ಗೇಣುದ್ದ ಮಾನವಿಲ್ಲದ ಮಿಸ್ಟರ್ ರೇಣು, ತ್ಯಾಗ-ಬಲಿದಾನದ ಅರ್ಥ ಗೊತ್ತೇನ್ರೀ ನಿಮ್ಗೆ..?!

ಡಿಜಿಟಲ್ ಕನ್ನಡ ಟೀಮ್:

ದೇಶಕ್ಕಾಗಿ ತಮ್ಮ ಪ್ರಾಣ ಮುಡಿಪಿಟ್ಟು ಸ್ವಾತಂತ್ರ ತಂದು ಕೊಟ್ಟ ಮಹನೀಯರನ್ನು ಅನರ್ಹ ಶಾಸಕರಿಗೆ ಹೋಲಿಕೆ ಮಾಡುವ ಮೂಲಕ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ವಾತಂತ್ರ ಹೋರಾಟಗಾರರ ಮಾನ- ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ.

ಬಾಯಿ ಬಿಟ್ಟರೆ ವಿವಾದವನ್ನೇ ಕಕ್ಕುವ ರೇಣುಕಾಚಾರ್ಯ ಅವರು, ‘ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಹಾಗೆ, ಅನರ್ಹ ಶಾಸಕರ ತ್ಯಾಗ-ಬಲಿದಾನದಿಂದ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ’ ಎಂದು ಹೊನ್ನಾಳಿಯಲ್ಲಿ ಹೇಳಿದ್ದಾರೆ. ಆ ಮೂಲಕ ಒಂದೆಡೆ ಸ್ವಾತಂತ್ರ್ಯ ಹೋರಾಟಗಾರರ ಗೌರವಕ್ಕೆ ಮಣ್ಣೆಳೆದಿರುವ ಈ ಮಹಾನುಭಾವರು, ಇನ್ನೊಂದೆಡೆ ಮೈತ್ರಿ ಸರ್ಕಾರ ಪತನಕ್ಕೂ ಬಿಜೆಪಿಗೂ ಸಂಬಂಧ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಅಲ್ರೀ ಸ್ವಾಮಿ ರೇಣುಕಾಚಾರ್ಯ ಅವರೇ, ನಿಮಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಕಿಂಚಿತ್ತಾದರೂ ಜ್ಞಾನ ಇದೆಯಾ? ತ್ಯಾಗ-ಬಲಿದಾನ ಪದಗಳ ಅರ್ಥ, ಮಹತ್ವ ತಿಳಿದಿದೆಯೇ? ತಮ್ಮ ಮನೆ-ಮಠ, ಜೀವನ, ಪ್ರಾಣ ಯಾವುದನ್ನೂ ಲೆಕ್ಕಿಸದೇ ಬ್ರಿಟೀಷರ ಲಾಠಿ, ಬೂಟು, ಗುಂಡೇಟು ತಿಂದು ಹುತಾತ್ಮರಾದವರು ಎಲ್ಲಿಆ? ನಿಮ್ಮ ಕೋಟಿ-ಕೋಟಿ ಹಣ ಹಾಗೂ ಅಧಿಕಾರದ ಆಮೀಷದ ಹಿಂದೆ ಓಡಿ ಬಂದು ಮುಂಬೈ ರೆಸಾರ್ಟ್ ನಲ್ಲಿ ನಿಮ್ಮ ಮಡಿಲಲ್ಲಿ ಇದ್ದವರು ಎಲ್ಲಿ? ಇವರನ್ನು ಹೋಲಿಕೆ ಮಾಡಿರುವ ನಿಮ್ಮ ಬುದ್ಧಿಮತ್ತೆಗೆ ಅದ್ಯಾವ ಸೀಮೆ ಕಿರೀಟ ತೋಡಿಸಬೇಕೋ ಗೊತ್ತಾಗುತ್ತಿಲ್ಲ.

ಈ 17 ಮಹಾನುಭಾವರು ರಾಜೀನಾಮೆಯಿಂದ ನಿಮಗೆ ಅಧಿಕಾರ ಸಿಕ್ಕಿದ್ದು ಬಿಟ್ಟರೆ ಬೇರೆ ಯಾರಿಗೆ ಅನುಕೂಲ ಆಗಿದೆ? ಈ ರಾಜ್ಯಕ್ಕೇನು ಲಾಭವಾಗಿದೆ? ಯಾವ ದೇಶಕ್ಕೆ ಸ್ವಾತಂತ್ರ ಸಿಕ್ಕಿದೆ ಸ್ವಾಮಿ?

ನೀವು ಅಧಿಕಾರಕ್ಕೆ ಬಂದು ಒಂದೂವರೆ ತಿಂಗಳಾಗುತ್ತಿದೆ. ಉತ್ತರ ಕರ್ನಾಟಕ ಪ್ರವಾಹದಿಂದ ನಲುಗಿರುವವರಿಗೆ ನಿಮ್ಮ ಯೋಗ್ಯತೆಗೆ ಈವರೆಗೂ ಒಂದೇ ಒಂದು ರುಪಾಯಿ ಪರಿಹಾರ ತರಲು ಸಾಧ್ಯವಾಗಿಲ್ಲ. ಈಗ ಮತ್ತೇ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಆತಂಕ ಮೂಡಿದೆ.

ಇಷ್ಟೆಲ್ಲಾ ಸಮಸ್ಯೆಗಳಿಂದ ಜನ ನರಳುತ್ತಿದ್ದರೆ, ಅನರ್ಹರ ಮುಂದಾಳತ್ವ ವಹಿಸಿದ್ದ ಸಾಹುಕಾರ ರಮೇಶ್ ಜಾರಕಿಹೊಳಿ ಅವರು ಗೋಕಾಕದಲ್ಲಿ ಉಪ ಚುನಾವಣೆ ತಯಾರಿಗಾಗಿ ಇವತ್ತು ಸಂಕಲ್ಪ ಸಮಾವೇಶ ಮಾಡುತ್ತಿದ್ದಾರೆ. ಈ ರೀತಿ ಅಧಿಕಾರದಾಹ ಇರುವವರನ್ನು ಸ್ವಾತಂತ್ರ ಹೋರಾಟಗಾರರಿಗೆ ಹೋಲಿಕೆ ಮಾಡಿದ್ದೀರಲ್ಲಾ ನಿಮಗೆ ಯಾವುದರಿಂದ ಸನ್ಮಾನ ಮಾಡಬೇಕು..?!

Leave a Reply