ಡಿಕೆಶಿ ಬಂಧನದ ಹಿಂದೆ ಉಪಚುನಾವಣೆ ರಾಜಕೀಯ?

ಡಿಜಿಟಲ್ ಕನ್ನಡ ಟೀಮ್:

ಡಿಕೆ ಶಿವಕುಮಾರ್ ಅವರ ಬಂಧನ ಕಾನೂನು ಚೌಕಟ್ಟಿನಲ್ಲಿ ಆಗಿದೆ ಅಂತಾ ಬಿಜೆಪಿಯವರ ವಾದವಾದರೆ, ಇದು ರಾಜಕೀಯ ಪಿತೂರಿ ಅಂತಾ ಕಾಂಗ್ರೆಸ್ ನಾಯಕರ ಆರೋಪ. ಈ ಎರಡರ ಜತೆಗೆ ಡಿಕೆ ಶಿವಕುಮಾರ್ ಬಂಧನದ ಹಿಂದೆ ಉಪ ಚುನಾವಣೆ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಡಿ.ಕೆ ಶಿವಕುಮಾರ್ ಉಪ ಚುನಾವಣೆಯ ಸ್ಪೆಷಲಿಸ್ಟ್. ಎಲ್ಲ ನಾಯಕರನ್ನು ಒಗ್ಗೂಡಿಸುವುದು ಹೇಗೆ..? ಮತ ಸೆಳೆಯಲು ಏನೇನು ಮಾಡಬೇಕು ಅನ್ನೋ ಬಗ್ಗೆ ತಂತ್ರಗಾರಿಕೆ ಮಾಡೋ ಮಾಸ್ಟರ್. ಹೀಗಾಗಿ ಅವರನ್ನು ಉಪ ಚುನಾವಣೆ ಅಖಾಡದಿಂದ ದೂರ ಇಡುವುದು ಬಿಜೆಪಿಗೆ ಹಾಗೂ ಅತೃಪ್ತರಿಗೆ ದೊಡ್ಡ ಲಾಭ. ಈಗಾಗಲೇ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ, ಇದೀಗ ರಾಜೀನಾಮೆ ಕೊಟ್ಟು ಬಿಜೆಪಿ ಬೆಂಬಲಕ್ಕೆ ನಿಂತಿರುವ ಅನರ್ಹ ಶಾಸಕರಿಗೆ ಮತ ಕ್ಷೇತ್ರದಲ್ಲೇ ಪಾಠ ಕಲಿಸುತ್ತೇವೆ ಎಂದು ಡಿಕೆ ಶಿವಕುಮಾರ್ ತೊಡೆ ತಟ್ಟಿದ್ರು.

ಉಪ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಮಾತ್ರ ಬಾಕಿ ಇದ್ದು ಇನ್ನೇನು ಕೆಲವೇ ದಿನಗಳಲ್ಲಿ ಉಪಚುನಾವಣೆ ತಯಾರಿ ನಡೆಯಬೇಕಿದೆ. ಡಿಕೆ ಶಿವಕುಮಾರ್ ಹೊರಗಡೆ ಇದ್ದರೆ, ಉಪಚುನಾವಣೆಯಲ್ಲಿ ತಂತ್ರಗಾರಿಕೆ ಮಾಡಿ, ಅನರ್ಹ ಶಾಸಕರ ಗೆಲುವು ಕಷ್ಟ. ಈ ಬಅನರ್ಹ ಶಾಸಕರಲ್ಲಿ ಬಹುತೇಕರು ಸೋತರೆ ರಾಜ್ಯ ಸರ್ಕಾರ ಪತನ ಆಗೋದು ಗ್ಯಾರಂಟಿ. ಇದೆಲ್ಲವನ್ನು ತಪ್ಪಿಸುವ ಹುನ್ನಾರವೇ ಡಿಕೆಶಿ ಬಂಧನ ಎಂಬ ಚರ್ಚೆ ಆರಂಭವಾಗಿದೆ. ಒಂದು ವೇಳೆ ಇಡಿ ಬಂಧನ ಮಾಡಿದ ಬಳಿಕ ಜಾಮೀನು ಪಡೆದು ಹೊರಬಂದರೂ ಸಕ್ರಿಯವಾಗಿ ರಾಜಕಾರಣ ಮಾಡಲು ಹೆಚ್ಚು ಅವಕಾಶ ಇರುವುದಿಲ್ಲ. ತಮ್ಮ ವಿರುದ್ಧದ ಪ್ರಕರಣದಿಂದ ಹೊರಬರಲು ಏನು ಮಾಡಬೇಕು ಎನ್ನುವ ಬಗ್ಗೆ ಯೋಜನೆ ರೂಪಿಸುವಲ್ಲಿ ತಲ್ಲೀನರಾಗ್ತಾರೆ. ಆಗ ಉಪಚುನಾವಣೆಯಲ್ಲಿ ಗೆಲುವು ಸುಲಭವಾಗುತ್ತೆ. ಆ ನಂತರ ಸರ್ಕಾರ ಕೂಡ ಸೇಫ್ ಅನ್ನೋ ಲೆಕ್ಕಾಚಾರ ಅಡಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Leave a Reply