರ ಭಾರತದ ಮೂವತ್ತು ದೊಡ್ಡ ನಗರಗಳಲ್ಲಿ ನಿರ್ಮಾಣಗೊಂಡಿರುವ ಮನೆಗಳಲ್ಲಿ ಒಟ್ಟು ಹನ್ನೆರಡು ಲಕ್ಷದ ಎಂಬತ್ತು ಸಾವಿರ ಮನೆಗಳು ಮಾರಾಟವಾಗದೆ ಉಳಿದಿವೆ. ಕಳೆದ ವರ್ಷ ಇದೇ ಸಮಯದಲ್ಲಿ ಅವುಗಳ ಸಂಖ್ಯೆ ಹನ್ನೆರಡು ಲಕ್ಷ ಇತ್ತು.
ಈ ಮೇಲಿನ ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಉದ್ಯಮವು ಸ್ಟೀಲ್, ಸಿಮೆಂಟ್, ಪೇಂಟ್, ಟಿಂಬರ್, ಇಟ್ಟಿಗೆ ಸೇರಿದಂತೆ ಅಂದಾಜು ಇನ್ನೂರೈವತ್ತು ಇತರೆ ಉದ್ಯಮಗಳ ಜೊತೆ ತಳುಕು ಹಾಕಿಕೊಂಡಿದ್ದು, ಈ ಕ್ಷೇತ್ರದ ಹಿನ್ನಡೆ ಉಳಿದ ಇನ್ನೂರೈವತ್ತು ಸಂಬಂದಿತ ಉದ್ಯಮ ಕ್ಷೇತ್ರಗಳ ಮೇಲೂ ಪ್ರಭಾವ ಬೀರುತ್ತದೆ.

8) ಉತ್ಪಾದಿತ ಉಕ್ಕಿನ ಬಳಕೆಯ ಪ್ರಮಾಣ: ಉಕ್ಕು ಅಥವಾ ಸ್ಟೀಲ್ ನ ಬಳಕೆಯು ಮೂಲಸೌಕರ್ಯದ ಬೆಳವಣಿಗೆ ಮತ್ತು ಬಂಡವಾಳದ ಹರಿವಿನ ಪ್ರಮಾಣವನ್ನು ಸೂಚಿಸುತ್ತದೆ. ಕಳೆದ ವರ್ಷದ ಈ ಅವಧಿಯಲ್ಲಿ ಶೇ 8.8 ರಷ್ಟು ಪ್ರಗತಿ ಸಾಧಿಸಿದ್ದು, ಈ ವರ್ಷ ಕೇವಲ ಶೇ 6.6 ರ ಪ್ರಗತಿ ತೋರಿಸಿದೆ. ಇದು ದೇಶೀ ಅಥವಾ ವಿದೇಶೀ ಬಂಡವಾಳದ ಹರಿವಿನ ಕೊರತೆ ಮತ್ತು ಮೂಲಸೌಕರ್ಯದ ಅಭಿವೃದ್ದಿಯ ಕೊರತೆಯನ್ನೂ ಸ್ಪಷ್ಟವಾಗಿ ತೋರಿಸುತ್ತಿದೆ.

9) ಉದ್ದಿಮೆಗಳಿಗೆ ಬ್ಯಾಂಕ್ ಸಾಲ ನೀಡಿಕೆ: ಕಳೆದೆರಡು ವರ್ಷಗಳಲ್ಲಿ ಬಹುತೇಕ ಬೆಳವಣಿಗೆಯೇ ಇಲ್ಲದಿದ್ದ ಉದ್ದಿಮೆಗಳಿಗೆ ಬ್ಯಾಂಕ್ ಸಾಲದ ಪ್ರಮಾಣ ಕಳೆದ ಬಾರಿಗೆ ಹೋಲಿಸಿದರೆ 2019 ಏಪ್ರಿಲ್ – ಜೂನ್ ಅವಧಿಯಲ್ಲಿ ಶೇ 6.5 ರಷ್ಟು ಏರಿಕೆ ಕಂಡಿದೆ. 2018 ರ ಇದೇ ಅವಧಿಯಲ್ಲಿ ಈ ಪ್ರಮಾಣ ಕೇವಲ ಶೇ 0.9 ರಷ್ಟು ಮಾತ್ರ ಏರಿಕೆ ದಾಖಲಿಸಿತ್ತು.

ಆದರೆ, ಈ ಸಾಲದಲ್ಲಿ ಬೃಹತ್ ಉದ್ದಿಮೆಗಳಿಗೆ ಸಾಲ ನೀಡಿಕೆಯ ಪ್ರಮಾಣ ಶೇ 0.8 ರಿಂದ ಈ ವರ್ಷ ಶೇ 7.6 ರಷ್ಟು ಏರಿಕೆಯಾಗಿದ್ದರೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಹೋದ ವರ್ಷ ಶೇ 0.7 ಏರಿಕೆಯಾಗಿದ್ದು ಈ ವರ್ಷ ಬಹುತೇಕ ಅಷ್ಟೇ ಅಂದರೆ ಶೇ 0.6 ರಷ್ಟು ಮಾತ್ರ ಏರಿಕೆ ದಾಖಲಿಸಿದೆ. ಅಂದರೆ, ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಬರೀ ಬಾಯಿಮಾತಿನ ಬೆಂಬಲ ಬಿಟ್ಟರೆ ಅತ್ಯವಶ್ಯವಾದ ಆರ್ಥಿಕ ಸಹಾಯ ದೊರೆಯುತ್ತಿಲ್ಲ.‌ ಕಳೆದ ಎರಡು ಮೂರು ವರ್ಷಗಳಲ್ಲಿ ಉಂಟಾದ ಲಕ್ಷಾಂತರ ಉದ್ಯೋಗ ನಷ್ಟವನ್ನು ಈ‌ ಹಿನ್ನೆಲೆಯಲ್ಲಿಯೂ ನೋಡಬಹುದಾಗಿದೆ.

10) ಸರಕು ಸಾಗಣೆ ರೈಲುಗಳ ಆದಾಯ ವೃದ್ಧಿ: ದೇಶದಲ್ಲಿ ಉತ್ಪತ್ತಿಯಾಗುವ ಸರಕುಗಳ ಬಹತೇಕ ಭಾಗ ದೇಶದ ಉದ್ದಗಲಕ್ಕೂ ಸರಬರಾಜಾಗುವುದು ಗೂಡ್ಸ್ ರೈಲುಗಳ ಮುಖಾಂತರವೆ. ಮುಖ್ಯವಾಗಿ ಕಲ್ಲಿದ್ದಲು, ಪಿಗ್ ಐರನ್ , ಸಿಮೆಂಟ್, ಪೆಟ್ರೋಲಿಯಂ ಉತ್ಪನ್ನಗಳ, ರಸಗೊಬ್ಬರ, ಕಬ್ಬಿಣದ ಅದಿರು ಇತ್ಯಾದಿ ಸರಕುಗಳು ದೇಶದ ಬಹುತೇಕ ಕಡೆಗಳಿಗೆ ಸರಬರಾಜಾಗುತ್ತವೆ. ಈ ಸರಕುಗಳು ಸರಬರಾಜಾಗುವ ಪ್ರಮಾಣ ದೇಶದಲ್ಲಿನ ಬಂಡವಾಳ ಹೂಡಿಕೆಯ ಮತ್ತು ಕೈಗಾರಿಕಾ ಅಭಿವೃದ್ದಿಯ ಪ್ರಮಾಣಗಳನ್ನು ಸ್ಪಷ್ಟವಾಗಿ ಸೂಚಿಸುತ್ತವೆ. 2018 ರ ಮೊದಲ ತ್ರೈಮಾಸಿಕದಲ್ಲಿ ಶೇ 6.4 ರಷ್ಟು ಏರಿಕೆ ದಾಖಲಿಸಿದ್ದ ಸರಕು ಸಾಗಣೆ ರೈಲಿನ ಆದಾಯವು ಈ ವರ್ಷದ ಇದೇ ಅವಧಿಯಲ್ಲಿ ಕೇವಲ ಶೇ 2.7 ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದ್ದು ದೇಶದೆಲ್ಲೆಡೆ ಬಂಡವಾಳ ಹೂಡಿಕೆಯ ಮತ್ತು ಒಟ್ಟಾರೆ ಆರ್ಥಿಕ ಹಿಂಜರಿತದ ಸ್ಥಿತಿ ಇರುವುದನ್ನು ಎತ್ತಿ ತೋರಿಸುತ್ತಿದೆ.

11) ಹೊಸ ಬಂಡವಾಳ ಹೂಡಿಕೆಯ ಘೋಷಣೆ ಮತ್ತು ಹಳೆಯ ಯೋಜನೆಗಳ ಪೂರ್ಣಗೊಂಡ ಪ್ರಮಾಣ:
2018 ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ 2019 ರ ಅದೇ ಅವಧಿಯಲ್ಲಿ ಹೊಸಾ ಯೋಜನೆಗಳಿಗೆ ಬಂಡವಾಳ ಹೂಡಿಕೆಯ ಘೋಷಣೆಯ ಪ್ರಮಾಣ ಶೇ 79.5 ರಷ್ಟು ಕಡಿಮೆಯಾಗಿದ್ದು ಇದು ಕಳೆದ ಹದಿನೈದು ವರ್ಷಗಳಲ್ಲೇ ಅತೀ ಕಡಿಮೆಯಾದುದಾಗಿದೆ. ಅಂದರೆ, ಸರ್ಕಾರ ಏನೇ ಬಣ್ಣದ ಮಾತುಗಳಾಡುತ್ತಿದ್ದರೂ ಸಹ ಬಂಡವಾಳ ಹೂಡಲು ಉದ್ದಿಮೆದಾರರಲ್ಲಿ ದೇಶದ ಆರ್ಥಿಕ ಭವಿಷ್ಯದ ಬಗ್ಗೆ ವಿಶ್ವಾಸ ಮೂಡುತ್ತಿಲ್ಲ.

ಇದರ ಜೊತೆಗೆ, ಮೊದಲೇ ಬಂಡವಾಳ ಹೂಡಿ ( ಖಾಸಗಿ ಮತ್ತು ಸರ್ಕಾರಿ) ಆರಂಭಿಸಲಾಗಿರುವ ಯೋಜನೆಗಳು ಪೂರ್ಣಗೊಳ್ಳದೆ ಕುಂಟುತ್ತ ಸಾಗಿವೆ. ಯೋಜನೆಗಳು ಪೂರ್ಣಗೊಂಡ ಪ್ರಮಾಣ ಶೇ. 48 ರಷ್ಟು ಕೆಳಗಿಳಿದಿದ್ದು ಕೇವಲ 69,484 ಕೋಟಿ ರೂಪಾಯಿಗಳಷ್ಟು ಮೌಲ್ಯದ ಯೋಜನೆಗಳು ಪೂರ್ಣಗೊಂಡಿದ್ದು ಇದು ಕಳೆದ ಐದು ವರ್ಷಗಳಲ್ಲೆ ಅತಿ ಕಡಿಮೆಯಾಗಿದೆ.

12) ರಫ್ತಿನ ಪ್ರಮಾಣ: 2018 ರ ಮೊದಲ ತ್ರೈಮಾಸಿಕದಲ್ಲಿ ಭಾರತದಿಂದಾದ ಒಟ್ಟು ನಿವ್ವಳ ರಫ್ತಿನ‌ ಮೌಲ್ಯ 46.6 ಬಿಲಿಯನ್ ಡಾಲರುಗಳಾಗಿದ್ದು, ಈ ವರ್ಷವೂ ಹೆಚ್ಚೂ ಕಡಿಮೆ ಅದೇ ಮಟ್ಟದಲ್ಲಿದ್ದು 46 ಬಿಲಿಯನ್ ಡಾಲರುಗಳಾಗಿದೆ. ಅಂದರೆ, ರಫ್ತು ಕ್ಷೇತ್ರದಲ್ಲೂ ಆರ್ಥಿಕ ಚಟುವಟಿಕೆಗಳು ನೀರಸವಾಗಿವೆ ಎಂಬುದನ್ನು ಇದು ಸೂಚಿಸುತ್ತದೆ.

ಈ ಮೇಲಿನೆಲ್ಲ ಅಂಶಗಳು ದೇಶ ಈಗಾಗಲೇ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಇಂಥಾ ಸನ್ನಿವೇಶದಲ್ಲಿ, ಸರ್ಕಾರ ಹೆಚ್ಚು ಖರ್ಚು ಮಾಡುವುದರ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಒಂದು ಮಟ್ಟಿಗೆ ಪುನಶ್ಚೇತನಗೊಳಿಸಬಹುದು. ಪ್ರತಿ ವರ್ಷವೂ ಸರ್ಕಾರ ಸಾರ್ವಜನಿಕ ಯೋಜನೆಗಳಿಗೆ ಮಾಡುವ ಖರ್ಚು ದೇಶದ ಜಿಡಿಪಿಯ ಕನಿಷ್ಟ ಶೇ 10 ರಿಂದ ಶೇ 11ರಷ್ಟಿರುತ್ತದೆ. 2017 ಮತ್ತು 2018 ರಲ್ಲಿ ಈ ಖರ್ಚು ಶೇ. 19.1 ಮತ್ತು ಶೇ. 13.2 ರಷ್ಟು ಬೆಳವಣಿಗೆ ಕಂಡಿದೆ.

ಆದರೆ, ಆ ರೀತಿ ಹೆಚ್ಚು ಖರ್ಚು ಮಾಡಲು ಸರ್ಕಾರಕ್ಕೆ ತೆರಿಗೆ ಸಂಗ್ರಹ ಮತ್ತು ಪ್ರಜೆಗಳ ಉಳಿತಾಯದ ಹಣವೇ ಮೂಲವಾಗಿರುತ್ತದೆ. ಆದರೆ ಈ ತ್ರೈಮಾಸಿಕದಲ್ಲಿ ತೆರಿಗೆ ಸಂಗ್ರಹ ಕೇವಲ 1.4% ರಷ್ಟು ಮಾತ್ರ ಹೆಚ್ಚಾಗಿದ್ದು, ಜೊತೆಗೆ ದೇಶೀಯ ಉಳಿತಾಯದ ಪ್ರಮಾಣ 2008 ಕ್ಕೆ ಹೋಲಿಸಿದರೆ 7% ಪಾಯಿಂಟುಗಳಷ್ಟು ಕಡಿಮೆಯಾಗಿದ್ದು ಸರ್ಕಾರದ ಬಳಿ ಖರ್ಚು ಮಾಡಲು ಹಣವಿಲ್ಲದಾಗಿದೆ ( ಈ ಹಿನ್ನೆಲೆಯಲ್ಲಿ ಸರ್ಕಾರ ರಿಸರ್ವ್ ಬ್ಯಾಂಕಿಂದ ಹಣ ವರ್ಗಾವಣೆ ಮಾಡಿಕೊಂಡಿರುವುದನ್ನು ನೋಡಬಹುದು. ಇದರ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸೋಣ).

ಹಾಗಾಗಿ, ಸರ್ಕಾರ ಸದ್ಯದ ಸ್ಥಿತಿಯಲ್ಲಿ ಸಾರ್ವಜನಿಕ ಯೋಜನೆಗಳಿಗೆ ( ನರೇಗ, ಮೂಲಸೌಕರ್ಯ ಇತ್ಯಾದಿ) ಹಣ ಖರ್ಚು ಮಾಡಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಸ್ಥಿತಿಯಲ್ಲಿಯೂ ಇದ್ದಂತೆ ಕಾಣುತ್ತಿಲ್ಲ.

ಒಟ್ಟಾರೆಯಾಗಿ ನೋಡಿದಾಗ, ಸರ್ಕಾರದ ಕೆಲ ಸಮರ್ಥಕರು ಹೇಳುವುದಕ್ಕೆ ವಿರುದ್ಧವಾಗಿ ದೇಶದ ಎಲ್ಲಾ ಮುಖ್ಯ ಆರ್ಥಿಕ ವಲಯಗಳೂ ಹಿಂಜರಿತಕ್ಕೆ ಸಿಲುಕಿವೆ. ಇಂಥಾ ಸಮಗ್ರ ಹಿಂಜರಿಕೆಯಿಂದ ಅದೇ ಸಮರ್ಥಕರು ಹೇಳುವಂತೆ ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿಯಂತೂ ಈಚೆ ಬರಲು ಸಾಧ್ಯವಿಲ್ಲ. ಈಗಾಗಲೇ ಎರಡನೇ ತ್ರೈಮಾಸಿಕದಲ್ಲೂ ವಾಹನ ತಯಾರಿಕಾ ಕ್ಷೇತ್ರ ಮತ್ತು ಸಣ್ಣ ಕೈಗಾರಿಕಾ ಕ್ಷೇತ್ರಗಳು ಮತ್ತಷ್ಟು ಹಿಂಜರಿಕೆಗೆ ಒಳಗಾಗಿರುವ ಸುದ್ದಿಗಳು ಬರುತ್ತಿವೆ. ಬೆಂಗಳೂರಿನ ಏಷ್ಯಾದಲ್ಲೇ ದೊಡ್ಡದಾದ ಪೀಣ್ಯ ಕೈಗಾರಿಕಾ ವಲಯವೊಂದರಲ್ಲೇ ಕನಿಷ್ಟ ಆರೇಳು ಲಕ್ಷ ಜನ ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ರೀತಿಯ ಉದ್ಯೋಗ ನಷ್ಟ ದೇಶದಾದ್ಯಂತ ಇನ್ನಷ್ಟು ಭೀಕರವಾಗುವ ಸಾಧ್ಯತೆಯಿದೆ.

ನಮಗೆಲ್ಲ ತಿಳಿದಿರುವಂತೆ ಮೊದಲು ಸಮಸ್ಯೆಯನ್ನು ಸರಿಯಾಗಿ ಗುರುತಿಸಿ ಒಪ್ಪಿಕೊಂಡಾಗ ಮಾತ್ರ ಸಮಸ್ಯೆಯ ಪರಿಹಾರದ ದಾರಿಗಳನ್ನು ಹುಡುಕಲು ಸಾಧ್ಯ. ಆದರೆ, ಸರ್ಕಾರ ಆರ್ಥಿಕ ಹಿಂಜರಿತ ಇದೆ ಎಂದು ಒಪ್ಪಿಕೊಳ್ಳಲೇ ತುಂಬಾ ವಿಳಂಬ ಮಾಡಿತು ಮತ್ತು ಈ ಹಿಂಜರಿತದ ಆಳವನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಇದನ್ನು ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಕೆಲ ತೆಳುವಾದ ಕ್ರಮಗಳು ಸ್ಪಷ್ಟಪಡಿಸುತ್ತಿವೆ ( ಇದರ ಬಗ್ಗೆ ಮುಂದೆ ಬರೆಯಲಾಗುವುದು).

ಇದರ ಜೊತೆಗೆ, ಭಾರತದ ಆರ್ಥಿಕ ಹಿಂಜರಿತಕ್ಕೆ ಸರ್ಕಾರ ಜವಾಬ್ದಾರಿಯಲ್ಲ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದಲ್ಲಿರುವುದರಿಂದ ಅದರ ಪರಿಣಾಮ ಭಾರತದ ಮೇಲೂ ಸಹಜವಾಗಿ ಉಂಟಾಗಿದೆ ಅಷ್ಟೆ ಎಂಬ ವಾದವನ್ನೂ ತೇಲಿ ಬಿಡಲಾಗಿದೆ.

ಇದಕ್ಕೆ ಉತ್ತರವಾಗಿ 2008 ರಲ್ಲಿ ಅಮೆರಿಕವೂ ಸೇರಿದಂತೆ ಇಡೀ ವಿಶ್ವವೇ ತೀವ್ರವಾದ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ್ದಾಗ ಭಾರತ ಹೇಗೆ ಅಷ್ಟೊಂದು ಹಿಂಜರಿತಕ್ಕೆ ಸಿಗದೆ ಪಾರಾಯಿತು ಎಂಬುದನ್ನೂ ಗಮನಿಸಬೇಕಿದೆ.

ಹಾಗೆಯೇ, ಅಮೆರಿಕದ ಜತೆ ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ ತೀವ್ರ ಕಲಹ ಮತ್ತು ಜಾಗತಿಕ ಹಿಂಜರಿಕೆಯ ಹೊರತಾಗಿಯೂ ಚೀನಾದ ಜಿಡಿಪಿ 2018 ರ ಮೊದಲ ತ್ರೈಮಾಸಿಕದಲ್ಲಿ ಶೇ 6.8 ರಷ್ಟು ವೃದ್ದಿ ಕಂಡಿದ್ದು 2019 ರಲ್ಲಿ ಶೇ 6.2 ರಷ್ಟು ಪ್ರಗತಿ ದಾಖಲಿಸಿದ್ದು ಕೇವಲ 0.6 ರಷ್ಟು ಮಾತ್ರ ಇಳಿಕೆ ಕಂಡಿದೆ. ಚೀನಾದ ಬೆಳವಣಿಗೆಯ ಈ ಅಂಶವು ನಮ್ಮ ದೇಶದ ಆರ್ಥಿಕ ಸಂಕಷ್ಟಕ್ಕೆ ಜಾಗತಿಕ ಹಿಂಜರಿತಕ್ಕಿಂತ ( ಜಾಗತಿಕ ಹಿಂಜರಿತದ ಪ್ರಭಾವ ಒಂದು ಮಟ್ಟಿಗೆ ಇದ್ದೇ ಇರುತ್ತದೆ) ನಮ್ಮದೇ ಸರ್ಕಾರದ ತಪ್ಪು ಆರ್ಥಿಕ ನಿರ್ಧಾರಗಳಿಂದ ಎಂಬುದು ಸುಸ್ಪಷ್ಟವಾಗುತ್ತದೆ. ಇದೇ ಮಾತನ್ನು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಹೇಳಿದ್ದಾರೆ.

ಸದ್ಯಕ್ಕೆ ಈ ಆರ್ಥಿಕ ಸಂಕಷ್ಟ ಮುಂದಿನ ವರ್ಷದ ಕೊನೆಯವರೆಗೂ ಮುಂದುವರೆಯುವ ಲಕ್ಷಣಗಳು ಕಾಣಿಸುತ್ತಿವೆ. ಸರ್ಕಾರ ಈಗಲಾದರೂ ದೂರದೃಷ್ಟಿ ಮತ್ತು ಅನುಭವವುಳ್ಳ ಆರ್ಥಿಕ ತಜ್ಞರ ಸಲಹೆ ಸೂಚನೆಗಳನ್ನು ಪಡೆದು ತಕ್ಕ ಕ್ರಮಗಳನ್ನು ಕೈಗೊಂಡು ಆರ್ಥಿಕತೆಯ ಹಿಂಜರಿಕೆಯಿಂದ ಹೊರಬರುವ ದಾರಿಗಳನ್ನು ಹುಡುಕಬೇಕಿದೆ.

Leave a Reply