ಕೊನೆ ಕ್ಷಣದಲ್ಲಿ ಚಂದ್ರಯಾನ2 ಸಂಪರ್ಕ ಕಡಿತ, ಇಸ್ರೋ ಬೆನ್ನಿಗೆ ನಿಂತ ದೇಶ

ಡಿಜಿಟಲ್ ಕನ್ನಡ ಟೀಮ್:

ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವೇನು ಎಂಬುದನ್ನು ಈಗಾಗಲೇ ಸಾಬೀತುಪಡಿಸಿರೋ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ 2 ಯೋಜನೆಯಲ್ಲಿ ಬಹುತೇಕ ಯಶಸ್ವಿಯಾಗಿತ್ತು. ಆದರೆ ಚಂದ್ರನ ಮೇಲೆ ಕಾಲಿಡಲು ಲ್ಯಾಂಡರ್ 2 ಕಿ.ಮೀ ದೂರದಲ್ಲಿರುವಾಗ ಸಂಪರ್ಕ ಕಡಿತಗೊಂಡಿದ್ದು, ನಮ್ಮೆಲ್ಲರ ಬೆಟ್ಟದಷ್ಟು ನಿರೀಕ್ಷೆಗೆ ತಣ್ಣೀರೆರೆಚಿದೆ. ಆದರೆ ನಮ್ಮ ಹೆಮ್ಮೆಯ ವಿಜ್ಞಾನಿಗಳ ಈ ಸಾಧನೆಯನ್ನು ಸ್ಮರಿಸಿ ಇಡೀ ದೇಶ ಇಸ್ರೋ ವಿಜ್ಞಾನಿಗಳ ಬೆನ್ನಿಗೆ ನಿಂತಿದೆ.

ನಿನ್ನೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ 2 ಯೋಜನೆ ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದ್ದರು. ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದ ಮೋದಿ ನೇರವಾಗಿ ಇಸ್ರೋ ವಿಜ್ಞಾನಿಗಳ ಜತೆ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದರು. ಆದರೆ ಕಡೇ ಕ್ಷಣದಲ್ಲಿ ಎದುರಾದ ನಿರಾಸೆಯಿಂದ ಕುಗ್ಗಿದ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ನೈತಿಕ ಬೆಂಬಲ ತುಂಬಿದರು.

ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನಮ್ಮ ವಿಜ್ಞಾನಿಗಳು ನಮ್ಮ ಹೆಮ್ಮೆ. ಪ್ರತಿಯೊಂದು ಸಂಕಷ್ಟವು ನಮಗೆ ಹೊಸ ಪಾಠವನ್ನು ಕಲಿಸುತ್ತದೆ. ಇಡೀ ದೇಶ ನಿಮ್ಮ ಜತೆಗಿದೆ. ನಮ್ಮ ವಿಜ್ಞಾನಿಗಳ ನಿಜವಾದ ಸಾಮರ್ಥ್ಯ ಇನ್ನಷ್ಟೇ ಹೊರಬರಬೇಕಿದೆ’ ಎಂದು ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು.

ಕೇವಲ ಪ್ರಧಾನಿ ನರೇಂದ್ರ ಮೋದಿ ಅಷ್ಟೇ ಅಲ್ಲ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಯಾವ ವ್ಯಕ್ತಿ ತನ್ನ ಪ್ರಯತ್ನ ನಿಲ್ಲಿಸುವುದಿಲ್ಲವೋ ಆತನಿಗೆ ಸೋಲು ಎದುರಾಗುವುದಿಲ್ಲ ಎಂದಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದೇಶವೇ ಇಸ್ರೋ ಬೆಂಬಲಕ್ಕೆ ನಿಂತಿದೆ.

ಇನ್ನು ಇಸ್ರೋ ಕೇಂದ್ರದಿಂದ ಪ್ರಧಾನಿ ಮೋದಿ ಹೊರಗೆ ಬರುವಾಗ ಭಾವುಕರಾದ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರನ್ನು ಮೋದಿ ಅಪ್ಪಿ ಸಂತೈಸಿದ ವಿಡಿಯೋ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಅನೇಕ ಯಶಸ್ಸುಗಳಿಂದ ನಾವೆಲ್ಲರು ತಲೆ ಎತ್ತಿ ಹೆಮ್ಮೆ ಪಡುವಂತೆ ಮಾಡಿದ ನಮ್ಮ ಇಸ್ರೋ ವಿಜ್ಞಾನಿಗಳು ಈ ಕಹಿ ಮರೆತು ಮುಂದಿನ ದಿನಗಳಲ್ಲಿ ತಮ್ಮ ಸಾಮರ್ಥ್ಯವನ್ನು ಇಡೀ ಪ್ರಪಂಚಕ್ಕೆ ತೋರಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಆಶಯ.

Leave a Reply