ತಮ್ಮ ವಿರುದ್ಧ ಧ್ವನಿ ಎತ್ತಿದವರನ್ನು ತುಳಿಯುವುದೇ ಕೇಂದ್ರದ ಕಾಯಕ; ಕೆಸಿ ವೇಣುಗೋಪಾಲ್

ಡಿಜಿಟಲ್ ಕನ್ನಡ ಟೀಮ್:

‘ಬಿಜೆಪಿಯ ವೀರುದ್ಧ ಧ್ವನಿ ಎತ್ತಿದರೆ ಕೇಂದ್ರ ಸರ್ಕಾರ ಹೇಗೆ ದ್ವೇಷದ ರಾಜಕಾರಣ ಮಾಡುತ್ತದೆ ಎಂಬುದಕ್ಕೆ ಶಿವಕುಮಾರ್ ಅವರ ಬಂಧನವೇ ಪ್ರಕರಣವೇ ಸಾಕ್ಷಿ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ.

ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಬಂಧನ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್ ಅವರು ಹೇಳಿದ್ದಿಷ್ಟು… ‘ರಾಜ್ಯದಲ್ಲಿ ಬಿಜೆಪಿ ನಡೆಸಿದ ಆಪರೇಷನ್ ಕಮಲದ ವಿರುದ್ಧ ಡಿಕೆ ಶಿವಕುಮಾರ್ ಹೋರಾಟ ನಡೆಸಿದ ಪರಿಣಾಮ ಇಂದು ಅವರ ಬಂಧನವಾಗಿದೆ. ಪಿ.ಚಿದಂಬರಂ ಅವರ ನಂತರ ಡಿಕೆ ಶಿವಕುಮಾರ್ ಬಂಧನವಾಗಿರೋದು. ಬಿಜೆಪಿಯವರ ರಾಜಕೀಯ ಪಿತೂರಿಗೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳು ಕೈಗೊಂಬೆಗಳಂತೆ ವರ್ತಿಸುತ್ತಿರುವುದು ಆತಂಕ ಮೂಡಿಸಿದೆ. ಈ ರೀತಿ ಅಧಿಕಾರ ದುರ್ಬಳಕೆ ಮಾಡಿ ವಿರೋಧ ಪಕ್ಷಗಳನ್ನು ಬಗ್ಗುಬಡಿಯುವ ಮೂಲಕ ಮೋದಿ ಸರ್ಕಾರ ಕೆಟ್ಟ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿದೆ.

ಕರ್ನಾಟಕದಲ್ಲಿ ಬಿಜೆಪಿ ಶಾಸಕರ ಕುದುರೆ ವ್ಯಾಪಾರ ಮಾಡಿ ನೂರಾರು ಕೋಟಿ ಹಣಕಾಸು ಅಕ್ರಮ ನಡೆಸಿದ್ದರೂ ಅವರ ವಿರುದ್ಧ ಯಾವುದೇ ದೂರು ಅಥವಾ ಪ್ರಕರಣ ದಾಖಲಾಗಿಲ್ಲ.

ಕರ್ನಾಟಕ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕನಾಗಿದ್ದಾರೆ. ಹೀಗಾಗಿ ಬಿಜೆಪಿ ಡಿಕೆ ಶಿವಕುಮಾರ್ ಅವರನ್ನು ಸದಾ ಗುರಿಯಾಗಿಸಿಕೊಂಡಿದೆ. ಜಾರಿ ನಿರ್ದೇಶನಾಲಯದ ವಿಚಾರಣೆಗೆ ನಿರಂತರವಾಗಿ ಹಾಜರಾದರೂ ಅಧಿಕಾರಿಗಳು ಸರ್ಕಾರದ ಆಜ್ಞೆ ಮೇರೆಗೆ ಶಿವಕುಮಾರ್ ಅವರನ್ನು ಬಂಧಿಸಿದೆ.

ದೇಶದ ಆರ್ಥಿಕ ಪರಿಸ್ಥಿತಿ ಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ ತಮ್ಮ ವೈಫಲ ಮರೆಮಾಚಲು ರಾಜಕೀಯ ವಿರೋಧಿಗಳ ಮೇಲೆ ದಬ್ಬಾಳಿಕೆ ಮಾಡಿ ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇದೊಂದು ನೀಚ ರಾಜಕಾರಣ ಆಗಿದ್ದು, ಇದನ್ನು ಖಂಡಿಸುತ್ತೇನೆ.’

Leave a Reply